ADVERTISEMENT

10 ಅಡಿ ಎತ್ತರದ ಟೊಮೆಟೊ ಗಿಡ ಪ್ರಯೋಗ ಯಶಸ್ವಿ

ಐಐಎಚ್‌ಆರ್‌ನಿಂದ ಟೊಮೆಟೊ ತಳಿಗಳ ಪರೀಕ್ಷೆ

ಮನೋಹರ್ ಎಂ.
Published 10 ಫೆಬ್ರುವರಿ 2021, 19:25 IST
Last Updated 10 ಫೆಬ್ರುವರಿ 2021, 19:25 IST
ಪಾಲಿಹೌಸ್‌ನಲ್ಲಿ ಎತ್ತರವಾಗಿ ಬೆಳೆದಿರುವ ಟೊಮೆಟೊ ಬೆಳೆಯನ್ನು ವೀಕ್ಷಿಸುತ್ತಿದ್ದ ಹುಡುಗಿ  –ಪ್ರಜಾವಾಣಿ ಚಿತ್ರ
ಪಾಲಿಹೌಸ್‌ನಲ್ಲಿ ಎತ್ತರವಾಗಿ ಬೆಳೆದಿರುವ ಟೊಮೆಟೊ ಬೆಳೆಯನ್ನು ವೀಕ್ಷಿಸುತ್ತಿದ್ದ ಹುಡುಗಿ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಸಿರು ಮನೆಯಲ್ಲಿ (ಪಾಲಿಹೌಸ್‌) ಟೊಮೆಟೊ ಸಸಿಗಳನ್ನು ಎರಡೂವರೆ ತಿಂಗಳಲ್ಲೇ 10 ಅಡಿ ಎತ್ತರದವರೆಗೆ ಬೆಳೆಸಬಹುದಾದ ಆಧುನಿಕ ವಿಧಾನವು ಐಐಎಚ್‌ಆರ್‌ನ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.

ಈ ವಿಧಾನದಡಿ ಐಐಎಚ್‌ಆರ್‌ನ ತರಕಾರಿ ಬೆಳೆಗಳ ವಿಭಾಗವು ಬೃಹತ್ ಪಾಲಿಹೌಸ್‌ನಲ್ಲಿ ನಡೆಸಿರುವ ವಿವಿಧ ಟೊಮೆಟೊ ತಳಿಗಳ ಪರೀಕ್ಷೆ ಯಶಸ್ವಿಯಾಗಿದೆ.

ರೈತರು ಸಾಮಾನ್ಯ ಕೃಷಿ ಭೂಮಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯುತ್ತಿದ್ದು, ಪಾಲಿಹೌಸ್‌ನಲ್ಲಿ ಟೊಮೆಟೊ ಬೆಳೆಯುವುದರಿಂದ ರೈತರಿಗೆ ಆಗಬಹುದಾದ ಅನುಕೂಲಗಳನ್ನು ಪತ್ತೆ ಹಚ್ಚಲು ಸಂಸ್ಥೆ ಈ ಪ್ರಯೋಗ ನಡೆಸಿದೆ.

ADVERTISEMENT

‘ಪಾಲಿಹೌಸ್‌ ನಿರ್ಮಾಣ ದುಬಾರಿ ಎಂಬ ಕಾರಣಕ್ಕೆ ಶೇ 90ರಷ್ಟು ರೈತರು ತೆರೆದ ಕೃಷಿ ಭೂಮಿಯಲ್ಲೇಟೊಮೆಟೊ ಬೆಳೆಯುತ್ತಿದ್ದಾರೆ. ಅವರಿಗೆ ಹೊಸ ಮಾದರಿಯ ಟೊಮೆಟೊ ಬೆಳೆಗಳನ್ನು ಪರಿಚಯಿಸಲು ನೂತನ ವಿಧಾನಗಳನ್ನು ಅನುಸರಿಸಿದ್ದೇವೆ. ಗಿಡವನ್ನು ಮೇಲ್ಮುಖವಾಗಿ ಬೆಳೆಸುವ ವಿಧಾನ ರೈತರಿಗೆ ಸಹಕಾರಿಯಾಗಲಿದೆ’ ಎಂದು ಐಐಎಚ್‌ಆರ್‌ನತರಕಾರಿ ಬೆಳೆಗಳ ವಿಭಾಗದ ಪ್ರಧಾನ ವಿಜ್ಞಾನಿ ಎಸ್‌.ಶಂಕರ ಹೆಬ್ಬಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೊಮೆಟೊ ಸಸಿಗಳನ್ನು ಸಾಮಾನ್ಯವಾಗಿ ನೆಲದ ಮೇಲೆ ಹರಡಿದಂತೆ ಅಥವಾ ನೆಲಕ್ಕುರುಳದಂತೆ ಒಂದು ಕಡ್ಡಿ ನಿಲ್ಲಿಸಿ ಬೆಳೆಯುತ್ತಾರೆ. ಅದಕ್ಕೆ ಬದಲಾಗಿ 10 ಅಡಿಗಳವರೆಗೆ ದಾರ ಕಟ್ಟಿ ಸಸಿಗಳನ್ನು ಎತ್ತರವಾಗಿ ಬೆಳೆಸಿದ್ದೇವೆ. ಸಸಿಗಳು ಎತ್ತರಕ್ಕೆ ಬೆಳೆಯಲು ನೆರವಾಗಲು ಅಕ್ಕಪಕ್ಕ ಬೆಳೆದಿದ್ದ ಕೊಂಬೆಗಳನ್ನು ಕತ್ತರಿಸಿದ್ದೇವೆ. ಇದರ ಪರಿಣಾಮ ಸಸಿಗಳು ಎತ್ತರಕ್ಕೆ ಬೆಳೆಯುತ್ತಲೇ ಇವೆ. ಟೊಮೊಟೊ ಕೂಡ ಹಾನಿಯಾಗದಂತೆ ಎತ್ತರದವರೆಗೆಫಸಲು ನೀಡಿದೆ’ ಎಂದು ವಿವರಿಸಿದರು.

‘ರಾಜ್ಯದ ಹವಾಮಾನಕ್ಕೆ ಹೊಂದಿಕೊಳ್ಳುವ ಟೊಮೆಟೊ ತಳಿಯನ್ನು ಪತ್ತೆ ಹಚ್ಚಲು ಪಾಲಿಹೌಸ್‌ನಲ್ಲಿ ದೇಶಿ ಹಾಗೂ ಹೈಬ್ರಿಡ್‌ ಸೇರಿದಂತೆ ಒಟ್ಟು ಐದು ಟೊಮೆಟೊ ತಳಿಗಳನ್ನು ಏಕಕಾಲದಲ್ಲಿ ಬೆಳೆಸಿದ್ದೇವೆ. ಎಲ್ಲ ತಳಿಗಳೂ ಉತ್ತಮವಾಗಿ ಬೆಳೆದಿವೆ. ಈಗ ರೈತರಿಗೆ ಇದರ ಅನುಕೂಲ, ವೆಚ್ಚ, ನಿರ್ವಹಣೆ ಹಾಗೂ ಲಾಭದ ಅಂಶಗಳನ್ನು ಕುರಿತು ಸಂಶೋಧನೆ ನಡೆಸುತ್ತಿದ್ದೇವೆ’ ಎಂದರು.

‘ರೈತರಿಗೆ ಪಾಲಿಹೌಸ್‌ ನಿರ್ಮಾಣ ದುಬಾರಿಯಾದರೂ, ಪಾಲಿಹೌಸ್‌ ಒಳಗೆ ಬೆಳೆಯುವ ಬೆಳೆಗಳು ಹೆಚ್ಚಿನ ರೋಗಗಳು ಹಾಗೂ ಕೀಟಬಾಧೆಗೆ ಒಳಗಾಗುವುದಿಲ್ಲ. ತೆರೆದ ಜಾಗದಲ್ಲಿನ ಟೊಮೆಟೊ ಬೆಳೆ ಮಳೆಗಾಲದಲ್ಲಿ ಹಾನಿಗೆ ಒಳಗಾಗುತ್ತದೆ. ಆದರೆ, ಪಾಲಿಹೌಸ್‌ನಲ್ಲಿ ಟೊಮೆಟೊ ಬೆಳೆದರೆ ಹೆಚ್ಚು ಇಳುವರಿಯೊಂದಿಗೆ ಮಳೆಹಾನಿಯಿಂದ ಪಾರಾಗಬಹುದು’ ಎಂದು ಸಲಹೆ ನೀಡಿದರು.

***

ಟೊಮೆಟೊ ಬೆಳೆಗೆ ಸೂಕ್ತ ಬೆಲೆ ಯಾವಾಗಲೂ ಸಿಕ್ಕರೆ, ರೈತರು ಈ ವಿಧಾನ ದಲ್ಲಿ ಟೊಮೆಟೊ ಬೆಳೆಯುವುದು ಸೂಕ್ತ

- ಎಸ್‌.ಶಂಕರ ಹೆಬ್ಬಾರ್‌, ಪ್ರಧಾನ ವಿಜ್ಞಾನಿ

ಟೊಮೆಟೊ ಗಿಡಗಳು ಎತ್ತರವಾಗಿ ಬೆಳೆಯುವುದನ್ನು ನೋಡಿರಲಿಲ್ಲ. ಮೇಳದಲ್ಲಿ ಈ ವಿಧಾನ ನೋಡಿ ಬೆರಗಾದೆ

- ಶಶಿಕಾಂತ್ ದೋನಿ, ಕಲಬುರ್ಗಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.