ADVERTISEMENT

ಕಾಡು ಹಾಗಲ ಹೊಲದಲ್ಲಿ ಅರಳಿದಾಗ

ಸಿದ್ದು ಆರ್.ಜಿ.ಹಳ್ಳಿ
Published 23 ಸೆಪ್ಟೆಂಬರ್ 2019, 19:30 IST
Last Updated 23 ಸೆಪ್ಟೆಂಬರ್ 2019, 19:30 IST
ಕಾಡುಹಾಗಲ ಕೈಯಲ್ಲಿ ಹಿಡಿದ ನಿಂಗಯ್ಯ
ಕಾಡುಹಾಗಲ ಕೈಯಲ್ಲಿ ಹಿಡಿದ ನಿಂಗಯ್ಯ   

ಕಾಡಿನಲ್ಲೇ ವಿರಳವಾಗಿ ಕಂಡುಬರುತ್ತಿದ್ದ ಕಾಡು ಹಾಗಲ ಅರ್ಥಾತ್‌ ಮಡಹಾಗಲವನ್ನು, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಸೂರಶೆಟ್ಟಿಕೊಪ್ಪದ ರೈತ ನಿಂಗಯ್ಯ ಗುರುವಯ್ಯ ಹಿರೇಮಠ ಅವರು ತಮ್ಮ ಹೊಲದಲ್ಲೇ ಬೆಳೆಯುತ್ತಿದ್ದಾರೆ. ಇವರ ಮಡಹಾಗಲದ ಕೃಷಿಯ ಹಿಂದೆ, ಕುತೂಹಲದ ಕಥೆಯೂ ಇದೆ.

ಮಡಹಾಗಲ, ಕರಾವಳಿ ಮತ್ತು ಮಲೆನಾಡಿಗರ ಮೆಚ್ಚಿನ ತರಕಾರಿ. ಹೆಚ್ಚಾಗಿ ಕಾಡಿನಲ್ಲಿ ಬೆಳೆಯುತ್ತದೆ. ಇದನ್ನು ಕೃಷಿಯಾಗಿ ಬೆಳೆಯುವವರು ವಿರಳ. ಹಾಗಂತ, ನಿಂಗಯ್ಯ ಅವರು ಈ ಕಾಡು ಬಳ್ಳಿಯನ್ನು ಹುಡುಕಿಕೊಂಡು ಹೋದವರಲ್ಲ,ಬಳ್ಳಿಯೇ ನಿಂಗಯ್ಯ ಅವರನ್ನು ಅರಸಿ ಬಂದಿತು!

ಅಚ್ಚರಿಯಾಯ್ತಾ? ನಿಂಗಯ್ಯ ಅವರ ಮಡಹಾಗಲ ಕೃಷಿ ಕಥೆ ಶುರುವಾಗುವುದೇ ಈ ಅಚ್ಚರಿಯಿಂದ. ದಶಕದ ಹಿಂದೆ ಅವರ ತೋಟದಲ್ಲಿರುವ ಸಪೋಟ ಗಿಡಕ್ಕೆ ಬಳ್ಳಿಯೊಂದು ಹಬ್ಬಿತ್ತು. ಈ ಬಳ್ಳಿಯನ್ನು ನಿಂಗಯ್ಯ ನಿರ್ಲಕ್ಷಿಸಿದ್ದರು. ಮಳೆಗಾಲ ಮುಗಿಯುತ್ತಿದ್ದಂತೆ,ಅದು ಒಣಗಿ ಮರೆಯಾಗಿತ್ತು.ಎರಡನೇ ವರ್ಷ ಅದೇ ಬಳ್ಳಿ,ತುಂತುರು ಮಳೆ ಹನಿ ಬೀಳುತ್ತಿದ್ದಂತೆಯೇ, ಸಪೋಟ ಗಿಡವನ್ನು ತಬ್ಬಿ ನಿಂತಿತ್ತು. ಕಳೆದ ವರ್ಷಕ್ಕಿಂತಲೂ ಬಿರುಸಾದ ಎಲೆಗಳು ಬಳ್ಳಿಯಲ್ಲಿದ್ದವು. ಅವುಗಳನ್ನು ಕತ್ತರಿಸುವುದೇಕೆ, ಎಂದು ಹಾಗೆ ಬಿಟ್ಟಿದ್ದರು ನಿಂಗಯ್ಯ.

ADVERTISEMENT

ಮೂರನೇ ವರ್ಷ ಮುಂಗಾರಿನಲ್ಲಿ ಪುನಃ ಚಿಗುರಿತ್ತು. ಅಷ್ಟೇ ಅಲ್ಲ,ಈ ಬಾರಿ ಬಳ್ಳಿಯ ತುಂಬ ಕಾಯಿಗಳು ಬಿಟ್ಟಿದ್ದವು.ಮೈ ತುಂಬ ಮುಳ್ಳು ತುಂಬಿಕೊಂಡಿದ್ದ ಹಚ್ಚ ಹಸುರಿನ ಕಾಯಿಗಳನ್ನು ಹಿರಿಯರಿಗೆ ತೋರಿಸಿದರು. ‘ಅರೆ, ಇದು ಕಾಡು ಹಾಗಲ. ಇದರಲ್ಲಿ ಔಷಧೀಯ ಗುಣಗಳಿವೆ. ಈ ಕಾಯಿಯನ್ನು ವರ್ಷಕ್ಕೊಮ್ಮೆಯಾದರೂ ತಿನ್ನಬೇಕು’ ಎಂದರು ಹಿರಿಯರು.

ಎರಡು ಕೆ.ಜಿ.ಯಷ್ಟು ಕಾಡು ಹಾಗಲಕಾಯಿಗಳನ್ನು ತೆಗೆದುಕೊಂಡು ನಿಂಗಯ್ಯ ಅವರು ಹುಬ್ಬಳ್ಳಿ ಮಾರುಕಟ್ಟೆಗೆ ಹೋದರು.ಎಷ್ಟು ದರಕ್ಕೆ ಮಾರಾಟ ಮಾಡಬೇಕು ಎಂಬುದು ತಿಳಿದಿರಲಿಲ್ಲ. ‘ಎಷ್ಟಕ್ಕೆ ಕೊಡುತ್ತೀಯಾ’ ಎಂದು ವ್ಯಾಪಾರಸ್ಥ ಕೇಳಿದ ಪ್ರಶ್ನೆಗೆ, ಅಂದಾಜಿನಲ್ಲಿ ‘ಕೆ.ಜಿ.ಗೆ ₹60ಕೊಡಿ’ ಎಂದರು ನಿಂಗಯ್ಯ. ವ್ಯಾಪಾರಸ್ಥ ಮರು ಮಾತನಾಡದೆ, ಅಷ್ಟೂ ಕಾಯಿಗಳನ್ನು ₹120ಕೊಟ್ಟು ಖರೀದಿಸಿದರು. ನಿಂಗಯ್ಯ ಅವರಿಗೆ ಅಚ್ಚರಿಯಾಯಿತು!

ಈ ಕಾಡು ಹಾಗಲ ಮಾರಾಟದಲ್ಲಿ ಒಳ್ಳೆಯ ಲಾಭವಿದೆ ಎಂಬುದನ್ನು ಅರಿತುಕೊಂಡ ನಿಂಗಯ್ಯ, ಕಲಘಟಗಿ ಹಾಗೂ ಮುಂಡಗೋಡ ಸುತ್ತಮುತ್ತಲಿನ ಕಾಡಿನಲ್ಲಿ ಬಳ್ಳಿಯನ್ನು ಅರಸುತ್ತಾ ಹೋದರು. ಮೊದಲ ಪ್ರಯತ್ನದಲ್ಲೇ ನಾಲ್ಕಾರು ಬಳ್ಳಿ ಸಿಕ್ಕವು.ಬಳ್ಳಿಯ ಗಡ್ಡೆಗಳನ್ನು ತಂದು,ತಮ್ಮ ತೋಟದಲ್ಲಿದ್ದ ಸಪೋಟ ಗಿಡಗಳ ಬುಡದಲ್ಲಿ ಗುಂಡಿ ತೋಡಿ ಮುಚ್ಚಿದರು.

ವರ್ಷ ಕಳೆದಂತೆ, ಬಳ್ಳಿಗಳ ಸಂಖ್ಯೆ ವೃದ್ಧಿಯಾಯಿತು. ನಾಲ್ಕೈದು ಬಳ್ಳಿಗಳಿಂದ ಆರಂಭವಾದ ಮಡಹಾಗಲ ಕೃಷಿ ಈಗ ನಿಂಗಯ್ಯ ಅವರಿಗೆ ಪಿತ್ರಾರ್ಜಿತವಾಗಿ ಬಂದ ಒಂದು ಎಕರೆ ಜಮೀನಿನಲ್ಲಿ ವಿಸ್ತಾರಗೊಂಡಿದೆ. ಈಗ ಅವರ ಜಮೀನಿನಲ್ಲಿ 60ಕಾಡು ಹಾಗಲ ಬಳ್ಳಿಗಳಿವೆ. ಈ ಬಳ್ಳಿಗಳು ಮುಂಗಾರಿನಲ್ಲಿ ಚಿಗುರಿ,ಜುಲೈ ಮೊದಲ ವಾರದಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಕಾಯಿಗಳನ್ನು ಬಿಡುತ್ತವೆ.ವಾರಕ್ಕೆ20 ಕೆ.ಜಿಯಿಂದ 30 ಕೆ.ಜಿ.ಕಾಯಿ ಸಿಗುತ್ತವೆ.ಒಂದು ಕೆ.ಜಿ.ಗೆ ₹150 ರಿಂದ₹ 200ರವರೆಗೆ ಬೆಲೆ ಇದೆ. ‘ಒಟ್ಟಾರೆ ಒಂದು ವರ್ಷದಲ್ಲಿ4ಕ್ವಿಂಟಲ್‌ ಕಾಡು ಹಾಗಲದಿಂದ ₹60 ಸಾವಿರದಿಂದ ₹70ಸಾವಿರದವರೆಗೆ ವಹಿವಾಟಾಗುತ್ತಿದೆ’ ಎನ್ನುತ್ತಾರೆ ನಿಂಗಯ್ಯ.

‘ಈ ಬಳ್ಳಿಗಳ ನಿರ್ವಹಣೆಯೂ ಸುಲಭ.ಮುಂಗಾರು ಆರಂಭವಾಗುತ್ತಿದ್ದಂತೆ ಗಡ್ಡೆಯ ಬುಡದಲ್ಲಿರುವ ಮಣ್ಣನ್ನು ಸಡಿಲಿಸಿ,ಅರ್ಧಬುಟ್ಟಿ ಕಾಂಪೋಸ್ಟ್‌ ಗೊಬ್ಬರ ಹಾಕಿದರೆ ವರ್ಷದ ನಿರ್ವಹಣೆ ಮುಗಿದಂತೆ.ರೋಗ,ಕೀಟಗಳ ಬಾಧೆಯಿಲ್ಲ.ಮಳೆಯಾಶ್ರಿತದಲ್ಲೇ ಬೆಳೆಯುವ ಈ ಬಳ್ಳಿಗೆ ಬೇಸಿಗೆಯಲ್ಲಿ ನೀರುಣಿಸುವ ಅಗತ್ಯವೂ ಇಲ್ಲ.ಹತ್ತು ವರ್ಷಗಳವರೆಗೆ ಇಳುವರಿ ಸಿಗುತ್ತದೆ.ಆದರೆ,ಗಡ್ಡೆ ಬಿತ್ತನೆ ಮಾಡಿದ ನಂತರ ಇಳುವರಿಗಾಗಿ ಮೂರು ವರ್ಷ ಕಾಯುವ ತಾಳ್ಮೆ ಬೇಕೇಬೇಕು’ ಎನ್ನುತ್ತಾರೆ ನಿಂಗಯ್ಯ.

ಒಂದು ಎಕರೆಯ ಕೃಷಿ !

ಮಡಹಾಗಲ ಬೆಳೆದಿರುವ ನಿಂಗಯ್ಯ, ಎರಡು ದಶಕಗಳಿಂದ ಒಂದು ಎಕರೆ ಜಮೀನಿನಲ್ಲಿ ಮರ ಆಧಾರಿತ ಕೃಷಿ ಪದ್ಧತಿ ಅನುಷ್ಠಾನಗೊಳಿಸಿದ್ದಾರೆ. ಇದೇ ಅವರ ಬದುಕನ್ನು ನಡೆಸುತ್ತಿರುವ ಕೃಷಿ.

ಇಷ್ಟು ಜಮೀನಿನಲ್ಲಿ 1996ರವರೆಗೆ ಮೆಕ್ಕಜೋಳ,ಹತ್ತಿ,ಮೆಣಸಿನಕಾಯಿ ಬೆಳೆಯುತ್ತಿದ್ದರು.ಹೆಚ್ಚೆಂದರೆ,ವರ್ಷಕ್ಕೆ ₹3ರಿಂದ₹4ಸಾವಿರ ಆದಾಯ ಸಿಗುತ್ತಿತ್ತು. 1997ರಲ್ಲಿ ಬೈಫ್‌ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರು ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ800ಕಾಡು ಸಸಿ(ತೇಗ,ನೀಲಗಿರಿ,ರೇನ್‌ ಟ್ರೀ ಇತ್ಯಾದಿ...) ಮತ್ತು40ಸಪೋಟ ಸಸಿಗಳನ್ನು ಉಚಿತವಾಗಿ ನೀಡಿದರು. ಅಂದು ತೋಟದ ಸುತ್ತ ಬೆಳೆಸಿದ ಕಾಡು ಸಸಿಗಳು ಈಗ ಮರಗಳಾಗಿವೆ. ಸಪೋಟ ಗಿಡಗಳು ಉತ್ತಮ ಇಳುವರಿ ನೀಡುತ್ತಿವೆ. ಜತೆಗೆ ಮಾವು, ಬಾಳೆ, ತೆಂಗು, ಹುಣಸೆ, ಹಲಸು, ಪೇರಳೆ, ನುಗ್ಗೆಯಂತಹ ಗಿಡ– ಮರಗಳನ್ನು ಬೆಳೆಸಿದ್ದಾರೆ. ಈ ಮರಗಳೆಲ್ಲ ಸೇರಿ ಇವರ ಸಣ್ಣ ಹಿಡುವಳಿಯನ್ನು ಪುಟ್ಟ ಕಾಡಿನಂತೆ ಮಾಡಿವೆ.

ಇರುವಷ್ಟು ಜಮೀನಿನಲ್ಲಿ ಮುಂಗಾರಿನಲ್ಲಿ ಶೇಂಗಾ,ಸೋಯಾಬೀನ್‌,ಉದ್ದು,ಅಲಸಂದೆಯಂತಹ ಬೆಳೆ ಬೆಳೆಯುತ್ತಾರೆ.ಕಟಾವಾದ ನಂತರ ಬಸಳೆ, ಟೊಮೆಟೊ, ಹೀರೆ,ಬದನೆ, ಮೂಲಂಗಿಯಂತಹ ತರಕಾರಿಗಳನ್ನು ಬೆಳೆಸುತ್ತಾರೆ. ಪತ್ನಿ ಗಿರಿಜವ್ವ ಪತಿಯ ಕೆಲಸದಲ್ಲಿ ಕೈ ಜೋಡಿಸುತ್ತಾರೆ.ದಂಪತಿಯೇ ಕಷ್ಟಪಟ್ಟು ದುಡಿಯುವುದರಿಂದ ಕೂಲಿ ಕಾರ್ಮಿಕರ ಮೇಲೆ ಇವರು ಅವಲಂಬಿತರಾಗಿಲ್ಲ.ಸಗಣಿ ಗೊಬ್ಬರ,ಎರೆಹುಳು ಗೊಬ್ಬರ,ಜೀವಾಮೃತಗಳೇ ಸಮೃದ್ಧ ತೋಟದ ಜೀವದಾಯಿನಿಗಳು.

‘ಏಕ ಬೆಳೆ ಪದ್ಧತಿಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.ಹಾಗಾಗಿ ಇರುವ ಕಡಿಮೆ ಜಮೀನಿನಲ್ಲೇ ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದೇನೆ.ಜತೆಗೆಮಾರುಕಟ್ಟೆ,ಸಂತೆಗಳಲ್ಲಿ ನಾನೇ ಕೂತು ಮಾರಾಟ ಮಾಡುತ್ತೇನೆ. ಬಂದಿದ್ದೆಲ್ಲಾ ನನಗೇ ಲಾಭ’ ಎನ್ನುತ್ತಾ ಸುಸ್ಥಿರ – ಸ್ವಾವಲಂಬಿ ಕೃಷಿಯ ಬದುಕನ್ನು ವಿವರಿಸುತ್ತಾರೆ ನಿಂಗಯ್ಯ.

‘ಮಳೆ ಆಶ್ರಿತ ಭೂಮಿಯಲ್ಲೂ ತೋಟವನ್ನು ಮಾಡಬಹುದು. ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಂದರ್ಭಗಳಲ್ಲೂ ‘ಮರ ಆಧಾರಿತ ಕೃಷಿ’ ನನ್ನ ಕೈ ಹಿಡಿದಿದೆ.ಮನೆಗೆ ಅಗತ್ಯವಿರುವ ತರಕಾರಿ,ಹಣ್ಣು,ಕಾಳು–ಕಡ್ಡಿಯನ್ನೂ ಬೆಳೆದುಕೊಳ್ಳುತ್ತೇನೆ. ಒಂದು ವರ್ಷದಲ್ಲಿ ಎಲ್ಲ ಖರ್ಚು ಕಳೆದು ಒಂದರಿಂದ ಒಂದೂವರೆ ಲಕ್ಷ ಆದಾಯವಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಿಂಗಯ್ಯ.

ಆರಂಭದ ದಿನಗಳಲ್ಲಿ ಜಮೀನಿನಿಂದ ಅರ್ಧ ಕಿ.ಮೀ.ದೂರದಲ್ಲಿರುವ ಕೈ ಪಂಪ್‌ನಿಂದ ಮಡಕೆಯಲ್ಲಿ ನೀರು ಹೊತ್ತು ತಂದು ಹಾಕಿ,ಗಿಡಗಳನ್ನು ಆರೈಕೆ ಮಾಡಿದ್ದಾರೆ. 2016ರಲ್ಲಿ ಕೊಳೆವೆಬಾವಿ ಕೊರೆಸಿದ್ದು, ಅದರಲ್ಲಿ2ಇಂಚು ನೀರು ಬರುತ್ತಿದೆ.ತುಂತುರು ನೀರಾವರಿ ಪದ್ಧತಿಯಿಂದ ತೋಟ ಸದಾ ತಂಪಿನಿಂದ ಕೂಡಿದೆ.

ಧಾರವಾಡದ ತೋಟಗಾರಿಕೆ ಇಲಾಖೆಯಿಂದ ನಡೆಯುವ ಫಲ–ಪುಷ್ಪ ಪ್ರದರ್ಶನದಲ್ಲಿ ಹಣ್ಣು ಮತ್ತು ತರಕಾರಿ ವಿಭಾಗದಲ್ಲಿ ಮೂರ್ನಾಲ್ಕು ಬಾರಿ ಪ್ರಶಸ್ತಿಗಳು ನಿಂಗಯ್ಯ ಅವರಿಗೆ ಸಂದಿವೆ.ಧಾರವಾಡ ಕೃಷಿ ವಿಶ್ವವಿದ್ಯಾಲಯ,ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆಯುವ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ,ರೈತರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ತೋಟ ಕೃಷಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರಯೋಗ ಶಾಲೆಯಾಗಿದೆ.

ರಾಜ್ಯದ ಕೆಲವೆಡೆ...

ಮಡಹಾಗಲವನ್ನು ಈ ಹಿಂದೆ ಉತ್ತರಕನ್ನಡ ಜಿಲ್ಲೆ ಬನವಾಸಿ ಸಮೀಪದ ಕೃಷಿಕ ಬೆಂಗಳಿ ವೆಂಕಟೇಶ್ ಅವರು ಈ ಹಿಂದೆ ಬೆಳೆಯುತ್ತಿದ್ದರು. ಕಾರಣಾಂತರಗಳಿಂದ ಸದ್ಯಕ್ಕೆ ಬೆಳೆಯುತ್ತಿಲ್ಲ. ಆದರೆ ಮಣಿಪಾಲ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಉಡುಪಿ ಜಿಲ್ಲೆ ಹೆಬ್ರಿ ಸಮೀಪದಲ್ಲಿ ಕೆಲವು ರೈತರು ಮಡಹಾಗಲವನ್ನು ಕಾಲು ಎಕರೆ, ಒಂದು ಎಕರೆಯಷ್ಟು ಜಾಗದಲ್ಲಿ ಕೃಷಿ ಮಾಡುತ್ತಿದ್ದಾರೆ. ಇವರೆಲ್ಲ ಅಸ್ಸಾಂ ವೆರೈಟಿಯ ತಳಿಯನ್ನು ಬೆಳೆಯುತ್ತಿದ್ದಾರೆ. ಅಸ್ಸಾಂ ತಳಿಯನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಯಲು ಚೆಟ್ಟಳ್ಳಿಯ ಐಐಹೆಚ್‌ಆರ್ ಸಂಸ್ಥೆ ಪ್ರೇರಣೆ ನೀಡುತ್ತಿದೆ. ಗಿಡಗಳನ್ನೂ ಪೂರೈಸುತ್ತಿದೆ.

ಈ ತಳಿಯಲ್ಲಿ ದೊಡ್ಡಕಾಯಿ ಬಿಡುತ್ತದೆ (ಸ್ಥಳೀಯ ತಳಿಗಿಂತ ದೊಡ್ಡದು). ಸ್ವಲ್ಪ ನಿಗಾ ಕೊಟ್ಟು, ನಿರ್ವಹಣೆ ಮಾಡಿದರೆ, ಹೆಚ್ಚು ಕಾಲ ಬೆಳೆ ಕೊಡುತ್ತದೆ. ಇದರಲ್ಲಿ ಮೂರ್ನಾಲ್ಕು ಉಪತಳಿಗಳಿವೆ. ಆ ತಳಿಗಳಿಂದ ನಾವೇ ಸಸಿಗಳನ್ನು ಸುಲಭವಾಗಿ ಅಭಿವೃದ್ಧಿಪಡಿಸಿಕೊಳ್ಳಬಹುದು. ಆದರೆ, ಈ ತಳಿಗೆ ನಾವೇ ಪಾಲಿನೇಷನ್ ಮಾಡಿಸಬೇಕು.

ಕರಾವಳಿ, ಮಲೆನಾಡಿನಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟವಾಗುತ್ತಿದೆ. ‌ಜಿಎಸ್‌ಬಿ ಸಮುದಾಯದವರು ಇದರಿಂದ ತರಹೇವಾರಿ ಖಾದ್ಯಗಳನ್ನು ಮಾಡುತ್ತಾರೆ. ಅವರಿಗಿದು ಅಚ್ಚುಮೆಚ್ಚು.

(ನಿಂಗಯ್ಯ ಅವರ ಸಂಪರ್ಕಕ್ಕೆಮೊ: 94818 76468)

ಚಿತ್ರಗಳು: ಲೇಖಕರವುಪೂರಕ ಮಾಹಿತಿ: ಶ್ರೀಪಡ್ರೆ, ಕೃಷಿ ಪತ್ರಕರ್ತರು

(ಅಸ್ಸಾಂ ತಳಿ ಮಡಹಾಗಲ ಕೃಷಿ ಕುರಿತ ಮಾಹಿತಿ – ಮುಂದಿನವಾರದ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.