ADVERTISEMENT

ಬಲಿಷ್ಠ ರೈತ - ಸದೃಢ ಕೃಷಿ: ಮುಖ್ಯಮಂತ್ರಿ ಯಡಿಯೂರಪ್ಪ ಲೇಖನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:30 IST
Last Updated 14 ಅಕ್ಟೋಬರ್ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರ್ನಾಟಕ ಒಂದು ಕೃಷಿ ಪ್ರಧಾನ ರಾಜ್ಯ. ಹಲವಾರು ವೈಶಿಷ್ಟ್ಯಗಳಿಂದ ತನ್ನದೇ ಆದ ಸ್ಥಾನ ಹೊಂದಿದೆ. ನೆಲ, ಜಲ, ಖನಿಜ, ಗುಡ್ಡ–ಬೆಟ್ಟ, ಕಾಡು ಹೀಗೆ ಎಲ್ಲ ವಿಧಗಳ ಪ್ರಾಕೃತಿಕ ಸಂಪನ್ಮೂಲಗಳಿಂದ ನಮ್ಮ ನಾಡು ಸಂಪದ್ಭರಿತವಾಗಿದೆ.

ರಾಜ್ಯದಲ್ಲಿ ಸುಮಾರು 78 ಲಕ್ಷ ರೈತ ಕುಟುಂಬಗಳು, 1.25 ಕೋಟಿ ಕೃಷಿ ಕೂಲಿಕಾರ ಕುಟುಂಬಗಳು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ. ಮೂರು ತಾಳಿನ ಕೂರಿಗೆ ರೂಪದಲ್ಲಿ, ರೈತ - ಕೂಲಿಕಾರ - ಆಯಾಗಾರನ್ನೊಳಗೊಂಡ (ಕೃಷಿ ಜ್ಞಾನ, ಕೃಷಿ ಪರಿಕರ -ಬೀಜ, ಗೊಬ್ಬರ, ಯಂತ್ರಗಳ ಸರಬರಾಜುದಾರರು) ಅತ್ಯಂತ ಮಹತ್ವದ ಶ್ರಮ ಸಂಸ್ಕೃತಿಯಾಗಿದೆ ಕೃಷಿ.

ಕೃಷಿ ಎನ್ನುವುದು ಒಂದು ಸಂಸ್ಕೃತಿಯಾಗಿದ್ದರೂ ದೇಶವಾಸಿಗಳಿಗೆ ಸಾಕಾಗುವಷ್ಟು ಉತ್ಪಾದನೆಯಾಗದ ದಿನಗಳಲ್ಲಿ ಹಸಿರು ಕ್ರಾಂತಿ ಕಾರ್ಯಕ್ರಮ ಘೋಷಿಸಿ, ಸರ್ಕಾರಿ ವ್ಯವಸ್ಥೆಯಲ್ಲಿ, ರಾಷ್ಟ್ರ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ ಇಲಾಖೆಗಳನ್ನು ಸದೃಢಗೊಳಿಸಲಾಗಿದೆ. ಕೃಷಿಗೆ ಪೂರಕವಾಗಿ ನೀರಾವರಿ, ವಿದ್ಯುತ್, ಹಣಕಾಸು ಸೌಲಭ್ಯ ಒದಗಿಸಿ, ಗ್ರಾಮೀಣ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉತ್ಪಾದನೆಗೆ ಬೇಕಾಗುವ ತಾಂತ್ರಿಕತೆ ಹಾಗೂ ಪರಿಕರಗಳನ್ನು ರೈತರಿಗೆ ಪೂರೈಸುವ ಮೂಲಕ ಹೆಚ್ಚಿನ ಉತ್ಪಾದನೆ ಮಾಡಲು ಅನುವು ಮಾಡಿಕೊಡಲಾಗಿದೆ.

ADVERTISEMENT

ರೈತರ ಪರಿಶ್ರಮದಿಂದ ಆಹಾರ ಉತ್ಪಾದನೆಯಲ್ಲಿ ಸ್ವಾಯತ್ತತೆಯನ್ನು ಸ್ಥಾಪಿಸಿ, ಸ್ವಾವಲಂಬಿಯಾಗುವುದರ ಜೊತೆಗೆ ರಫ್ತು ಮಾಡುವಷ್ಟು ಪ್ರಗತಿ ಸಾಧಿಸಲಾಗಿದೆ. ಹೀಗಾಗಿಯೇ ಇಂದು ರಾಷ್ಟ್ರದಾದ್ಯಂತ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಲಾಗಿದೆ.

ರೈತರ, ಕೂಲಿಕಾರರ ಪರಿಶ್ರಮ, ಕೃಷಿ ವಿಜ್ಞಾನಿಗಳ ಸಂಶೋಧನೆ, ಕೃಷಿ ವಿಶ್ವವಿದ್ಯಾನಿಲಯಗಳ ಪ್ರಾತ್ಯಕ್ಷಿತೆಗಳ ಮೂಲಕ ಸಂಘಟಿತ ಪ್ರಯತ್ನದಿಂದಾಗಿ ಇಂದು ರಾಜ್ಯದಲ್ಲಿ 1.78 ಕೋಟಿ ಟನ್ ಆಹಾರ ಉತ್ಪನ್ನ, 1.62 ಕೋಟಿ ಟನ್ ತೋಟಗಾರಿಕೆ ಉತ್ಪನ್ನ, 3.42 ಕೋಟಿ ಟನ್ ಕಬ್ಬು ಉತ್ಪನ್ನ, 1.26 ಲಕ್ಷ ಟನ್ ಮೀನುಗಾರಿಕೆ ಮತ್ತು ಕಡಲ ಉತ್ಪನ್ನ, 10 ಸಾವಿರ ಮೇಟ್ರಿಕ್ ಟನ್ ರೇಷ್ಮೆ ಉತ್ಪನ್ನ ತೆಗೆಯಲು ಸಾಧ್ಯವಾಗಿದೆ. 10 ಕೋಟಿ ಲೀಟರ್ ಹಾಲು, 500 ಕೋಟಿ ಮೊಟ್ಟೆ, 6 ಲಕ್ಷ ಟನ್ ಮಾಂಸ, 9 ಲಕ್ಷ ಬೇಲ್ ಹತ್ತಿ ಉತ್ಪಾದನೆ ಮಾಡಲಾಗಿದೆ. ದೇಶದಲ್ಲಿ ಈ ಅವಧಿಯಲ್ಲಿ ಒಟ್ಟಾರೆಯಾಗಿ 28.5 ಕೋಟಿ ಟನ್ ಆಹಾರ ಧಾನ್ಯ, 30 ಕೋಟಿ ಟನ್ ತರಕಾರಿ ಉತ್ಪಾದನೆಯಾಗಿದೆ.

ಇದಕ್ಕೆ ರೈತರ ಕಠಿಣ ಪರಿಶ್ರಮ ಮತ್ತು ತಪಸ್ಸು ಕಾರಣವಾಗಿದೆ. ಕೃಷಿ ಎನ್ನುವುದು ಗಂಡಾಂತರಗಳಿಗೆ ಎದೆಯೊಡ್ಡುವ ಉದ್ಯೋಗ. ಅಕಾಲಿಕ ಮಳೆ, ಬರಗಾಲ, ಪ್ರವಾಹ, ಬಿರುಗಾಳಿ ಇವೆಲ್ಲವುಗಳನ್ನು ಎದುರಿಸಬೇಕಾಗುತ್ತದೆ. ಇಷ್ಟೆಲ್ಲದರ ನಡುವೆಯೂ ರಾಜ್ಯ ಸಮೃದ್ಧ ರಾಜ್ಯವಾಗಿದೆ. ಕೃಷಿಯಲ್ಲಿ ಸ್ವಾವಲಂಬನೆ, ಆಹಾರ ಭದ್ರತೆ ಜೊತೆಗೆ ಕೃಷಿ ಅವಲಂಬಿತ ಉದ್ದಿಮೆಗಳಿಗೆ ಸಾಕಷ್ಟು ಪ್ರಮಾಣದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಸಾಧ್ಯವಾಗಿರುವುದು ರೈತರ ಸಂಘಟಿತ ಪರಿಶ್ರಮದ ಫಲ. ಅವರು ಹರಿಸಿದ ಬೆವರಿನಿಂದಾಗಿ ಕೃಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಸದೃಢವಾಗಿ ಬೆಳೆಯುತ್ತಿದೆ.

ಹೀಗಿದ್ದಾಗ್ಯೂ ಅನ್ನದಾತನ ಅಥವಾ ಕೃಷಿಕನ ಬವಣೆಗಳು ತಪ್ಪಿಲ್ಲವೇಕೆ? ದುಡಿದು ಏಕೆ ಬಡವನಾದ, ಸಾಲಗಾರನಾದ, ಸಾಲ ತೀರಿಸಲಾಗದೆ ಅಥವಾ ತನ್ನ ನಂಬಿದವರ, ತನ್ನ ಕುಟುಂಬದವರ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲಾಗದ ಸ್ಥಿತಿ ತಲುಪಿ ಕೃಷಿಕ ಕೃಷವಾಗಿ ಜೀವನವನ್ನೇ ಕೊನೆಗೊಳಿಸಿಕೊಳ್ಳುವ (ಆತ್ಮಹತ್ಯೆ) ಮನೋಸ್ಥಿತಿಗೆ ಏಕೆ ತಲುಪಿದ? ರೈತರು ಎದುರಿಸುತ್ತಿರುವ ಸಮಸ್ಯೆಗಳಾದರು ಏನು? ಈ ಆಧುನಿಕ ಯುಗದಲ್ಲಿ ರೈತರ ಉತ್ಪನ್ನಗಳ ಬೆಲೆಯನ್ನು ರೈತರೇ ನಿರ್ಧರಿಸುತ್ತಿಲ್ಲ ಏಕೆ?

ಪ್ರಾಥಮಿಕ ಹಂತದಲ್ಲಿ ಕೃಷಿ ಉತ್ಪನ್ನಗಳಾದ ಜೋಳ, ರಾಗಿ, ಭತ್ತ, ಕಡಲೆ, ತೊಗರಿ ಮುಂತಾದ ವಸ್ತುಗಳ ಬೆಲೆ ನಿರ್ಧಾರಕ್ಕೆ ಯಾವುದೇ ತರಹದ ನಿರ್ಧರಿತ ಮಾನದಂಡಗಳಿಲ್ಲ. ಹೀಗಾಗಿ ಕೃಷಿ ವಸ್ತುಗಳ ಪ್ರಾಥಮಿಕ ಹಂತದ ಮಾರುಕಟ್ಟೆ ಅಶಿಸ್ತಿನಿಂದ ಕೂಡಿದ್ದು, ನಿಯಮರಹಿತವಾಗಿದೆ. ಅದೇ ವಸ್ತುಗಳನ್ನು ದ್ವಿತೀಯ ಹಂತದಲ್ಲಿ ಮಾರಾಟ ಮಾಡುವಾಗ ಸದರಿ ವಸ್ತುಗಳ ಬೆಲೆಗಳು ನಿರ್ಧರಿತವಾಗಿ ಮಾರುತ್ತವೆ ಉದಾ: ಜೋಳದ ಹಿಟ್ಟು, ಜೋಳದ ರೊಟ್ಟಿ, ರಾಗಿ ಹಿಟ್ಟು, ರಾಗಿ ಮಾಲ್ಟ್, ಕಡಲೆ ಬೇಳೆ, ತೊಗರಿ ಬೇಳೆ. ಇದೇ ರೀತಿ ಕೃಷಿ ವಸ್ತುಗಳಿಂದ ತಯಾರಿಸಲ್ಪಟ್ಟ ಎಲ್ಲಾ ಕಾರ್ಖಾನೆ ವಸ್ತುಗಳು ನಿರ್ಧರಿತವಾಗಿ ನಿಯಮಸಹಿತವಾಗಿ ಮಾರಾಟವಾಗುತ್ತವೆ. ಇದನ್ನು ಸರಿಪಡಿಸಲಾಗುವುದಿಲ್ಲವೇ?

ಶತ ಶತಮಾನಗಳಿಂದಲೂ ವಸ್ತುಗಳ ವಿನಿಮಯದ ಸಮತೋಲನ ಸರಿಯಾದ ಕ್ರಮ. ಆದರೆ, ಸ್ವಾತಂತ್ರ್ಯದ ವರ್ಷ (1947 ರಲ್ಲಿ) ಇದ್ದಂತಹ ವಸ್ತು ವಿನಿಮಯ ಸಮತೋಲನ, ಬ್ಯಾಂಕ್ ರಾಷ್ಟ್ರೀಕರಣಗೊಂಡ ವರ್ಷದಿಂದ (1969 ರಲ್ಲಿ) ಪಾಲನೆ ಆಗುತ್ತಿಲ್ಲ ಏಕೆ?

ಉದಾ: ಕಾರ್ಖಾನೆಗಳ ವಸ್ತುಗಳ ದರಗಳು ಸಾವಿರಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ಕೃಷಿ ಉತ್ಪನ್ನಗಳ ದರಗಳು ನೂರುಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿವೆ. ಅಂದರೆ ಇತರ ಏರಿಕೆಗಳ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ದರಗಳು ಸಮತೋಲನದ ಏರಿಕೆಯಾಗುತ್ತಿಲ್ಲವೇಕೆ? ಉದ್ದಿಮೆದಾರರು ಕೃಷಿಗೆ ಪೂರೈಸುವ ಪರಿಕರಗಳ (ಬೀಜ, ರಸಾಯನಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು) ಬೆಲೆಗಳು ನೈಜವಾಗಿವೆಯೇ ಅಥವಾ ವಿಪರೀತ ಏರಿಕೆಯಾಗಿವೆಯೇ?

ಈ ಎಲ್ಲಾ ವಿದ್ಯಮಾನಗಳನ್ನು ಕಾಲಕಾಲಕ್ಕೆ ಆಯಾ ಸಂದರ್ಭದಲ್ಲಿಯ ಸರ್ಕಾರಗಳು ಗಮನಹರಿಸಿ, ಬಡ್ಡಿ ಮನ್ನಾ, ಸಾಲಮನ್ನಾದಂತಹ ಕ್ರಮಗಳ ಜೊತೆಗೆ ಕೃಷಿಯಲ್ಲಿ ಸಾವಯವ ಕೃಷಿ ಮುಂತಾದ ಕ್ರಮಗಳಲ್ಲದೇ ಕೃಷಿ ಬೆಲೆ ಆಯೋಗ, ಕೃಷಿ ಸಾವಯವ ಮಿಷನ್, ಕೃಷಿ ಮಿಷನ್ ರಚನೆ ಮಾಡಿ ಪರಿಹರಿಸಲು ಪ್ರಯತ್ನಿಸಲಾಗಿದೆ.

ಅದೇ ರೀತಿ 2014ರಿಂದ ಕೃಷಿ ಬೆಲೆ ಆಯೋಗದ ಅಧ್ಯಯನ ವ್ಯಾಪ್ತಿ ಹೆಚ್ಚಿಸಿ, ಕೃಷಿ ಬೆಲೆ ಆಯೋಗದಲ್ಲಿ ಕೃಷಿ ಅರ್ಥಶಾಸ್ತ್ರ, ಕೃಷಿ ಮಾರುಕಟ್ಟೆಯ ಕುರಿತು ಅತ್ಯುತ್ತಮ ಅಧ್ಯಯನ ಮಾಡಿದವರ ಮತ್ತು ಅನುಭವ ಉಳ್ಳವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳನ್ನು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ, ಪ್ರಗತಿಪರ ದೃಷ್ಟಿಕೋನ ಮತ್ತು ಕೃಷಿ ಮಾರಾಟದ ಬಗ್ಗೆ ಅನುಭವವಿರುವ ಇಬ್ಬರು ರೈತರನ್ನು ಸದಸ್ಯರನ್ನಾಗಿ 5 ಜನರನ್ನೊಳಗೊಂಡ ಆಯೋಗ ರಚಿಸಲಾಗಿದೆ. ಇದಕ್ಕೆ ಕೃಷಿ ಇಲಾಖೆಯ ಕೃಷಿ ನಿರ್ದೇಶಕರು ಅಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಈ ಬೆಲೆ ಆಯೋಗಕ್ಕೆ ಹತ್ತು ಷರತ್ತು, ನಿಬಂಧನೆ, ಧ್ಯೇಯೋದ್ದೇಶ ಇವೆ. ಉತ್ಪಾದನಾ ವೆಚ್ಚ, ಸ್ಪರ್ಧಾತ್ಮಕ ಮಾರುಕಟ್ಟೆ, ರೈತರ ಚೌಕಾಸಿ ಸಾಮರ್ಥ್ಯ, ಪೌಷ್ಟಿಕ ಆಹಾರ, ಮಾರುಕಟ್ಟೆ ಮಾಹಿತಿ, ಬೆಲೆ ನಿಗದಿ ವಿಧಾನ, ಮಾರುಕಟ್ಟೆ ಸೌಲಭ್ಯ, ಮಾರುಕಟ್ಟೆಗೆ ಪೂರೈಕೆ ನಿಯಂತ್ರಣ ಕ್ರಮ, ಮಾರುಕಟ್ಟೆ ಸಮಸ್ಯೆಗಳ ಜೊತೆಗೆ ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆ, ರಾಜ್ಯದ ವಿವಿಧ ಇಲಾಖೆಗಳ ಸಮನ್ವಯತೆ – ಇಷ್ಟು ಆಯಾಮಗಳಲ್ಲಿ ಆಯೋಗ ಕೆಲಸ ಮಾಡುತ್ತದೆ.

ನಮ್ಮ ಸರ್ಕಾರ ಬಂದ ಮೇಲೆ ಕೃಷಿ ಅರ್ಥಶಾಸ್ತ್ರ, ಕೃಷಿ ಮಾರುಕಟ್ಟೆಯಲ್ಲಿ ನುರಿತಿರುವ ಮೂರು ದಶಕಗಳ ರೈತ ಚಳುವಳಿ, ಬ್ಯಾಂಕ್‌ನ ನಿರ್ದೇಶಕತ್ವದ ಅನುಭವವಿರುವ ಮತ್ತು ವ್ಯವಸಾಯ ಮಾಡುತ್ತಿರುವ ಹನುಮನಗೌಡ ಬೆಳಗುರ್ಕಿ ಅವರನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ, ಕೃಷಿಯಲ್ಲಿ ಬೆಲೆ ಸಮಸ್ಯೆ, ಬೆಳೆ ಸಮಸ್ಯೆ, ಸಾಲ ನೀತಿ, ನೀರಾವರಿ ನೀತಿ, ವಿದ್ಯುತ್ ನೀತಿ, ಕೃಷಿ ಉತ್ಪನ್ನಗಳ ಆಮದು, ರಫ್ತುಗಳಿಂದ ಆಗುತ್ತಿರುವ ಸಮಸ್ಯೆಗಳು, ಕೃಷಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಸಮಗ್ರ ಅಧ್ಯಯನ ಹಾಗೂ ಪರಿಹಾರೋಪಾಯಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸೂಚಿಸಲಾಗಿದೆ.

ಯಾವುದೇ ಕಾರಣಕ್ಕೂ ನನ್ನ ರೈತ ನಷ್ಟಕ್ಕೆ ಒಳಗಾಗಬಾರದು, ಸಾಲದ ಚಿಂತೆಯಲ್ಲಿರಬಾರದು, ಆವೇಶಭರಿತ ತೀರ್ಮಾನವಾಗಿ ಜೀವನ ಪಯಣ ಮುಗಿಸುವಂತಹ ಕೃತ್ಯಕ್ಕೆ ಕೈಹಾಕಬಾರದು, ರೈತ ನೆಮ್ಮದಿಯಿಂದ ಸದಾ ಸುಖ ಸಂತೋಷಗಳಿಂದ ಇರಬೇಕೆನ್ನುವ ದೃಷ್ಟಿಯಿಂದ ರೈತನಿಗೆ ನ್ಯಾಯಯುತ ಬೆಲೆ, ಸಿಗಬೇಕಾದ ಸೌಲಭ್ಯ ಸಮಯದಲ್ಲಿ ಸರಿಯಾಗಿ ಸಿಗಬೇಕು.

ಈ ಹಿನ್ನೆಲೆಯಲ್ಲಿ ನಿರಂತರವಾಗಿ ರೈತಪರ ಯೋಜನೆಗಳನ್ನು, ಪರಿಹಾರಗಳನ್ನು ತಕ್ಷಣಕ್ಕೆ ಜಾರಿ ಮಾಡಿ ರೈತರ ಸಂಕಷ್ಟ ಪರಿಹರಿಸುವುದೇ ಸರ್ಕಾರದ ಗುರಿಯಾಗಿದೆ. ಈ ಭರವಸೆ ನೀಡುವುದರೊಂದಿಗೆ ರಾಜ್ಯದ ಕೃಷಿ ಸದಾ ಹಸಿರಾಗಿರಬೇಕು, ಉಸಿರಾಗಿರಬೇಕು, ಅನ್ನದ ಬಟ್ಟಲು ಸದಾ ತುಂಬಿರಬೇಕು, ನನ್ನ ರೈತ ಬಲಿಷ್ಠನಾಗಿರಬೇಕು ಎಂದು ಆಶಿಸುತ್ತೇನೆ.

‘ಕೃಷಿ ಕೃತ್ಯ ಕಾಯಕ ಮಾಡುವ ಪರಮಸದ್ಭಕ್ತನ ಪಾದವತೋರಯ್ಯ ಎನೆಗೆ.
ಅದೆಂತೆಂದೊಡೆ ಆತನ ತನು ಶುದ್ಧ, ಆತನ ಮನ ಶುದ್ಧ,
ಆತನ ಧನ ಶುದ್ಧ,
ಅಂತಪ್ಪ ಪರಮಸದ್ಭಕ್ತನ ಮನೆಯ ಹೊಕ್ಕು
ಪೂಜೆಯ ಮಾಡಿದ
ಜಂಗಮವೇ ಪಾವನ ಕೂಡಲಸಂಗಮದೇವಾ’

- ಬಸವಣ್ಣನವರ ಈ ಉಕ್ತಿ ನಮ್ಮ ಕೃಷಿ ಉತ್ತೇಜನ ಚಟುವಟಿಕೆಗಳಿಗೆ ದಾರಿದೀಪ ಎಂದು ವಿನೀತನಾಗಿ ಹೇಳಬಯಸುತ್ತೇನೆ.

ಲೇಖಕರು : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.