ADVERTISEMENT

ಗುಲಾಬಿಗೆ ತಗುಲುವ ಬೂದಿ ರೋಗ ನಿಯಂತ್ರಿಸಲು ತೋಟಗಾರಿಕೆ ಇಲಾಖೆಯಿಂದ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 9:02 IST
Last Updated 11 ಏಪ್ರಿಲ್ 2021, 9:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲಾರ: ಹವಾಮಾನ ವೈಪರಿತ್ಯದಿಂದ ಗುಲಾಬಿ ಬೆಳೆಯಲ್ಲಿ ರೋಗ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ರೈತರು ರೋಗ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಅಧಿಕಾರಿಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಲಾಬಿಯು ಪುಷ್ಪ ಕುಲದಲ್ಲಿಯೇ ಮಹತ್ವದ ಸ್ಥಾನ ಪಡೆದಿದೆ. ಬೇಸಿಗೆ ಕಾಲ ಆರಂಭವಾಗಿದ್ದು, ಗುಲಾಬಿ ಗಿಡಗಳು ಬಹು ಬೇಗನೆ ಬೂದಿ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ರೈತರು ಹವಾಗುಣಕ್ಕೆ ತಕ್ಕಂತೆ ಗುಲಾಬಿ ಗಿಡಗಳಿಗೆ ಕೀಟನಾಶಕ ಸಿಂಪಡಣೆ ಮಾಡಬೇಕು. ರೋಗ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಎಲೆ, ಕಾಂಡ ಮತ್ತು ಮೊಗ್ಗುಗಳ ಮೇಲೆ ಬೂದಿ ಬಣ್ಣದ ಚುಕ್ಕೆ ಕಾಣಿಸಿಕೊಳ್ಳುವುದು ಬೂದಿ ರೋಗದ ಮುಖ್ಯ ಲಕ್ಷಣವಾಗಿದೆ. ಈ ರೋಗಕ್ಕೆ ತುತ್ತಾದ ಎಲೆಗಳು ಮುದುಡಿಕೊಳ್ಳುತ್ತವೆ. ನಂತರ ಎಲೆಗಳು ಬಾಡಿ ಒಣಗುತ್ತವೆ. ರೋಗಕ್ಕೆ ತುತ್ತಾದ ಮೊಗ್ಗುಗಳು ಅರಳುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಬೂದಿ ರೋಗ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಅಥವಾ 0.5 ಮಿ.ಲೀ ಟ್ರೈಡೆಮಾರ್ಫ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. 2ನೇ ಹಂತದಲ್ಲಿ 1.5 ಮಿ.ಲೀ ಡೈನೀಕ್ಯಾಪ್ ಅಥವಾ 0.5 ಮಿ.ಲೀ ಅಮಿಸ್ಟರ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. 3ನೇ ಹಂತದಲ್ಲಿ 1 ಮಿ.ಲೀ ಹೆಕ್ಸಾಕೀನಾಜೋಲ್ ಅಥವಾ 2 ಗ್ರಾಂ ಸಲ್ಫೇಕ್ಸ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

ಮೆಟಲಾಕ್ಸಿಲ್ ಮ್ಯಾಂಕೊಜೆಬ್ ಕೀಟನಾಶಕವನ್ನು ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ತುಪ್ಪಳದ ರೋಗ ತಡೆಗಟ್ಟಬಹುದು. ಗಿಡಗಳ ಸವರುವಿಕೆ ನಂತರ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಅನ್ನು ಒಂದು ಲೀಟರ್‌ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ಡೈ ಬ್ಯಾಕ್ ರೋಗ ಹತೋಟಿಯಲ್ಲಿಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಡೈಕೋಫಾಲ್ ಮತ್ತು ಅಬಾಮೆಕ್ಟಿನ್ ಕೀಟನಾಶಕಗಳನ್ನು ಪರ್ಯಾಯವಾಗಿ ಸಿಂಪಡಿಸುವುದರಿಂದ ಮೊಗ್ಗು ಕೊರೆಯುವ ಹುಳ, ಬಿಳಿ ನೊಣ ಬಾಧೆ, ಕೆಂಪು ನುಸಿ ಕೀಟ ನಿಯಂತ್ರಿಸಬಹುದು. ಅಸಿಫೇಟ್ ಅಥವಾ ಫಿಪ್ರೋನಿಲ್, ಇಮಿಡಾಕ್ಲೋಪ್ರಿಡ್ ಸಿಂಪಡಿಸುವುದರಿಂದ ಥ್ರಿಪ್ಸ್ ಕೀಟ ಹತೋಟಿಯಲ್ಲಿಡಬಹುದು. ರೈತರು ಹೆಚ್ಚಿನ ಮಾಹಿತಿಗೆ 7829512236 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.