ADVERTISEMENT

‘ದೀವಿ’ ಸೋದರ ನೀರ್ಗುಜ್ಜೆ

ನಾ.ಕಾರಂತ ಪೆರಾಜೆ
Published 28 ಅಕ್ಟೋಬರ್ 2019, 19:30 IST
Last Updated 28 ಅಕ್ಟೋಬರ್ 2019, 19:30 IST
ನೀರ್ಗುಜ್ಜೆ
ನೀರ್ಗುಜ್ಜೆ   

‘ಮೊನ್ನೆಯ ಮಳೆಯಿಂದಾಗಿ ಈ ಬಾರಿ ನೀರ್ಗುಜ್ಜೆಯ ಎಳೆ ಕಾಯಿಗಳು ಮಹಾಳಿ ರೋಗದಿಂದ ಉದುರಿ ಬಿದ್ದಿವೆ. ಇಳುವರಿ ನಿರೀಕ್ಷಿಸುವಂತಿಲ್ಲ. ನೀರ್ಗುಜ್ಜೆ ಮರಕ್ಕೂ ರೋಗ ಬಾಧಿಸುತ್ತದೆ ಎಂದು ತಿಳಿದಿರಲಿಲ್ಲ’ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಮುಳಿಯ ವೆಂಕಟಕೃಷ್ಣ ಶರ್ಮ ವಿಷಾದಿಸಿದರು.

ಏನಿದು ನೀರ್ಗುಜ್ಜೆ? ಪ್ರಾದೇಶಿಕವಾಗಿ ‘ನೀರ್‍ಕುಜುವೆ, ನೀರ್‍ಹಲಸು, ಹೆಂಬ ಹಲಸು’ ಎನ್ನುವ ಹೆಸರು. ದೀವಿ ಹಲಸಿನ ಗಾತ್ರ. ಒಂದರ್ಥದಲ್ಲಿ ದೀವಿಯ ಸೋದರ ಎನ್ನಬಹುದೇನೋ. ಸುಮಾರು ಹಲಸಿನ ಎಳೆ ಕಾಯಿ (ಗುಜ್ಜೆ)ಯನ್ನು ಹೋಲುತ್ತದೆ. ಹಲಸಿನ ಬಳಿಕ ದೀವಿಹಲಸಿನ ಸೀಸನ್. ದೀವಿ ಹಲಸು ಮುಗಿದ ಬಳಿಕ ನೀರ್ಗುಜ್ಜೆಯ ಋತು.

ನೀರ್ಗುಜ್ಜೆ ಅಪರೂಪ. ಹಿತ್ತಿಲಲ್ಲಿದ್ದರೂ ತರಕಾರಿಯಂತೆ ಬಳಕೆಗೆ ಯೋಗ್ಯವೆಂದು ಬಹುತೇಕರಿಗೆ ಅರಿಯದು. ಪದಾರ್ಥ ಮಾಡಿದಾಗ ಎಳೆಯ ಹೋಳುಗಳಿಗೆ ಎಳೆ ಹಲಸಿನ ಗುಜ್ಜೆಯದೇ ರುಚಿ, ಸ್ವಾದ. ಬೀಜದಿಂದ ಸಸ್ಯಾಭಿವೃದ್ಧಿ. ಹೂವಾಗಿ ಕಾಯಿ ಬಿಟ್ಟ ಒಂದು ತಿಂಗಳ ನಂತರ, ಎರಡು ತಿಂಗಳ ಒಳಗೆ ಬೆಳೆದ ಎಳೆಕಾಯಿ ಬಳಕೆಗೆ ಸೂಕ್ತ. ಬಲಿತರೆ ಹೇಳುವಂತಹ ರುಚಿಯಿಲ್ಲ. ಬಳಸುವುದೂ ಇಲ್ಲ.

ADVERTISEMENT

ಒಂದೊಂದು ಗೆಲ್ಲುಗಳ ತುದಿಯಲ್ಲಿ ಎರಡರಿಂದ ಮೂರು ಕಾಯಿಗಳು. ಉತ್ತಮ ನೀರಿರುವ ಜಾಗದಲ್ಲಿ ಫಸಲು ಜಾಸ್ತಿ. ಬಹುವಾರ್ಷಿಕ ಇಳುವರಿ. ನೀರ್ಗುಜ್ಜೆಯ ಹೊರಮೈಯಲ್ಲಿ ದೊಡ್ಡದಾದ ಮುಳ್ಳುಗಳಿವೆ. ಹಲಸಿನ ಹೊರಮೈಯ ಮುಳ್ಳುಗಳಿಗಿಂತ ದೊಡ್ಡದು. ಮುಳ್ಳುಗಳಿಂದಾಗಿ ಬಾವಲಿಗಳು ಈ ಕಾಯಿಯ ಸಮೀಪ ಬರುವುದಿಲ್ಲ.

ಗಿಡ ನೆಟ್ಟು ಐದು ವರ್ಷಗಳಲ್ಲೇ ಕಾಯಿ ಹಿಡಿಯಲು ಆರಂಭ. ಮೊದಮೊದಲು ಗಂಡು ಹೂ–ಗಳ ಸಂಖ್ಯೆ ಅಧಿಕವಾದಂತೆ ತೋರುತ್ತದೆ. ವರ್ಷ ಸರಿದಂತೆ ಸರಿಹೋಗುತ್ತದೆ. ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿದ್ದರೆ ಗಿಡವು ಪುಷ್ಟಿಯಾಗಿ ಬೆಳೆಯುತ್ತದೆ. ತೀರಾ ನೆರಳಿನಲ್ಲಿ ಸಾಮಾನ್ಯ ಬೆಳವಣಿಗೆ. ನೀರ್ಗುಜ್ಜೆಯ ಎಲೆಯು ದೀವಿ ಹಲಸಿನ ಎಲೆಯನ್ನು ಹೋಲುತ್ತದೆ. ಒಂದೊಂದು ಕಾಯಿಯ ತೂಕ ಅರ್ಧದಿಂದ ಒಂದೂವರೆ ಕೆ.ಜಿ.

ಆಗಸ್ಟ್ ಕೊನೆಗೆ ದೀವಿ ಹಲಸಿನ ಋತು ಮುಗಿಯುತ್ತದೆ. ಆ ಬಳಿಕ ನೀರ್ಗುಜ್ಜೆಯ ಸರದಿ. ವರ್ಷಕ್ಕೆ ಎರಡು-ಮೂರು ಸಲ ಇಳುವರಿ ಬರುತ್ತದೆ. ಹಲಸಿನ ಗುಜ್ಜೆ, ದೀವಿಹಲಸು, ನೀರ್ಗುಜ್ಜೆ.. ಹೀಗೆ ವರ್ಷ ಪೂರ್ತಿ ಹಲಸಿನದ್ದೇ ನೆನಪು! ಒಂದು ಕಾಯಲ್ಲಿ ಸುಮಾರು ಮೂವತ್ತೈದರಿಂದ ನಲವತ್ತು ಚಿಕ್ಕ ಬೀಜಗಳಿವೆ. ‘ನೀರ್ಗುಜ್ಜೆಯ ಹೊರ ಸಿಪ್ಪೆಯನ್ನು ಕೆತ್ತಿ ಅದನ್ನು ಎರಡಾಗಿ ಭಾಗ ಮಾಡಿ ನೀರಿನಲ್ಲಿ ಅದ್ದಿಡಿ. ಅದರಲ್ಲಿರುವ ಹಾಲಿನಂತಹ ಮೇಣ ತೊಳೆದು ಹೋಗುತ್ತದೆ. ಇದನ್ನು ಹೋಳುಗಳನ್ನಾಗಿ ಮಾಡಿ, ಅರ್ಧ ಗಂಟೆ ಮಜ್ಜಿಗೆಯಲ್ಲಿ ನೆನೆ ಹಾಕಿದರೆ ಹೋಳುಗಳಲ್ಲಿರುವ ಚೊಗರು ಬಿಟ್ಟುಕೊಡುತ್ತದೆ. ನಂತರ ಹೋಳುಗಳನ್ನು ಪದಾರ್ಥ ಮಾಡಲು ಬಳಸಬಹುದು. ಒಳ್ಳೆಯ ರುಚಿ. ನಾವು ಪಲ್ಯ, ಗಸಿ, ಸಾಂಬಾರು, ಕಾಯಿಹುಳಿ ಮಾಡುತ್ತೇವೆ’ ಎನ್ನುತ್ತಾರೆ ಶರ್ಮ.

ಹತ್ತು ವರ್ಷದ ನಂತರ ಒಂದು ಮರವು 50 ರಿಮದ 100 ಕಾಯಿಗಳವರೆಗೆ ಇಳುವರಿ ನೀಡುತ್ತದೆ. ಮರ ವಿಶಾಲವಾಗಿ, ಅತಿ ಎತ್ತರವಾಗಿ ಬೆಳೆಯುತ್ತದೆ. ನಿತ್ಯ ಹಸುರಿನ ಮರ. ನೀರ್ಗುಜ್ಜೆಯನ್ನು ಉತ್ತರ ಕನ್ನಡ ಪ್ರದೇಶಗಳ ಕೆಲವು ಅಂಗಡಿಗಳಲ್ಲಿ ಮಾರಾಟಕ್ಕಿದೆಯಂತೆ. ಕಾರವಾರ ಮಾರುಕಟ್ಟೆಯಲ್ಲಿ ಕೆ.ಜಿಗೆ ₹50 ರಿಂದ ₹60 ಬೆಲೆ ಇರುತ್ತದೆ ಎಂದು ತರಕಾರಿ ಪ್ರಿಯರು ನೆನಪಿಸಿಕೊಳ್ಳುತ್ತಾರೆ. ಅದನ್ನೊಂದು ತರಕಾರಿ ಅಂತ ಸ್ವೀಕರಿಸಿದರೆ ದೀವಿ ಹಲಸಿನಂತೆಯೇ ಗ್ರಾಹಕರು ರೂಪುಗೊಳ್ಳಬಹುದು.

‘ನಮ್ಮಲ್ಲಿ ಮನೆ ಬಳಕೆಗೆ ಮೀರಿದ್ದು ಆತ್ಮೀಯರಿಗೆ, ಸ್ನೇಹಿತರಿಗೆ ನೀಡುತ್ತೇನೆ. ಕೇಳಿದವರಿಗೆ ಗಿಡ ಮಾಡಿ ಕೊಟ್ಟದ್ದುಂಟು. ಇದು ನಿರ್ಲಕ್ಷ್ಯಕ್ಕೆ ಒಳಗಾದ ತರಕಾರಿ’ ಎಂದು ನೀರ್ಗುಜ್ಜೆಯ ನಂಟನ್ನು ವಿ.ಕೆ.ಶರ್ಮರಿಗೆ ಹೇಳಿದಷ್ಟೂ ತೃಪ್ತಿಯಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.