ADVERTISEMENT

ಅಣಬೆ: ಎಲ್ಲಿಯಾದರೂ ಬೆಳೆಯಿರಿ, ಹಣ ಗಳಿಸಿ !

ಅಣಬೆ ಬೆಳೆಯಲು ಹೊರಾಂಗಣ ಕೊಠಡಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 19:54 IST
Last Updated 8 ಫೆಬ್ರುವರಿ 2021, 19:54 IST
ಅಣಬೆ
ಅಣಬೆ   

ಬೆಂಗಳೂರು: ಸ್ವ ಉದ್ಯೋಗಗಳ ಪೈಕಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ ಕೃಷಿ ಪ್ರಕಾರ ಅಣಬೆ ಬೇಸಾಯ. ಪೌಷ್ಟಿಕಾಂಶ ಮತ್ತು ಜೀವಸತ್ವಗಳು ಹೇರಳವಾಗಿರುವ ಅಣಬೆ ಮಧುಮೇಹದಿಂದ ಬಳಲುತ್ತಿರುವವರಿಗೂ ಉತ್ತಮ ಆಹಾರ.

ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ಅವಶ್ಯವಿದೆ. ಆದಕಾರಣ ಭತ್ತದ ಹುಲ್ಲು ಲಭ್ಯವಿರುವಂತ ಜಲಾನಯನ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡು/ಅರೆಮಲೆನಾಡು ಪ್ರದೇಶಗಳಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು. ಈಗ, ಈ ಅಣಬೆ ಕೃಷಿಯನ್ನು ಯಾವುದೇ ಪ್ರದೇಶದಲ್ಲಾದರೂ ಬೆಳೆಯಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ತೋಟಗಾರಿಕೆ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ರೂಪಿಸಿದ್ದಾರೆ.

‘ಅಣಬೆ ಬೆಳೆಯಲು ಹೊರಾಂಗಣ ಕೊಠಡಿಯೊಂದನ್ನು ರೂಪಿಸಲಾಗಿದೆ. ತಲಾ 2
ಮೀಟರ್ ಉದ್ದ, ಅಗಲ ಮತ್ತು ಎತ್ತರದಲ್ಲಿ ಇದನ್ನು ನಿರ್ಮಿಸಬಹುದು. ಅಣಬೆ ಬೀಜಗಳನ್ನು ಈ ಕೊಠಡಿಯಲ್ಲಿ ಇಡಬೇಕು. ಅವು ಬೆಳೆಯುವ ಸಮಯದಲ್ಲಿ ನೈಲಾನ್ ನೆಟ್‌ ಹಾಕಿ, ಗೋಣಿ ಚೀಲದೊಳಗೆ ಇಡಬೇಕು. ಆಗಾಗ ನೇರವಾಗಿ ನೀರು ಹಾಕಬಹುದು ಅಥವಾ ಸೋಲಾರ್ ಸೆನ್ಸರ್‌ ಅಳವಡಿಸಿರುವುದರಿಂದ ಸ್ವಯಂಚಾಲಿತವಾಗಿ ನೀರು ಸಿಂಪಡಿಸುವ ವ್ಯವಸ್ಥೆಯನ್ನೂ ಇದರಲ್ಲಿ ಅಳವಡಿಸಲಾಗಿದೆ’ ಎಂದು ಐಐಎಚ್‌ಆರ್‌ ಮುಖ್ಯವಿಜ್ಞಾನಿ ಜಿ. ಸೆಂಥಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಕೊಠಡಿಯಲ್ಲಿ ನೈಸರ್ಗಿಕವಾಗಿ ಇರುವಂತಹ ವಾತಾವರಣವೇ ಸೃಷ್ಟಿಯಾಗಿರುವುದರಿಂದ ಅಣಬೆ ಚೆನ್ನಾಗಿ ಬೆಳೆಯುತ್ತದೆ. ಒಂದು ವಾರದಿಂದ ಹತ್ತು ದಿನಗಳಲ್ಲಿ ಅಣಬೆ ಬೆಳೆಯಲು ಪ್ರಾರಂಭವಾಗುತ್ತದೆ. ಯಾವುದೇ ಪ್ರದೇಶದಲ್ಲಿ ಅಥವಾ ತಾರಸಿ, ಬಾಲ್ಕನಿಯಲ್ಲಿಯೂ ಇದನ್ನು ಇಟ್ಟು ಬೆಳೆಯಬಹುದು. ನಿರ್ವಹಣೆಗೂ ಹೆಚ್ಚು ಸಮಯಬೇಕಿಲ್ಲ. ಒಂದು ತಾಸು ವ್ಯಯಿಸಿದರೂ ಸಾಕು’ ಎಂದು ಅವರು ಹೇಳಿದರು.

‘ಕೆಜಿಗೆ ₹150ರಿಂದ ₹200ವರೆಗೆ ಅಣಬೆ ಮಾರಾಟ ಮಾಡಬಹುದು. ಬೇಡಿಕೆ ನೋಡಿಕೊಂಡು ಈ ಬೇಸಾಯ ಪದ್ಧತಿಯನ್ನು ಸ್ವಉದ್ಯೋಗದಂತೆ ಪ್ರಾರಂಭಿಸಬೇಕು. ಈ ಹೊರಾಂಗಣ ಕೊಠಡಿ ಅಳವಡಿಸಿಕೊಳ್ಳಲು ₹65 ಸಾವಿರ ಖರ್ಚಾಗುತ್ತದೆ’ ಎಂದರು.

‘ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಬೀದರ್ ನಲ್ಲಿ ನಮ್ಮ ಸಂಸ್ಥೆಯ ಸಂಸ್ಥೆಗಳಲ್ಲಿ ಈ ಕುರಿತು ತರಬೇತಿ ನೀಡಲಾಗುತ್ತದೆ. ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳಿಗೂ ಈ ಕುರಿತು ತರಬೇತಿ ನೀಡಿದ್ದೇವೆ. ಆಸಕ್ತ ರೈತರು, ಸಾರ್ವಜನಿಕರಿಗೂ ತರಬೇತಿ ನೀಡುತ್ತೇವೆ. ಐದು ದಿನಗಳ ತರಬೇತಿಗೆ ₹7000 ಶುಲ್ಕ ಕಟ್ಟಬೇಕಾಗುತ್ತದೆ. ವಸತಿ ಮತ್ತು ಊಟದ ಶುಲ್ಕವೂ ಇದರಲ್ಲಿ ಸೇರಿದೆ. ಸದ್ಯ ಆನ್‌ಲೈನ್‌ ತರಬೇತಿ ಮಾತ್ರ ನಡೆಯುತ್ತಿದ್ದು, ತರಬೇತಿ ಬಯಸುವವರು ₹3000 ಶುಲ್ಕ ಕಟ್ಟಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಮಾಹಿತಿಗೆ, 94494–92857.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.