ADVERTISEMENT

ಸಾಗರದಲ್ಲಿ ವಿದೇಶಿ ಹಣ್ಣುಗಳ ವಿಶಿಷ್ಟ ತೋಟ

ವಿ.ಬಾಲಕೃಷ್ಣ ಶಿರ್ವ
Published 10 ಸೆಪ್ಟೆಂಬರ್ 2019, 9:12 IST
Last Updated 10 ಸೆಪ್ಟೆಂಬರ್ 2019, 9:12 IST
ವಿದೇಶಿ ಹಣ್ಣು
ವಿದೇಶಿ ಹಣ್ಣು   

ಶಿವಮೊಗ್ಗ ಜಿಲ್ಲೆ ಸಾಗರ ಬಸ್‌ಸ್ಟಾಪ್‍ನಿಂದ ಜೋಗ್‌ಫಾಲ್ಸ್‌ಗೆ ಹೋಗುವ ದಾರಿಯಲ್ಲಿ 5 ಕಿ.ಮೀ. ಕ್ರಮಿಸಿ, ಎಡಬದಿಯ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಮತ್ತೆ 2ಕಿ.ಮೀ. ಹೆಜ್ಜೆ ಹಾಕಿದರೆ ಹೊಸಹಳ್ಳಿ ಸಿಗುತ್ತದೆ. ಸಮೀಪದಲ್ಲೇ ಹಿಂಡೂರಾಜೇಂದ್ರ ಅವರ ಹಣ್ಣಿನ ತೋಟವಿದೆ.

ಅವರ ತೋಟಕ್ಕೆ ಹೋಗುವ ದಾರಿಯಲ್ಲಿ ಬೃಹತ್ತಾದ ಕಾಡು ಬೆಳೆಸಿದ್ದಾರೆ. ಅಲ್ಲಿ ಹಲವು ಜಾತಿಯ ಮರಗಳಿವೆ. ಈ ಕಾಡು ನೋಡಿಕೊಂಡು ಮುಂದೆ ಹೋದಾಗ, ರಾಜೇಂದ್ರ ಅವರ ಮನೆ ಕಾಣಿಸಿತು. ‘ಎದುರಿಗಿರುವ ಆವರಣದಲ್ಲೇ ಐನೂರಕ್ಕೂ ಹೆಚ್ಚು ವಿಧದ ಹಣ್ಣಿನ ಗಿಡಗಳಿವೆ. ಬನ್ನಿ ನೋಡೋಣ’ ಎಂದರು ರಾಜೇಂದ್ರ. ಇವರದ್ದು ಕೂಡುಕುಟುಂಬ. ಮನೆಯ ಸದಸ್ಯರೆಲ್ಲರೂ ಪ್ರೀತಿಯಿಂದ ಹಣ್ಣಿನ ತೋಟದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಕಾಡು ನೋಡಿ ಖುಷಿಪಡುತ್ತಿದ್ದ ನನ್ನನ್ನು ಹಣ್ಣಿನ ತೋಟಕ್ಕೆ ಕರೆದೊಯ್ದರು ರಾಜೇಂದ್ರ. ತೋಟದ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಬೃಹತ್ ಚಪ್ಪರದಲ್ಲಿ ಇಳಿ ಬಿದ್ದಿದ್ದ ಬೃಹತ್ತಾದ ಪುಟ್ಬಾಲಿನಂತೆ ಕಾಣುವ ಹಣ್ಣುಗಳು ಕಂಡವು. ‘ನೋಡಿ ಇದು ಗ್ಯಾಕ್ ಹಣ್ಣು’ ಎಂದರು. ಆ ಕಾಯಿಗಳು ಹಸಿರಾಗಿದ್ದು ಹಳದಿ ವರ್ಣಕ್ಕೆ ತಿರುಗುತ್ತಾ ಪೂರ್ತಿ ಹಣ್ಣಾದ ನಂತರ ಕೆಂಪಾಗುತ್ತದೆ ಎಂದು ಹೇಳುತ್ತಾ, ಹಣ್ಣೊಂದರ ಸಿಪ್ಪೆಯನ್ನು ಬಿಡಿಸಿದರು.ಅದರೊಳಗೆ ಕೆಂಪು ಬಣ್ಣದ ತಿರುಳು ಕಂಡಿತು. ‘ಇದು ಕಲ್ಲಂಗಡಿ ರುಚಿ ಇರುತ್ತದೆ’ ಎಂದು ಹೇಳುತ್ತಾ, ಮುಂದಕ್ಕೆ ಹೆಜ್ಜೆ ಹಾಕಿದರು ರಾಜೇಂದ್ರ. ಹೆಜ್ಜೆ ಹಾಕುವಾಗ ‘ಗ್ಯಾಕ್ ತಿರುಳಿನಲ್ಲಿ ಟೊಮೆಟೊಗಿಂತ ಹೆಚ್ಚಿನ ಪ್ರಮಾಣದಲ್ಲಿ ಜೀವ ಸತ್ವಗಳಿವೆ’ ಎಂದು ಹೇಳಿದಾಗ ಇನ್ನೊಮ್ಮೆ ಆ ಹಣ್ಣಿನ ತಿರಳನ್ನು ಗಮನಿಸಲು ಶುರು ಮಾಡಿದೆ.

ADVERTISEMENT

ಮುಂದೆ ಬೆರಳು ಉದ್ದದ ಗೊಂಚಲು ಗೊಂಚಲು ಹಣ್ಣು ಕಂಡಿತು. ‘ಇದೇ ಜಪಾನೀಸ್ ಲಕೋಟೆ ಹಣ್ಣು’ ಎಂದು ಪರಿಚಯಿಸಿದರು. ಗೊಂಚಲಿಂದ ಒಂದು ಹಣ್ಣು ಕಿತ್ತು ಅದರ ಸಿಪ್ಪೆ ತೆಗೆದು ಕೊಟ್ಟರು. ಅದರ ತಿರುಳು ಬಿಳಿಯದಾಗಿದ್ದು ತಾಳಿಬೊಂಡದ ರುಚಿಯಿತ್ತು. ಇದು ರುಚಿಪೂರಿತ ಮಾತ್ರವಲ್ಲದೇ ಆರೋಗ್ಯಕ್ಕೆ ಪೂರಕ ಎಂಬುದನ್ನು ಮನವರಿಕೆ ಮಾಡಿದರು.

ಮತ್ತೆ ಬದನೆ ಗಿಡದ ಎಲೆಯಂತಿರುವ ಪೊಗದಸ್ತಾದ ಎಲೆಗಳು ಅದರಲ್ಲಿ ಮೊಟ್ಟೆಯಾಕಾರದಲ್ಲಿರುವ ಹಣ್ಣು ಕಂಡಿತು. ಅದರ ಮೇಲ್ಮೈಯಲ್ಲಿ ನೆರಳೆ ಬಣ್ಣದ ಚಿತ್ತಾರವಿತ್ತು. ಅದನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಾಗ, ‘ಇದು ಪೆಪಿನೋ’ ಎಂದರು ರಾಜೇಂದ್ರ. ‘ಇದು ಥೇಟ್ ಕರಬೂಜದ ರುಚಿ ಕೊಡುತ್ತದೆ. ಸಿಹಿ ಕಡಿಮೆ. ಮಧುಮೇಹಿಗಳೂ ತಿನ್ನಬಹುದು’ ಎಂದರು.

ಬುಗುರಿಯಾಕಾರದ ಹಳದಿ ಬಣ್ಣದ ಹಣ್ಣನ್ನು ತೋರಿಸುತ್ತಾ ಅದೇ ನೋಡಿ ‘ಎಗ್‍ಫ್ರೂಟ್’ ಎನ್ನುತ್ತಾ, ಅದನ್ನು ಬಿಡಿಸಿ, ಒಳಗಿನ ತಿರುಳು ತೋರಿಸಿದರು. ಅದು ಮೊಟ್ಟೆಯೊಳಗಿರುವ ಬಿಳಿ ಪದರದಂತೆ ಕಂಡಿತು. ಜತೆಗೆ ಹಳದಿ ಬಣ್ಣದ ಪದರವೂ ಇತ್ತು. ‘ತುಂಬಾ ಹಣ್ಣಾದರೆ ಬಿರುಕುಗಳು ಕಾಣಿಸಿಕೊಳ್ಳುತ್ತವೆ’ ಎನ್ನುತ್ತಾ ಹಣ್ಣಿನ ಬೆಳವಣಿಗೆಯನ್ನೂ ಅವರು ವಿವರಿಸಿದರು. ಆ ಹಣ್ಣಿನ ರುಚಿ ವಿವರಿಸುತ್ತಾ, ‘ಇದನ್ನು ತಿಂದರೆ ಕಡಲೆಬೇಳೆ ಹೋಳಿಗೆ ತಿಂದಂತಾಗುತ್ತದೆ’ ಎಂದರು. ಇದರಲ್ಲೂ ಔಷಧೀಯ ಗುಣಗಳಿವೆ ಎಂದು ಉಲ್ಲೇಖಿಸಿದರು.

ನಾವು ಸಾಗುತ್ತಿದ್ದ ಮುಂದಿನ ತಾಕಿನ ಮರದಲ್ಲಿ ಕಪ್ಪು ದ್ರಾಕ್ಷಿಯಂತಹ ಹಣ್ಣಿನ ಗೊಂಚಲು ಕಂಡಿತು. ಆ ಹಣ್ಣನ್ನು ‘ಜಬೋಟಕಾಬ’ ಎಂದು ಪರಿಚಯಿಸಿದರು ರಾಜೇಂದ್ರ. ನಾನು ಆ ಹಣ್ಣನ್ನು ಮೂಡಬಿದ್ರೆಯ ಡಾ.ಸೋನ್ಸ್ ಫಾರ್ಮ್‍ನಲ್ಲಿ ನೋಡಿದ್ದೆ. ಹಾಗೆ ನೆನಪಿಸಿಕೊಳ್ಳುವಾಗಲೇ, ‘ಈ ಗಿಡವನ್ನು ಸೋನ್ಸ್ ಫಾರ್ಮ್‍ನಿಂದ ತಂದಿದ್ದು’ ಎಂದರು ಅವರು. ಹಣ್ಣಿನ ತೆಳುಸಿಪ್ಪೆ ತೆರೆದರೆ ಬಿಳಿ ತಿರುಳು ಕಂಡಿತು.

‘ಈ ಹಣ್ಣಿನ ರುಚಿ ತುಂಬಾ ಸಿಹಿ. ಇನ್ನೊಂದು ವೈಶಿಷ್ಟ್ಯವೇನೆಂದರೆ ದಿನದಿಂದ ದಿನಕ್ಕೆ ರುಚಿ ಭಿನ್ನವಾಗಿರುತ್ತದೆ. ಮೊದಲ ದಿನ ಸೀಬೆಯ ಹಣ್ಣಿನಂತಿದ್ದರೆ, ಮರುದಿನ ಲಿಚಿಯನ್ನು ತಿಂದ ಹಾಗೆ ಅನ್ನಿಸುತ್ತೆ. ಎರಡು ದಿನದ ನಂತರ ಸೀತಾಫಲ ತಿಂದಂತಾಗುತ್ತದೆ’ ಎಂದು ರುಚಿ ವಿವರಿಸುತ್ತಿದ್ದಾಗ, ಆ ಹಣ್ಣನ್ನೇ ಬೆರಗಿನಿಂದ ನೋಡುತ್ತಿದ್ದೆ.

ಪಕ್ಕದಲ್ಲಿದ್ದ ಪುಟ್ಟ ಗಿಡದಲ್ಲಿ ಕೆಂಪು ಗೆಜ್ಜೆ ಕಟ್ಟಿದಂತೆ ಹಣ್ಣುಗಳು ಕಂಡವು. ಅದರ ಹೆಸರು ‘ಮಿರಾಕಲ್ ಯಾನೆ’ಯಂತೆ. ಇದರ ವೈಶಿಷ್ಟ್ಯವೆಂದರೆ, ಈ ಹಣ್ಣನ್ನು ತಿನ್ನುವಾಗ ಅಷ್ಟು ಸಿಹಿ ಎನ್ನಿಸುವುದಿಲ್ಲ. ಆದರೆ ಅರ್ಧ ಗಂಟೆಯ ನಂತರ ಯಾವ ಹಣ್ಣು ತಿಂದರೂ ತುಂಬಾ ಸಿಹಿ ಅನ್ನಿಸುತ್ತದೆ. ಹುಣಸೆ ಹುಳಿ ತಿಂದರೂ ತುಂಬಾ ಸಿಹಿ ಎನ್ನುವ ಅನುಭವವಾಗುತ್ತದಂತೆ.

ಈ ಗಿಡದ ಪಕ್ಕದಲ್ಲಿಯೇ ರಕ್ತದಂತೆ ಕೆಂಪಾದ ಗೊಂಚಲು ಗೊಂಚಲು ವಾಟರ್ ಆ್ಯಪಲ್‌ನಂತೆ ಕಾಣುವ ಹಣ್ಣು ಕಂಡಿತು ಅದರ ಹೆಸರು ‘ಮಲಯನ್ ಆ್ಯಪಲ್’ ಎಂದು ಪರಿಚಯ ಮಾಡಿಕೊಟ್ಟರು. ಅಡಿಕೆ ಮತ್ತು ತೆಂಗಿನ ತೋಟದ ನಡುವೆ ಈ ಮಲಯನ್ ಆ್ಯಪಲ್ ಚೆನ್ನಾಗಿ ಬೆಳೆದಿತ್ತು.ಇಷ್ಟೆಲ್ಲ ನೋಡುವ ಹೊತ್ತಿಗೆ ಸಮಯ ಮೀರಿತ್ತು. ರಾಜೇಂದ್ರ ಮಾತು ಮುಂದುವರಿಸಿದರು. ‘ಇವಿಷ್ಟೇ ಅಲ್ಲ. ಮುಂದೆ ಮಕ್ಕೋತದೇವ, ಫಿಸ್ತಾ, ಸ್ಟ್ರಾಬೆರಿ, ಬರಿಬ್ಬಾ, ರಾಂಬುಟನ್, ಕ್ಯಾಟ್‍ಫ್ರೂಟ್, ಮರಾಂಗ್, ಡೊರಿಯಾಣ್, ಮ್ಯಾಂಗೊಸ್ಟಿನ್.. ಸೇರಿ 500ಕ್ಕೂ ಮಿಕ್ಕಿದ ವಿದೇಶಿ ಹಣ್ಣುಗಳಿವೆ’ ಎಂದರು.

ವಿದೇಶಿ ಹಣ್ಣುಗಳ ವೈವಿಧ್ಯ ಕಂಡು ಬೆರಗಾದ ನಾನು, ‘ಇಷ್ಟೆಲ್ಲ ವೆರೈಟಿಯ ವಿದೇಶಿ ಹಣ್ಣುಗಳನ್ನು ಬೆಳೆಸಲು ಏನು ಪ್ರೇರಣೆ’ ಎಂದು ರಾಜೇಂದ್ರ ಅವರನ್ನು ಕೇಳಿದೆ. ‘ಅನಿಲ್ ಬಳಂಜರವರ ಅವರ ತೋಟ ನೋಡಿದ್ದೆ. ಅವರೇ ಈ ತೋಟ ಮಾಡಲು ಪ್ರೇರಣೆ’ ಎಂದರು.
ರಾಜೇಂದ್ರ ಅವರ ಹಣ್ಣಿನ ಲೋಕ ಕಟ್ಟುವುದಕ್ಕೆ ಹಿಂಡ್ಲೂಜ ಕುಟುಂಬಸ್ಥರಾರ ತಿಮ್ಮಪ್ಪ-ಭಾಗೀರತಿ, ರಾಜೇಂದ್ರ-ರೇಖಾ, ಜಿತೇಂದ್ರ-ಚೇತನಾ, ಮೇಘ, ಗಗನ, ಭೂಮಿಕಾ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.