ADVERTISEMENT

ಸಾವಯವ ಕೃಷಿ: ನ.23ರಿಂದ ಆನ್‌ಲೈನ್‌ ತರಬೇತಿ

ಮೂರು ತಿಂಗಳ ಅವಧಿಯಲ್ಲಿನ ಪ್ರತಿ ಸೋಮವಾರವೂ ಒಂದೊಂದು ವಿಷಯದಲ್ಲಿ ರೈತರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 11:24 IST
Last Updated 20 ನವೆಂಬರ್ 2020, 11:24 IST
ಸಾವಯವ ಕೃಷಿ-ಸಾಂದರ್ಭಿಕ ಚಿತ್ರ
ಸಾವಯವ ಕೃಷಿ-ಸಾಂದರ್ಭಿಕ ಚಿತ್ರ   

ಮೈಸೂರು: ‘ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ’ ಕುರಿತಂತೆ ನ.23ರಿಂದ ಮೂರು ತಿಂಗಳ ಅವಧಿಯಲ್ಲಿನ ಪ್ರತಿ ಸೋಮವಾರವೂ ಕೃಷಿ ಸಂವಹನ ವೇದಿಕೆಯು, ರೈತ ಸಮೂಹಕ್ಕೆ ಆನ್‌ಲೈನ್‌ ತರಬೇತಿ ನೀಡಲಿದೆ ಎಂದು ಕೃಷಿ ಇಲಾಖೆಯ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ಶುಕ್ರವಾರ ಇಲ್ಲಿ ತಿಳಿಸಿದರು.

ನಾಗನಹಳ್ಳಿಯ ಕೃಷಿ ತರಬೇತಿ ಕೇಂದ್ರ, ಮೈಸೂರು ವಿಭಾಗದ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ, ಸುತ್ತೂರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಫಿನಿಕ್ಸ್ ಅಕಾಡೆಮಿ ಒಟ್ಟಾಗಿ ಕೃಷಿ ಸಂವಹನ ವೇದಿಕೆ ಆರಂಭಿಸಿದ್ದು, ಲಾಕ್‌ಡೌನ್ ಅವಧಿಯಿಂದಲೂ ರೈತರಿಗೆ ಆನ್‌ಲೈನ್‌ ತರಬೇತಿ ನೀಡುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಾವಯವ ಕೃಷಿಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ರೈತರು ಸಮಗ್ರವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಕೃಷಿ ನಡೆಸಲು ಅನುಕೂಲವಾಗುವಂತೆ 12 ಸರಣಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂಮ್‌ ಮೀಟಿಂಗ್ ಆ್ಯಪ್ ಮೂಲಕ ತರಬೇತಿ ನಡೆಯಲಿದ್ದು https:/us02web.zoom.us/j/86287988697 ಲಿಂಕ್ ಮೂಲಕ ತರಬೇತಿಯಲ್ಲಿ ಭಾಗವಹಿಸಬಹುದು. ಇದರೊಟ್ಟಿಗೆ ಕೃಷಿ ಸಂವಾದ ವೇದಿಕೆಯ ಫೇಸ್‌ಬುಕ್ ಪೇಜ್‌ನಲ್ಲೂ ಲೈವ್ ವೀಕ್ಷಿಸಬಹುದು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನ.23ರ ಸೋಮವಾರ ಬೆಳಿಗ್ಗೆ 11ಕ್ಕೆ ಜೂಮ್ ಮೀಟಿಂಗ್‌ನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ ಆನ್‌ಲೈನ್‌ ತರಬೇತಿ ಶಿಬಿರ ಉದ್ಘಾಟಿಸಲಿದ್ದಾರೆ. ಸಿಇಒ ಡಿ.ಭಾರತಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸನದ ಕೃಷಿ ಮಹಾವಿದ್ಯಾಲಯದ ಡೀನ್ ದೇವಕುಮಾರ್ ಸರಣಿ ತರಬೇತಿ ಕಾರ್ಯಕ್ರಮದ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ ಆತ್ಮ ಯೋಜನೆಯಡಿ ಐದು ವಿಭಾಗದಲ್ಲಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ 35 ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾವಯವ ಕೃಷಿ ಪದ್ಧತಿಗಳ ಕುರಿತಂತೆ ರೈತರು–ಕೃಷಿ ವಿಜ್ಞಾನಿಗಳೊಂದಿಗೆ ಇದೇ ಸಂದರ್ಭ ಸಂವಾದವೂ ನಡೆಯಲಿದೆ ಎಂದು ಮಹಾಂತೇಶಪ್ಪ ತಿಳಿಸಿದರು.

ಡಾ.ಕೃಷ್ಣಯ್ಯ, ಡಾ.ಕೃಷ್ಣಮೂರ್ತಿ, ಡಾ.ಯೋಗೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಯಾವ್ಯಾವ ವಿಷಯದಲ್ಲಿ ತರಬೇತಿ?

ಸಾವಯವ ಕೃಷಿಯ ಮಹತ್ವ ಮತ್ತು ಅವಕಾಶಗಳು, ಸಂಪನ್ಮೂಲಗಳ ಕ್ರೋಡೀಕರಣ, ಮಣ್ಣು ಮತ್ತು ಮಳೆ ನೀರಿನ ಸಂರಕ್ಷಣೆ, ಸಾವಯವ ಗೊಬ್ಬರಗಳು ಹಾಗೂ ಅವುಗಳ ತಯಾರಿಕಾ ವಿಧಾನ, ಹಸಿರು ಮತ್ತು ಹಸಿರೆಲೆ ಗೊಬ್ಬರಗಳು, ಜೈವಿಕ ಗೊಬ್ಬರ ಮತ್ತು ದ್ರವರೂಪದ ಗೊಬ್ಬರಗಳು ಹಾಗೂ ಸ್ಥಾನಿಕ ಉತ್ಪಾದನೆಗೆ ಇರುವ ಅವಕಾಶಗಳು, ಸಸ್ಯ ಪೀಡೆಗಳ ನಿರ್ವಹಣೆ, ಜೈವಿಕ ನಿಯಂತ್ರಣಕಾರಕಗಳ ಪಾತ್ರ ಹಾಗೂ ಸ್ಥಾನಿಕ ಉತ್ಪಾದನೆಗೆ ಇರುವ ಅವಕಾಶಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.

ಕೃಷಿ ತ್ಯಾಜ್ಯ ವಸ್ತುಗಳು ಹಾಗೂ ಅವುಗಳ ಸದ್ಬಳಕೆ, ಸಾವಯವ ಕೃಷಿ ಉತ್ಪನ್ನಗಳ ಪ್ರಮಾಣೀಕರಣ ಏಕೆ? ಹೇಗೆ?, ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕಿಟ್ಟಿರುವ ಅವಕಾಶಗಳು, ಸರ್ಕಾರದ ಬೆಂಬಲ ಹಾಗೂ ಸವಲತ್ತುಗಳು ಕುರಿತಂತೆಯೂ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಸಾವಯವ ಕೃಷಿಯಲ್ಲಿ ತೊಡಗಿರುವ ರೈತರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಫೆ.22ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಹಾಂತೇಶಪ್ಪ ಮಾಹಿತಿ ನೀಡಿದರು.

ನೋಂದಣಿಗಾಗಿ ಕುಮುದಾ–9663539933, ಮಾಲತಿ–827793116, ಚೈತ್ರಾ ಭರತ್–8884248898 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.