ADVERTISEMENT

ಸಾವಯವ ಕೃಷಿಗೆ ‘ಅಮೃತ’

ಸಾಂತೇನಹಳ್ಳಿ ಕಾಂತರಾಜ್
Published 22 ಜೂನ್ 2020, 19:30 IST
Last Updated 22 ಜೂನ್ 2020, 19:30 IST
ಅಮೃತ್ ಆರ್ಗ್ಯಾನಿಕ್ಸ್‌ನಲ್ಲಿ ತಯಾರಾಗುವ ಗೊಬ್ಬರ
ಅಮೃತ್ ಆರ್ಗ್ಯಾನಿಕ್ಸ್‌ನಲ್ಲಿ ತಯಾರಾಗುವ ಗೊಬ್ಬರ   
""
""

‘ಇಲ್ಲಿ, ನಮ್ಮ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿ, ಆ ಮಣ್ಣಿಗೆ ಬೇಕಾದಂತಹ ಸಾವಯವ ಗೊಬ್ಬರಗಳನ್ನು ಕೊಡುತ್ತಾರೆ. ಎಷ್ಟು ಗೊಬ್ಬರ ಬಳಸಬೇಕೆಂದೂ ಹೇಳುತ್ತಾರೆ. ಇದರಿಂದ ನನಗೆ ಹಣ ಉಳಿತಾಯವಾಗಿದೆ...’

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಸಮೀಪದ ಮಲ್ಲಾಡಿಹಳ್ಳಿಯಲ್ಲಿರುವ ಅಮೃತ್ ಆರ್ಗ್ಯಾನಿಕ್ಸ್‌ ಮತ್ತು ಫರ್ಟಿಲೈಸರ್ಸ್‌ ಕಾರ್ಖಾನೆಗೆ ಗೊಬ್ಬರ ಖರೀದಿಸಲು ಬಂದಿದ್ದ ಭೀಮಸಮುದ್ರದ ರೈತ ರಾಜಶೇಖರ್ ಹೇಳಿದ ಮಾತಿದು.

ಈ ಘಟಕಕ್ಕೆ ಯಾರೇ ರೈತರು ಗೊಬ್ಬರ ಖರೀದಿಸಲು ಬಂದರೂ, ಅವರ ಕೃಷಿಯ ವಿವರ, ತಿಳಿದು, ಮಣ್ಣಿನ ಬಗ್ಗೆ ಮಾಹಿತಿ ಪಡೆದು ಅಗತ್ಯ ಪೋಷಕಾಂಶಗಳುಳ್ಳ ಗೊಬ್ಬರ ನೀಡುವುದು ಈ ಘಟಕದ ಪ್ರಕ್ರಿಯೆಗಳಲ್ಲೊಂದು. ಇಲ್ಲಿ ರೈತರು ನೀಡುವ ಇಂಥ ಮಾಹಿತಿಗಳನ್ನು ಪರಿಶೀಲಿಸಿ ಸಲಹೆ ನೀಡಲು ತಜ್ಞರಿದ್ದಾರೆ. ರೈತರಿಂದ ಮಾಹಿತಿ ಪಡೆಯುವ ಜತೆಗೆ, ಗೊಬ್ಬರ ಬಳಕೆಯ ವಿಧಾನ ಕುರಿತು ಸಲಹೆ ನೀಡುತ್ತಾರೆ. ‘ನಮ್ಮ ತೋಟದ ಅಡಿಕೆ ಮರಗಳಿಗೆ ಇಲ್ಲಿ ಸಿಗುವ ದ್ರವರೂಪದ ಸಾವಯವ ಗೊಬ್ಬರ ಬಳಸುತ್ತಿದ್ದೇನೆ. ಈಗ ಉತ್ತಮ ಇಳುವರಿ ಬರುತ್ತಿದೆ’ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಹಿರೆನೆಲ್ಲೂರಿನ ರೈತ ರಾಮಚಂದ್ರಪ್ಪ.

ADVERTISEMENT
ಅಮೃತ್ ಆರ್ಗ್ಯಾನಿಕ್ಸ್‌ಕಾರ್ಖಾನೆಯ ವಿವಿಧ ಉತ್ಪನ್ನಗಳೊಂದಿಗೆ ಮಾಲೀಕ ಕೆ. ನಾಗರಾಜ್

ಕಾರ್ಖಾನೆ ಆವರಣದಲ್ಲಿ ಯಾವ ಗೊಬ್ಬರದಿಂದ ಏನು ಬೆಳೆ ಬೆಳೆಯಬಹುದೆಂದು ತಿಳಿಸುವ ಪ್ರಾತ್ಯಕ್ಷಿಕೆಗಳ ತಾಕುಗಳಿವೆ. ಪಾಲಿಹೌಸ್‌ನಲ್ಲಿ ಕೃಷಿ ಇದೆ. ಮಳೆನೀರು ಸಂಗ್ರಹದ ಮಾದರಿ ಇದೆ. ಹೈನುಗಾರಿಕೆ, ಸೋಲಾರ್ ಘಟಕಗಳಂತಹ ಪರಿಸರ ಸ್ನೇಹಿ ಚಟುವಟಿಕೆಗಳಿವೆ. ಯಾವ ಬೆಳೆಗೆ ಯಾವ ಗೊಬ್ಬರ ಸೂಕ್ತ ಎಂದು ತಿಳಿಸುವ ಪ್ರಯೋಗಾಲಯವೂ ಇದೆ.

ಈ ಎಲ್ಲ ಕೆಲಸಗಳ ನಿರ್ವಹಣೆಗಾಗಿಯೇ ಕಾರ್ಖಾನೆಯಲ್ಲಿ ಸುಮಾರು ಇನ್ನೂರು ನೌಕರರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಸ್ಥಳೀಯರೇ ಇಲ್ಲಿನ ಉದ್ಯೋಗಸ್ಥರು. ಇವರ ಜತೆಗೆ ಕೃಷಿ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿರುತ್ತಾರೆ.

ಗೊಬ್ಬರ ತಯಾರಿಕೆ ವೀಕ್ಷಣೆ

ಈ ಕಾರ್ಖಾನೆಯಲ್ಲಿ ವರ್ಷಪೂರ್ತಿ, ಒಂದಲ್ಲ ಒಂದು ರೀತಿಯಲ್ಲಿ ತರಬೇತಿಗಳು ನಡೆಯುತ್ತಿರುತ್ತವೆ. ರೈತರು ಬೇರೆ ಬೇರೆ ಕಡೆಯಿಂದ ಅಧ್ಯಯನ ಪ್ರವಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ತರಬೇತಿ ಅವಧಿಯಲ್ಲಿ ವಿವಿಧ ಬೆಳೆಗಳು, ಅವುಗಳ ನಿರ್ವಹಣೆ, ರೋಗ ನಿಯಂತ್ರಣ, ಪೋಷಕಾಂಶಗಳ ಬಗ್ಗೆ ತಜ್ಞರಿಂದ ತರಬೇತಿ ಕೊಡಿಸಲಾಗುತ್ತದೆ. ಕಾರ್ಖಾನೆಯ ಇಂಥ ರೈತ ಪರ ಕಾರ್ಯಕ್ರಮಗಳಿಗೆ ನಬಾರ್ಡ್‌ನಂತಹ ಸಂಸ್ಥೆಗಳು ನೆರವಾಗುತ್ತಿವೆ.

ಈ ಘಟಕಕ್ಕೆ ಕೇವಲ ರೈತರಷ್ಟೇ ಅಲ್ಲ, ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬರುತ್ತಾರೆ. ಇದಕ್ಕಾಗಿಯೇ ಕಾರ್ಖಾನೆಯಲ್ಲಿ ತರಬೇತಿ ಕೇಂದ್ರವೂ ಇದೆ. ಬೇರೆಡೆಯಿಂದ ಬರುವ ರೈತರು, ವಿದ್ಯಾರ್ಥಿಗಳು, ಕೃಷಿತಜ್ಞರಿಗೆ ಉಳಿದುಕೊಳ್ಳಲು ವಸತಿ, ಕ್ಯಾಂಟೀನ್ ವ್ಯವಸ್ಥೆಯೂ ಇದೆ.

72ಕ್ಕೂ ಹೆಚ್ಚು ಉತ್ಪನ್ನಗಳು

ಅಮೃತ್ ಆರ್ಗ್ಯಾನಿಕ್ಸ್‌ನಲ್ಲಿ 72ಕ್ಕೂ ಹೆಚ್ಚು ಸಾವಯವ ಉತ್ತನ್ನಗಳನ್ನು ತಯಾರಿಸಲಾಗುತ್ತಿದೆ. ಅಮೃತ್ ಗೋಲ್ಡ್ ಪ್ಲಸ್, ಅಮೃತ್ ವರ್ಷಣಿ, ಫಾಸ್ ಮ್ಯಾಕ್ಸ್, ಬಯೋ-ಕೆ-ರಿಚ್, ಅಕ್ಷಯ, ಅಮೂಲ್ಯ, ಅಪೂರ್ವ, ಆಯುಷ್, ಬೇವಿನ ಬೀಜ ಆಧಾರಿತ ಕೃಷಿ ಜೀವನ್, ಆಲ್ಟ್ರಾ ಸೆಟ್ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ.‌

ಅಜೋಫಿಕ್ಸ್, ಅಜೋಟೋ ಫಿಕ್ಸ್, ಅಲೈಡ್ ಸೇರಿದಂತೆ ಹಲವು ರೀತಿಯದ್ರವರೂಪದ ಗೊಬ್ಬರಗಳನ್ನು ತಯಾರಿಸುತ್ತಾರೆ. ಜತೆಗೆ, ಬೆಳೆಗಳಿಗೆ ಬೇಕಾದ ಲಘುಪೋಷಕಾಂಶಗಳನ್ನೂ ತಯಾರಿಸುತ್ತಾರೆ.

ಅಮೃತ್ ಆರ್ಗ್ಯಾನಿಕ್ಸ್‌ಗೆ ಅಧ್ಯಯನ ಪ್ರವಾಸಕ್ಕೆ ಬಂದಿರುವ ಚಿಕ್ಕಮಗಳೂರು ಜಿಲ್ಲೆಯ ರೈತರ ತಂಡ.

ಬೆಳೆಸಿದ್ದನ್ನು ನೋಡಿ..

‘ಅನೇಕ ಬಾರಿ ರೈತರು ಗೊಬ್ಬರ ಖರೀದಿಯಲ್ಲಿ ಮೋಸ ಹೋಗಿರುವ ಉದಾಹರಣೆಗಳಿವೆ. ಹೀಗಾಗಿ, ರೈತರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದಲೇ, ನಮ್ಮ ಕಾರ್ಖಾನೆಯಲ್ಲಿ ಸಾವಯವ ಗೊಬ್ಬರಕ್ಕೆ ಬಳಸುವ ಸಾಮಗ್ರಿಗಳು, ಗೊಬ್ಬರ ತಯಾರಾಗುವ ವಿಧಾನವನ್ನು ಮುಕ್ತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ಕಾರ್ಖಾನೆಯ ಮಾಲೀಕ ಕೆ.ನಾಗರಾಜ್.

‘ಮೊದಲಿಗೆ ರೈತರ ತೋಟ, ಹೊಲದ ಮಣ್ಣು ಪರೀಕ್ಷೆ ಮಾಡಿ ಪ್ರಮಾಣ ಪತ್ರ ನೀಡುತ್ತೇವೆ. ಮಣ್ಣಿನಲ್ಲಿ ಕೊರತೆ ಇರುವ ಅಂಶಗಳಿಗೆ ಸಂಬಂಧಿಸಿದ ಗೊಬ್ಬರ ಬಳಸಲು ಸಲಹೆ ನೀಡುತ್ತೇವೆ. ಇದರಿಂದ ರೈತರ ಹಣ ಉಳಿತಾಯ ಆಗುತ್ತದೆ. ನಾವು ತಿನ್ನುವ ಆಹಾರದಲ್ಲಿ ಉಪ್ಪು, ಖಾರ, ಹುಳಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆಹಾರ ರುಚಿಯಾಗಿರುತ್ತದೆ. ಒಂದು ಚೂರು ವ್ಯತ್ಯಾಸವಾದರೆ ರುಚಿ ಕೆಡುತ್ತದೆ. ಹಾಗೆಯೇ, ಮಣ್ಣಿನಲ್ಲಿಯೂ ವಿವಿಧ ಅಂಶಗಳು ಸರಿಯಾದ ಪ್ರಮಾಣದಲ್ಲಿಇದ್ದರೆ ಮಾತ್ರ ಬೆಳೆ ಉತ್ಕೃಷ್ಟವಾಗಿ ಬರುತ್ತದೆ’ ಎನ್ನುತ್ತಾರೆ ಅವರು.

‘ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಕಟ್ಟಿ ಬೆಳೆಸಿದ ರಾಘವೇಂದ್ರ ಸ್ವಾಮೀಜಿ ಅವರ ಪ್ರೇರಣೆಯಿಂದ ಈ ಕಾರ್ಖಾನೆ ನಿರ್ಮಿಸಿದ್ದೇನೆ’ ಎನ್ನುವ ನಾಗರಾಜ್, ‘ಈ ಉದ್ಯಮದಲ್ಲಿ ನನಗೆ ಶೇ 50 ರಷ್ಟು ವ್ಯಾಪಾರದ ಉದ್ದೇಶವಿದ್ದರೆ, ಉಳಿದಿದ್ದು, ರೈತರಿಗೆ ನೆರವಾಗಬೇಕೆಂಬ ಆಶಯವಿದೆ’ ಎನ್ನುತ್ತಾರೆ ಅವರು. ಅಪ್ಪನ ಈ ರೈತಸ್ನೇಹಿ ಆಶಯಕ್ಕೆ ಮಗ ಅಭಿಲಾಷ್‌ ಕೂಡ ಕೈ ಜೋಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: 94480 19452

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.