ADVERTISEMENT

PV Web Exclusive: ಮಂಗಳೂರು ಮಾರುಕಟ್ಟೆಗೆ ಬರಲಿದೆ ‘ಫ್ರೋಝನ್ ಹಲಸು’

ಹಲಸಿನ ವಿವಿಧ ಉತ್ಪನ್ನಗಳನ್ನು ಹೊರತರುವ ಸಿದ್ಧತೆಯಲ್ಲಿ 30ಕ್ಕೂ ಹೆಚ್ಚು ಉತ್ಸಾಹಿಗಳು

ಸಂಧ್ಯಾ ಹೆಗಡೆ
Published 9 ನವೆಂಬರ್ 2020, 9:49 IST
Last Updated 9 ನವೆಂಬರ್ 2020, 9:49 IST
ಇಂಡೊನೇಷ್ಯಾದ ವ್ಯಾಕ್ಯೂಮ್ ಪ್ಯಾಕ್ಡ್ ಫ್ರೋಝನ್ ಹಲಸಿನ ಹಣ್ಣು (ಸಾಂದರ್ಭಿಕ ಚಿತ್ರ)
ಇಂಡೊನೇಷ್ಯಾದ ವ್ಯಾಕ್ಯೂಮ್ ಪ್ಯಾಕ್ಡ್ ಫ್ರೋಝನ್ ಹಲಸಿನ ಹಣ್ಣು (ಸಾಂದರ್ಭಿಕ ಚಿತ್ರ)   
"‘ಜಾಕೊಬೈಟ್’ ಫ್ರೋಝನ್ ಹಲಸಿನ ಹಣ್ಣು"

ಹಂಗಾಮಿನ ನಾಲ್ಕು ತಿಂಗಳಿಗಷ್ಟೇ ಸೀಮಿತವಾಗಿದ್ದ ಹಲಸಿನ ಹಣ್ಣಿನ ಸವಿ ವರ್ಷಪೂರ್ತಿ ಸಿಗುವ ದಿನಗಳು ದೂರವಿಲ್ಲ. ಕೇರಳ ಕರ್ನಾಟಕದ 30ಕ್ಕೂ ಹೆಚ್ಚು ಉತ್ಸಾಹಿಗಳು ಫ್ರೋಝನ್ ರೂಪದಲ್ಲಿ ಹಲಸಿನ ಹಣ್ಣನ್ನು ಮಂಗಳೂರಿನ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ.

ಸಾಮಾನ್ಯವಾಗಿ ಮಾರ್ಚ್‌ನಿಂದ ಜೂನ್‌ವರೆಗೆ, ಅಬ್ಬಬ್ಬಾ ಅಂದರೆ ಜುಲೈವರೆಗೆ ಹಲಸು ಭರಪೂರ ಸಿಗುತ್ತದೆ. ಒಂದಿಷ್ಟು ಬೆಳೆ ಅಡುಗೆಗೆ, ಪಲ್ಪ್ ತಯಾರಿಕೆ, ಚಿಪ್ಸ್, ವ್ಯಾಕ್ಯುಮ್ ಫ್ರೈಡ್ ಚಿಪ್ಸ್ ತಯಾರಿಕೆಗೆ ಬಳಕೆಯಾಗುತ್ತದೆ. ಹಣ್ಣಿನ ಪ್ರಿಯರು ತೊಳೆ ತಿಂದು ತೃಪ್ತರಾದರೆ, ಇನ್ನೊಂದಿಷ್ಟು ಬಳಕೆಯಾಗದೆ, ಮರದಿಂದ ಉದುರಿ ಮಣ್ಣಾಗುತ್ತದೆ.

ಹಂಗಾಮೇತರ ಕಾಲದಲ್ಲೂ ಹಲಸು ತಿನ್ನಬೇಕು, ವರ್ಷವಿಡೀ ಹಲಸು ದೊರೆಯಬೇಕು ಎಂಬ ಆಸೆ ಹಲವರದು. ಇಲ್ಲಿಯ ತನಕ ಸ್ಥಳೀಯ ಮಾರುಕಟ್ಟೆಯಲ್ಲಿ ಯಾವ ಉದ್ಯಮಿಗಳೂ ಗ್ರಾಹಕರ ಈ ಬಯಕೆ ಈಡೇರಿಸಿರಲಿಲ್ಲ. ಗ್ರಾಹಕರ ಕೊರಗನ್ನು ನಿವಾರಿಸಲು ಉದ್ಯಮಿಗಳು, ಸಂಘ–ಸಂಸ್ಥೆಗಳು, ಟೆಕ್ಕಿಗಳು, ಕೃಷಿಕರನ್ನೊಳಗೊಂಡು ಒಂದು ತಂಡ ಮುಂದಾಗಿದೆ. ತೀರಾ ಇತ್ತೀಚೆಗೆ ರಚನೆಯಾಗಿರುವ ‘ಫ್ರೋಝನ್ ಜಾಕ್‌ಫ್ರುಟ್ ಟು ಮಾರ್ಕೆಟ್’ ವಾಟ್ಸ್‌ಆ್ಯಪ್ ಗ್ರೂಪ್‌ನ 30 ಜನರು ಈ ಸೀನಸ್‌ನಿಂದ ಫ್ರೋಝನ್ ರೂಪದ ಹಲಸಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಪೂರ್ವ ಸಿದ್ಧತೆ ಆರಂಭಿಸಿದ್ದಾರೆ.

ADVERTISEMENT

ಸೂಪರ್‌ ಮಾರ್ಕೆಟ್‌ಗಳಲ್ಲಿ ಸಿಗುವ ಹಸಿರು ಬಟಾಣಿ, ಅಮೆರಿಕನ್ ಸ್ವೀಟ್ ಕಾರ್ನ್‌ನಂತಹ ಫ್ರೋಝನ್ ಉತ್ಪನ್ನಗಳು ಗ್ರಾಹಕರ ಮನಗೆದ್ದಿವೆ. ಇದೇ ಮಾದರಿಯಲ್ಲಿ ಇನ್ನು ಹಲಸಿನ ಗುಜ್ಜೆ, ಕಾಯಿ ತೊಳೆ, ಹಣ್ಣಿನ ತೊಳೆಗಳನ್ನು ಪೂರೈಕೆ ಮಾಡಬೇಕೆಂಬುದು ಈ ಆಸಕ್ತರ ತಂಡದ ಉತ್ಸಾಹ.

ಉತ್ಪನ್ನಕ್ಕೆ ಬಲು ಬೇಡಿಕೆ:

‘ಕಳೆದ ವರ್ಷ ಹಂಗಾಮಿನ ನಂತರದ ನಾಲ್ಕು ತಿಂಗಳು ಹಲಸಿನ ಕಾಯಿ ತೊಳೆ ಮಾರಾಟ ಮಾಡಿದ್ದೆ. ಬೀಜವನ್ನು ಕೆ.ಜಿ.ಯೊಂದಕ್ಕೆ ₹ 60 ನೀಡಿ ಗ್ರಾಹಕರು ಖರೀದಿಸಿದರು. ಸುತ್ತಮುತ್ತಲಿನ ರೈತರ ತೋಟದಿಂದ ಸಂಗ್ರಹಿಸಿದ 400ಕ್ಕೂ ಹೆಚ್ಚು ಹಲಸಿನ ಕಾಯಿ–ಹಣ್ಣು ಮಾರಾಟ ಮಾಡಿದ್ದೆ. ಈ ಬಾರಿ ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ, ಫ್ರೋಝನ್ ರೂಪದಲ್ಲಿ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ, ಮಾರಾಟ ಮಾಡಲು ಸಿದ್ಧತೆ ನಡೆಸಿದ್ದೇನೆ. ನಮ್ಮದೇ ಜ್ಯೂಸ್ ಅಂಗಡಿ ಇರುವುದರಿಂದ ನನಗೆ ಬಂಡವಾಳ ತೊಡಗಿಸುವ ಚಿಂತೆಯೂ ಇಲ್ಲ. ಡೀಪ್ ಫ್ರೀಝರ್‌ನಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಿಡುತ್ತೇನೆ. ಹಂಗಾಮೇತರ ಕಾಲದಲ್ಲಿ ಹಲಸಿನ ಬೇಡಿಕೆ ದುಪ್ಪಟಾಗುತ್ತದೆ’ ಎನ್ನುತ್ತಾರೆ ಪಡುಬಿದ್ರಿ ಕಾಂಜರಕಟ್ಟೆಯ ದೀಪಕ್ ಅವರು.

‘ಜಾಕೊಬೈಟ್’ ಫ್ರೋಝನ್ ಹಲಸಿನ ಹಣ್ಣು

‘ಹಂಗಾಮಿನಲ್ಲಿ ಹಲಸಿನ ಬಗ್ಗೆ ತಾತ್ಸಾರ ಹೆಚ್ಚು. ಅದೇ, ಸೀಸನ್ ಅಲ್ಲದಾಗ ಹಲವರಿಗೆ ಹಲಸು ತಿನ್ನಬೇಕೆಂಬ ಆಸೆಯಾಗುತ್ತದೆ. ಹಂಗಾಮಿನಲ್ಲಿ ಹಣ್ಣು, ಕಾಯಿ ಕೊಡುವ ಬದಲಾಗಿ, ತೊಳೆ ಬಿಡಿಸಿ, ಪ್ಯಾಕ್ ಮಾಡಿಟ್ಟು ಜನರಿಗೆ ಒದಗಿಸುವ ಉದ್ದೇಶವಿದೆ. ಇದನ್ನು ಸಂಗ್ರಹಿಸಲು ₹ 1 ಲಕ್ಷ ಬಂಡವಾಳ ತೊಡಗಿಸಿ, ಸೋಲಾರ್ ಡೀಪ್ ಫ್ರೀಝರ್ ಹಾಕಲು ಯೋಚಿಸಿದ್ದೇನೆ. ಹಲಸನ್ನು ವಾಣಿಜ್ಯಿಕವಾಗಿ ನೋಡಬೇಕಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತವೆ’ ಎನ್ನುತ್ತಾರೆ ಕೃಷಿಕ ಜಗದೀಶ ಪ್ರಸಾದ್ ಉಜಿರೆ.

‘ನನ್ನ ತೋಟದಲ್ಲಿ 150ಕ್ಕೂ ಹೆಚ್ಚು ಹಲಸಿನ ಗಿಡಗಳು ಫಲ ನೀಡುವ ಹಂತಕ್ಕೆ ಬಂದಿವೆ. ಇವುಗಳನ್ನು ಅರ್ಧ ಕೆ.ಜಿ, ಒಂದು ಕೆ.ಜಿ. ಪ್ಯಾಕ್ ಮಾಡಿ ಫ್ರೋಝನರ್ ರೂಪದಲ್ಲಿ ಸಂಗ್ರಹಿಸಲು ಯೋಚಿಸಿದ್ದೇನೆ. ಹಲಸಿನ ತ್ಯಾಜ್ಯ ನಮ್ಮ ಮನೆಯಲ್ಲಿರುವ ಪಶುಗಳಿಗೆ ಉತ್ತಮ ಆಹಾರ’ ಎಂಬುದು ಅವರ ಯೋಚನೆ.

‘ಫ್ರೋಝನ್ ಆಹಾರೋತ್ಪನ್ನಗಳು ದೇಶೀಯ ಮಾರುಕಟ್ಟೆಯಲ್ಲಿ ಅಷ್ಟು ಪ್ರಚಲಿತಕ್ಕೆ ಬಂದಿಲ್ಲ. ಹಾಗೆಂದು, ಅನೇಕ ಕಂಪನಿಗಳು ಫ್ರೋಝನ್ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿವೆ. ಹಲಸಿನ ಬೆಳೆಯ ವಿಷಯದಲ್ಲಿ ವಿಶ್ವವಿದ್ಯಾಲಯಗಳು, ವಿಜ್ಞಾನಿಗಳಿಂದ ಸಹ ಅಷ್ಟಾಗಿ ಫ್ರೋಝನ್ ಉತ್ಪನ್ನ ತಯಾರಿಕೆಯ ಬಗ್ಗೆ ಪ್ರಯತ್ನಗಳು ನಡೆದಿಲ್ಲ. ಫ್ರೋಝನ್ ಉತ್ಪನ್ನಗಳು ವ್ಯಾಪಕಗೊಂಡರೆ, ಹಲಸಿಗೊಂದು ಮಹಾದ್ವಾರ ತೆರೆದಂತೆ. ಕೇರಳದಲ್ಲಿ ಕಾಯಿ ತೊಳೆಯಿಂದ ‘ಚಕ್ಕ ಪುಳುಕ್’ ಪಲ್ಯದ ರೀತಿಯ ಉತ್ಪನ್ನ ತಯಾರಿಸುತ್ತಾರೆ. 10ಕ್ಕೂ ಹೆಚ್ಚು ಕಂಪನಿಗಳು ಕಾಯಿ ಹಲಸನ್ನು ಫ್ರೋಝನ್ ರೂಪದಲ್ಲಿ ರಫ್ತು ಮಾಡುತ್ತಿವೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಕೆಲವೆಡೆ ಮಾತ್ರ ಬಿಡಿ ಬಿಡಿಯಾಗಿ ಸಣ್ಣ ಪ್ರಯತ್ನಗಳು ನಡಿದಿವೆ’ ಎನ್ನುತ್ತಾರೆ ಹಲಸಿನ ಅಂತರರಾಷ್ಟ್ರೀಯ ರಾಯಭಾರಿ ಶ್ರೀ ಪಡ್ರೆ.

‘ಫ್ರೋಝನ್ ತಂತ್ರಜ್ಞಾನ ಅಳವಡಿಸಿಕೊಂಡರೆ ಕಾಯಿ ಹಲಸು, ಹಣ್ಣು, ಹಣ್ಣಿನ ಬೀಜಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವರ್ಷದ 12 ತಿಂಗಳು ಕೂಡ ಒದಗಿಸಬಹುದು. ಭವಿಷ್ಯದಲ್ಲಿ ಹಣ್ಣಿನ ಸಾಗಾಟದ ಹೊರೆ ಕೂಡ ತಗ್ಗಬಹುದು. ರೆಫ್ರಿಜರೇಟರ್ ಲಾರಿಗಳನ್ನು ಮೌಲ್ಯವರ್ಧಿತ ಉತ್ಪನ್ನ ಸಾಗಾಟ ಮಾಡಬಹುದು. ಕಚ್ಚಾವಸ್ತುವಿನ ಲಭ್ಯತೆಯ ಅವಧಿ ವಿಸ್ತರಣೆಯಾಗಿಗೃಹ ಉತ್ಪನ್ನ ತಯಾರಿಕರಲ್ಲೂ ಭರವಸೆ ಮೂಡುತ್ತದೆ. ನಮ್ಮ ವಾಟ್ಸ್‌ಆ್ಯಪ್ ತಂಡದ ಗೇಬ್ರಿಯಲ್ ವೇಗಸ್, ‘ಮೈ ಬ್ರ್ಯಾಂಡ್‌’ನ ಹೃದಯ ಪೈ, ಅಶ್ವಿನ್ ಪಿಂಟೋ, ಚಂದ್ರಮೌಳಿ ಶೆಣೈ ಮೊದಲಾದವರು ಬರುವ ಮಾರ್ಚ್‌ನಿಂದ ಈ ದಿಸೆಯಲ್ಲಿ ಪ್ರಥಮ ಪ್ರಯತ್ನ ಪ್ರಾರಂಭಿಸಲು ಅಣಿಯಾಗಿದ್ದಾರೆ’ ಎಂಬುದು ಅವರ ದೂರದೃಷ್ಟಿಯ ಯೋಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.