ADVERTISEMENT

ಹಿಪ್ಪುನೇರಳೆಗೆ ನುಸಿ ರೋಗ ಕೀಟ ಬಾಧೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST
ನುಸಿ ರೋಗಕ್ಕೆ ತುತ್ತಾಗಿರುವ ರೇಷ್ಮೆ ಗಿಡ
ನುಸಿ ರೋಗಕ್ಕೆ ತುತ್ತಾಗಿರುವ ರೇಷ್ಮೆ ಗಿಡ   

ರಾಮನಗರ: ಹಿಪ್ಪುನೇರಳೆ ಗಿಡದ ಕುಡಿಗಳಿಗೆ ನುಸಿ ರೋಗ ಮತ್ತು ಕೀಟ ಬಾಧೆಗೆ ಪರಿಹಾರ ಕಂಡುಕೊಡುವಲ್ಲಿ ರೇಷ್ಮೆ ಇಲಾಖೆ ವಿಫಲವಾಗಿದೆ.

ಜಿಲ್ಲೆಯಲ್ಲಿ ರೇಷ್ಮೆ ಬೆಳೆದು ಜೀವನ ಸಾಗಿಸುವ ಸಾವಿರಾರು ಸಂಖ್ಯೆಯ ರೈತರಿದ್ದು, ಒಂದು ವರ್ಷದಿಂದಲೂ ಬಹುತೇಕ ತೋಟಗಳಲ್ಲಿ ರೇಷ್ಮೆ ಗಿಡಗಳ ಚಿಗುರು (ಕುಡಿ) ಮುದುರಿದಂತೆ ಆಗಿ ಸೊಪ್ಪು ಗುಣ ಮಟ್ಟ ಕಳೆದುಕೊಳ್ಳುತ್ತಿದೆ. ಇದು ಇಳುವರಿ ಮೇಲೆ ಪರಿಣಾಮವನ್ನು ಬೀರುತ್ತಿದೆ.

ವಾಸ್ತವವಾಗಿ ಒಂದು ಎಕರೆ ರೋಗ ರಹಿತ ರೇಷ್ಮೆ ತೋಟದಲ್ಲಿ ಸುಮಾರು 125 ರಿಂದ 150 ರೇಷ್ಮೆ ಮೊಟ್ಟೆಗಳನ್ನು ಮೇಯಿಸಿ ರೇಷ್ಮೆ ಗೂಡು ಇಳುವರಿ ತೆಗೆಯಬಹುದಾಗಿದೆ. ಇದೀಗ ಕೆಲವು ದಿನಗಳಿಂದ ನುಸಿ ರೋಗಕ್ಕೆ ತುತ್ತಾಗುತ್ತಿವೆ. ಇದರಿಂದ, ಸೊಪ್ಪು ಲಭ್ಯವಾಗದೆ ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ. ಸತ್ವ ರಹಿತವಾದ ಸೊಪ್ಪು ತಿನ್ನದ ರೇಷ್ಮೆ ಹುಳುಗಳಿಂದ ಉತ್ತಮ ಇಳುವರಿಯನ್ನು ಪಡೆಯಲಾಗುತ್ತಿಲ್ಲ. ರೈತರಿಗೆ ಕನಿಷ್ಠ 50-60ರಷ್ಟು ಇಳುವರಿ ಕಡಿಮೆ ಆಗಿ ನಷ್ಟ ಉಂಟಾಗುತ್ತಿದೆ.

ADVERTISEMENT

ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬಹುತೇಕ ಪ್ರದೇಶದಲ್ಲಿ ಹಿಪ್ಪು ನೇರಳೆ ಗಿಡದ ಚಿಗುರುಗಳನ್ನು ತಿನ್ನುವ ಹುಳು ಬಾಧೆ ವ್ಯಾಪಕವಾಗಿ ಕಾಡಿತ್ತು. ಚನ್ನಪಟ್ಟಣ ತಾಲ್ಲೂಕಿನ ಬಹುತೇಕ ಹಿಪ್ಪು ನೇರಳೆ ತೋಟಕ್ಕೆ ಈ ಹುಳುಗಳು ಲಗ್ಗೆ ಇಟ್ಟು, ಗಿಡದ ಚಿಗುರುನ್ನು ತಿಂದು, ಅಲ್ಲಿಯೇ ಹಿಕ್ಕೆಗಳನ್ನು ವಿಸರ್ಜನೆ ಮಾಡುತ್ತಿದ್ದವು. ಇದರಿಂದಾಗಿ ರೇಷ್ಮೆ ಹುಳುಗಳಿಗೆ ಅಗತ್ಯ ಪ್ರಮಾಣದ ಸೊಪ್ಪು ದೊರೆಯದೆ ರೈತರು ಕಂಗಾಲಾಗಿದ್ದರು. ಜತೆಗೆ ಹುಳುಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಿದರೂ, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುವ ಬೀತಿಯೂ ಹೆಚ್ಚಿತ್ತು. ನಂತರ ಈ ಬಾಧೆ ನಿಯಂತ್ರಣಕ್ಕೆ ಬಂದಿತ್ತು.

ಕೆಲವು ತಿಂಗಳ ಹಿಂದೆ ಚನ್ನಪಟ್ಟಣದ ತಾಲ್ಲೂಕಿನ ಕೆಲವು ತೋಟಗಳು ಮತ್ತು ರಾಮನಗರ ತಾಲ್ಲೂಕಿನ ಮದರ್ ಸಾಬರ ದೊಡ್ಡಿ ಗ್ರಾಮದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ವಿಜ್ಞಾನಿಗಳ ತಂಡದೊಂದಿಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲನೆ ನಡೆಸುವ ಜತೆಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಜೈವಿಕ ವಿಧಾನದ ಮೂಲಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನುಸಿ ಪೀಡೆ ಬಂದಾಗ ಫಂಗಸ್ ಮಾದರಿಯ ಜೈವಿಕ ವಿಧಾನವನ್ನು ಕಂಡುಕೊಳ್ಳಲಾಗಿತ್ತು.

ಈ ವಿಧಾನವನ್ನು ರೋಗಪೀಡಿತ ಹಿಪ್ಪು ನೇರಳೆ ತೋಟದ ಮೇಲೆ ಪ್ರಾಯೋಗಿಕವಾಗಿ ಸಿಂಪಡಿಸಿ, ಅದರಲ್ಲಿ ಪಡೆಯುವ ಫಲಿತಾಂಶದ ಮೇಲೆ ಉಳಿದ ತೋಟಗಳ ಮೇಲೆ ಬಳಕೆ ಮಾಡಲು ನಿರ್ಧರಿಸಲಾಗುವುದು ಎಂದಿದ್ದರು. ಆದರೆ, ಈವರೆವಿಗೂ ಇದರ ಪ್ರಯೋಗ ಆಗಲೇ ಇಲ್ಲ. ಪ್ರಯೋಗಕ್ಕೆ ಪ್ರಮುಖವಾಗಿ ಹಣಕಾಸಿನ ತೊಂದರೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಸರ್ಕಾರ ಹಣ ಬಿಡುಗಡೆ ಮಾಡಿದ್ದೇ ಆದರೆ, ಪ್ರಯೋಗ ರೈತರಿಗೆ ವರದಾನವಾಗಲಿದೆ.

ಬೇರೆ ದಾರಿಯೂ ಇಲ್ಲ: ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಜೈವಿಕ ವಿಧಾನವನ್ನು ಇನ್ನೂ ಪ್ರಯೋಗ ಮಾಡದ ಹಿನ್ನೆಲೆಯಲ್ಲಿ ರೇಷ್ಮೆ ಕೃಷಿ ಇಲಾಖೆ ಪರ್ಯಾಯ ಮಾರ್ಗದ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು. ಆದರೆ ರೇಷ್ಮೆ ಇಲಾಖೆಗೆ ಅನುದಾನದ ಕೊರತೆಯಿಂದಾಗಿ ರೈತರಿಗೆ ಔಷಧಿಗಳ ಪೂರೈಕೆಗೂ ವ್ಯತ್ಯಯವಾಗುತ್ತಿದೆ. ಓಮೈಟ್ ಮತ್ತು ಮ್ಯಾಜಿಸ್ಟರ್ ಔಷಧಿಗಳನ್ನು ಈ ರೋಗಕ್ಕೆ ಸಿಂಪಡಣೆ ಮಾಡಬೇಕು ಎಂದು ಹೇಳುವ ಇಲಾಖೆ, ಹಣದ ಕೊರತೆ ನೆಪವೊಡ್ಡಿ ಇದನ್ನು ಪೂರೈಕೆ ಮಾಡುತ್ತಿಲ್ಲ ರೇಷ್ಮೆ ಬೆಳೆಗಾರ ಕೆ. ರವಿ ತಿಳಿಸಿದರು.

ಇದರಿಂದಾಗಿ ರೋಗ ವ್ಯಾಪಕ ರೂಪ ಪಡೆಯುತ್ತಿದ್ದು, ಪ್ರಸ್ತುತ ರೇಷ್ಮೆಗೆ ಉತ್ತಮ ಬೆಲೆ ಇದ್ದರೂ, ರೋಗದಿಂದಾಗಿ ಹೆಚ್ಚು ಇಳುವರಿ ಪಡೆಯಲಾಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೋಗ ಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ, ರೇಷ್ಮೆ ಇಲಾಖೆ ಅಧಿಕಾರಿಗಳಿಂದ ರೋಗ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಮಾರ್ಗವೂ ಇದುವರೆವಿಗೂ ದೊರೆತಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ರೋಗ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಔಷಧಿ ಪೂರೈಕೆಗಾಗಿ ಅನುಧಾನ ಕೋರಲಾಗಿದೆ. ಜೈವಿಕ ವಿಧಾನದ ಪ್ರಯೋಗವೂ ಆಗಬೇಕಿದೆ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.