ADVERTISEMENT

ವೀಳ್ಯದೆಲೆ ಕೃಷಿಯಲ್ಲಿ ಅರಳಿದ ಬದುಕು

ಒಂದೂವರೆ ಎಕರೆಯಲ್ಲಿ ಬೆಳೆ; ಕೈತುಂಬ ಆದಾಯ

ಮಹಾಬಲೇಶ್ವರ ಶಿ.ಗಡೇದ
Published 27 ಜನವರಿ 2020, 19:30 IST
Last Updated 27 ಜನವರಿ 2020, 19:30 IST
ಮುದ್ದೇಬಿಹಾಳ ತಾಲ್ಲೂಕು ಮದರಿ ಗ್ರಾಮದಲ್ಲಿರುವ ಎಲೆಬಳ್ಳಿ ತೋಟದಲ್ಲಿ ರಾಜೇಸಾಬ ನದಾಫ್
ಮುದ್ದೇಬಿಹಾಳ ತಾಲ್ಲೂಕು ಮದರಿ ಗ್ರಾಮದಲ್ಲಿರುವ ಎಲೆಬಳ್ಳಿ ತೋಟದಲ್ಲಿ ರಾಜೇಸಾಬ ನದಾಫ್   

ಮುದ್ದೇಬಿಹಾಳ: ಪಟ್ಟಣದ ರಾಜೇಸಾಬ ಹಸನಸಾಬ ನದಾಫ ಕಲಿತಿದ್ದು ಕೇವಲ ಎಸ್ಸೆಸ್ಸೆಲ್ಸಿ. ನಿತ್ಯ ಸಾವಿರ ರೂಪಾಯಿ ದುಡಿಯುತ್ತಾರೆ. ಇಷ್ಟೇ ಅಲ್ಲ, ನಿತ್ಯ ಐದಾರು ಜನರಿಗೆ ಕೆಲಸ ನೀಡುವ ಮಾಲೀಕನಾಗಿದ್ದಾರೆ.

ಹೌದು. ಈ ಸಾಧನೆ ಸಾಧ್ಯವಾಗಿದ್ದು ವೀಳ್ಯದೆಲೆ ಕೃಷಿಯಿಂದ. ತಾಲ್ಲೂಕಿನ ಮದರಿ ಗ್ರಾಮದಲ್ಲಿರುವ ಒಂದೂವರೆ ಎಕರೆ ತೋಟದಲ್ಲಿ ವೀಳ್ಯದೆಲೆ ಬೆಳೆದಿದ್ದು, ನಿತ್ಯ ಸಾವಿರಗಟ್ಟಲೆ ಲಾಭ ಪಡೆಯುತ್ತಿದ್ದಾರೆ. ರಾಜೇಸಾಬರ ಸಹೋದರರಾದ ಸಾಬನ್ನಸಾಬ ನದಾಫ್‌ ಹಾಗೂ ಮೈಬೂಸಾಬ ನದಾಫ್‌ ಕೂಡ ವೀಳ್ಯದೆಲೆ, ನಿಂಬೆ ಹಣ್ಣು ಮಾರುತ್ತ ಜೀವನ ಸಾಗಿಸುತ್ತಿದ್ದಾರೆ.

ಈ ಮೂವರು ಸಹೋದರರ ತಂದೆ ಹಸನಸಾಬ ನದಾಫ್ ಅವರು ಕೃಷಿಯೊಂದಿಗೆ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಇವರಿಗೆ 32 ಎಕರೆ ಹೊಲ ಇದೆ. ಒಂದೂವರೆ ಎಕರೆಯಲ್ಲಿ ವೀಳ್ಯದೆಲೆ ಕೃಷಿ ಕೈಗೊಂಡಿದ್ದು, ನಿತ್ಯ 10 ಬುಟ್ಟಿ ವೀಳ್ಯದೆಲೆ ತೆಗೆಯುತ್ತಾರೆ. ಒಂದು ಬುಟ್ಟಿಯಲ್ಲಿ 13 ಸಾವಿರ ಎಲೆಗಳಿರುತ್ತವೆ. ಒಂದು ಬುಟ್ಟಿಗೆ ₹2 ಸಾವಿರ ಬೆಲೆ ಇದೆ. ಈ ಬುಟ್ಟಿಗಳಲ್ಲಿ ಮೂರನ್ನು ತಾವೇ ಮಾರಾಟ ಮಾಡಿದರೆ, ಉಳಿದ 7-8 ಬುಟ್ಟಿಗಳನ್ನು ಶಹಾಪುರ, ಸುರಪುರ, ಹುನಗುಂದ, ಇಲಕಲ್ಲಗೆ ಮಾರಾಟ ಮಾಡುತ್ತಾರೆ.

ಇವರಿಗೆ ತಮ್ಮದೇ ಆದ ಗ್ರಾಹಕರಿದ್ದು, ಎಲ್ಲಾ ಕಾಲದಲ್ಲೂ ವೀಳ್ಯದೆಲೆ ದೊರೆಯುವಂತೆ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವೀಳ್ಯದೆಲೆಯ ಬಳ್ಳಿಗೆ ಆಸರೆಯಾಗಿ ಬೆಳೆದಿರುವ 480ಕ್ಕೂ ಹೆಚ್ಚು ನುಗ್ಗೆ ಗಿಡಗಳಿಂದಲೂ ಆದಾಯ ಪಡೆಯುತ್ತಿದ್ದಾರೆ.

25 ವರ್ಷಗಳಿಂದ ವೀಳ್ಯದೆಲೆ ಮಾರಾಟದಲ್ಲಿ ತೊಡಗಿರುವ ಈ ಸಹೋದರರು ಮೊದಲು ಮತ್ತೊಬ್ಬರಿಂದ ವೀಳ್ಯದೆಲೆ ಬುಟ್ಟಿಗಳನ್ನು ಪಡೆದು, ಮಾರಾಟ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಕೃಷ್ಣಾ ನದಿ ದಂಡೆಗೆ ಹತ್ತಿಕೊಂಡಿರುವ ತೋಟದಲ್ಲಿ ಸ್ವತಃ ತಾವೇ ವೀಳ್ಯದೆಲೆ ಬಳ್ಳಿ ಹಚ್ಚಿ ಬೆಳೆಯುವ ಮೂಲಕ ಲಾಭ ಪಡೆಯುತ್ತಿದ್ದಾರೆ.

ವೀಳ್ಯದೆಲೆ ಕೊಯ್ಯಲು ನುರಿತ ಕಾರ್ಮಿಕರು ಬೇಕು. ವೀಳ್ಯದೆಲೆ ಕೊಯ್ಯುವ, ಅದನ್ನು ಸಾಲಾಗಿ ಹೊಂದಿಸಿ ಬುಟ್ಟಿ ತುಂಬುವ ಕೆಲಸವನ್ನು ಜಿಲ್ಲೆಯ ಗೊಳಸಂಗಿಯ ಯುವ ಕೂಲಿಗಳು ಮಾಡುತ್ತಾರೆ. ವೀಳ್ಯದೆಲೆ ವ್ಯಾಪಾರದಿಂದ ಲಾಭ ಬರುತ್ತಿರುವುದರಿಂದ ಬಸರಕೋಡದಲ್ಲಿ ನೀರಾವರಿ ಸೌಲಭ್ಯ ಇರುವ 7 ಜನ ರೈತರಿಂದ ತಲಾ ಒಂದೊಂದು ಎಕರೆ ಭೂಮಿ ಲಾವಣಿ ಪಡೆದು, ಅಲ್ಲೂ ಸಹ ಒಳ್ಳೆಯ ಫಸಲು ಪಡೆಯುತ್ತಿದ್ದಾರೆ.

ಶಾಲೆ ಕಲಿತು, ಸರ್ಕಾರಿ ನೌಕರಿಯೇ ಬೇಕು ಎಂದು ಕಾಯುತ್ತ ಕೂಡದೇ ಇರುವ ಭೂಮಿಯಲ್ಲಿಯೇ ಉತ್ತಮ ಬೆಳೆ ಬೆಳೆಯುವ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ. 32 ಎಕರೆ ಭೂಮಿಯಲ್ಲಿ ತೊಗರಿ, ಮೆಕ್ಕೆಜೋಳ ಬೆಳೆದು ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ.

ಸಂಪರ್ಕ: 89512 64430

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.