ADVERTISEMENT

ಕಣ್ಮರೆಯಾಗುತ್ತಿರುವ ರಾಗಿ ಕಣ

ದಶಕಗಳ ಹಿಂದೆ ಪ್ರತಿ ಊರಿನಲ್ಲಿ 20ಕ್ಕೂ ಹೆಚ್ಚು ಕಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:18 IST
Last Updated 27 ಜನವರಿ 2021, 19:18 IST
ರಾಗಿ ಕಣದಲ್ಲಿ ಕೆಲಸ ಮಾಡುತ್ತಿರುವ ಕೆಲಸದವರು.
ರಾಗಿ ಕಣದಲ್ಲಿ ಕೆಲಸ ಮಾಡುತ್ತಿರುವ ಕೆಲಸದವರು.   

ದಾಬಸ್ ಪೇಟೆ: ಅಪ್ಪಟ ಗ್ರಾಮೀಣ ಸೊಗಡಿನ ’ರಾಗಿ ಕಣ’ಗಳು ಕಣ್ಮರೆಯಾಗಿ ಯಂತ್ರಗಳ ಸದ್ದು ಸಾಮಾನ್ಯವಾಗಿದೆ. ವಾರಾನುಗಟ್ಟಲೆ ಮಾಡುತ್ತಿದ್ದ ಕಣಗಳ ಬದಲಾಗಿ ಒಂದೆರಡು ಗಂಟೆಯಲ್ಲಿ ರಾಗಿ ವಿಂಗಡಣೆಯಾಗಿ ಮನೆ ಸೇರುತ್ತಿದೆ.

ದಶಕಗಳ ಹಿಂದೆ ಪ್ರತಿ ಊರಿನಲ್ಲಿ 20ಕ್ಕೂ ಹೆಚ್ಚು ಕಣಗಳು ಕಾಣುತ್ತಿದ್ದವು. ಆದರೆ, ಬರಬರುತ್ತಾ ಕಡಿಮೆಯಾಗುತ್ತಿದ್ದು, ಇಂದು ಕೆಲವೇ ಕೆಲವು ಕಾಣಸಿಗುತ್ತವೆ.

ಇತ್ತೀಚೆಗೆ ರಾಗಿ ಕೊಯ್ಲು ಮತ್ತು ಒಕ್ಕಣಿಗೆ ಅನುಕೂಲವಾಗುವಂತಹ ಯಂತ್ರಗಳು ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ರೈತರು ಸುಲಭವಾಗಿ ರಾಗಿ ಪೈರು ಕಟಾವು ಮಾಡಿ, ರಾಗಿ ವಿಂಗಡಿಸಿಕೊಳ್ಳಲು ಸಹಾಯಕವಾಗಿದೆ. ಇದರಿಂದ ನಿಧಾನವಾಗಿ ಕಣಗಳು ಮಾಯವಾಗುತ್ತಿವೆ.

ADVERTISEMENT

ಕಣದ ಕಲ್ಪನೆಯೇ ಚೆಂದ: ಮಳೆಗಾಲ ಮುಗಿವ ವೇಳೆಗೆ ರಾಗಿ ಕೊಯಿಲಿಗೆ ಬರುತ್ತದೆ. ಕತ್ತರಿಸಿದ ರಾಗಿ ಪೈರನ್ನು ಒಣಗಿಸಿ ಬಣವೆ ಹಾಕಲಾಗುತ್ತದೆ. ಇಪ್ಪತ್ತು ಅಡಿ ಸುತ್ತಳತೆಯ ಮಧ್ಯದಲ್ಲಿ ಮೇಟಿ ನಿಲ್ಲಿಸಿ, ಸಂಜೆ ನೀರು ಹಾಕಿ, ಬೆಳಿಗ್ಗೆಯೇ ದನ ಕರುಗಳಿಂದ ತುಳಿಸುವ ಮೂಲಕ ನೆಲವನ್ನು ಗಟ್ಟಿ ಮಾಡಿ ಕಣ ಭದ್ರ ಮಾಡಲಾಗುತ್ತದೆ.

ಪಕ್ಕದಲ್ಲಿಯೇ ಒಂದು ಗುಂಡಿ (ಬಗಡದ ಗುಂಡಿ) ತೆಗೆದು, ಅದಕ್ಕೆ ಕೆಲವು ದಿನಗಳು ಸೆಗಣಿ ಹಾಗೂ ನೀರು ಹಾಕಿ ಬಗಡ ಮಾಡಿಕೊಂಡು ಕಣಕ್ಕೆ ಹಾಕಿ ಸಾರಣೆ ಮಾಡಲಾಗುತ್ತದೆ. ಒಣಗಿದ ಕಣಕ್ಕೆ ರಾಗಿ ಹುಲ್ಲನ್ನು ಹಾಸಿ, ಬಿಸಿಲಲ್ಲಿ ಒಣಗಿಸಿ ಅದರ ಮೇಲೆ ರೋಣು ಕಲ್ಲು ಅಥವಾ ಟ್ರಾಕ್ಟರ್‌ನಿಂದ ಸುತ್ತು ಹಾಕಿಸಲಾಗುತ್ತದೆ.

ಹುಲ್ಲನ್ನು ಮೆರೆ ಕೊಡವಿ ವಿಭಾಗಿಸಿ ರಾಗಿ ಮಿದಿಯನ್ನು ಮಧ್ಯದಲ್ಲಿರುವ ಮೇಟಿಯ ಸುತ್ತಲೂ ಹಾಕಲಾಗುವುದು. ಬಣವೆಯ ಹುಲ್ಲು ಮುಗಿದ ಮೇಲೆ ರಾಗಿ ಮಿದಿಯನ್ನು ಗಾಳಿಗೆ ತೂರಿ ಶುದ್ಧ ರಾಗಿ ಪಡೆಯಲಾಗುತ್ತದೆ.

ಈ ಕೆಲಸವನ್ನು ನಿರ್ವಹಿಸಲು ಹತ್ತಕ್ಕೂ ಹೆಚ್ಚು ಕೆಲಸಗಾರರು ಬೇಕು. ಒಂದು ಕಣ ಮುಗಿಯುವುದಕ್ಕೆ ನಾಲ್ಕೈದು ದಿನಗಳು ಆಗುತ್ತಿತ್ತು ಎನ್ನುತ್ತಾರೆ ರೈತ ಶಿವರಾಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.