ADVERTISEMENT

ಜಿಕೆವಿಕೆ ಕೃಷಿಮೇಳದಲ್ಲಿ ವಿಶೇಷ ಪ್ರಾತ್ಯಕ್ಷಿಕೆಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:31 IST
Last Updated 21 ಅಕ್ಟೋಬರ್ 2019, 19:31 IST
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಮಾದರಿ ಹೂದೋಟದ ಬಗ್ಗೆ ವಿವರಣೆ ನೀಡಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಜಿಕೆವಿಕೆ ಆವರಣದಲ್ಲಿ ನಿರ್ಮಿಸಿರುವ ಮಾದರಿ ಹೂದೋಟದ ಬಗ್ಗೆ ವಿವರಣೆ ನೀಡಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.   

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯಲಿರುವ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಕೃಷಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ 62 ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರದರ್ಶನದ ಜತೆಗೆ, ಪ್ರಾತ್ಯಕ್ಷಿಕೆಗಳೂ ಇರುತ್ತವೆ. ಹಾಗಾಗಿ, ಆ ತಂತ್ರಜ್ಞಾನಗಳ ಪ್ರಯೋಜನ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ.

ಮೇಳದಲ್ಲಿ 700ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಿರುತ್ತವೆ. ವಿಶ್ವವಿದ್ಯಾಲಯದ ‘ಹೆಲ್ಪ್‌ ಡೆಸ್ಕ್‌’ನಿಂದ ಹಿಡಿದು ಮಣ್ಣಿನ ಗುಣಧರ್ಮ, ಪೋಷಕಾಂಶಗಳ ಲಭ್ಯತೆ, ನೀರಿನ ಲಭ್ಯತೆ ಮತ್ತು ಗುಣಮಟ್ಟ, ಬೇಸಾಯ ಮಾಡುವ ಬೆಳೆಗೆ ನೀರಿನ ಮತ್ತು ಪೋಷಕಾಂಶಗಳ ಅವಶ್ಯಕತೆ, ಕಳೆಗಳ ನಿರ್ವಹಣೆ ನಿಖರ ಬೇಸಾಯದಲ್ಲಿ ಬೆಳೆ ಉತ್ಪಾದನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯುವ ಕುರಿತು ಮಾಹಿತಿ ನೀಡುವ ತಜ್ಞರು ಮೇಳದಲ್ಲಿರುತ್ತಾರೆ. ರೈತರು ಸಂಬಂಧಿಸಿದ ತಜ್ಞರಿಂದ ಮಾಹಿತಿ ಪಡೆಯಬಹುದು.

ಮೇಳದಲ್ಲಿ ಹತ್ತು ಜಿಲ್ಲೆಗಳಿಂದ ಕೃಷಿ ಚಟುವಟಿಕೆ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸುತ್ತಿವೆ. ಬೀಜ, ಗೊಬ್ಬರ, ನರ್ಸರಿಯ ಜತೆಗೆ, ಜೆಸಿಬಿ, ಟ್ರ್ಯಾಕ್ಟರ್‌ನಂತಹ ಕೃಷಿ ಪೂರಕ ಬೃಹತ್ ಯಂತ್ರಗಳ ಪ್ರದರ್ಶನ, ಮಾರಾಟವಿರುತ್ತದೆ. ನಬಾರ್ಡ್‌, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಮಳಿಗೆಗಳಿರುತ್ತವೆ. ಸ್ತ್ರೀಶಕ್ತಿ ಸಂಘಗಳು ಸೇರಿದಂತೆ, ಹಲವು ಮಹಿಳಾ ಸಂಘಗಳು ತಾವು ತಯಾರಿಸಿರುವ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಿದ್ದಾರೆ. ಕೃಷಿ ಪುಸ್ತಕಗಳ ಪ್ರದರ್ಶನ, ಕೃಷಿ ಪತ್ರಿಕೆಗಳ ಮಳಿಗೆಗಳು, ರೈತರೇ ಅನುಶೋಧಿಸಿದ ಉಪಕರಣಗಳ ಪ್ರದರ್ಶನ ಪ್ರಾತ್ಯಕ್ಷಿಕೆ ಇರುತ್ತದೆ. ಪಶುಸಂಗೋಪನೆ ವಿಭಾಗದಲ್ಲಿ ರಾಸುಗಳ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ಮಳಿಗೆಗಳಲ್ಲಿ ವಿನೂತನ ತಳಿಗಳ ಪ್ರದರ್ಶನವಿರುತ್ತದೆ.

ಪ್ರದರ್ಶನದ ಜತೆಗೆ, ಮೂರು ದಿನಗಳ ಕಾಲ ಸಭಾ ಕಾರ್ಯಕ್ರಮವಿರುತ್ತದೆ. ಇಲ್ಲಿ ರೈತರು, ವಿಜ್ಞಾನಿಗಳು ವಿವಿಧ ಕೃಷಿ ಸಂಬಂಧಿಸಿದಂತೆ ವಿಚಾರ ಮಂಡನೆ ಮತ್ತು ಸಂವಾದ ಇರುತ್ತದೆ. ಇದೇ ವೇದಿಕೆಯಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ‘ನೇಗಿಲ ಯೋಗಿ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇದರ ಜೊತೆಗೆ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಮೇಳಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ರಿಯಾಯತಿ ದರದಲ್ಲಿ ಊಟ, ಬೆಂಗಳೂರಿನಲ್ಲಿ ಉಚಿತ ಸಾರಿಗೆ (ಬಸ್ಸುಗಳಲ್ಲಿ) ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೆ, ವಾಹನ ನಿಲುಗಡೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.‌

ಮೇಳದ ಇತರೆ ಆಕರ್ಷಣೆ

* ನೂತನವಾಗಿ ಬಿಡುಗಡೆಯಾದ ಏಳು ತಳಿಗಳ ಪ್ರಾತ್ಯಕ್ಷಿಕೆ

* ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ

* ಹವಾಮಾನ ವೈಪರೀತ್ಯ ಕೃಷಿ

* ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ

* ಮಳೆ ನೀರು ಸಂಗ್ರಹದ ವಿಧಾನಗಳ ಪರಿಚಯ

* ಮಾರುಕಟ್ಟೆ ನೈಪುಣ್ಯ ಮಾಹಿತಿ

* ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ

ಪ್ರಾತ್ಯಕ್ಷಿಕೆಗಳು..

* ಹನಿ ನೀರಾವರಿಯಲ್ಲಿ ಮುಸುಕಿನ ಜೋಳ, ತೊಗರಿ, ಗೋರಿಕಾಯಿ ಮತ್ತು ದಪ್ಪ ಮೆಣಸಿನಕಾಯಿ ಕೃಷಿ ಕುರಿತು ಪ್ರಾತ್ಯಕ್ಷಿಕೆಯ ತಾಕು.

* ಪ್ಲಾಸ್ಟಿಕ್ ಹೊದಿಕೆ ಮೂಲಕ ತಿಂಗಳ ಹುರುಳಿ, ಬದನೆ ಮತ್ತು ಕುಂಬಳಕಾಯಿ ಕೃಷಿಯ ವಿಧಾನ ವಿವರಿಸುವ ಪ್ರಾತ್ಯಕ್ಷಿಕೆ.

* ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆ ಮೂಲಕ ಸೌತೆಕಾಯಿ, ಟೊಮೆಟೊ, ಬದನೆ, ಬೆಂಡೆ, ಮೆಣಸಿನಕಾಯಿ, ಕರಬೂಜ ಮತ್ತು ಹಾಗಲಕಾಯಿ, ಮುಸುಕಿನ ಜೋಳ, ಗ್ಲ್ಯಾಡಿಯೋಲಸ್ ಮತ್ತು ಚೆಂಡು ಹೂವು ಕೃಷಿ.

* ಹಸಿರು ಮನೆಯಲ್ಲಿ ಸಂರಕ್ಷಿತ ಬೇಸಾಯ. ಈ ವಿಧಾನದಲ್ಲಿ ಹಸಿರು ಮನೆಯಲ್ಲಿ ದೊಡ್ಡ ಮೆಣಸಿನಕಾಯಿ, ಸೌತೆಕಾಯಿ, ತಿಂಗಳ ಹುರುಳಿ ಮತ್ತು ಟೊಮೆಟೊ ಕೃಷಿ.

* ವಿವಿಧ ಆಕಾರಗಳಲ್ಲಿ ಪಡವಲಕಾಯಿ, ಸೋರೆಕಾಯಿ ಮತ್ತು ಹೀರೆಕಾಯಿ ಬೆಳೆಯುವುದು ಹೇಗೆ?

* ಸಂರಕ್ಷಿತ ಬೇಸಾಯ ವಿಭಾಗದಲ್ಲಿ ಹನಿ ನೀರಾವರಿ ಮೂಲಕವೇ ರಸಾವರಿ ಪೂರೈಸಿ, ಭತ್ತ ಬೆಳೆಯುವ ಪ್ರಾತ್ಯಕ್ಷಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.