ADVERTISEMENT

ಹರಪನಹಳ್ಳಿ: ಬಹುಬೆಳೆ ನಡುವೆ ಗಮನಸೆಳೆವ ಡ್ರ್ಯಾಗನ್ ಫ್ರೂಟ್‌

ರೈತ ಮಾಗಳ ಪಾಂಡುರಂಗಪ್ಪ ತೋಟದಲ್ಲಿ ಮಾದರಿ ಕೃಷಿ

ವಿಶ್ವನಾಥ ಡಿ.
Published 15 ಸೆಪ್ಟೆಂಬರ್ 2021, 3:59 IST
Last Updated 15 ಸೆಪ್ಟೆಂಬರ್ 2021, 3:59 IST
ಹರಪನಹಳ್ಳಿ ತಾಲ್ಲೂಕು ಕಾನಹಳ್ಳಿ ಗ್ರಾಮದ ರೈತ ಮಾಗಳದ ಪಾಂಡುರಂಗಪ್ಪ ಅವರು ಬೆಳೆದಿರುವ ಡ್ರ್ಯಾಗನ್ ಫ್ರೂಟ್ ಬೆಳೆ.
ಹರಪನಹಳ್ಳಿ ತಾಲ್ಲೂಕು ಕಾನಹಳ್ಳಿ ಗ್ರಾಮದ ರೈತ ಮಾಗಳದ ಪಾಂಡುರಂಗಪ್ಪ ಅವರು ಬೆಳೆದಿರುವ ಡ್ರ್ಯಾಗನ್ ಫ್ರೂಟ್ ಬೆಳೆ.   

ಹರಪನಹಳ್ಳಿ: ಕೃಷಿಯಲ್ಲಿ ಆಸಕ್ತಿ, ಶ್ರದ್ಧೆ, ಸಮಯ ಪ್ರಜ್ಞೆಯಿದ್ದರೆ ಏನೆಲ್ಲಾ ಪ್ರಗತಿ ಕಾಣಬಹುದು ಎಂಬುದಕ್ಕೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಾನಹಳ್ಳಿ ಗ್ರಾಮದ ರೈತ ಮಾಗಳದ ಪಾಂಡುರಂಗಪ್ಪ ಕುಟುಂಬ ಅತ್ಯತ್ತಮ ಉದಾಹರಣೆಯಾಗಿದೆ.

64 ವರ್ಷ ವಯಸ್ಸಿನ ಪಾಂಡುರಂಗಪ್ಪ ಸಾವಯವ ಗೊಬ್ಬರ ಬಳಸಿ ತರಹೇವಾರಿ ಬೆಳೆ ಬೆಳೆದು ಗಮನ ಸೆಳೆದಿದ್ದಾರೆ. ತಮ್ಮ ಮಕ್ಕಳಿಗೆ ಕೃಷಿ ಪಾಠದ ಜೊತೆಗೆ ಉನ್ನತ ಶಿಕ್ಷಣವನ್ನೂ ಕೊಡಿಸಿದ್ದಾರೆ. ಪತ್ನಿ ನೀಲಮ್ಮ, ಬಸವರಾಜ್, ಹನುಮಂತಪ್ಪ, ಅಯ್ಯಪ್ಪ ಮತ್ತು ರಾಮಕೃಷ್ಣ ಅವರು ತಂದೆಯ ಕೃಷಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. 11 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ವಿ ರೈತನಾಗಿದ್ದಾರೆ.

ಸಾವಯವ ಕೃಷಿಯಲ್ಲಿಯೇ 250 ತೆಂಗಿನಮರ, 20 ಸೆಂಟ್ಸ್ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ 70 ಗಿಡ, 3 ಎಕರೆಯಲ್ಲಿ ನುಗ್ಗೆ, ಅದರಲ್ಲಿ 350 ಗಿಡ ಬೆಣ್ಣೆ ಹಣ್ಣು (ಬಟರ್ ಫ್ರೂಟ್), 9 ವರ್ಷದ ತೇಗದ ಮರ 600 ಗಿಡಗಳು, ಸಪೋಟ, ಫ್ಯಾಷನ್ ಫ್ರೂಟ್, 5 ಎಕರೆ ಮೆಣಸಿನ ಬೆಳೆ ಬಿತ್ತನೆ ಮಾಡಿದ್ದಾರೆ.

ADVERTISEMENT

ಮೂರು ಎಕರೆಯಲ್ಲಿ ಬೆಳೆದಿರುವ ನುಗ್ಗೆಗೆ ತುಂಬಾ ಬೇಡಿಕೆಯಿದ್ದು, ವ್ಯಾಪಾರಸ್ಥರು ಪ್ರತಿ ವರ್ಷ ಹೊಲಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ನುಗ್ಗೆ ನಡುವೆ 20x21 ಅಡಿ ಅಂತರ ಬೆಳೆಯಾಗಿ ಬಟರ್ ಫ್ರೂಟ್ ನಾಟಿ ಮಾಡಿದ್ದಾರೆ. ಡ್ರ್ಯಾಗನ್ ಫ್ರೂಟ್ ಗಿಡದಿಂದ 8 ಅಡಿ ಅಂತರ, ಸಾಲಿನಿಂದ ಸಾಲಿಗೆ 12 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಈಗಾಗಲೇ ಎರಡು ಬಾರಿ ಕಟಾವು ಮಾಡಿದ್ದು, 50 ಕೆ.ಜಿ. ಹಣ್ಣು ಮಾರಾಟ ಮಾಡಿದ್ದಾರೆ.

ಒಂದು ಎಕರೆ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿ ಅಡಿಡ್ರ್ಯಾಗನ್ ಫ್ರೂಟ್ ನಾಟಿ ಮಾಡಲು ₹ 3 ಲಕ್ಷದಿಂದ ₹ 4 ಲಕ್ಷ ಖರ್ಚಾಗುತ್ತದೆ. ಹಣ್ಣು 8 ದಿನದವರೆಗೂ ಇರುತ್ತದೆ. ತಿನ್ನಲು ತುಂಬಾ ರುಚಿ ಎಂದು ವಿವರಿಸುತ್ತಾರೆ ಪಾಂಡುರಂಗಪ್ಪ.

‘ಹೊಲವೇ ನಮಗೆ ಪ್ರಪಂಚ. ಕೃಷಿ ಭೂಮಿಯಲ್ಲಿ ಬೆಳೆ ಚೆನ್ನಾಗಿದ್ದರೆ ನಮ್ಮ ಮನೆಯೂ ಚೆನ್ನಾಗಿರುತ್ತದೆ. ರೈತರು ಕಡಿಮೆ ಅವಧಿಯಿಂದ ದೀರ್ಘಾವಧಿವರೆಗೂ ಕೊಡುವ ಬೆಳೆಗಳನ್ನು ಅಳವಡಿಸಿಕೊಂಡರೆ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಸಲಹೆ ನೀಡುತ್ತಾರೆ ಅವರು.

ಮಾಗಳದ ಪಾಂಡುರಂಗಪ್ಪ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಮೊಬೈಲ್‌: 9449118298 ಸಂಪರ್ಕಿಸಬಹುದು.

**
ರೇಷ್ಮೆ ಬೆಳೆಯಲ್ಲೂ ಯಶಸ್ವಿ ಕಂಡಿದ್ದೇವೆ. ಕೊರೊನಾ ಕಾರಣ ಬೆಳೆ ತೆಗೆದು ಹಾಕಿದ್ದೆವು. ಈಗ ಮತ್ತೆ ರೇಷ್ಮೆ ಬೆಳೆಯುತ್ತಿದ್ದೇವೆ. ಡ್ರ್ಯಾಗನ್‌ ಫ್ರೂಟ್‌ ಬೆಳೆಯನ್ನು ಮತ್ತೆ 2 ಎಕರೆ ವಿಸ್ತರಿಸುವ ಯೋಜನೆ ಇದೆ.
-ಮಾಗಳದ ಪಾಂಡುರಂಗಪ್ಪ, ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.