ADVERTISEMENT

ಕಡಿಮೆ ಖರ್ಚಿನ ಔಡಲ ಕೃಷಿ

ಬರದ ನೆಲಕ್ಕೆ ಆಸರೆಯಾದ ಎಣ್ಣೆ ಕಾಳು

ಕಿಶನರಾವ್‌ ಕುಲಕರ್ಣಿ
Published 30 ಡಿಸೆಂಬರ್ 2019, 19:30 IST
Last Updated 30 ಡಿಸೆಂಬರ್ 2019, 19:30 IST
ಔಡಲ ಕೃಷಿ
ಔಡಲ ಕೃಷಿ   

ಬೆಳೆ ವಿನ್ಯಾಸದಲ್ಲಿ ಪರಿಣತಿ ಪಡೆದಿರುವ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕು ಹನುಮಸಾಗರದ ಕೃಷಿಕ ಶಿವಪುತ್ರಪ್ಪ ಕೋಳೂರ, ಆಗಾಗ್ಗೆ ಕೃಷಿಯಲ್ಲಿ ಸಣ್ಣ ಸಣ್ಣ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಸಾವಯವದಲ್ಲಿ ತೊಗರಿ ಬೆಳೆದು ಸುದ್ದಿಯಾಗಿದ್ದರು. ನಂತರ ಸಿರಿಧಾನ್ಯಗಳಾದ ಕೊರಲೆ ಜತೆಗೆ ನವಣೆಯನ್ನು ಮಿಶ್ರಬೆಳೆಯಾಗಿ ಬೆಳೆದು ಕೊಂಚ ಮಟ್ಟಿಗೆ ಆದಾಯ ಪಡೆದು, ಗುರುತಿಸಿಕೊಂಡಿದ್ದರು.

ಇತ್ತೀಚೆಗೆ ಕೂಲಿ ಕಾರ್ಮಿಕ ಸಮಸ್ಯೆ ಹೆಚ್ಚಾಗಿ, ಔಷಧ, ಗೊಬ್ಬರದ ಬೆಲೆಯೂ ದುಬಾರಿಯಾದ ಮೇಲೆ ಖಾಲಿ ಇದ್ದ ಜಮೀನನ್ನು, ಉಳುಮೆ ಮಾಡಿಸಿ ಔಡಲ (ಹರಳು) ಬೀಜ ಬಿತ್ತನೆ ಮಾಡಿಸಿದ್ದರು. ಮುಂಗಾರಿನಲ್ಲಿ ಬೀಜ ನಾಟಿ ಮಾಡಿದ ಔಡಲದ ಗಿಡಗಳ ತುಂಬಾ ಕಾಯಿ ತೊನೆದಾಡಿದವು. ‘ಖಾಲಿ ಜಮೀನಿನಲ್ಲಿ ಚಂದವಾಗಿ ಹರಳು ಬೆಳೆದರಲ್ಲಾ’ ಎಂದು ಸುತ್ತಲಿನ ರೈತರು ಅಚ್ಚರಿಯಿಂದ ನೋಡುತ್ತಿದ್ದರು.

ಮುಂಗಾರಿನಲ್ಲಿ ಬಿತ್ತನೆ

ADVERTISEMENT

‘ಮುಂಗಾರಿನಲ್ಲಿ ಬೀಜ ಬಿತ್ತಿದರೆ, ಜನವರಿ ತಿಂಗಳೊಳಗೆ ಎರಡು ಬಾರಿ ಕೊಯ್ಲಿಗೆ ಬರುತ್ತದೆ. ಉತ್ತಮ ಇಳುವರಿ ಪಡೆ ಯಬಹುದು’ ಎಂಬುದನ್ನು ಅರಿತಿದ್ದ ಶಿವಪುತ್ರಪ್ಪ, ಅದಕ್ಕೆ ತಕ್ಕಂತೆ ಭೂಮಿ ಸಿದ್ಧತೆ ಮಾಡಿಕೊಂಡರು. ಎಡೆಕುಂಟೆ ಹೊಡೆಯುತ್ತಾ ಮಣ್ಣು ಏರಿಸಿ, ಔಡಲ ಬೀಜಗಳನ್ನು ನೇರವಾಗಿ ನಾಟಿ ಮಾಡಿದರು. ಹೇಳಿಕೇಳಿ ಈ ಬೆಳೆಗೆ ರೋಗ, ಕೀಟ ಬಾಧೆ ಇಲ್ಲ. ಹೀಗಾಗಿ ಒಣ ಬೇಸಾಯದಲ್ಲಿ ಒಂದು ಎಕರೆಗೆ ಕನಿಷ್ಠ 10 ಕ್ವಿಂಟಲ್ ಇಳುವರಿ ನಿರೀಕ್ಷೆ ಇಟ್ಟಿದ್ದರು.

ಬಿತ್ತನೆ ನಂತರ ಒಂದು ಹದ ಮಳೆಯಾಯಿತು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಬಿತ್ತಿದ ಬೀಜಗಳೆಲ್ಲ ಮೊಳೆತು, ಗಿಡಗಳಾದವು. ನಾಲ್ಕರಿಂದ ಎಂಟು ಅಡಿ ಎತ್ತರದವರೆಗೆ ಗಿಡಗಳು ಬೆಳೆದು ನಿಂತವು. ಪ್ರತಿ ಗಿಡದಲ್ಲೂ ಕಾಯಿಗಳು ಗೊಂಚಲು ಗೊಂಚಲಾದವು. ಬಹುತೇಕ ಗಿಡಗಳಲ್ಲಿ 8 ರಿಂದ 10 ಕವಲುಗಳು ಒಡೆದು, ಪ್ರತಿ ಕವಲಿನಲ್ಲಿ 50ರಿಂದ 60 ಕಾಯಿಗಳು ಒಡಮೂಡಿದವು. ಯಾವ ಹಂತದಲ್ಲೂ ಹೊರಗಿನಿಂದ ಬೆಳೆಗೆ ನೀರು ಕೊಡಲಿಲ್ಲ. ಮಳೆಯಾಶ್ರಿತವಾಗಿಯೇ ಹರಳನ್ನು ಬೆಳೆದರು ಶಿವಪ್ಪ.

ಹರಳು ಕೃಷಿ, ಖರ್ಚು ವಿರಳ

ಒಂದು ಎಕರೆಯಲ್ಲಿ ಔಡಲ ಬೆಳೆಯಲು ಕೊಟ್ಟಿಗೆ ಗೊಬ್ಬರ, ಬೀಜ, ಬೇಸಾಯ ಸೇರಿದಂತೆ ಒಟ್ಟು ₹ 5 ಸಾವಿರ ಖರ್ಚು ಬಂದಿದೆ. ಇದು ಅವರ ಮೊದಲ ಪ್ರಯತ್ನವಾದರೂ, ಅವರಿಗೆ ಕಷ್ಟವಾಗಿಲ್ಲ. ನಷ್ಟವೂ ಆಗಿಲ್ಲ.

ನಾಟಿ ಮತ್ತು ಕೊಯ್ಲಿನ ಹಂತದಲ್ಲಿ ಆಳುಗಳು ಬೇಕಾಗುತ್ತಾರೆ. ಹರಳಿನ ಕಾಯಿ ಒಣಗಿಸಿ, ನಂತರ ಕಾಯಿಗಳಿಂದ ಬೀಜ ಬೇರ್ಪಡಿಸಲು ಮುಸುಕಿನ ಜೋಳ ಬಿಡಿಸುವ ತರಹವೇ ಇರುವ ಯಂತ್ರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಬೀಜ ಬಿಡಿಸುವುದು ಇವರಿಗೆ ತ್ರಾಸಾಗಿ ಕಂಡಿಲ್ಲ. ಒಟ್ಟಾರೆ, ಆರು ಎಕರೆ ಹರಳಿನ ಕೃಷಿಯ ಒಟ್ಟು ಖರ್ಚು ₹ 30 ಸಾವಿರ ಮುಟ್ಟಿದೆಯಂತೆ.

ಮೊದಲ ಕೊಯ್ಲು, ಮಾರ್ಕೆಟ್

ಸದ್ಯ, ಆರು ಎಕರೆಯಲ್ಲಿ ಬೆಳೆದ ಹರಳು ಗಿಡಗಳಲ್ಲಿ ಮೊದಲ ಹಂತದ ಕೊಯ್ಲು ಮುಗಿದಿದೆ. ಮೊದಲನೆ ಬೆಳೆಯಾಗಿ 18 ಕ್ವಿಂಟಲ್‍ನಷ್ಟು ಹರಳು ಬೀಜ ದೊರಕಿದೆ. ‘ಇನ್ನು ಹದಿನೈದು ದಿನಗಳ ಬಳಿಕ ಮತ್ತೊಂದು ಕೊಯ್ಲು ಮಾಡಬೇಕು. ತೆನೆಗಳು ಒಣಗುತ್ತಿದ್ದಂತೆ ಮೂರು ಹಂತದಲ್ಲಿ ಕೊಯ್ಲು ನಡೆಯುತ್ತದೆ. ಎರಡನೇ ಹಂತದಲ್ಲಿ 15 ಕ್ವಿಂಟಲ್ ಹಾಗೂ ಮೂರನೇ ಹಂತದಲ್ಲಿ 5 ಕ್ವಿಂಟಲ್ ಬೀಜ ದೊರೆಯುವ ನಿರೀಕ್ಷೆ ಇದೆ. ಒಟ್ಟು 38 ಕ್ವಿಂಟಲ್ ಬೀಜ ದೊರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಶಿವಪುತ್ರಪ್ಪ.

ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಔಡಲ ಬೀಜಕ್ಕೆ ₹ 4,500 ರಿಂದ ₹5,500 ಬೆಲೆಯಿದೆ. ಗದಗ ಮತ್ತು ಹೈದರಾಬಾದ್‍ಗಳಲ್ಲಿ ಔಡಲ ಬೀಜಕ್ಕೆ ದೊಡ್ಡ ಮಾರುಕಟ್ಟೆ ಇದೆ. ಶಿವಪುತ್ರಪ್ಪ ಅವರು ಕುಷ್ಟಗಿ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಫಸಲು ಮಾರಾಟ ಮಾಡಿದ್ದಾರೆ. ಕ್ವಿಂಟಲ್‌ಗೆ ₹4011 ಬೆಲೆ ಸಿಕ್ಕಿದೆ. ಅವರದ್ದೀಗ ಎರಡನೇ ಹಂತದ ಕೊಯ್ಲು ಸಿದ್ಧವಾಗುತ್ತಿದೆ.

ಪಾಳು ಭೂಮಿಯಂತೆ ಕಾಣುತ್ತಿದ್ದ ಕಲ್ಲು ನುಜ್ಜಿನ ಭೂಮಿಯಲ್ಲಿ ಈಗ ಔಡಲ ಬೆಳೆದು ನಿಂತಿರುವುದು ಸಂತಸ ಮೂಡಿಸುತ್ತಿದೆ ಎನ್ನುತ್ತಾರೆ ಶಿವಪುತ್ರಪ್ಪ.

ಅವರ ಸಂಪರ್ಕ ಸಂಖ್ಯೆ: 9901181360

ಕುಷ್ಟಗಿ ಮಾರುಕಟ್ಟೆ...

‘ಸದ್ಯ ಈಗ ಮಾರುಕಟ್ಟೆಗೆ ಹರಳು ಬರುತ್ತಿದೆ, ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರೈತರ ಸಂಖ್ಯೆ ಈ ಭಾಗದಲ್ಲಿ ಕಡಿಮೆ ಇದೆ, ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಮಾರುಕಟ್ಟೆಗೆ ಹೆಚ್ಚಾಗಿ ಹರಳು ಬರುತ್ತದೆ. ಹೆಚ್ಚು ಕಡಿಮೆ 4 ಟನ್‌ವರೆಗೂ ನಮ್ಮಲ್ಲಿ ವಹಿವಾಟು ನಡೆಯುತ್ತದೆ' ಎನ್ನುತ್ತಾರೆ ಕುಷ್ಟಗಿಯ ಮುಖ್ಯ ವ್ಯಾಪಾರಸ್ಥ ಬಸವರಾಜ ಗುಮಗೇರಿ. ಇಂತಹ 20ಕ್ಕೂ ಹೆಚ್ಚು ವ್ಯಾಪಾರಸ್ಥರು ಕುಷ್ಟಗಿ ಮಾರುಕಟ್ಟೆಯಲ್ಲಿದ್ದಾರೆ.

ಒಣಬೇಸಾಯಕ್ಕೆ ವರದಾನ

ಮಳೆಯ ವ್ಯತ್ಯಾಸ, ದುಬಾರಿ ಖರ್ಚು ಕಾರಣದಿಂದಾಗಿಕೊಪ್ಪಳ ಆಸುಪಾಸಿನ ರೈತರು ಔಡಲ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಯಂತ್ರಗಳ ಮೂಲಕ ಬೀಜಬಿತ್ತನೆ. ನಂತರ ಒಂದು ಬಾರಿ ಎಡೆಗುಂಟೆ ಹೊಡೆದು, ಒಂದು ಬಾರಿ ಕಳೆ ತೆಗೆಸಿದರೆ ಸಾಕು. ಬಹುತೇಕ ಕೆಲಸ ಮುಗಿದಂತೆಯೇ ಎಂಬುದು ಅವರ ಅಭಿಪ್ರಾಯ.

‘ಔಡಲ ಬೆಳೆ ಕಡಿಮೆ ಆರೈಕೆ ಕೇಳುವ, ಮಳೆ ಆಧಾರಿತವಾಗಿ ಬೆಳೆಯುವಂಥದ್ದು‘ ಎಂದು ರೈತರ ಅಭಿಪ್ರಾಯಕ್ಕೆ ಮಾತು ಸೇರಿಸುತ್ತಾರೆ ಹನುಮಸಾಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ. ‘ಅಲ್ಪ ನೀರಿನಲ್ಲಿ ಬೆಳೆಯುವ ಬೆಳೆ ಇದು. ನಿರ್ವಹಣೆ ವೆಚ್ಚವೂ ಕಡಿಮೆ. ವರ್ಷಕ್ಕೆ ಎರಡು ಬಾರಿ ಫಸಲು ಕೊಯ್ಲಿಗೆ ಬರುತ್ತದೆ’ ಎನ್ನತ್ತಾರೆ ಅವರು.

ಕಾಯಿಗಳು ಗಿಡದಲ್ಲಿಯೇ ಒಣಗುತ್ತವೆ. ಆಗ ಗೊಂಚಲುಗಳನ್ನು ಮುರಿದು ರಾಶಿ ಮಾಡಬೇಕು. ಕಳೆ ತೆಗೆಯುವಾಗ, ತೆನೆ ಮುರಿಯುವಾಗ ಮಾತ್ರ ಕಾರ್ಮಿಕರು ಬೇಕಾಗುತ್ತಾರೆ. ರಾಶಿಯ ಸಮಯದಲ್ಲಿ ಮನೆಯ ಒಂದಿಬ್ಬರು ನಿರ್ವಹಣೆ ಮಾಡಿದರೆ ಸಾಕು. ಮೂರನೇ ಹಂತದ ಕೊಯ್ಲು ಮುಗಿದ ಮೇಲೆ, ಔಡಲ ಗಿಡ ಒಣಗಿದರೆ, ಮುಂದೆ ನೀರಿನ ಆಶ್ರಯವಿದ್ದರೆ, ಒಣಗಿದ ಗಿಡಗಳೇ ಚಿಗುರುತ್ತವೆ. ಇದರಿಂದ ಖರ್ಚು ಉಳಿಯುತ್ತದೆ.

ಬಸವರಾಜ ಅಳವಂಡಿ ಅವರು ಈ ಬಾರಿ ಮೂರನೇ ಕಟಾವ್ ಮುಗಿದ ನಂತರ ಗಿಡಗಳನ್ನು ಬೋಳು ಮಾಡಿ ಮತ್ತೆ ಚಿಗುರಿಸಿ ಬೆಳೆ ಪಡೆಯುವಂತಹ ಒಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.

ದಾಳಿಂಬೆ ಬಿಟ್ಟು ಹರಳಿನತ್ತ ಹೊರಳಿದವರು..

ಕುಷ್ಟಗಿ ತಾಲ್ಲೂಕಿನ ಕಂದಕೂರ ಗ್ರಾಮದ ಕೃಷಿಕ ಬಸವರಾಜ್ ಅಳವಂಡಿ ಅವರು ಎರಡು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ ದಾಳಿಂಬೆ ಬೆಳೆ ಹಾಕಿದ್ದರು. ಆದರೆ ದುಂಡಾಣು ರೋಗ ಬಂದು ಬೆಳೆ ಹಾಳಾಯ್ತು. ದಾಳಿಂಬೆ ಕೃಷಿಯಿಂದಾಗಿ ₹ 40ಲಕ್ಷ ಸಾಲ ಮಾಡಿಕೊಂಡರು.

ಆದರೆ ಸಾಲದ ಬಗ್ಗೆ ಚಿಂತೆ ಮಾಡಲಿಲ್ಲ. ಅದನ್ನು ತೀರಿಸುವ ಬಗ್ಗೆ ಯೋಚಿಸಿದರು. ಆಗ ಹೊಳೆದಿದ್ದೇ ಔಡಲ ಕೃಷಿ.

ಐಡಿಯಾ ಬಂದ ಮೇಲೆ, ಮೊದಲು ರೋಗಗ್ರಸ್ಥ ದಾಳಿಂಬೆ ಗಿಡಗಳನ್ನು ಬುಡಸಮೇತ ತೆಗೆಸಿದರು. ₹60 ಸಾವಿರ ಬಂಡವಾಳ ತೊಡಗಿಸಿ, 15 ಎಕರೆಯಲ್ಲಿ ಹರಳು ಬಿತ್ತನೆ ಮಾಡಿಸಿದರು. ಬಸವರಾಜ ಅವರು ಅಗತ್ಯವಿರುವಾಗ ಮಾತ್ರ ಕೊಳವೆಬಾವಿಯಿಂದ ಹರಳಿನ ಗಿಡಗಳಿಗೆ ನೀರು ಹರಿಸಿದರು. ಇಷ್ಟುಬಿಟ್ಟರೆ ಬೇರೆ ಆರೈಕೆ ಇಲ್ಲ. ಅಂತಿಮವಾಗಿ ತೆನೆಕೊಯ್ದು ಬೀಜ ಬಿಡಿಸಿದ್ದಾಗ, ಒಟ್ಟು 350 ಕ್ವಿಂಟಲ್ ಇಳುವರಿ ಸಿಕ್ಕಿತ್ತು. ಇದೆಲ್ಲ ಹಿಂದಿನ ವರ್ಷ ನಡೆದಿದ್ದು. ಈ ಬಾರಿ 5 ಎಕರೆಯಲ್ಲಿ ಹರಳಿನ ಬೀಜ ಬಿತ್ತನೆ ಮಾಡಿದ್ದರು. ಮೊದಲ ಹಂತದ ಕೊಯ್ಲಿನಲ್ಲಿ 80 ಕ್ವಿಂಟಲ್ ನಷ್ಟು ಇಳುವರಿ ಬಂತು. ಈಗ ಎರಡನೇ ಹಂತದ ಕೊಯ್ಲು ಆರಂಭವಾಗಬೇಕಿದೆ. ಪೂರ್ಣ ಕೊಯ್ಲು ಮುಗಿದರೆ 200 ಕ್ವಿಂಟಲ್‍ವರೆಗೂ ಹರಳು ಸಿಗಬಹುದೆಂಬ ವಿಶ್ವಾಸ ಅವರದ್ದು.

ಮೊದಲ ಬೆಳೆಯನ್ನು ಇವರೂ ಕುಷ್ಟಗಿ ಮಾರ್ಕೆಟ್‍ಗೆ ಕ್ವಿಂಟಲ್‍ಗೆ ₹ 4011ರಂತೆ ಮಾರಾಟ ಮಾಡಿದ್ದಾರೆ. ತಕ್ಕಮಟ್ಟಿಗೆ ಆದಾಯ ಬಂದಿದೆ. ಈ ಹರಳು ಪೂರ್ಣ ಕೊಯ್ಲಾಗಿ, ಮಾರಾಟವಾದರೆ, ದಾಳಿಂಬೆ ಸಾಲ ತೀರಿ, ಮೇಲೆ ಸ್ವಲ್ಪ ಆದಾಯವೂ ಬರಬಹುದೆಂಬುದು ಬಸವರಾಜ ಅವರಿಗಿರುವ ನಂಬಿಕೆ.

ಹರಳು ಗಿಡಗಳನ್ನು ಬೆಳೆಸುವುದು ಸುಲಭ. ಆದರೆ, ಹರಳು ಕಾಯಿಗಳನ್ನು ಸಿಪ್ಪೆ ಬಿಡಿಸಿ, ಬೀಜ ತೆಗೆಯುವುದು ಸವಾಲಿನ ಕೆಲಸ. ಇದಕ್ಕಾಗಿ ಬಸವರಾಜ ಅವರು ಯಂತ್ರದ ಮೊರೆ ಹೋದರು. ಮುಸುಕಿನ ಜೋಳ ಬಿಡಿಸುವ ಯಂತ್ರದಿಂದಲೇ ಒಣಗಿದ ಹರಳಿನ ಕಾಯಿಗಳ ಸಿಪ್ಪೆ ತೆಗೆದರು. ಅದಕ್ಕಾಗಿ ಯಂತ್ರವನ್ನು ಖರೀದಿಸಿದರು. ಈ ಯಂತ್ರದಿಂದ ಒಂದು ಕ್ವಿಂಟಲ್ ಹರಳು ಬೀಜ ಬಿಡಿಸಲು ₹100 ತಗಲುತ್ತದೆಯಂತೆ. ಹೀಗಾಗಿ ಬೀಜ ಬಿಡಿಸುವುದು ಅವರಿಗೆ ಸುಲಭವಾಗಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಮಿಶ್ರ ಬೇಸಾಯದಲ್ಲಿ ಹರಳು ಬೆಳೆಯುವುದು ರೂಢಿ, ಆದರೆ ಬಸವರಾಜ ಇಡೀ ಹೊಲಕ್ಕೆ ಬಿತ್ತನೆ ಮಾಡುವ ವಿಧಾನ ಅನುಸರಿಸಿದ ಮೊದಲ ರೈತರಾಗಿದ್ದಾರೆ.

ಬಸವರಾಜ ಅವರ ಸಂಪರ್ಕ ಸಂಖ್ಯೆ: 9742382997.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.