ADVERTISEMENT

ಸಮಗ್ರ ಕೃಷಿ ಪದ್ಧತಿಯೇ ಸಮಸ್ಯೆಗಳಿಗೆ ಪರಿಹಾರ: ದೊಡ್ಡಬಳ್ಳಾಪುರ ರೈತ ಕುಟುಂಬದ ಸಾಧನ

ನಟರಾಜ ನಾಗಸಂದ್ರ
Published 4 ನವೆಂಬರ್ 2019, 19:30 IST
Last Updated 4 ನವೆಂಬರ್ 2019, 19:30 IST
ಮಾರಾಟಕ್ಕೆ ಸಿದ್ಧವಾಗಿರುವ ಸೀಬೆಕಾಯಿಯೊಂದಿಗೆ ಮಂಜುಳ
ಮಾರಾಟಕ್ಕೆ ಸಿದ್ಧವಾಗಿರುವ ಸೀಬೆಕಾಯಿಯೊಂದಿಗೆ ಮಂಜುಳ   

ಸಮಗ್ರ ಕೃಷಿ ಪದ್ಧತಿ ಅಳವಡಿಕೆ, ಬೆಳೆ ವೈವಿಧ್ಯ ಮತ್ತು ಜಲಸಂರಕ್ಷಣೆಗೆ ಆದ್ಯತೆ ನೀಡಿರುವ ಹುಸ್ಕೂರು ಗ್ರಾಮದ ಮಂಜುಳ ಅವರಿಗೆ ಈ ಸಾಲಿನ ‘ರಾಜ್ಯಮಟ್ಟದ ‘ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

‘ಜಮೀನಿನಲ್ಲಿ ಮಿಶ್ರ ಬೆಳೆ ಇರಬೇಕು. ವರ್ಷ ಪೂರ್ತಿ ಫಸಲು ಕೊಡುವಂತಹ ಬೆಳೆಗಳನ್ನು ಬೆಳೆಯಬೇಕು. ನಾವೇ ಜಮೀನಿನ ಕೆಲಸಕ್ಕೆ ನಿಲ್ಲಬೇಕು. ಜತೆಗೆ, ಸಹಕಾರ ತತ್ವವನ್ನು ಅನುಸರಿಸ ಬೇಕು. ಇದರಿಂದ ಕಾರ್ಮಿಕರ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಆದಾಯ ಸುಧಾರಣೆಗೂ ಸಾಧ್ಯವಾಗುತ್ತದೆ’–

ಹುಸ್ಕೂರಿನ ರೈತ ಮಹಿಳೆ ಪಿ. ಮಂಜುಳ, ತಾವು ಕೃಷಿಯಲ್ಲಿ ಅನುಸರಿಸುತ್ತಿರುವ ಹಾಗೂ ಜಮೀನಿನಲ್ಲಿ ಅಳವಡಿಸಿ ಕೊಂಡಿರುವ ಸಮಗ್ರ ಕೃಷಿ ಪದ್ಧತಿಯ ವಿಧಾನಗಳನ್ನು ಹೀಗೆ ವಿವರಿಸುತ್ತಾ ಹೊರಟರು.

ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಸ್ಕೂರು ಗ್ರಾಮದ ಮಂಜುಳ – ಚಿಕ್ಕ ಅಂಜಿನಪ್ಪ ದಂಪತಿಗೆ ಆರು ಎಕರೆ ಜಮೀನಿದೆ. ಒಂದು ಎಕರೆಯಲ್ಲಿ ಏಲಕ್ಕಿ ಬಾಳೆ ನಾಟಿ ಮಾಡಿದ್ದು, ಈಗಷ್ಟೇ ಗೊನೆಗಳು ಬಂದಿವೆ. ಇದೇ ಪ್ರಥಮ ಕೊಯ್ಲು. ಎರಡು ಎಕರೆಯಲ್ಲಿ ಸೀಬೆ (ಪೇರಲ) ಇದೆ. ಜತೆಗೆ ಮನೆಗೆ ಬೇಕಾಗುವಷ್ಟು ರಾಗಿ, ತೊಗರಿ, ತರಕಾರಿ ಬೆಳೆದುಕೊಳ್ಳುತ್ತಾರೆ. ಬೆಳೆ ವೈವಿಧ್ಯದ ಜತೆಗೆ, ಹೈನುಗಾರಿಕೆಯೂ ಇದೆ. ಒಟ್ಟಾರೆ ಇವರದ್ದು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜಮೀನು.

ರಾಗಿ ಕೊಯ್ಲು, ತರಕಾರಿ ಸಸಿಗಳ ನಾಟಿ ಸಂದರ್ಭದಲ್ಲಿ ಮಾತ್ರ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಅದು ಮುಯ್ಯಾಳು ರೀತಿ. ಇವರೊಂದಿಗೆ ಎರಡು ಮೂರು ಕುಟುಂಬಗಳು ಅಗತ್ಯವಿದ್ದಾಗ ತೋಟದಲ್ಲಿ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಇವರು ಕೂಡ, ಅವರ ತೋಟದ ಕೆಲಸದಲ್ಲಿ ನೆರವಾಗುತ್ತಾರೆ. ‘ತೋಟದಲ್ಲಿ ಬಂದು ಕೆಲಸ ಮಾಡುವವರಿಗೆ ಕೂಲಿ ಕೊಡುವುದಿಲ್ಲ. ಇದೊಂದು ರೀತಿ ಸಹಕಾರಿ ತತ್ವ. ಈ ಹಿಂದೆ ಇದ್ದ ಮುಯ್ಯಾಳು ಪದ್ಧತಿಯ ಹಾಗೆ’ ಎನ್ನುತ್ತಾರೆ ಮಂಜುಳ.

ಹೈನು, ಗೊಬ್ಬರ, ಮೇವು

ಹೈನು ಮತ್ತು ಗೊಬ್ಬರಕ್ಕಾಗಿ ಮೂರು ಹಸುಗಳನ್ನು ಸಾಕಿದ್ದಾರೆ. ಜಾನುವಾರುಗಳಿಗೆ ಬೇಕಾದ ಮೇವನ್ನು ತೋಟದ ಸುತ್ತಲಿನ ಬೇಲಿಯಲ್ಲಿ ಬೆಳೆದುಕೊಳ್ಳುತ್ತಾರೆ. ಬೇಲಿಯಲ್ಲಿರುವ ಮರಗಳು ಮೇವನ್ನೂ ನೀಡುತ್ತವೆ. ಹಸಿರೆಲೆ ಗೊಬ್ಬರಕ್ಕೆ ಎಲೆಗಳನ್ನೂ ಪೂರೈಸುತ್ತವೆ. ಹೀಗಾಗಿ, ಇವರ ತೋಟದ ಹಸಿರು ಬೇಲಿ, ತೋಟಕ್ಕೆ ರಕ್ಷಣೆಯೂ ಆಯಿತು. ಮೇವು, ಗೊಬ್ಬರಕ್ಕಾಗಿ ಖರ್ಚಾಗುತ್ತಿದ್ದ ಹಣವನ್ನು ಮಿಗಿಸಿದೆ.

ಜಲಸಂರಕ್ಷಣೆಗೆ ಆದ್ಯತೆ

ಬೆಳೆ ವಿನ್ಯಾಸಕ್ಕೆ ತಕ್ಕಂತೆ ಜಲ ಸಂರಕ್ಷಣೆಗೂ ಆದ್ಯತೆ ನೀಡಿದ್ದಾರೆ ಮಂಜುಳ. ತೋಟದ ಸುತ್ತಾ ಬದುಗಳನ್ನು ಹಾಕಿಸಿದ್ದಾರೆ. ಜಮೀನಿನ ಮೇಲೆ ಸುರಿಯುವ ಹನಿ ಹನಿ ಮಳೆ ನೀರು ಬಿದ್ದಲ್ಲೇ ಇಂಗುವಂತೆ ಬದುಗಳ ವ್ಯವಸ್ಥೆ ಮಾಡಿದ್ದಾರೆ. ನೀರಿನ ಮಿತಬಳಕೆಗಾಗಿಯೇ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಬೆಳೆಗಳಿಗೆ ಪೂರೈಸಿದ ನೀರು ಆವಿಯಾಗದಂತೆ ತಡೆಯಲು ಬೆಳೆ ಮುಚ್ಚಿಗೆ ಮಾಡಿದ್ದಾರೆ. ‘ಮಳೆ ನೀರು ಇಂಗಿಸುವುದು ಮತ್ತು ಬೆಳೆಗೆ ಅಗತ್ಯವಿದ್ದಷ್ಟು ಮಾತ್ರ ನೀರು ಪೂರೈಸುವುದು’– ಹೀಗೆ ಮಾಡುವುದರಿಂದ ಭೂಮಿಯಲ್ಲಿ ನಿಖರವಾಗಿ ಬೆಳೆ ಬೆಳೆಯಲು ಸಾಧ್ಯ ಎನ್ನುವುದು ಮಂಜುಳ ಅವರ ಅಭಿಪ್ರಾಯ.

ಮಂಜುಳ ಓದಿದ್ದು ದ್ವಿತೀಯ ಪಿಯುಸಿವರೆಗೆ. ಆದರೂ ಈ ಪತಿ–ಪತ್ನಿಯರಿಗೆ ಗೊಬ್ಬರ ಬಳಕೆ ಮತ್ತು ಮಣ್ಣಿನಲ್ಲಿನ ಪೋಷಕಾಂಶ ಕಾಪಾಡುವುದು, ಯಾವ ಬೆಳೆಗೆ ಎಷ್ಟು ಗೊಬ್ಬರ ಕೊಡಬೇಕು ಎಂಬುದರ ಬಗ್ಗೆ ಸಾಕಷ್ಟು ವೈಜ್ಞಾನಿಕ ಜ್ಞಾನವಿದೆ. ‘ನಾವು ಸಾವಯವ ಮತ್ತು ರಾಸಾಯನಿಕ ಮಿಶ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಜಮೀನನ್ನೂ ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿಗೆ ಬದಲಿಸಬೇಕು ಎಂಬ ಆಸಕ್ತಿಯೂ ಇದೆ. ಈ ದಿಸೆಯಲ್ಲಿ ಪ್ರಾಯೋಗಿಕವಾಗಿ ಕೆಲಸಗಳು ಆರಂಭವಾಗಿವೆ’ ಎನ್ನುತ್ತಾರೆ ಮಂಜುಳ.

ಆರು ತಿಂಗಳಿಗೊಮ್ಮೆ ಸೀಬೆ

ನಾಲ್ಕು ವರ್ಷಗಳಿಂದ ಎರಡು ಎಕರೆಯಲ್ಲಿ ತೈವಾನ್ರೆಡ್ ತಳಿಯ ಸೀಬೆಯನ್ನು ಬೆಳೆಯುತ್ತಿದ್ದಾರೆ, ಆರು ತಿಂಗಳಿಗೊಮ್ಮೆ ಸುಮಾರು 9 ಟನ್ನಷ್ಟು ಸೀಬೆಹಣ್ಣು ಮಾರಾಟ ಮಾಡುತ್ತಾರೆ. ಮಿತವಾಗಿ ಗೊಬ್ಬರ ಬಳಸುವುದರಿಂದ, ಹಣ್ಣಿನ ಗುಣಮಟ್ಟ ಚೆನ್ನಾಗಿದೆ. ಹೀಗಾಗಿ, ವ್ಯಾಪಾರಿಗಳು ಹುಡುಕಿಕೊಂಡು ತೋಟಕ್ಕೇ ಬಂದು ಹಣ್ಣು ಖರೀದಿಸುತ್ತಾರೆ. ಏಲಕ್ಕಿ ಬಾಳೆಗೂ ಬೇಡಿಕೆ ಇದೆ. ಹೀಗಾಗಿ, ಇವರಿಗೆ ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಪ್ರಮೇಯವೇ ಬಂದಿಲ್ಲ.
ಸಮಗ್ರ ಕೃಷಿ ಪದ್ಧತಿಯಲ್ಲಿ ಸ್ವಲ್ಪ ಸಕಾರಾತ್ಮಕ ಬೆಳವಣಿಗೆಗಳನ್ನು ಕಂಡಿರುವ ದಂಪತಿ ಈಗ ಅರಣ್ಯ ಆಧಾರಿತ ಕೃಷಿ ಪದ್ಧತಿಯ ಕಡೆಗೆ ಒಲವು ತೋರಿದ್ದಾರೆ. ಈಗ ತೋಟದಲ್ಲಿ ಸೀಬೆ, ಬಾಳೆ ಜತೆಗೆ, ಹಲಸು, ಮಾವನ್ನೂ ನಾಟಿ ಮಾಡಿದ್ದಾರೆ. ಎರಡು ಕೊಳವೆಬಾವಿಗಳಿದ್ದರೂ, ಮಳೆ ನೀರು ಸಂಗ್ರಹಕ್ಕಾಗಿ ಒಂದು ಕೃಷಿಹೊಂಡ ಮಾಡಿಕೊಂಡು ಹೊಂಡದ ನೀರಿನಲ್ಲಿ ಮೀನು ಸಾಕಿದ್ದಾರೆ.

ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ

ಸೀಬೆ, ಬಾಳೆಯೊಂದಿಗೆ ಪಪ್ಪಾಯಿ, ಹೀರೆಕಾಯಿ, ವಿದೇಶಗಳಲ್ಲೂ ಬೇಡಿಕೆ ಇರುವ ಜಾಲಪೇನ್ ಮೆಣಸಿನ ಕಾಯಿ, ಸೋರೆಕಾಯಿ, ಸಿಹಿ ಕುಂಬಳವನ್ನು ಬೆಳೆದಿದ್ದಾರೆ. ಎಲ್ಲವನ್ನೂ ಋತುಮಾನ ಆಧಾರಿತವಾಗಿ ಹಾಗೂ ಕೆಲಸದ ಹೊಂದಾಣಿಕೆ ಮಾಡಿಕೊಂಡು ಬೆಳೆಯುತ್ತಾರೆ.
ಉತ್ತಮ ಬೆಳೆವಿನ್ಯಾಸ, ಸಮಗ್ರ ಕೃಷಿ ಪದ್ಧತಿ ಜತೆಗೆ ಹೈನುಗಾರಿಕೆ, ಮೀನುಗಾರಿಕೆಯಂತಹ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಮಂಜುಳ ಅವರಿಗೆ ಪ್ರಸಕ್ತ ಸಾಲಿನ ಕೆನರಾಬ್ಯಾಂಕ್ ಪ್ರಾಯೋಜಿತ ರಾಜ್ಯಮಟ್ಟದ ‘ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಮಂಜುಳ ಅವರ ಸಂಪರ್ಕ ಸಂಖ್ಯೆ: 8217620901

(ಚಿತ್ರಗಳು : ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.