ADVERTISEMENT

ಬರಡು ನೆಲ: ಬೆಳೆ ಬಂಗಾರ!

ಖುಷ್ಕಿ ಬೇಸಾಯದಲ್ಲೂ ವಿಭಿನ್ನ ಪ್ರಯೋಗಗಳು

ಸಚ್ಚಿದಾನಂದ ಕುರಗುಂದ
Published 26 ಅಕ್ಟೋಬರ್ 2019, 4:23 IST
Last Updated 26 ಅಕ್ಟೋಬರ್ 2019, 4:23 IST
ಖುಷ್ಕಿ ಬೇಸಾಯದ ಪ್ರಾತ್ಯಕ್ಷಿಕೆ
ಖುಷ್ಕಿ ಬೇಸಾಯದ ಪ್ರಾತ್ಯಕ್ಷಿಕೆ   

ಬೆಂಗಳೂರು: ‘ವಲಸೆ ನಿಲ್ಲಿಸಿ, ಕೃಷಿಯತ್ತ ಮುಖ ಮಾಡಿ’ ಎನ್ನುವ ಕೃಷಿ ಮಂತ್ರದೊಂದಿಗೆ ಬರಡು ನೆಲವನ್ನೂ ಹಸಿರುಮಯವನ್ನಾಗಿಸುವ ಪ್ರಯತ್ನ ಇಲ್ಲಿ ಸಾಗಿದೆ.

62 ತಾಂತ್ರಿಕತೆಗಳನ್ನು ಒಳಗೊಂಡಿರುವ 40 ಎಕರೆ ಪ್ರದೇಶದಲ್ಲಿ ಖುಷ್ಕಿ ಬೇಸಾಯವನ್ನು ಯಶಸ್ವಿಯಾಗಿ ಕೈಗೊಂಡಿರುವ ಪ್ರಾತ್ಯಕ್ಷಿಕೆ ಇಲ್ಲಿದೆ. ‘ಕನಿಷ್ಠ ಖರ್ಚು, ಗರಿಷ್ಠ ಆದಾಯ’ ಸೂತ್ರದ ಪ್ರಯೋಗ ಇಲ್ಲಿ ಕೈಗೊಳ್ಳಲಾಗುತ್ತಿದೆ.

ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ವಿವಿಧ ಬೆಳೆಗಳನ್ನು ಬಿತ್ತಿ ಸ್ವಾವಲಂಬಿ ಬದುಕು ಸಾಗಿಸುವ ಮಾರ್ಗವನ್ನು ತೋರಿಸಲಾಗುತ್ತಿದೆ. ಬೆಳೆ ವ್ಯವಸ್ಥೆಯೇ ಇದಕ್ಕೆ ಮೂಲ ಆಧಾರ. 15ರಿಂದ 20 ವಿವಿಧ ಬೆಳೆಗಳನ್ನು ಮಿಶ್ರ ಬೆಳೆ ಪದ್ಧತಿ ಮೂಲಕ ಬೆಳೆಯುವ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ.

ADVERTISEMENT

ಸಾಂಪ್ರದಾಯಿಕವಾಗಿ ಬೆಳೆಯುವ ರಾಗಿ, ಮೆಕ್ಕೆಜೋಳ, ನೆಲಗಡಲೆ, ಕಾಳಿನ ದಂಟು, ಹಾರಕ, ಅಕ್ಕಿನ ಅವರೆ ಮುಂತಾದವುಗಳನ್ನು ಬೆಳೆಯುವುದು ಸಾಮಾನ್ಯ. ಇವುಗಳನ್ನೇ ಮಿಶ್ರ ಬೆಳೆ ಪದ್ಧತಿ ಅನುಸರಿಸಿ ಬೆಳೆಯಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹರಳು (ಔಡಲ) ಬಹುಮುಖ್ಯ ಬೆಳೆ. ಮಳೆ ಆಶ್ರಿತ ಪ್ರದೇಶಕ್ಕೆ ಅತ್ಯಂತ ಸೂಕ್ತವಾಗಿರುವ ಹರಳು ಜತೆಯಲ್ಲಿ ನೆಲಗಡಲೆ, ಅವರೆ, ಶೇಂಗಾ ಸಹ ಬೆಳೆಯಬಹುದು.

ಉದಾಹರಣೆಗೆ ಒಂದು ಎಕರೆ ಪ್ರದೇಶದಲ್ಲಿ ‘ಡಿಸಿಎಸ್‌–9’ ತಳಿಯ ಹರಳು ಬೆಳೆದರೆ 4ರಿಂದ 5 ಕ್ವಿಂಟಲ್‌ ಇಳುವರಿ ದೊರೆಯುತ್ತದೆ. ಇದರಿಂದ, ₹24ಸಾವಿರದಿಂದ ₹36ಸಾವಿರ ಆದಾಯ ದೊರೆಯುತ್ತದೆ. ಹರಳಿನ ಎಣ್ಣೆಯನ್ನು ವಿಮಾನಗಳಲ್ಲಿ ಲೂಬ್ರಿಕೆಂಟ್‌ ಸೇರಿದಂತೆ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.

ಕುಡಿ ಚಿವುಟಿದ ಹರಳು ಮತ್ತು ಅವರೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ಉತ್ತಮ. ಇದರಿಂದ, ಒಂದು ಎಕರೆ ಪ್ರದೇಶದಲ್ಲಿ 5 ಕ್ವಿಂಟಲ್‌ ಹರಳು ಮತ್ತು 2.5 ಕ್ವಿಂಟಲ್‌ ಅವರೆ ಇಳುವರಿ ಪಡೆಯಬಹುದಾಗಿದ್ದು, ₹38 ಸಾವಿರದಿಂದ ₹43 ಸಾವಿರದವರೆಗೆ ಆದಾಯ ದೊರೆಯುತ್ತದೆ. ಮಿಶ್ರ ಬೆಳೆಯಿಂದಾಗಿ ಶೇಕಡ 30ರಿಂದ 40ರಷ್ಟು ಇಳುವರಿಯೂ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಖುಷ್ಕಿ ಬೇಸಾಯ ಪ್ರಾಯೋಜನೆ ಮುಖ್ಯ ವಿಜ್ಞಾನಿ ಡಾ. ಮೂಡಲಗಿರಿಯಪ್ಪ ಅವರು ವಿವರಿಸುತ್ತಾರೆ.

ನೆಲಗಡಲೆ ಮತ್ತು ಕುಡಿಚಿವುಟಿದ ಹರಳು ಮಿಶ್ರವಾಗಿ ಬೆಳೆಯುವ ಪ್ರಾತ್ಯಕ್ಷಿಕೆ ಇಲ್ಲಿದೆ. ಏಕಕಾಲಕ್ಕೆ ಇವುಗಳನ್ನು ಮಿಶ್ರ ಬೆಳೆಯಾಗಿ ಬೆಳೆದರೆ ಒಂದು ಎಕರೆ ಪ್ರದೇಶದಲ್ಲಿ 5ರಿಂದ 6 ಕ್ವಿಂಟಲ್‌ ನೆಲಗಡಲೆ ಮತ್ತು 2ರಿಂದ 2.5 ಕ್ವಿಂಟಲ್‌ ಹರಳು ದೊರೆಯುತ್ತದೆ. ಇದರಿಂದ, ಒಟ್ಟಾರೆ, ₹30 ಸಾವಿರದಿಂದ ₹40 ಸಾವಿರ ಆದಾಯ ಪಡೆಯಬಹುದಾಗಿದೆ. ಹವಾಮಾನ ವೈಪರೀತ್ಯ ತಡೆದುಕೊಳ್ಳುವ ಶಕ್ತಿ ಈ ಬೆಳೆಗಳಿವೆ.

ರಸಗೊಬ್ಬರಕ್ಕಾಗಿ ‘ಗ್ರೀನ್‌ ಸೀಕರ್‌’

‘ಮೆಕ್ಕೆಜೋಳ ಬೆಳೆಗೆ ಅಗತ್ಯವಿರುವ ಸಾರಜನಕದ ಮಾಹಿತಿ ಪಡೆಯಲು ಸುಲಭ ಉಪಕರಣವನ್ನು ಇಲ್ಲಿ ಬಳಸಲಾಗುತ್ತಿದೆ. ಈ ಉಪಕರಣವನ್ನು ಬೆಳೆ ಮೇಲೆ ಹಿಡಿದಾಗ ಬೆಳೆಯಲ್ಲಿರುವ ಸಾರಜನಕದ ಅಂಶವನ್ನು ತೋರಿಸುತ್ತದೆ. ಆಗ ತಜ್ಞರ ಅಭಿಪ್ರಾಯ ಪಡೆದು ಸಾರಜನಕವನ್ನು ಬಳಸಬಹುದು. ಇದರಿಂದ, ಅನಗತ್ಯ ರಸಗೊಬ್ಬರ ಹಾಕುವುದು ತಪ್ಪುತ್ತದೆ’ ಎಂದು ಮುಖ್ಯ ವಿಜ್ಞಾನಿ ಡಾ. ಮೂಡಲಗಿರಿಯಪ್ಪ ಹೇಳುತ್ತಾರೆ.

‘ಸುಮಾರು ₹50ರಿಂದ ₹60 ಸಾವಿರ ಮೌಲ್ಯದ ಉಪಕರಣವನ್ನು ಏಳೆಂಟು ರೈತರು ಸೇರಿ ಖರೀದಿಸುವುದು ಉತ್ತಮ. ಇದರಿಂದ ಯಾರಿಗೂ ಹಣಕಾಸಿನ ಹೊರೆಯಾಗುವುದಿಲ್ಲ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.