ADVERTISEMENT

ಬೆಳೆದವರ ಜೊತೆಗೆ ಕೊಳ್ಳುವವರದೂ ಕಣ್ಣೀರು: ಬೆಳೆ ಮಾರಾಟಕ್ಕಿದೆ ಹಲವು ಸಾಧ್ಯತೆಗಳು

ಕೊರೊನಾ ಎಫೆಕ್ಟ್ – ತೋಟಗಾರಿಕೆ ಬೆಳೆಗಳ ಕಥೆ

ಹರೀಶ್ ಬಿ.ಎಸ್.
Published 31 ಮಾರ್ಚ್ 2020, 13:37 IST
Last Updated 31 ಮಾರ್ಚ್ 2020, 13:37 IST
ಮಂಗಳೂರು ಸೆಂಟ್ರಲ್ ಮಾರುಕಟ್ಟೆ (ಚಿತ್ರ: ಗೋವಿಂದರಾಜ ಜವಳಿ)
ಮಂಗಳೂರು ಸೆಂಟ್ರಲ್ ಮಾರುಕಟ್ಟೆ (ಚಿತ್ರ: ಗೋವಿಂದರಾಜ ಜವಳಿ)   

ಕೊರೊನಾ ಸೋಂಕಿನ ಭೀತಿಯಿಂದಾಗಿ ದೇಶ ಲಾಕ್‌ಡೌನ್‌ ಆಗಿದೆ. ಬೆಳೆದ ಬೆಳೆಯನ್ನು ಮಾರಲಾಗದೇ ಪರದಾಡುತ್ತಿರುವ ರಾಜ್ಯದ ಬೆಳೆಗಾರರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸೋಂಕಿನಿಂದಕೃಷಿ ವಲಯಅಕ್ಷರಶಃ ತತ್ತರಿಸಿದೆ.ಉತ್ತರದ ಬೀದರ್‌ನಿಂದ ದಕ್ಷಿಣದ ಚಾಮರಾಜನಗರದವರೆಗೆ, ಪೂರ್ವದ ಕೋಲಾರದಿಂದ ಪಶ್ಚಿಮದ ಮಂಗಳೂರುವರೆಗೆ ಎಲ್ಲ ಜಿಲ್ಲೆಗಳ ಎಲ್ಲ ರೈತರದ್ದೂ ಇದೇ ಪರಿಸ್ಥಿತಿ.

ಚಿಕ್ಕಬಳ್ಳಾಪುರಜಿಲ್ಲೆಯಲ್ಲಿ ದ್ರಾಕ್ಷಿ ಮಾರಾಟವಾಗದೇ ತಿಪ್ಪೆಗೆ ಸುರಿದಿದ್ದಾರೆ. ರಾಮನಗರದಲ್ಲಿ ಟೊಮೆಟೊವನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆಬೀದಿಗೆ ಚೆಲ್ಲಿದ್ದಾರೆ. ಹಲವೆಡೆ ತರಕಾರಿಗಳನ್ನು ಹೊಲದಲ್ಲೇ ಬಿಟ್ಟಿದ್ದಾರೆ.

ಮಾರುಕಟ್ಟೆಯ ಹಲವು ಸಾಧ್ಯತೆಗಳು

ADVERTISEMENT

ಕೊರೊನಾ ಎಫೆಕ್ಟ್‌ನಿಂದ ರೈತರನ್ನು ಕಾಪಾಡಲು ಹಲವು ರಾಜ್ಯಗಳು ಮತ್ತು ಜಿಲ್ಲಾಡಳಿತ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿಹಲವು ದಾರಿಗಳನ್ನು ಕಂಡುಕೊಂಡಿವೆ.

ಆಂಧ್ರದ ವಿಜಯವಾಡದಲ್ಲಿ ಅಲ್ಲಿನ ಜಿಲ್ಲಾಡಳಿತ ‘ರೈತು ಬಝಾರ್’ ತೆರೆದಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿಧಿಸಿರುವ ನಿರ್ಬಂಧಗಳ ಅಡಿಯಲ್ಲೇ, ರೈತರು ತಮ್ಮಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಇದು ಅನುಕೂಲ ಕಲ್ಪಿಸಿದೆ. ಸಾಮಾಜಿಕ ಅಂತರ ಹಾಗೂ ಸೂಕ್ತ ಸ್ವಯಂರಕ್ಷಣಾ ಕ್ರಮದ ಎಚ್ಚರಿಕೆಯಲ್ಲಿ ರೈತರ ಉತ್ಪನ್ನಗಳಿಗೆ ಉತ್ತಮ ಮೌಲ್ಯವೂ ಸಿಗುತ್ತಿದೆ. ಗ್ರಾಹಕರಿಗೂ ಕಾಯಿಪಲ್ಯಕ್ಕೆ ಕೊರತೆಯಾಗಿಲ್ಲ.

ಅಸ್ಸಾಂನ ಜೋಹ್ರಾತ್‌ ಪಟ್ಟಣದಲ್ಲಿ ಅಲ್ಲಿನ ಜಿಲ್ಲಾಡಳಿತ ರೈತರಿಂದ ನೇರವಾಗಿ ಹಣ್ಣು-ತರಕಾರಿ ಖರೀದಿಸುತ್ತಿದೆ. ಹೀಗೆ ಖರೀದಿಸಿದ ಉತ್ಪನ್ನಗಳನ್ನು ವ್ಯಾನ್‌ ಮೂಲಕ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ.

ನಮ್ಮ ರಾಜ್ಯದಲ್ಲೇ ಇರುವ ಕೊಪ್ಪಳದ ರೈತ ಉತ್ಪಾದಕ ಸಂಸ್ಥೆಯೊಂದು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ತರಕಾರಿಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸುತ್ತಿದೆ.

ಸುಲಭಲ್ಲ ಮಾರಾಟ

ದೇಶದ ವಿವಿಧೆಡೆಗಳಿಂದ ಮಾರುಕಟ್ಟೆ ಸಾಧ್ಯತೆಗಳು ಭರವಸೆ ಹುಟ್ಟಿಸುತ್ತಿವೆ. ಆದರೆ ಈ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ನಡೆಯದೆ ಲಕ್ಷಾಂತರ ರೈತರ ಬವಣೆ ನೀಗದು. ಕರ್ನಾಟಕ ಸರ್ಕಾರವು ಹಾಪ್‌ಕಾಮ್ಸ್‌ಗಳ ಮೂಲಕ ರೈತರ ಉತ್ಪನ್ನಗಳಮಾರಾಟಕ್ಕೆ ಮುಂದಾಗಿದೆ.

ರೈತರು ಮಾರುಕಟ್ಟೆಗೆ ತರುತ್ತಿರುವಅಷ್ಟು ದೊಡ್ಡ ಪ್ರಮಾಣದ ಬೆಳೆ ಮಾರಾಟವಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ. ಲಾಕ್‌ಡೌನ್‌ನಿಂದಾಗಿ ಹೋಟೆಲ್‍ಗಳು ಮುಚ್ಚಿವೆ. ಗ್ರಾಹಕರಿಗೆ ದಿಗ್ಬಂಧನ ವಿಧಿಸಲಾಗಿದೆ. ಎಪಿಎಂಸಿಗಳು ಬಂದ್‌ ಆಗಿವೆ. ಒಂದು ಪಕ್ಷ ನಿಗದಿತ ಸಮಯದಲ್ಲಿ ಸರ್ಕಾರ ಇವುಗಳನ್ನು ತೆರೆದರೂ, ಸಗಟು ಖರೀದಿದಾರರು ಬರುವುದು ಕಷ್ಟ. ಏಕೆಂದರೆ ಅವರು ಕೊರೊನಾಗೆ ಹೆದರಿ ಮನೆ ಸೇರಿದ್ದಾರೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಕುಸಿದಿದೆ. ಇನ್ನೂ ಕುಸಿಯುತ್ತಲೇ ಸಾಗುತ್ತಿದೆ.

ಆಹಾರ ಧಾನ್ಯಗಳನ್ನು ದೀರ್ಘಾವಧಿಗೆಕೆಡದಂತೆ ಶೇಖರಿಸಿಡಬಹುದು. ಆದರೆ, ಶೀಘ್ರ ಹಾಳಾಗುವ ಹಣ್ಣು-ತರಕಾರಿಗಳನ್ನು ಸಂರಕ್ಷಿಸುವುದುಅಷ್ಟು ಸುಲಭವಲ್ಲ. ಹಾಲು-ಹೈನಿನ ಸ್ಥಿತಿ ಇವುಗಳಿಗಿಂತ ಕಷ್ಟ.

ಪರಿಹಾರದ ದಾರಿಗಳೇನು?

ಬೆಳೆದವರಿಗೆ ಸಾಗಣೆ ಮಾಡಲು ಮತ್ತು ಮಾರಲು ಅನುಮತಿ ಸುಲಭವಾಗಿ ದೊರೆಯಬೇಕು. ಈಗ ಸರ್ಕಾರ ಕೃಷಿ ಉತ್ಪನ್ನಗಳ ಸಾಗಾಣಿಕೆ ಮಾಡುವವರಿಗೆ ಅನುಮತಿ ನೀಡಿರುವುದಾಗಿ ಪ್ರಕಟಿಸಿದೆ. ಆದರೆ ಇಂಥ ಅನುಮತಿ ಪತ್ರಗಳು ಇನ್ನೂ ರೈತರ ಕೈ ಸೇರಿಲ್ಲ. ಮೊದಲು ಆ ಕೆಲಸವಾಗಬೇಕು.

ಸರ್ಕಾರವು ವಿವಿಧ ಜಿಲ್ಲೆಗಳಲ್ಲಿರುವ ಹಾಪ್‌ಕಾಮ್ಸ್‌ಗಳನ್ನು ಕಡ್ಡಾಯವಾಗಿ ಬಳಸಿಕೊಂಡು, ಆ ಸಂಸ್ಥೆಯಲ್ಲಿರುವ ವಾಹನಗಳ ಮೂಲಕ ರೈತರಿಂದ ಹಣ್ಣು, ತರಕಾರಿ ಖರೀದಿಸಿ, ಪಟ್ಟಣಗಳಲ್ಲಿ ನಿಗದಿತ ಸ್ಥಳದಲ್ಲಿ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು. ಸ್ಥಳೀಯವಾಗಿ ಮಾರಾಟವಾಗದೆ ಉಳಿದದ್ದನ್ನು ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಂಥ ದೊಡ್ಡನಗರಗಳಿಗೂ ಸಾಗಿಸಬಹುದು.

ರಾಜ್ಯದಲ್ಲಿ 14 ರೈತ ಉತ್ಪಾದಕ ಸಂಸ್ಥೆಗಳಿವೆ. ಇವು ಈಗಾಗಲೇ ತರಕಾರಿ, ಹಣ್ಣು, ದವಸ – ಧಾನ್ಯಗಳನ್ನು ರೈತರಿಂದ ಖರೀದಿಸಿ, ಗ್ರಾಹಕರಿಗೆ ತಲುಪಿಸುತ್ತಿವೆ. ಈ ಸಂಸ್ಥೆಗಳ ಕಾರ್ಯಕ್ಷಮತೆ ಪರೀಕ್ಷಿಸಲು ಇದು ಸಕಾಲ.ಈ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಕೃಷಿ ಉತ್ಪನ್ನಗಳನ್ನು ಮಾರಲು ರೈತರಿಗೆ ಅವಕಾಶ ಸಿಗುತ್ತದೆ. ಇದು ಸಾಧ್ಯವಾದಲ್ಲಿ, ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರದಲ್ಲಿ ಉತ್ಪನ್ನ ಸಿಗುತ್ತದೆ. ಬೆಳೆದವರಿಗೂ ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ಸಿಗುತ್ತದೆ.

ತಕ್ಷಣಕ್ಕೆ ಏನೆಲ್ಲಾ ಆಗಬೇಕು...

ನಿರ್ಬಂಧದ ಮಿತಿಗಳ ಅಡಿಯಲ್ಲೇ, ಕೊಯ್ಲಾದ ಹಣ್ಣು, ತರಕಾರಿಗಳ ಮಾರಾಟಕ್ಕೆ ತಕ್ಷಣ ಅವಕಾಶ ಕಲ್ಪಿಸಬೇಕು. ಮಾರಾಟ ಸಾಧ್ಯವಾಗದಿದ್ದರೆ ಅಂಥವನ್ನು ಹಾಳು ಮಾಡದೆ,ಶೀತಲಗೃಹಗಳಲ್ಲಿ ರಕ್ಷಿಸಿಡಬೇಕು. ಬೆಳೆಬೆಳೆಯಲು ಹಾಕಿದ ಬಂಡವಾಳವೂ ಹಿಂಬರುವ ಸಾಧ್ಯತೆ ಕಡಿಮೆಯಾಗಿರುವ ಕಾರಣ,ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ನಿರ್ಧಾರವೂ ಸ್ವಾಗತಾರ್ಹ. ಇದರ ಜೊತೆಗೆ ಆನ್‌ಲೈನ್ ಮಾರಾಟದತ್ತ ರೈತ ಉತ್ಪಾದಕ ಸಂಘಗಳು ಗಮನ ನೀಡಬೇಕು.ಅಮೆಝಾನ್ ಬೆಂಗಳೂರಿನಂಥ ನಗರಗಳಲ್ಲಿ ಆಯ್ದ ಹಣ್ಣು-ತರಕಾರಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಇಂಥ ಪ್ರಯತ್ನಗಳು ಹೆಚ್ಚೆಚ್ಚು ಆಗಬೇಕಿದೆ.

ಮೌಲ್ಯವರ್ಧನೆ ಅನಿವಾರ್ಯ

ಮಾರಲು ಆಗುತ್ತಿಲ್ಲವೆಂದು ಕೊಯ್ಲಾದ ಕೃಷಿ ಉತ್ಪನ್ನಗಳನ್ನು ಹಾಳು ಮಾಡುವ ಬದಲು, ಅವುಗಳ ಮೌಲ್ಯವರ್ಧಿಸಿ ಕಾಯ್ದಿರಿಸಿಕೊಳ್ಳಲು ಪ್ರಯತ್ನಿಸಬೇಕು.

ಟೊಮೆಟೊದಿಂದ ಕೆಚಪ್-ಸಾಸ್; ಸೀಬೆಹಣ್ಣಿನಿಂದ ಜ್ಯೂಸ್ ಮಾಡುವಹಲವು ಘಟಕಗಳಿವೆ. ವೈನ್ ಮಾಡುವ ತಳಿಯಾಗಿದ್ದರೆ ಬೆಳೆದ ದ್ರಾಕ್ಷಿಯನ್ನು ವೈನಾಗಿಸಬಹುದು. ಇನ್ನೇನು ಮಾವು ಕೊಯ್ಲಿನ ಕಾಲವೂ ದೂರವಿಲ್ಲ. ಮಾವಿನ ಪಲ್ಪ್‌ ಸಂಗ್ರಹಕ್ಕೂ ದೊಡ್ಡಮಟ್ಟದಲ್ಲಿ ವ್ಯವಸ್ಥೆ ಆಗಬೇಕಿದೆ. ಬಟಾಣಿ ಬೆಳೆದಿದ್ದರೆ ಫ್ರೋಝನ್ ಪೀ ಮಾಡಿ ಶೇಖರಿಸಿಡಿ. ಬೆಳ್ಳುಳ್ಳಿ-ಶುಂಠಿ ಬೆಳೆದವರು ಪೇಸ್ಟ್ ಮಾಡಲು ಮುಂದಾಗಿ.

ಇವಕ್ಕೆಲ್ಲ ಸುಲಭದ ತಂತ್ರಜ್ಞಾನಗಳಿವೆ, ಅಲ್ಲಲ್ಲಿ ಘಟಕಗಳೂ ಇವೆ. ನಿರ್ಬಂಧದ ಅಡಿಯಲ್ಲೇ ಘಟಕಗಳಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸಲು ವ್ಯವಸ್ಥೆ ಮಾಡಬೇಕಿದೆ.

ನಾವೇನು ಮಾಡಬಹುದು?

ರೈತರ ಸಂಕಷ್ಟ ಸ್ಥಿತಿ ಅರಿತ ನಾವು ಏನು ಮಾಡಬಹುದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೂ ಇದು ಸಕಾಲ. ಪ್ರತಿಯೊಂದನ್ನೂ ಸರ್ಕಾರವೇ ಮಾಡಲಿ ಎಂದು ನಿರೀಕ್ಷಿಸುವುದು ಸಲ್ಲದು. ಸ್ವಯಂಸೇವಕರು ಹಾಗೂ ಸರ್ಕಾರಿ ಅಧಿಕಾರಿಗಳ ಸಹಕಾರದಿಂದ ಕೃಷಿ ಮಾರಾಟ ಕೆಲಸಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿರುವ ಜರೂರಿದೆ. ಸಾಗಣೆ ಹಾಗೂ ಪೂರೈಕೆಗೆ ಅವಶ್ಯಕತೆಯಿದ್ದಲ್ಲಿ ಸರ್ಕಾರಿ/ಮಿಲಿಟರಿ ವಾಹನಗಳನ್ನೂ ಬಳಸಿಕೊಳ್ಳಬಹುದು. ಜನಸಂದಣಿ ಆಗದಂತೆ ನೋಡಿಕೊಳ್ಳುವುದು ಎಲ್ಲರ ಗುರುತರ ಜವಾಬ್ದಾರಿ.

ಬೆಳೆದ ಬೆಳೆ ಕಟಾವಾಗಬೇಕು.ಅದರ ಸಾಗಾಟ ಸಹಜವಾಗಿ ಆಗಬೇಕು. ಮಾರಾಟ ಆಗಲೇ ಬೇಕಿದೆ. ಸಮಯ ಸರಿದ ಮೇಲೆ ಸಹಾಯ ಯಾರಿಗೆ ಬೇಕು ಎಂಬಂತಾಗಬಾರದು. ಯೋಚಿಸುತ್ತಾ ಕೂರುವ ಕಾಲ ಇದಲ್ಲ. ಶೀಘ್ರ ನಿರ್ಧಾರ, ಶಿಘ್ರ ಅನುಷ್ಠಾನ ಆದರಷ್ಟೆ ಬೆಳೆದವನ ಬವಣೆಯನ್ನು ಒಂದಷ್ಟು ಕಡಿಮೆ ಮಾಡಬಹುದು.

ರೈತರ ವ್ಯಥೆ

ರಾಜ್ಯದ ವಿವಿಧೆಡೆಗಳಿಂದ ರೈತರು ತೋಡಿಕೊಂಡ ದುಃಖದ ಮಾತುಗಳಿವು...

* ನಾವ್ ಬೆಳ್ದಿರೋ ಕ್ಯಾಪ್ಸಿಕಂ ಕೇಳೋರಿಲ್ಲ. ವಾರದಲ್ಲಿ ಒಂದೂವರೆ ಲಕ್ಷ ನಷ್ಟ ಆಗಿದೆ. ಕೂಲಿ ಕಾಸೂ ಹುಟ್ತಿಲ್ಲ. -ಮಂಜುಳಾ ದೇವಿ

* ದ್ರಾಕ್ಷಿ ಕಟಾವ್ ಮಾಡ್ಬೇಕು. ಯಾರೂ ಕೂಲಿಯವರು ಬರ್ತಿಲ್ಲ. ಏನ್ಮಾಡೋದೋ ದಿಕ್ಕೇ ತೋಚ್ತಿಲ್ಲ. -ಶುಭಕರ

* ಇಲ್ಲಿ ಪುಡಿಗಾಸಿಗೂ ತರ್ಕಾರಿ ಕೇಳೋರಿಲ್ಲ, ಬೆಂಗ್ಳೂರಲ್ಲಿ ಬಾಳ ರೇಟಂತೆ. ಇದಾವ ನ್ಯಾಯ.ರಾಜಬುದ್ಧಿ, ಪುಟ್ಟೇಗೌಡನ ಹುಂಡಿ

* ಹಣ್ಣು-ತರ್ಕಾರಿ ಬೆಳೆದಿದ್ರೆ ಫ್ರೀಯಾಗೆ ಹಂಚಿಬಿಡ್ತಿದ್ದೆ. ಪಾಲಿಹೌಸಿನಲ್ಲಿ ಗುಲಾಬಿ ಬೆಳ್ದಿದ್ದೇನೆ, ಮಾರೋದಿರ್ಲಿ, ಕೀಳೋ ಕಾಸು ಬರಲ್ಲ. -ಬಸವನಗೌಡ, ಮಳವಳ್ಳಿ

* ನಾಲ್ಕು ಎಕರೆಯಲ್ಲಿ ಕರಬೂಜ ಬೆಳೆದಿದ್ದೇನೆ. ಯಾರಾದ್ರೂ ತಗೊಳ್ಳೋರು ಇದ್ದಾರಾ? -ಚೇತನ್, ಬೀದರ್

* ನಮ್ದು 30 ಟನ್ ಕಲ್ಲಂಗಡಿ, 5 ಟನ್ ಬಾಳೆ, ಅರ್ಧ ಎಕ್ರೆ ಟೊಮಾಟೊ, ಒಂದೆಕ್ರೆ ಮೆಣಸಿನಕಾಯಿ ಕೊಯ್ಲಿಗೆ ಬಂದಿದೆ.ಕೇಳೋರಿಲ್ಲ.ಏನ್ ಮಾಡೋದು ತಿಳಿತಿಲ್ಲ. ರೈತ್ರ ಕಷ್ಟ ಯಾರಿಗೆ ಹೇಳಿದ್ರೂ ಉಪಯೋಗಿಲ್ಲ ಬಿಡಿ. -ಸುನಿಲ್ ಆಸಂಗಿ

---

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು. ಪೂರಕ ಮಾಹಿತಿ/ನಿರೂಪಣೆ:ಗಾಣಧಾಳು ಶ್ರೀಕಂಠ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.