ADVERTISEMENT

ಮಿಶ್ರಕೃಷಿಯಲ್ಲಿ ಗೆಲುವು ಕಂಡ ಯುವರೈತ

ವಿನೋದ ಪಾಟೀಲ
Published 16 ಜೂನ್ 2020, 4:03 IST
Last Updated 16 ಜೂನ್ 2020, 4:03 IST
ಶಿವಾನಂದ ಲಕ್ಷ್ಮಣ ಮಾಳಿ
ಶಿವಾನಂದ ಲಕ್ಷ್ಮಣ ಮಾಳಿ   

ನಾಲ್ಕು ಎಕರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆದಿರುವ ಶಿವಾನಂದ ಮಾಳಿ, ಕಬ್ಬಿನ ಜತೆಗೆ ಹಿಪ್ಪುನೇರಳೆಯನ್ನು ಅಂತರಬೆಳೆಯಾಗಿಸಿದ್ದಾರೆ. ಹಣದ ಬೆಳೆ ಜತೆಗೆ, ಆಹಾರದ ಬೆಳೆಯನ್ನೂ ‘ಮಿಶ್ರ‘ಮಾಡಿದ್ದಾರೆ.

ಕಬ್ಬಿನ ನಡುವೆ ಒಂದು ಸಾಲಿನಲ್ಲಿ ಹಿಪ್ಪುನೇರಳೆ ಇಣುಕುತ್ತಿದೆ. ಪಕ್ಕದಲ್ಲಿ ಒಂದೆರಡು ಸಾಲು ನವಣೆ, ಪಕ್ಕದಲ್ಲಿ ಅವರೆ,ಚಿಯಾ, ಜತೆಗೆ ಎರಡು ಸಾಲು ವೈವಿಧ್ಯಮಯ ತರಕಾರಿ, ಅಲಲ್ಲಿ ಸುವರ್ಣಗೆಡ್ಡೆಯೂ ಕಾಣುತ್ತದೆ...

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಿಡಕಲ್ ಗ್ರಾಮದ ಇಪ್ಪತ್ತೈದರ ಹರೆಯದ ಶಿವಾನಂದ ಲಕ್ಷ್ಮಣ ಮಾಳಿಯವರ ನಾಲ್ಕೂವರೆ ಎಕರೆ ಜಮೀನಿನಲ್ಲಿ ಕಂಡು ಬರುವ ಕೃಷಿ ವೈವಿಧ್ಯದ ದೃಶ್ಯವಿದು. ಇರುವಷ್ಟೇ ಜಮೀನಿನಲ್ಲಿ ಏಳೆಂಟು ತರಹದ ಬೆಳೆ ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಹಣದ ಬೆಳೆಯೂ ಇದೆ, ಆಹಾರದ ಬೆಳೆಯೂ ಇದೆ.

ADVERTISEMENT

ಬಿಎ ಪದವಿ ಮುಗಿಸಿದ ಶಿವಾನಂದ, ಉದ್ಯೋಗ ಅರಸಿ ಪೇಟೆಗೆ ಹೋಗಲಿಲ್ಲ. ಬಾಲ್ಯದಿಂದಲೂ (15 ವರ್ಷಗಳಿದ) ದೊಡ್ಡಪ್ಪ ಕಲ್ಲಪ್ಪ ಮಾಳಿ ಮಾಡುತ್ತಿದ್ದ ಸಾವಯವ ಕೃಷಿ ಚಟುವಟಿಕೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಅವರು, ಪದವಿ ಮುಗಿದ ನಂತರ ನೇರವಾಗಿ ಕೃಷಿ ಜಮೀನಿಗೆ ಇಳಿದರು. ‘ಮನೆಯ ಮೊದಲ ಪಾಠ ಶಾಲೆ’ ಎನ್ನುವಂತೆ, ಕೃಷಿ ಎಂಬ ಶಿಕ್ಷಣ ಮನೆಯ ಹಿರಿಯರಿಂದಲೇ ಆರಂಭವಾಯಿತು ಅವರಿಗೆ. ಈಗ್ಗೆ ಐದು ವರ್ಷಗಳಿಂದ ಈ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ.

ಮಿಶ್ರ ಬೆಳೆ ಪದ್ಧತಿ

ನಾಲ್ಕು ಎಕರೆ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಏಳೆಂಟು ವಿಧದ ಮಿಶ್ರಬೆಳೆಗಳನ್ನು ಬೆಳೆಯುವುದಕ್ಕೇ ಮೀಸಲಿಟ್ಟಿದ್ದಾರೆ. ಈ ಹಿಡುವಳಿಯಲ್ಲಿ ಕಬ್ಬಿನ ಜತೆಗೆ, ಮಿಶ್ರ ಬೆಳೆಯಾಗಿ ಹಿಪ್ಪುನೇರಳೆ ಬೆಳೆಯುತ್ತಿರುವುದು ವಿಶೇಷ. ಮರಗಡ್ಡಿ ಹಿಪ್ಪುನೇರಳೆ ಬೆಳೆಯುತ್ತಿರುವುದರಿಂದ, ಪ್ರತಿ 45 ದಿನಕ್ಕೊಮ್ಮೆ ಕಟಾವಿಗೆ ಬರುತ್ತದೆ. ಜತೆಗೆ,ಪ್ರತಿ ವರ್ಷ ಹಿಪ್ಪುನೇರಳೆ ಗಿಡವನ್ನು ನಾಟಿ ಮಾಡುವ ಖರ್ಚು ಸಮಯ ಉಳಿದಿದೆ ಅವರಿಗೆ.

ಸಾಲಿನಿಂದ ಸಾಲಿಗೆ 12 ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಗೆಣ್ಣಿನ ನಡುವೆ 6 ಅಡಿ ಜಾಗ ಬಿಟ್ಟಿದ್ದಾರೆ. ಈ ಹನ್ನೆರಡು ಅಡಿಯ ಜಾಗವಿರುವಲ್ಲಿ, ನಡುವೆ ಹಿಪ್ಪುನೇರಳೆಯ ಜತೆಗೆ, ಅವರೆ, ನವಣೆ, ತರಕಾರಿ, ಸುವರ್ಣಗೆಡ್ಡೆ ಮತ್ತು ಚಿಯಾದಂತಹ ಬೆಳೆಗಳನ್ನು ಅಕ್ಕಡಿ ಬೆಳೆಯಾಗಿ ಬೆಳೆದಿದ್ದಾರೆ.

ಹಿಪ್ಪುನೇರಳೆ ಮತ್ತು ಕಬ್ಬು ಹಣ ಕೊಟ್ಟರೆ, ಉಳಿದ ಧಾನ್ಯಗಳು ಆಹಾರ ಭದ್ರತೆ ಒದಗಿಸುತ್ತವೆ. ಹೊಲದಲ್ಲಿ ಬೆಳೆಯುವ ಅವರೆ, ಸುವರ್ಣಗೆಡ್ಡೆ ಮತ್ತು ತರಕಾರಿಗಳನ್ನು ಮನೆಗೆ ಬಳಸುತ್ತಾರೆ. ಉಳಿದ ಎರಡೂವರೆ ಎಕರೆ ಜಮೀನಿನಲ್ಲಿ ಕೆಲವು ಭಾಗದಲ್ಲಿ ಗೋದಿ (ಸದಕ), ಗೋವಿನ ಜೋಳ, ಚೆಂಡು ಹೂವು ಮತ್ತು ತರಕಾರಿಗಳನ್ನು ಹಾಕಿದ್ದಾರೆ.

ಬೆಳೆಗಳಿಗೆ ನೀರು ಪೂರೈಸಲು ಒಂದು ಕೊಳವೆಬಾವಿ ಇದೆ. ಅದರಲ್ಲಿ 3 ಇಂಚು ನೀರು ಇದೆ. ಎಲ್ಲ ಬೆಳೆಗಳಿಗೂ ಡ್ರಿಪ್ ಮೂಲಕ ನೀರುಣಿಸುತ್ತಾರೆ. ಎಷ್ಟು ನೀರಿದ್ದರೂ ಮಿತವಾಗಿ ಬಳಸುತ್ತಾರೆ ಶಿವಾನಂದ.

ಸಮಗ್ರ ಬೇಸಾಯಕ್ಕೆ ಆದ್ಯತೆ

ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲೇ ಬೆಳೆ ಬೆಳೆಯುತ್ತಾರೆ. ಒಟ್ಟು 15 ಜಾನುವಾರುಗಳಿವೆ. ಇದರಲ್ಲಿ ಎರಡು ಆಕಳು, ಒಂದು ಎಮ್ಮೆ ಇದೆ, ಎಂಟು ಆಡುಗಳು ಹಾಗೂ ಹದಿನೈದು ಮೊಲಗಳಿವೆ. ಆಕಳುಗಳು ನಿತ್ಯ ಐದು ಲೀಟರ್ ಹಾಲು ಕೊಡುತ್ತವೆ. ಹಾಲು ಮನೆ ಬಳಕೆಗಾದರೆ, ಗೊಬ್ಬರವನ್ನು ತೋಟಕ್ಕೆ ಬಳಸುತ್ತಾರೆ. ರಾಸುಗಳಿಗೆ ಬೇಕಾದ ಮೇವನ್ನೂ ಹೊಲದಲ್ಲೇ ಬೆಳೆಯುತ್ತಾರೆ. ಜತೆಗೆ, ತಾವೇ ರಸಮೇವನ್ನು ತಯಾರಿಸಿಕೊಳ್ಳುತ್ತಾರೆ.

ಕೊಟ್ಟಿಗೆಯಲ್ಲಿನ ಸೆಗಣಿ, ಗಂಜಲ ಜಮೀನಿಗೆ ಗೊಬ್ಬರವಾಗುತ್ತದೆ. ಜತೆಗೆ, ಎರೆಹುಳು ತೊಟ್ಟಿ ಕಟ್ಟಿಸಿದ್ದು, ಈ ಘಟಕಗಳಿಂದಲೂ ಕೃಷಿಗೆ ಬೇಕಾದ ಸಾವಯವ ಗೊಬ್ಬರ ಉತ್ಪಾದಿಸುತ್ತಾರೆ. ಬೆಳೆಯುಳಿಕೆ, ಕೊಟ್ಟಿಗೆಯಲ್ಲಿ ಉತ್ಪಾದನೆಯಾಗುವ ಮೇವಿನ ಉಳಿಕೆಯನ್ನು ತ್ವರಿತಗತಿಯಲ್ಲಿ ಕರಗಿಸಿ ಗೊಬ್ಬರವಾಗಿಲು ವೇಸ್ಟ್‌ ಡಿಕಂಪೋಸರ್ ದ್ರಾವಣ ಬಳಸುತ್ತಾರೆ.

ಇಳುವರಿ ಸುಧಾರಣೆ

ಸೆಗಣಿ, ಗಂಜಲ, ಕಬ್ಬಿನ ಹಾಲು ಎಲ್ಲವೂ ಒಟ್ಟಿಗೆ ಸಿಗುವುದರಿಂದ, ಇವೆಲ್ಲವನ್ನೂ ಬಳಸಿಕೊಂಡು ಜೀವಾಮೃತ ತಯಾರಿಸಿ, ನಿಯಮಿತವಾಗಿ ಬೆಳೆಗಳಿಗೆ ಪೂರೈಸುತ್ತಾರೆ. ‘ಜೀವಾಮೃತ ಬಳಸುವುದರಿಂದ ಬೆಳೆಗಳು ಆರೋಗ್ಯವಾಗಿವೆ. ಅಷ್ಟೇ ಅಲ್ಲ, ಕಬ್ಬು, ಹಿಪ್ಪುನೇರಳೆ ಮತ್ತು ತರಕಾರಿಯಲ್ಲಿ ಇಳುವರಿ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ’ ಎನ್ನುತ್ತಾರೆ ಶಿವಾನಂದ.

ಬೀಜೋಪಚಾರದಿಂದ ಹಿಡಿದು ನಾಟಿ ಮಾಡಿ, ರೋಗ–ಕೀಟ ನಿಯಂತ್ರಣದವರೆಗೂ ಎಲ್ಲ ಹಂತಗಳಲ್ಲೂ ಜೀವಾಮೃತ ಮತ್ತು ಟ್ರೈಕೋಡರ್ಮಾದಂತಹ ಸಾವಯವ ದ್ರಾವಣಗಳನ್ನು ಬಳುತ್ತಾರೆ. ‘ಇದೊಂದು ರೀತಿ ಬೆಳೆಗಳಿಗೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ’ ಎನ್ನುತ್ತಾರೆ ಅವರು.

ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬು ಬೆಳೆದಾಗ ಎಕರೆಗೆ ಸರಾಸರಿ 50 ಟನ್ ಇಳುವರಿ ಬರುವ ಸಾಧ್ಯತೆ ಹೆಚ್ಚು. ಆದರೆ, ಶಿವಾನಂದ ಅವರು ಮಣ್ಣಿಗೆ ಜೀವಾಮೃತದ ಮೂಲಕ ಸಾವಯವ ಅಂಶಗಳನ್ನು ಸೇರಿಸುವುದರಿಂದ ಎಕರೆಗೆ 65 ರಿಂದ 70 ಟನ್‌ವರೆಗೆ ಕಬ್ಬಿನಲ್ಲಿ ಇಳುವರಿ ಪಡೆಯುತ್ತಿದ್ದಾರಂತೆ.

ಮೌಲ್ಯವರ್ಧನೆ, ಮಾರುಕಟ್ಟೆ

ಕಬ್ಬು ಕೊಯ್ಲಾದ ನಂತರ, ಒಂದಷ್ಟು ಕಬ್ಬನ್ನು ಆಲೆಮನೆಗೆ ಕಳಿಸಿ ಮನೆಗೆ ಮತ್ತು ಸಂಬಂಧಿಕರಿಗೆ ಬೇಕಾಗುವಷ್ಟು ಬೆಲ್ಲ ತಯಾರಿಸಿಕೊಳ್ಳುತ್ತಾರೆ.ಉಳಿದ ಕಬ್ಬನ್ನು ಕಾರ್ಖಾನೆಗೆ ಹಾಕುತ್ತಾರೆ. ಕಬ್ಬು ಮತ್ತು ರೇಷ್ಮೆ ಬೆಳೆಯಿಂದ ವಾರ್ಷಿಕವಾಗಿ ₹7 ಲಕ್ಷದಿಂದ ₹8 ಲಕ್ಷದವರೆಗೆ ಆದಾಯವಿದೆ. ರೇಷ್ಮೆ ಬೆಳೆಯೊಂದರಿಂದಲೇ ಎರಡು ತಿಂಗಳಿಗೆ ಕನಿಷ್ಠ ₹50 ಸಾವಿರದವರೆಗೆ ಆದಾಯ ಪಡೆಯುತ್ತಾರೆ. ಒಪ್ಪಂದ ಕೃಷಿ ಮೂಲಕ ಚೆಂಡು ಹೂವು ಬೆಳೆದು ಮಾರಾಟ ಮಾಡುತ್ತಾರೆ. ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಾದ ಹಾರೋಗೇರಿ, ಮಹಾಲಿಂಗಪೂರದಲ್ಲಿ ಮಾರಾಟ ಮಾಡುತ್ತಾರೆ. ಒಪ್ಪಂದ ಮಾಡಿಕೊಂಡುಚೆಂಡು ಹೂವು ಬೆಳೆದು ಮಾರಾಟ ಮಾಡುತ್ತಾರೆ.ಕೃಷಿಯ ಜತೆಗೆ, ಹೈನುಗಾರಿಕೆ, ಮೊಲ ಸಾಕಾಣೆ ಉಪ ಆದಾಯವನ್ನು ನೀಡುತ್ತಿವೆ.

‘ನಮ್ಮದು ಸುಸ್ಥಿರ ಕೃಷಿ. ಸ್ವಾವಲಂಬಿ ಬದುಕು. ನಮಗೆ ಬೇಕಾದ್ದನ್ನು ನಾವೇ ಬೆಳೆದುಕೊಳ್ಳುತ್ತೇವೆ. ರಾಸಾಯನಿಕ ಬಳಸದೇ ಬೆಳೆಯುವ ಬೆಳೆಗಳು, ಆದಾಯವನ್ನು ನೀಡುತ್ತಿವೆ, ಮಣ್ಣಿನ ಜತೆಗೆ ನಮ್ಮ ಆರೋಗ್ಯವನ್ನೂ ರಕ್ಷಿಸುತ್ತಿವೆ. ಆ ಮಟ್ಟಿಗೆ ಸುಸ್ಥಿರ ಕೃಷಿಯಲ್ಲಿ ಸಂತೃಪ್ತಿ ಕಂಡುಕೊಂಡಿದ್ದೇವೆ’ ಎನ್ನುತ್ತಾರೆ ಶಿವಾನಂದ.

ಅವರದ್ದು ಹದಿನಾಲ್ಕು ಮಂದಿಯ ಅವಿಭಕ್ತ ಕುಟುಂಬ. ಹೀಗಾಗಿ, ಅವರಿಗೆ ನಿತ್ಯದ ಕೃಷಿಗೆ ಕಾರ್ಮಿಕರ ಅಗತ್ಯವಿಲ್ಲ. ಮನೆಯವರೇ ಕೃಷಿ ಕೆಲಸಗಳಲ್ಲಿ ಜತೆಯಾಗುತ್ತಾರೆ. ಇನ್ನೂ ಕೊಯ್ಲು ಸಂದರ್ಭದಲ್ಲಿ ಮಾತ್ರ ಇಬ್ಬರು ಅಥವಾ ಮೂವರು ಕಾರ್ಮಿಕರನ್ನು ಅವಲಂಬಿಸುತ್ತಾರೆ.

ಹೀಗೆ ಒಂದೇ ಸೂರಿನಡಿ ಸಮಗ್ರ ಕೃಷಿ ಚಟುವಟಿಕೆಗಳು ಲಭ್ಯವಾಗುವ ಕಾರಣ, ಕೃಷಿ ಅಧಿಕಾರಿಗಳು ಶಿವಾನಂದ ಅವರ ಹೊಲದಲ್ಲಿ ಹಲವು ‘ಕ್ಷೇತ್ರೋತ್ಸವ’ಗಳನ್ನು ಮಾಡಿದ್ದಾರೆ. ಇವರ ಕೃಷಿ ಚಟುವಟಿಕೆಯನ್ನು ಗುರುತಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವಾನಂದ ಅವರ ಸಂಪರ್ಕಕ್ಕೆ–81232 30831.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.