ADVERTISEMENT

20 ಎಕರೆಯಲ್ಲಿ 650 ಕ್ವಿಂಟಲ್ ಭತ್ತ ಇಳುವರಿ: ಬನ್ನಿಸಾರಿಗೆ ರೈತ ರಾಜೇಗೌಡರ ಸಾಧನೆ

ಯಂತ್ರಶ್ರೀ ಪದ್ಧತಿಯಲ್ಲಿ ಬಂಪರ್ ಇಳುವರಿ ಪಡೆದ ಬನ್ನಿಸಾರಿಗೆ ಕೃಷಿಕ ರಾಜೇಗೌಡ

ನಾ.ಮಂಜುನಾಥ ಸ್ವಾಮಿ
Published 6 ಮಾರ್ಚ್ 2021, 19:31 IST
Last Updated 6 ಮಾರ್ಚ್ 2021, 19:31 IST
ಬನ್ನಿಸಾರಿಗೆ ಗ್ರಾಮದ ಕೃಷಿಕ ರಾಜೇಗೌಡ (ಎಡದಲ್ಲಿರುವವರು) ಅವರು ಯಂತ್ರಶ್ರೀ ಪದ್ಧತಿಯಲ್ಲಿ ಬೆಳೆದ ಭತ್ತದ ರಾಶಿ
ಬನ್ನಿಸಾರಿಗೆ ಗ್ರಾಮದ ಕೃಷಿಕ ರಾಜೇಗೌಡ (ಎಡದಲ್ಲಿರುವವರು) ಅವರು ಯಂತ್ರಶ್ರೀ ಪದ್ಧತಿಯಲ್ಲಿ ಬೆಳೆದ ಭತ್ತದ ರಾಶಿ   

ಯಳಂದೂರು:ಯಂತ್ರಶ್ರೀ ಪದ್ಧತಿ ಮೂಲಕ ಭತ್ತದ ನಾಟಿ ಮಾಡಿದರೆ ಫಸಲು ವೃದ್ಧಿಸಿ, ವೆಚ್ಚವನ್ನು ಕುಗ್ಗಿಸಬಹುದು ಎಂಬುದನ್ನು ತಾಲ್ಲೂಕಿನ ರೈತರು ಸಾಧಿಸಿ ತೋರಿಸಿದ್ದಾರೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾರ್ಗದರ್ಶನದಲ್ಲಿಯಂತ್ರಶ್ರೀ ಪದ್ಧತಿ ಮೂಲಕ ತಾಲ್ಲೂಕಿನ ನೂರಾರು ಎಕರೆಯಲ್ಲಿ ಭತ್ತ ಬೆಳೆಸಲಾಗಿದೆ.

ಬನ್ನಿಸಾರಿಗೆ ಗ್ರಾಮದ ರಾಜೇಗೌಡ ಅವರು 20 ಎಕರೆ ಜಾಗದಲ್ಲಿ ಭತ್ತ ಬೆಳೆದು650 ಕ್ವಿಂಟಲ್‌ ಬಂಪ‍ರ್‌ ಇಳುವರಿ ಪಡೆದಿದ್ದಾರೆ.

ADVERTISEMENT

ಏನಿದು ಯಂತ್ರಶ್ರೀ ಪದ್ಧತಿ?

ಭತ್ತವನ್ನು ಟ್ರೇನಲ್ಲಿ ಇಟ್ಟು ಸಸಿ ಮಾಡಲಾಗುತ್ತದೆ. ನಂತರ ಯಂತ್ರದ ಮೂಲಕ ನಾಟಿ ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ನೀರಿನ ಬಳಕೆಯೂ ಕಡಿಮೆಯೇ.

‘ಸಸಿಗೆ ಟ್ರೇ ಬಳಕೆ,ಕಡಿಮೆ ನೀರು ಬಳಸಿ, ಯಂತ್ರದ ಮೂಲಕ ನಾಟಿ ಮಾಡುತ್ತೇವೆ. ಬೆಳೆದ ಭತ್ತದ ತೆಂಡೆ, ತೆನೆ, ಕಾಳಿನ ಸಂಖ್ಯೆವೃದ್ಧಿಸಿ ಫಸಲು ಹೆಚ್ಚಾಗುತ್ತದೆ’ ಎಂದು ಬಿ.ವಿ.ರಾಜೇಗೌಡ ಅವರು ಹೇಳುತ್ತಾರೆ.ಈ ಪದ್ಧತಿಯಲ್ಲಿ ಇವರು ಸಣ್ಣ ಭತ್ತ ಜಾಗೂ ಜ್ಯೋತಿ ತಳಿಯ ಭತ್ತ ಬೆಳೆದಿದ್ದಾರೆ. ಒಟ್ಟಾರೆ 650 ಕ್ವಿಂಟಲ್‌ ಇಳುವರಿ ಬಂದಿದೆ.

‘ಹಿಂದೆ ಕೃಷಿ ಇಲಾಖೆ ಧನ ಸಹಾಯ ನೀಡಿ ಯಂತ್ರದ ನಾಟಿಗೆ ನೆರವಾಗಿತ್ತು. ಈಗ ಧರ್ಮಸ್ಥಳ ಸಂಸ್ಥೆ ನಾಟಿಸಸಿ ಬೆಳೆಯಲು ಆಸಕ್ತ ಸದಸ್ಯರಿಗೆ ಸಹಾಯ ಮತ್ತು ತಾಂತ್ರಿಕ ನೆರವು ನೀಡುತ್ತದೆ’ ಎಂದು ಅವರು ಹೇಳಿದರು.

ಜ್ಯೋತಿ ಭತ್ತ ಕೇಳುವವರು ಇಲ್ಲ

ಐದು ಎಕರೆಯಲ್ಲಿ 150 ಕ್ವಿಂಟಲ್ ಸಣ್ಣ ಭತ್ತ ಮತ್ತು 15 ಎಕರೆಯಲ್ಲಿ 500 ಕ್ವಿಂಟಲ್‌ ಜ್ಯೋತಿ ತಳಿಯ ಭತ್ತವನ್ನು120 ದಿನಗಳಲ್ಲಿ ಬೆಳೆದಿದ್ಧೇನೆ. ಸರಿಯಾಗಿ ಗೊಬ್ಬರ ನೀಡಿ, ಕೀಟ ಹಾವಳಿ ನಿಯಂತ್ರಿಸಿದರೆ 1 ಎಕರೆಗೆ ₹10 ಸಾವಿರದಿಂದ ₹15 ಸಾವಿರ ಲಾಭ ಮಾಡಬಹುದು’ ಎಂದು ಅವರು ವಿವರಿಸಿದರು.

‘ಕೃಷಿ ಇಲಾಖೆ ಆಯ್ದ ತಳಿಗಳನ್ನು ₹1,868 ಬೆಂಬಲ ಬೆಲೆ ನೀಡಿ ಕೊಳ್ಳುತ್ತದೆ. ಆದರೆ, ಸಣ್ಣ ಭತ್ತವನ್ನು ಸ್ಥಳೀಯರು ₹2000 ದರದಲ್ಲಿ ಕೊಳ್ಳುತ್ತಾರೆ. ಮಾರಾಟ ಖರ್ಚುಉಳಿಯುತ್ತದೆ. ಆದರೆ, ಜ್ಯೋತಿ ಭತ್ತವನ್ನು ಈ ಬಾರಿ ವ್ಯಾಪಾರಿಗಳು ಖರೀದಿಸಿಲ್ಲ. ಇದರ ಅಕ್ಕಿ ಕೆಂಪಾಗಿದ್ದು, ರೈತರು ಬಳಸುವುದಿಲ್ಲ. ಕೋವಿಡ್‌ ಕಾರಣದಿಂದ ಇದರ ರಫ್ತು ಆಗಿಲ್ಲ. ಕಳೆದ ಬಾರಿ ₹2,100 ಇದ್ದ ಜ್ಯೋತಿ
ಭತ್ತದ ಧಾರಭೆ ಈಗ ₹1,400ಕ್ಕೆ ಕುಸಿದಿದೆ’ ಎಂದು ರಾಜೇಗೌಡ ಅವರು ಮಾಹಿತಿ ನೀಡಿದರು.

‘ನೀರು, ಶ್ರಮ, ಬಂಡವಾಳ ಉಳಿತಾಯ’

‘ಯಂತ್ರಶ್ರೀ ವಿಧಾನದಲ್ಲಿ 1 ಎಕರೆ ನಾಟಿಗೆ 10ರಿಂದ 12 ಕೆಜಿ ಬಿತ್ತನೆ ಭತ್ತ ಸಾಕು. 80 ಟ್ರೇಗಳನ್ನು ಬಳಸಿ 1 ಅಡಿ ಅಗಲ 2 ಅಡಿ ಉದ್ದದ ಸ್ಥಳಗಳಲ್ಲಿ ಹರಡಬೇಕು. ಹೆಚ್ಚಿನಖರ್ಚು ಇಲ್ಲದೆ 18 ದಿನಕ್ಕೆ ಪೈರು ನಾಟಿಗೆ ಸಿದ್ಧವಾಗುತ್ತದೆ. ಅಗತ್ಯ ಇದ್ದವರು ನಾಟಿಗೆ ಮೂರು ದಿನ ಮೊದಲು ಗೊಬ್ಬರ ಇಲ್ಲವೇ ಕೀಟನಾಶಕ ಬಳಸಬಹುದು. ಪೈರುಗಳನ್ನು ಕೀಳುವಾಗಬೇರುಗಳಿಗೆ ಗಾಯ ಆಗುವುದಿಲ್ಲ. ಬೇರುಗಳಿಗೆ ಜಾಸ್ತಿ ಗಾಳಿ ಮತ್ತು ಸಾರಜನಕ ಲಭ್ಯವಾಗುತ್ತದೆ. ಕಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕಳೆಗಳನ್ನು ಇದೇ ಮಣ್ಣಿಗೆಸೇರಿಸಿದರೆ ವಿವಿಧ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಾಗಿ, ಮಣ್ಣಿನ ಫಲವತ್ತತೆವೃದ್ಧಿಸುತ್ತದೆ. ಶ್ರೀಪದ್ಧತಿ ನೀರು, ಶ್ರಮ, ಮತ್ತು ಬಂಡವಾಳ ತಗ್ಗಿಸಿ ರೈತರಿಗೆವರವಾಗಿದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಪ್ರವೀಣ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.