ADVERTISEMENT

ತೋಟ ಉಳಿಸಿದ ಮಡಕೆ ಗುಟುಕು

ಮಲ್ಲಿಕಾರ್ಜುನ ಹೊಸಪಾಳ್ಯ
Published 16 ಸೆಪ್ಟೆಂಬರ್ 2019, 19:30 IST
Last Updated 16 ಸೆಪ್ಟೆಂಬರ್ 2019, 19:30 IST
ಮಡಕೆ ನೀರಿನ ಗುಟುಕು ಚಿತ್ರಗಳು: ಲೇಖಕರವು
ಮಡಕೆ ನೀರಿನ ಗುಟುಕು ಚಿತ್ರಗಳು: ಲೇಖಕರವು   

ಕೊಳವೆ ಬಾವಿ, ಡ್ರಿಪ್ಪು, ಸ್ಪ್ರಿಂಕ್ಲರ್ ಇತ್ಯಾದಿ ದುಬಾರಿ ಬಾಬ್ತುಗಳಿಗೆ ಹೋಗದೆ ಮಣ್ಣಿನ ಮಡಕೆಗಳನ್ನೇ ನಂಬಿ ಮಾವು-ಸಪೋಟಾ ತೋಟ ಕಟ್ಟಿದ್ದಾರೆ ರೈತ ಚನ್ನಪ್ಪ. ಇವರ ನೀರು ನಿರ್ವಹಣೆ ಜಾಣ್ಮೆಯಲ್ಲಿ ಕುಂಬಾರಿಕೆಯನ್ನೂ ಉಳಿಸುವ ದಾರಿ ಇದೆ.

ಸಂಡೂರು ತಾಲ್ಲೂಕು ಮಳೆ ಕೊರತೆಗೆ ಹೆಸರುವಾಸಿ. ಇಲ್ಲಿ ಜೋಳ, ಶೇಂಗಾ ಬೆಳೆಯುವುದೇ ದುಸ್ತರ. ಹೀಗಿರುವಾಗ 2014ರಲ್ಲಿ ಇದೇ ತಾಲ್ಲೂಕಿನ ಬಂಡ್ರಿ ಪಂಚಾಯ್ತಿಯ ಕೋಡಿಹಳ್ಳಿ ಗ್ರಾಮದ ಚಿನ್ನಪ್ಪನವರಿಗೆ ನಬಾರ್ಡ್‌ನ ಬುಡಕಟ್ಟು ಅಭಿವೃದ್ಧಿ ಯೋಜನೆ ನೆರವಿನಲ್ಲಿ ಮಾವು-ಸಪೋಟ ಹಾಕುವ ಅವಕಾಶ ಒದಗಿ ಬಂತು. ಕುಡಿವ ನೀರಿಗೇ ತತ್ವಾರ ಅನುಭವಿಸಿದ್ದ ಅವರು, ಈ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸುತಾರಾಂ ಒಪ್ಪಲಿಲ್ಲ. ಆದರೆ ತೋಟಕ್ಕೆ ನೀರುಣಿಸುವ ಹಲವು ಉಪಾಯಗಳನ್ನು ಯೋಜನೆ ಅನುಷ್ಠಾನ ಮಾಡುವ ಸಂಕಲ್ಪ ಸಂಸ್ಥೆಯವರು ಮನದಟ್ಟು ಮಾಡಿದ ನಂತರ ಒಪ್ಪಿದರು. ಹೀಗಾಗಿ ತಮ್ಮ ಒಂದೂವರೆ ಎಕರೆ ಖುಷ್ಕಿ ಜಮೀನಿಗೆ ಬೆನಿಶಾ ತಳಿಯ 25 ಮಾವು, 10 ಸಸಿ ಕ್ರಿಕೆಟ್ ಬಾಲ್ ಸಪೋಟ, ಬದುಗಳ ಮೇಲೆ ಮತ್ತು ಹೊಲದ ಸುತ್ತಲೂ ತಲಾ 50 ಹೆಬ್ಬೇವು, ತೇಗ ಹಾಗೂ ಸಿಲ್ವರ್ ಓಕ್ ಸಸಿಗಳನ್ನು ನೆಟ್ಟಿದ್ದೂ ಆಯಿತು.

ಅಂದ ಹಾಗೆ ಅವರು ತಮ್ಮ ತೋಟ ಉಳಿಸಲು ಅನುಸರಿಸಿದ ಉಪಾಯವೇ ಮಣ್ಣಿನ ಮಡಕೆಯ ಹನಿ ನೀರಾವರಿ. ಪ್ರತಿಯೊಂದು ಸಸಿಯ ಬುಡದಲ್ಲೂ ಒಂದೊಂದು ಮಡಕೆಗಳನ್ನು ಇಟ್ಟು ಇದರ ಸಹಾಯದಿಂದ ತೋಟ ಉಳಿಸಿಕೊಂಡರು. ಒಂದು ಸಸಿಯನ್ನೂ ಒಣಗಲು ಬಿಡಲಿಲ್ಲ. ಈಗ ತೋಟ ಎದೆಯುದ್ದ ಬೆಳೆದು ನಿಂತಿದೆ, ಕಳೆದ ವರ್ಷದಿಂದ ಫಸಲೂ ಶುರುವಾಗಿದೆ. ಮಾರುಕಟ್ಟೆಯಿಂದ ಒಂದೆರಡು ಕೆ.ಜಿ ಮಾವು-ಸಪೋಟಾ ತಂದು ತಿನ್ನುತ್ತಿದ್ದ ಕುಟುಂಬ ಈಗ ತಮ್ಮದೇ ಹೊಲದಿಂದ ರುಚಿಕರ ಹಣ್ಣುಗಳನ್ನು ತೃಪ್ತಿಯಾಗುವಷ್ಟು ತಿಂದು ನೆಂಟರಿಗೂ ಹಂಚುತ್ತಿದ್ದಾರೆ.

ADVERTISEMENT

ಸರಳ ಮತ್ತು ಜೇಬಿಗೆ ಹಗುರ

ಮಡಕೆ ನೀರಾವರಿ ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದ ವಿಧಾನ. ಚನ್ನಪ್ಪ ಹತ್ತಿರದ ಕೂಡ್ಲಿಗಿ ಪಟ್ಟಣದಿಂದ ₹20ಕ್ಕೆ ಒಂದರಂತೆ 35 ಮಡಕೆಗಳನ್ನು ತಂದರು. ಪ್ರತಿ ಮಡಕೆ ತಳದಿಂದ ತುಸು ಮೇಲೆ ಸಣ್ಣ ರಂಧ್ರ ಮಾಡಿ ಅದಕ್ಕೆ ಬಟ್ಟೆಯ ತುಂಡೊಂದನ್ನು ಪೋಣಿಸಿದರು. ಇದು ಹನಿ-ಹನಿಯಾಗಿ ನೀರು ಜಿನುಗಲು ಸಹಾಯಕ. ಜಿನುಗಿದ ನೀರು ಗಿಡಗಳ ಬುಡಕ್ಕೆ ಇಳಿಯುತ್ತದೆ. ಮಡಕೆಗಳನ್ನು ಗಿಡಗಳ ಬುಡದಲ್ಲಿ ಇಟ್ಟು ವಾರಕ್ಕೊಮ್ಮೆ ನೀರು ತುಂಬಿಸುತ್ತಿದ್ದರು. ಪ್ರತಿ ಮಡಕೆಯು ಅರ್ಧ ಬಿಂದಿಗೆ ಅಥವಾ ನಾಲ್ಕು ಲೀಟರ್ ನೀರು ಹಿಡಿಯುವ ಸಾಮರ್ಥ್ಯ ಹೊಂದಿದೆ.

ಇವರು ಇಡೀ ತೋಟಕ್ಕೆ ಒಮ್ಮೆಗೇ ನೀರು ಹಾಕುವುದಿಲ್ಲ. ಏಕೆಂದರೆ, ಚನ್ನಪ್ಪ ಅವರ ಪತ್ನಿ ಹೊರಗೆ ಕೂಲಿ ಕೆಲಸಕ್ಕೆ ಹೋಗ್ತಾರೆ. ತೋಟದಲ್ಲೂ ಕೆಲಸವಿರುತ್ತದೆ. ಒಬ್ಬ ಮಗಳಿಗೆ ಮದುವೆಯಾಗಿದೆ. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹೀಗಾಗಿ ಮನೆ ನಿರ್ವಹಣೆಗೂ ಸಮಯ ಹೊಂದಿಸಿಕೊಂಡು ನೀರು ಹಾಕುತ್ತಾರೆ. ಒಂದೇ ದಿವಸ ಅಷ್ಟೂ ಮಡಕೆಗಳಿಗೆ ನೀರು ಹಾಕುವುದಿಲ್ಲ. ಬದಲಿಗೆ ಪ್ರತಿ ದಿನ ಐದು ಕೊಡ ನೀರು ತಂದು 10 ಮಡಕೆ ತುಂಬಿಸುತ್ತಾರೆ. ನಾಲ್ಕು ದಿವಸದಲ್ಲಿ ಒಂದು ಸುತ್ತು ಮುಗಿಯುತ್ತದೆ. ವಾರದ ನಂತರ ಅಥವಾ ಬಿಸಿಲಿನ ಝಳ ನೋಡಿಕೊಂಡು ಪುನರಾವರ್ತಿಸುವುದು ರೂಢಿ.

‘ಗಿಡಗಳಿಗೆ ಮಡಕೇಲಿ ನೀರು ಕೊಟ್ರೆ ಮನಶರಿಗೆ ಗ್ಲೂಕೊಸ್ ಕೊಟ್ಟಂಗೆ ತಂಪಾಗಿರ್ತವೆ’ ಎನ್ನುತ್ತಾರೆ ಚನ್ನಪ್ಪ. ಮಡಕೆ ನೀರಾವರಿಗೆ ಖರ್ಚಾಗಿರುವುದು ಸಾಗಾಣಿಕೆ ವೆಚ್ಚವೂ ಸೇರಿ ಸುಮಾರು ₹1,000. ಇದರಲ್ಲಿ ಯೋಜನೆಯಿಂದ ಸ್ವಲ್ಪ ಸಹಾಯಧನ ಸಿಕ್ಕಿದ್ದು ಉಳಿದಿದ್ದನ್ನು ಇವರೇ ಭರಿಸಿದ್ದಾರೆ. ಒಟ್ಟಾರೆ ಮಡಕೆಯ ನೀರಾವರಿ ವಿಧಾನದಿಂದ ಹಣ್ಣಿನ ಗಿಡಗಳು ಉಳಿದುಕೊಂಡಿವೆ.

ನೀರಿನ ಕೊರತೆ ವಿಪರೀತವಾಗುತ್ತಿರುವ ಇಂದಿನ ದಿನಗ ಳಲ್ಲಿ ತೋಟಕಟ್ಟುವುದೇ ದುಸ್ತರ. ಒಂದು ವೇಳೆ ತೋಟ ಕಟ್ಟಿದವರೂ ನೀರಿಲ್ಲದೆ ಒಣಗಿಸುವುದೇ ಹೆಚ್ಚು. ಆದರೆ, ಚನ್ನಪ್ಪನ ಕೃಷಿಯಲ್ಲಿ ಇವೆಲ್ಲಕ್ಕೂ ಉತ್ತರವಿದೆ.

ಮಡಕೆ ಹೂಳುವುದೋ..ನೆಲದ ಮೇಲೆ ಇಡುವುದೋ

ಈ ನೀರಾವರಿ ಪದ್ಧತಿಯಲ್ಲಿ ಮಡಕೆಗಳನ್ನು ಗಿಡದ ಬುಡದಲ್ಲಿ ಹೂಳಬೇಕು ಎಂಬುದು ತಜ್ಞರ ವಾದ. ಆದರೆ ಭೂಮಿಯ ಮೇಲ್ಭಾಗದಲ್ಲಿ ಇಡುವುದೇ ಒಳ್ಳೆಯದು ಎನ್ನುತ್ತಾರೆ ಚನ್ನಪ್ಪ. ಅದಕ್ಕೆ ಸಕಾರಣವನ್ನೂ ಅವರು ನೀಡುತ್ತಾರೆ. ಆರಂಭದಲ್ಲಿ ಇವರೂ ಮಣ್ಣಿನಲ್ಲಿ ಹೂತಿದ್ದರು. ಆದರೆ ತುಂಬಾ ದಿವಸವಾದರೂ ಹಾಕಿದ ನೀರು ಮಣ್ಣಿನಲ್ಲಿ ಇಂಗುತ್ತಿರಲಿಲ್ಲ. ಇದನ್ನು ಗಮನಿಸಿ ಮಡಕೆ ತೆಗೆದು ನೋಡಿದಾಗ ಬಟ್ಟೆ ಪೋಣಿಸಿದ್ದ ನೀರು ಜಿನುಗುವ ರಂಧ್ರಗಳು ಮುಚ್ಚಿಕೊಂಡು ಬಿಟ್ಟಿದ್ದವು. ಆಗ ಭೂಮಿಯ ಮೇಲೆ ಇಡುವ ತೀರ್ಮಾನ ಮಾಡಿದರು.ಸಮಸ್ಯೆ ಬಗೆಹರಿಯಿತು.

ಮಡಕೆಯನ್ನು ಭೂಮಿಯ ಮೇಲೆ ಇಟ್ಟರೆ ಕಳ್ಳತನವಾಗಬಹುದು. ಪ್ರಾಣಿಗಳೋ ಅಥವಾ ಮನುಷ್ಯರೋ ಓಡಾಡುವಾಗ ಒಡೆದು ಹಾಕಬಹುದು. ‘ಆದರೆ ಈ ಐದು ವರ್ಷಗಳಲ್ಲಿ ಒಂದು ಮಡಕೆಗೂ ಏನೂ ಆಗಿಲ್ಲ’ ಎನ್ನುತ್ತಾರೆ ಚನ್ನಪ್ಪ. ತೋಟದ ಸುತ್ತಲೂ ರಕ್ಷಣೆ ಮಾಡಿರುವುದರಿಂದ ಮಡಕೆ ಸುರಕ್ಷವಾಗಿರಬಹುದು. ‘ನಮಗೂ ಇದೊಂದು ಕಲಿಕೆ, ಇತರೆ ರೈತರಿಗೂ ಈ ಬಗ್ಗೆ ತಿಳಿಸುತ್ತೇವೆ’ ಎನ್ನುತ್ತಾರೆ ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ್.

ಈ ಯೋಜನೆಯಡಿ ಚನ್ನಪ್ಪರಂಥ 460 ಫಲಾನುಭವಿಗಳಿಗೆ ತಲಾ 30 ಮಡಕೆಗಳಂತೆ 13800 ಮಡಕೆಗಳನ್ನು ವಿತರಿಸಲಾಗಿದೆ. ಈಗಲೂ ಹಲವು ರೈತರು ಮಡಕೆ ನೀರಾವರಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಕುಂಬಾರರಿಗೆ ಉತ್ತಮ ವ್ಯಾಪಾರವಾಗಿದೆ. ಮಡಕೆ ನೀರಾವರಿ ಕೃಷಿ ಜತೆಗೆ ಕುಂಬಾರಿಕೆಯನ್ನೂ ಉಳಿಸಿದೆ.

ಚನ್ನಪ್ಪನ ಸಂಪರ್ಕಕ್ಕೆ : 9591384236

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.