ADVERTISEMENT

ಗಣೇಶಯ್ಯ ಹೊಸ ಪುಸ್ತಕ | ಸಸ್ಯ ಸಾಮ್ರಾಜ್ಯದ ಸೋಜಿಗಗಳ ಅನನ್ಯ ಕಥನ

ಹಸಿರುಲೋಕದ ಇಣುಕುನೋಟ

ಡಾ.ಮೋಹನ್ ತಲಕಾಲುಕೊಪ್ಪ
Published 23 ಜನವರಿ 2020, 8:27 IST
Last Updated 23 ಜನವರಿ 2020, 8:27 IST
ಸಸ್ಯ ಸಗ್ಗ
ಸಸ್ಯ ಸಗ್ಗ   
""
""
""

ಪುಸ್ತಕದ ಹೆಸರು: ಸಸ್ಯ ಸಗ್ಗ,ಲೇಖಕರು: ಡಾ.ಕೆ.ಎನ್. ಗಣೇಶಯ್ಯ,ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, ಬೆಲೆ: 350

‘ಸಸ್ಯ ಸಗ್ಗ’ ಕೃತಿಯ ಲೇಖಕ, ಖ್ಯಾತ ವಿಜ್ಞಾನಿ ಡಾ. ಕೆ. ಎನ್. ಗಣೇಶಯ್ಯ ಕನ್ನಡ ಸಾಹಿತ್ಯ ಓದುಗರಿಗೆ ಚಿರಪರಿಚಿತ ಹೆಸರು. ಇವರ 23ನೇ ಕೃತಿ ಇದು. ಅವರ ವೃತ್ತಿಯಲ್ಲಿ ಕಂಡುಕೊಂಡ ಸಸ್ಯ ಜಗತ್ತಿನ ಸೋಜಿಗಗಳ ಕಥನ. ನಾಲ್ಕು ದಶಕಗಳ ಸಂಶೋಧನೆಯ ಸಾರಸರ್ವಸ್ವ ಇಲ್ಲಿ ಅನಾವರಣ. ಸಾಮಾನ್ಯರಿಗೆ ಅರಿವಿರದ ಸುತ್ತಮುತ್ತಲಿನ ಸಸ್ಯಗಳ ವಿಶಿಷ್ಟ ವಂಶಾಭಿವೃದ್ಧಿಯ ತಂತ್ರ ಹಾಗೂ ವಿಭಿನ್ನ ವರ್ತನೆಗಳನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಅವರೇ ಮಾಡಿದ ಸಂಶೋಧನೆಗಳ ಮೂಲಕ ವಿವರಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.

ನಾನು ಅವರ ವಿದ್ಯಾರ್ಥಿಯಾಗಿ ಎಂಎಸ್ಸಿ ಮಾಡಲು ಸೇರಿದ್ದು 1995ನೇ ಇಸವಿಯಲ್ಲಿ. ಪಿಎಚ್‌ಡಿಮುಗಿದ ನಂತರ ಅವರೊಟ್ಟಿಗೆ ಭಾರತೀಯ ಸಸ್ಯ ಸಂಪತ್ತಿನ ಗಣಕೀಕರಣದ ಪ್ರಾಯೋಜನೆಯಲ್ಲಿ ಭಾಗಿಯಾಗಿದ್ದೆ. ಅವರ ನೇರ ಸಂಪರ್ಕದಲ್ಲಿದ್ದುದು ಒಟ್ಟು 5ವರ್ಷ. ನಾನವರಲ್ಲಿ ಅಧ್ಯಯನಕ್ಕೆ ಸೇರುವ ಮುಂಚೆ ಡಾ. ಗಣೇಶಯ್ಯ ಮತ್ತು ಅವರ ಬಹುಕಾಲದ ಸಹವರ್ತಿ ಡಾ. ಉಮಾಶಂಕರ್ ತಮ್ಮ ಅತ್ಯಂತ ಗಟ್ಟಿಯಾದ ತಳಹದಿ ಇರುವ ಹಾಗೂ ಅಷ್ಟೇ ಕುತೂಹಲಕಾರಿಯಾದ ವಿಜ್ಞಾನ ಜೀವನವನ್ನು ಹೇಗೆ ರೂಪಿಸಿಕೊಂಡರು ಮತ್ತು ಆ ಪ್ರಕ್ರಿಯೆಯಲ್ಲಿ ಅವರು ಕ್ರಮಿಸಿದ ಅರ್ಥಪೂರ್ಣ ಹಾದಿಯ ಸ್ವರೂಪ ಅಷ್ಟಾಗಿ ಗೊತ್ತಿರಲಿಲ್ಲ. ನನ್ನ ಸಮಕಾಲೀನರಾದ ಅವರ ಇತರ ವಿದ್ಯಾರ್ಥಿಗಳಿಗೂ ತಿಳಿದಿರುವ ಸಾಧ್ಯತೆ ಕಡಿಮೆ. ಈ ಪುಸ್ತಕ ಓದಿದಾಗ ನನಗನಿಸಿದ್ದು - ನಾವೆಲ್ಲ ಗಣೇಶಯ್ಯ ಮತ್ತು ಉಮಾಶಂಕರ್ ಅವರ ಸಂಶೋಧನೆಗಳನ್ನು ಗ್ರಹಿಸಿದ್ದು ಒಂದು ಕಾಲಘಟ್ಟದ ಕಿಟಕಿಯ ಮೂಲಕ ಮಾತ್ರ. ನಮ್ಮರಿವಿಗೆ ನಿಲುಕದೆ ಇದ್ದ ವಿಷಯಗಳೇ ಜಾಸ್ತಿ. ಬದುಕಿನ ಎಲ್ಲ ವಿಷಯದಲ್ಲಿಯೂ ಹಾಗೇ ಅಲ್ಲವೆ?

ADVERTISEMENT

ಗುರುವಿನ ಪುಸ್ತಕದ ಪರಿಚಯ / ವಿಮರ್ಶೆ ಶಿಷ್ಯ ಮಾಡುವುದು ಕೆಲವೊಮ್ಮೆ ಅಪಾಯಕಾರಿ.ವಸ್ತುನಿಷ್ಠತೆ ಕಳೆದುಹೋಗುವ ಸಂಭವ. ಗುರುವಿನೆಡಗಿನ ಆರಾಧನಾ ಭಾವ ನಮಗರಿವಿಲ್ಲದಂತೆಯೇ ಲೇಖನದಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತದೆ. ಆ ಎಚ್ಚರಿಕೆಯನ್ನು ಇಟ್ಟುಕೊಂಡೇ ಕೆಲ ಅಂಶಗಳನ್ನು ಬರೆದಿದ್ದೇನೆ.

ಡಾ.ಕೆ.ಎನ್.ಗಣೇಶಯ್ಯ

ವಿಶಿಷ್ಟ ರಭಸದ ಪುಸ್ತಕ

ಸಸ್ಯ ಸಂಶೋಧನೆಯಲ್ಲಿ ಕಂಡುಬಂದ ವಿಶಿಷ್ಟ ಸಂಗತಿಗಳನ್ನು ಪುಸ್ತಕ ಆಪ್ತವಾಗಿ ಕಟ್ಟಿಕೊಡುತ್ತದೆ. ಸಸ್ಯ ಜಗತ್ತಿನ ಸೋಜಿಗವನ್ನು ತೆರೆದಿಡುವಲ್ಲಿ ಇದು ಅವರ ವೃತ್ತಿ ಜೀವನದ ಸೋಜಿಗವೂ ಆಗಿ ಪರಿಣಮಿಸಿದೆ. ಅವರ ಬರವಣಿಗೆಯ ವೈಶಿಷ್ಟ್ಯ,ಸ್ಪಷ್ಟತೆ ಮತ್ತು ತೀವ್ರತೆ. ಶುಭ್ರ ಸಲಿಲ ಸರೋವರದ ತಳದಲ್ಲಿರುವ ಕಲ್ಲು, ಮಣ್ಣು, ನೆಲವೆಲ್ಲವೂ ಹೇಗೆ ತೋರುತ್ತದೋ ಹಾಗೆ ತಮ್ಮ ಸಂಶೋಧನಾ ಕಾಯಕದಲ್ಲಿ ಎದುರಾದ ಹಲವಾರು ಘಟನೆಗಳನ್ನು ರೂಪಿಸಿದ್ದಾರೆ. ಸಸ್ಯಗಳ ವರ್ತನೆಯನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವಾಗ ಕಂಡುಕೊಂಡ ಸತ್ಯಗಳನ್ನು ಜಿಜ್ಞಾಸೆ ಮತ್ತು ಸಂಭಾಷಣೆಗಳ ಮೂಲಕ ಪ್ರಜ್ಞಾಪೂರ್ವಕವಾಗಿ ರೂಪಿಸಿದ್ದಾರೆ.

ಒಂದು ವಿಶಿಷ್ಟ ರಭಸ ಅವರ ಬರವಣಿಗೆಯ ಉದ್ದಕ್ಕೂ ಕಾಣಿಸುತ್ತದೆ ಮತ್ತು ಅದು ಎಲ್ಲೂ ಕುಂದುವುದಿಲ್ಲ. ಇದು ಕನ್ನಡ ಸಾಹಿತ್ಯಕ್ಕೆ ಸಂದ ಅನನ್ಯ ಕಥನ. ಈ ಪುಸ್ತಕದಲ್ಲಿ ಮತ್ತೊಂದು ಬಹಳ ಇಷ್ಟವಾದದ್ದು ಎಂದರೆರೇಖಾಚಿತ್ರಗಳು. ರಚಿಸಿದ ಕಲಾವಿದ ಸುನಿಲ್ ಮಿಶ್ರಾ ಅಭಿನಂದನಾರ್ಹರು. ಇಲ್ಲಿ ರೇಖೆಗಳು ಕಲಾಕೃತಿಗಳಾಗಿವೆ. ಜೊತೆಗೆ ಗಣೇಶಯ್ಯನವರು ತಮ್ಮ ಕಾದಂಬರಿಗಳಲ್ಲಿ ಕೊಡುವ ಹಾಗೆ ಆಕರ ಗ್ರಂಥಗಳ ಪಟ್ಟಿ, ಅಲ್ಲಲ್ಲಿ ಗ್ರಾಫ್‌ಗಳು, ಪೂರಕ ಅಂಕಿ-ಅಂಶಗಳೆಲ್ಲವೂ ಇವೆ. ಇವೆಲ್ಲವೂ ಓದಿನ ರುಚಿಯನ್ನು ಹೆಚ್ಚಿಸುವ ಪರಿಕರಗಳಂತಿವೆ.

ಸಸ್ಯಗಳಲ್ಲಿ ಕೊಲೆ, ಹಿಂಸೆ, ಸ್ವಜನ ಪಕ್ಷಪಾತ!

ಸಸ್ಯಪ್ರಭೇದಗಳಲ್ಲಿ ಇರುವ ಮನುಷ್ಯರಲ್ಲಿ ಇರುವಂತಹ ಹಿಂಸೆ, ಸ್ವಜನಪಕ್ಷಪಾತ, ಕ್ರೌರ್ಯ ಎಲ್ಲವನ್ನೂ ತಮ್ಮ ಸಂಶೋಧನೆಯ ಮೂಲಕ ಡಾ. ಗಣೇಶಯ್ಯ ಅನಾವರಣಗೊಳಿಸುತ್ತಾರೆ. ಡಾರ್ವಿನ್‌ ಪ್ರತಿಪಾದಿಸಿದ ವಿಕಾಸವಾದದ ಹಿನ್ನೆಲೆಯಲ್ಲಿ ನಡೆಸಿದ ಸಂಶೋಧನೆಗಳು ಹಾಗೂ ಅವರಿಗೆ ದೊರಕಿದ ಸಂಶೋಧನೆಯ ಸಹವರ್ತಿ ಡಾ. ಉಮಾಶಂಕರ್ ಭೇಟಿಯ ಪ್ರಸಂಗಗಳು ಮನೋಜ್ಞವಾಗಿ ನಿರೂಪಿತವಾಗಿವೆ.

ಶೀಷ ಮರದಲ್ಲಿ ಬೆಳೆಯುವ ಕಾಯಿಗಳಲ್ಲಿ ಸ್ವಾರ್ಥದಿಂದ ಅಗ್ರಜ ಬೀಜ ಉಳಿದ ಸೋದರ ಬೀಜಗಳನ್ನು ಕೊಲೆಗಯ್ಯುವ ಕ್ರಿಯೆ, ಪ್ರಾಣಿಗಳಲ್ಲಿ ನಡೆಯುವಂತಹ ‘ತಾಯಿ ಮಕ್ಕಳ ಕಲಹ’ದ ಅಸ್ತಿತ್ವ ಇವೆಲ್ಲಾ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಸಸ್ಯಗಳಲ್ಲಿ ಭ್ರೂಣಗಳಿಗೆ ಪೋಷಕಾಂಶ ನೀಡುವ ಎಂಡೋಸ್ಪರ್ಮ್ ಅಂಗಾಂಶದ ವಿಕಾಸ, ಕಿತ್ತಳೆ ವರ್ಗದ ಹಣ್ಣುಗಳಲ್ಲಿ ತೊಳೆಗಳ ವಿಕಾಸವಾದದದ್ದು, ತಾಯಿ ತನ್ನ ಮಕ್ಕಳ ನಡುವಿನ ಕಲಹ ಕಡಿಮೆ ಮಾಡಲು ಹೂಡಿರುವ ಉಪಾಯ ಎಂಬ ವಿವರ ಚಕಿತಗೊಳಿಸುತ್ತದೆ.

ಸಸ್ಯಗಳಲ್ಲಿ ‘ಸ್ವಯಂವರ’(!), ಹದಿನಾಲ್ಕನೇ ಶತಮಾನದಲ್ಲಿ ಸೈನಿಕರು ಯುದ್ಧಕ್ಕೆ ಹೊರಟಾಗ ತಮ್ಮ ಪತ್ನಿಯರಿಗೆ ಹಾಕುತ್ತಿದ್ದ ‘ಶೀಲಪಟ್ಟಿ’ಯನ್ನು ಹೋಲುವ ಪ್ರಕ್ರಿಯೆ.ಬೀಜ ಪ್ರಸಾರಕ್ಕಾಗಿ ಗಿಡವೊಂದು ನಿರ್ದಿಷ್ಟ ಸಮಯಕ್ಕೆ ಮಧುವನ್ನು ಸುರಿಸುವುದು ಇತ್ಯಾದಿಗಳ ಮೂಲಕ ಸಸ್ಯ, ಪ್ರಾಣಿ, ಇರುವೆ ಮುಂತಾದವು ಕೂಡಾ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದನ್ನು ಕಂಡರಿಸುತ್ತಾರೆ. ಇದು ಎಲ್ಲ ಜೀವಿಗಳನ್ನು ರೂಪಿಸಿದ ವಿಕಾಸ ಪ್ರಕ್ರಿಯೆಯ ಕೈವಾಡ ಎಂಬ ಸತ್ಯದ ಗೋಚರ ಇಲ್ಲಾಗುತ್ತದೆ.

ಆಲದ ಹೂವುಗಳ ರೋಚಕ ಲೋಕ ಹಾಗೂ ಜೀವವೈವಿಧ್ಯ ದಾಖಲಾತಿ‘ಅಶ್ವತ್ಥಾವತಾರ’ ಅಧ್ಯಾಯದಲ್ಲಿದೆ. ಅರಳೀಮರ, ಆಲ, ಅತ್ತಿ ಗುಂಪಿನ ವೃಕ್ಷಗಳು ಹಾಗೂ ಅವುಗಳ ಪರಾಗಸ್ಪರ್ಶಕ್ಕೆ ವಿಕಾಸಗೊಂಡಿರುವ ನಿರ್ದಿಷ್ಟ ಕಣಜ ಪ್ರಭೇದಗಳ ವಿವರ ಬಹಳ ಆಸಕ್ತಿಕರವಾಗಿದೆ. ಆದರೆ ಈ ಅಧ್ಯಾಯದಲ್ಲಿ ಒಮ್ಮೊಮ್ಮೆ ಮರಗಳ ಹೆಸರು ಅದಲು ಬದಲಾಗಿ ಗೊಂದಲವಾಗುತ್ತದೆ. ಅರಳೀಮರಕ್ಕೆ ಅದೇ ಕುಟುಂಬದ ಇನ್ನಿತರ ಪ್ರಭೇದಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ನಮ್ಮ ಪೂರ್ವಜರು ಕೊಟ್ಟಿದ್ದರು ಎಂಬ ವಿಷಯ ನಮಗೆಲ್ಲಾ ಗೊತ್ತಿದೆ. ಇಲ್ಲಿ ಈ ಕುಟುಂಬದ ಪ್ರಭೇದಗಳು ಒಂದಲ್ಲಾ ಒಂದು ಮರದಲ್ಲಿ ಯಾವಾಗಲೂ ಹಣ್ಣು ಬಿಡುವಂತೆ ವಿಕಾಸವಾಗಿದೆ. ಹಾಗಾಗಿ ಅವುಗಳು ಪ್ರಾಣಿಪಕ್ಷಿಗಳಿಗೆ ಸದಾ ಆಹಾರ ಪೂರೈಸಿ ಪರಿಸರವನ್ನು ಉಳಿಸುವಲ್ಲಿ ಗಮನಾರ್ಹ ಪಾತ್ರವಹಿಸಿವೆ ಎಂಬ ಅಂಶವನ್ನು ಎತ್ತಿ ತೋರಿಸಿ ಅವುಗಳ ಇನ್ನೊಂದು ಮಗ್ಗುಲಿನ ಪ್ರಾಮುಖ್ಯತೆಯನ್ನು ಪ್ರಚುರಪಡಿಸುತ್ತಾರೆ.

ಉಮಾಶಂಕರ್

ಈ ಅಧ್ಯಾಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅವರ ಇಬ್ಬರು ವಿದ್ಯಾರ್ಥಿನಿಯರು ತಾವು ಕಂಡುಕೊಂಡ ವಿವರಗಳನ್ನು ತಮ್ಮ ಮಾರ್ಗದರ್ಶಕರಿಗೆ ವಿವರಿಸಿ ಚರ್ಚೆ ನಡೆಸುವ ಘಟನೆಗಳನ್ನು ಹೆಣೆದಿದ್ದಾರೆ. ಇದು ಹೊರಗಿನವರಿಗೆ ಅಚ್ಚರಿ ಎನಿಸಬಹುದಾದರೂ, ಸಂಶೋಧನಾ ರಂಗದಲ್ಲಿ ಸಾಧ್ಯವಾಗುವ ದ್ವಿಮುಖ ಕಲಿಕೆಯನ್ನುಸೂಚಿಸುತ್ತದೆ.

ಸಸ್ಯಗಳ ಮೇಲೆ ಈ ರೀತಿಯ ಅಧ್ಯಯನಗಳಿಂದ ಪ್ರಕೃತಿ ರಹಸ್ಯವನ್ನು ತಿಳಿದ ಖುಷಿ ಬಿಟ್ಟರೆ ನಮಗೇನು ಪ್ರಯೋಜನ ಎನ್ನುವ ಪ್ರಶ್ನೆ ಆಗ ನನ್ನಲ್ಲಿ ಮೂಡಿತ್ತು. ಈ ಪುಸ್ತಕವನ್ನು ಓದಿದ ಕೆಲವರಲ್ಲೂ ಇದೇ ಪ್ರಶ್ನೆ ಮೂಡುವ ಸಾಧ್ಯತೆ ಇದೆ. ಅದಕ್ಕೆ ಡಾ. ಗಣೇಶಯ್ಯನವರು ‘ಇದು ಮೂಲ ವಿಜ್ಞಾನ ಹಾಗೂ ಅದರ ಸಿದ್ಧಾಂತಗಳು ಬೆಳೆಯುವ ರೀತಿ. ಅದನ್ನು ಅನ್ವಯಿಕ ವಿಜ್ಞಾನಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಬೇರೆ ವಿಭಾಗದ ಅಗತ್ಯವೇ ಇದೆ’ಎಂದುತ್ತರಿಸಿದ್ದರು.

‘ವೈವಿಧ್ಯಕಾಂಡ’ ಅಧ್ಯಾಯದಲ್ಲಿ ಡಾ. ಗಣೇಶಯ್ಯ ಮತ್ತವರ ತಂಡ ಮಾಡಿದ ಇನ್ನೊಂದು ಗಮನಾರ್ಹ ಕೆಲಸದ ವಿವರವಿದೆ. ಭಾರತೀಯ ಸಸ್ಯಸಂಪತ್ತಿನ ಡಿಜಿಟಲೀಕರಣದ ಭಾಗವಾಗಿ ನಮ್ಮ ದೇಶದ ಪಶ್ಚಿಮಘಟ್ಟ, ಪೂರ್ವಬೆಟ್ಟ ಹಾಗೂ ಅಂಡಮಾನ್ ದ್ವೀಪಗಳ ಅಪಾರ ಸಸ್ಯಸಂಪತ್ತಿನ ಮೋಜಣಿ (ಎಲ್ಲೆಲ್ಲಿ ಏನಿದೆ/ ಎಷ್ಟಿದೆ) ಬಹಳ ಅಮೂಲ್ಯವಾದ ಮಾಹಿತಿ ನೀಡುವ ಕಾರ್ಯ. ಡಾ. ಗಣೇಶಯ್ಯನವರ ಪತ್ನಿ ಡಾ. ವೀಣಾರವರು ಕೈಗೊಂಡ ಸಂಶೋಧನಾ ವಿಷಯಗಳು- ಸೋಮನಾಥಪುರದ ದೇವಾಲಯದಲ್ಲಿರುವ ಮೂರ್ತಿಗಳ ಕೈಯಲ್ಲಿರುವ ಮುಸುಕಿನ ಜೋಳದಂತಹ ರಚನೆಯ ಹಿಂದಿನ ರಹಸ್ಯ, ಹಸುವಿನ ಮೂತ್ರವನ್ನು ಗೋಧಿ ಮೊಳಕೆ ಪರೀಕ್ಷೆಗೆ ಬಳಸಿ ಹಸು ಗರ್ಭ ಧರಿಸಿದೆಯೇ ಇಲ್ಲವೇ ಅಂತ ಕಂಡುಹಿಡಿಯುವುದು, ಆಹಾರ ಹುಡುಕುವಾಗ ಇರುವೆಗಳ ಚಲನೆಯ ರಹಸ್ಯ ಇತ್ಯಾದಿ ಅತ್ಯಂತ ಆಸಕ್ತಿಕರ ವಿಷಯಗಳೂ ಇಲ್ಲಿವೆ.

‘ಸಸ್ಯ ಸಗ್ಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ.ಉಮಾಶಂಕರ್– ವೈಜ್ಞಾನಿಕ ಸಂಶೋಧನೆಯಲ್ಲಿ ಸರಿಯಾದ ಗೆಳೆಯರ / ಸಹಪಾಠಿಯ ಅಗತ್ಯವನ್ನು ಒತ್ತಿ ಹೇಳಿದ್ದರು. ಸಂಶೋಧನೆ ಬಹುಮುಖಿ ಹಾಗೂ ಫಲಪ್ರದವಾಗಿ ಸಾಗಬೇಕಾದರೆ ಅದಕ್ಕೆ ಸರಿಯಾದ ಸಾಥಿ ಇದ್ದರೆ ಬಹಳ ಒಳ್ಳೆಯದು ಎಂಬುದು ಅವರ ಮಾತಿನ ಇಂಗಿತ. ಇವರಿಬ್ಬರ ಸ್ನೇಹ ನಲವತ್ತು ವರ್ಷಗಳ ನಂತರ ಇಂದಿಗೂ ಬದಲಾಗಿಲ್ಲ. ಅದು ನಮಗೆಲ್ಲ ಕೌತುಕದ ವಿಷಯವೇ. ಬಹಳ ಸ್ಪರ್ಧಾತ್ಮಕ ವೈಜ್ಞಾನಿಕ ಸಂಶೋಧನಾ ರಂಗದಲ್ಲಿ ಎರಡು ವಿಭಿನ್ನ ವ್ಯಕ್ತಿತ್ವಗಳ ನಡುವೆ ಮನಸ್ತಾಪ ಬಂದು ಗೆಳೆತನ ಹಾಳಾಗುವುದನ್ನು ಯಾರಾದರೂ ನಿರೀಕ್ಷಿಸಬಹುದು. ಆದರೆ ಇವೆಲ್ಲದರ ನಡುವೆ ಎಂದೂ ಅಹಂ ಅಡ್ಡಿ ಬರದಂತೆ ಗೆಳೆತನವನ್ನು ಹೇಗೆ ನಿಭಾಯಿಸಬೇಕೆಂಬುದಕ್ಕೂ ಇವರಿಬ್ಬರು ನಿದರ್ಶನ.

ಅವರ ದೈನಂದಿನ ಕೆಲಸಗಳಲ್ಲಿ, ಸಂಶೋಧನಾ ಕೆಲಸಗಳಲ್ಲಿ ನನಗೆ ಗೊತ್ತಿರುವಂತೆ ಇನ್ನೂ ಹೆಚ್ಚಿನ ಹಾಸ್ಯ ಪ್ರಸಂಗಗಳಿತ್ತು. ಅವನ್ನು ಇಲ್ಲಿ ಸೇರಿಸಿದ್ದರೆ ಇನ್ನಷ್ಟು ಆಕರ್ಷಣೀಯವಾಗುತ್ತಿತ್ತು. ಅದರ ಬದಲಾಗಿ ಪಾತ್ರಗಳು ಜಿಜ್ಞಾಸೆ / ಚರ್ಚೆಯ ಮೂಲಕ ಓದುಗನ ಎದೆಯೊಳಗೆ ವಿಷಯವನ್ನು ತಲುಪಿಸುವ ಶೈಲಿಯನ್ನು ಅನುಸರಿಸಿದ್ದಾರೆ. ಹಾಗಂತ ಪರಿಣಾಮದಲ್ಲಿ ಇದೇನು ಕೊರತೆಯೆನಿಸುವುದಿಲ್ಲ. ಜೊತೆಗೆ ಸಸ್ಯಗಳಲ್ಲಿರುವ ಪರಾಗಸ್ಪರ್ಶದ ವಿಧಗಳು - ಸ್ವಕೀಯ, ಪರಕೀಯ (ಗಾಳಿ, ಕೀಟ, ಪ್ರಾಣಿಗಳ ಮೂಲಕ) ಹಾಗೂ ವಿವಿಧ ಬೀಜ ಪ್ರಸಾರದ ವಿಧಗಳನ್ನು (ಸಿಡಿಯುವ ಮೂಲಕ, ಗಾಳಿ, ಪ್ರಾಣಿ, ಕೀಟಗಳ ಮೂಲಕ) ಅವರ ತಂಡ ವಿಸ್ತೃತ, ವೈವಿಧ್ಯಮಯ ಅಧ್ಯಯನ, ಅಧ್ಯಾಪನ ಮಾಡಿದೆ. ಅದರ ಬಗ್ಗೆಯೂ ವಿಶಿಷ್ಟ ಉದಾಹರಣೆಗಳ ಮೂಲಕ ಒಂದೆರಡು ಪುಟಗಳ ವಿವರ ಇದ್ದಿದ್ದರೆ ಬಹಳ ರಂಜನೀಯವಾಗುತ್ತಿತ್ತು.

ಡಾ.ಕೆ.ಎನ್.ಗಣೇಶಯ್ಯ

ಹಸುರು ಹೊನ್ನು ಮತ್ತು ಸಸ್ಯ ಸಗ್ಗ ಪುಸ್ತಕದ ಬೆನ್ನುಡಿಯಲ್ಲಿ ‘ಸಂಶೋಧನೆಯ ವಿವಿಧ ಆಯಾಮಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು ಹಸಿರು ಹೊನ್ನನ್ನು ತಂದುಕೊಟ್ಟಿದೆ’ಎಂದು ಪ್ರಕಾಶಕರು ಅಭಿಪ್ರಾಯಪಟ್ಟಿದ್ದಾರೆ.

ಹಸುರು ಹೊನ್ನು – ಎಲ್ಲರಿಗೂ ಗೊತ್ತಿರುವಂತೆ ಪ್ರೊ. ಬಿ.ಜಿ.ಎಲ್. ಸ್ವಾಮಿಯವರ ಅನನ್ಯ ಕೃತಿ. ಸಸ್ಯ ಪರಿಚಯ ಹಾಗೂ ಸಸ್ಯಶಾಸ್ತ್ರದ ವಿಷಯಗಳನ್ನು ತಿಳಿಹಾಸ್ಯದ ಮೂಲಕ ನಿರೂಪಿಸುವ, ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಕೃತಿ 1976ರಷ್ಟು ಮೊದಲು ಬರೆದದ್ದು. ‘ಸಸ್ಯ ಸಗ್ಗ’ ಇದಕ್ಕಿಂತ ವಿಭಿನ್ನವಾದ ಕೃತಿ. ಸಾಮಾನ್ಯರಿಗೆ ಅರಿವಿರದ ಸುತ್ತಮುತ್ತಲಿನ ಸಸ್ಯಗಳ ವಿಶಿಷ್ಟ ವಂಶಾಭಿವೃದ್ಧಿಯ ತಂತ್ರ ಹಾಗೂ ಅನನ್ಯ ವರ್ತನೆಗಳನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಲೇಖಕರೇ ಮಾಡಿದ ಸಂಶೋಧನೆಗಳ ಮೂಲಕ ವಿವರಿಸುವುದು ಇಲ್ಲಿನ ಮುಖ್ಯ ಉದ್ದೇಶ.

ಭಿನ್ನ ವಿಷಯಗಳಿರುವ ಇವೆರಡು ಸಸ್ಯ ಸಂಬಂಧೀ ಕೃತಿಗಳನ್ನು ಹೋಲಿಸುವುದು ಅಷ್ಟು ಸಮಂಜಸವಾ ಎಂಬ ಪ್ರಶ್ನೆ ನನ್ನನ್ನು ಕಾಡಿತು. ನನಗನ್ನಿಸುವಂತೆ ಎರಡನ್ನೂ ಪ್ರತ್ಯೇಕವಾಗಿ ಆಸ್ವಾದಿಸುವುದಕ್ಕೆ ಯಾವ ತೊಂದರೆಯೂ ಇಲ್ಲ. ಇವೆರಡೂ ತಮ್ಮ ತಮ್ಮ ನೆಲೆಯಲ್ಲಿ ವಿಶಿಷ್ಟ ಕೃತಿಗಳೇ. ಪುಸ್ತಕದಲ್ಲಿ, ವಿಜ್ಞಾನಿಗಳು ವೃತ್ತಿ ಬದುಕಿನಲ್ಲಿ ಮೇಲೇರುತ್ತಾ ಹೋದಂತೆ ತಮ್ಮ ಮೂಲ ವೈಜ್ಞಾನಿಕ ಆಸಕ್ತಿಯಿಂದ ವಿಷಯದಿಂದ ದೂರ ಸರಿದು ಎದುರಿಸಬೇಕಾದ ಸ್ಥಿತಿಗಳನ್ನು ಹಾಗೂ ಅವುಗಳಿಂದ ತಪ್ಪಿಸಿಕೊಳ್ಳುವ ವಿಧಾನಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಸಹಾಯ ಎಲ್ಲಿಂದಲಾದರೂ ಬರುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳಿಲ್ಲಿವೆ.

‘ಎಲ್ಲರೂ ನೋಡುವುದನ್ನೇ ವಿಜ್ಞಾನಿ / ಸಂಶೋಧಕನೂ ನೋಡುತ್ತಾನೆ. ಅದರೆ ಅವನಿಗೆ ಹೊಳೆಯುವುದೇ ಬೇರೆ’ ಎಂಬ ಮಾತಿನ ಸಾಕಾರ ಇಲ್ಲಿ ಆಗುತ್ತದೆ. ಜೀವನ ಬೇರೆಯಲ್ಲ, ವೃತ್ತಿ ಬೇರೆಯಲ್ಲ ಎನ್ನುವುದಕ್ಕೆ ಇಲ್ಲಿ ಹಲವು ಉದಾಹರಣೆಗಳಿವೆ. ಈ ಪುಸ್ತಕ ಇಂಗ್ಲೀಷಿಗೂ ಭಾಷಾಂತರವಾದರೆ ಭಾರತ / ವಿಶ್ವದ ಹಲವಾರು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಪ್ರೇರಕವಾಗಬಲ್ಲ ಶಕ್ತಿ ಹೊಂದಿದೆ. ವಿಜ್ಞಾನ ಅದರಲ್ಲೂ ಸಸ್ಯ ವಿಜ್ಞಾನದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕರು ಓದಲೇಬೇಕಾದ ಪುಸ್ತಕ ಇದು. ಯುವಪೀಳಿಗೆ ಇದನ್ನು ಓದಿದರೆ ವಿಜ್ಞಾನದಲ್ಲಿ ಆಸಕ್ತಿ ಮೂಡೀತು. ಸಂಶೋಧನಾ ರಂಗದಲ್ಲಿರಬೇಕಾದ ತೀವ್ರತೆ, ಸಾಗಬೇಕಾದ ದಾರಿ ಎಲ್ಲವೂ ನಿಚ್ಚಳವಾದೀತು.

ಕನ್ನಡಿಗರು ತಪ್ಪಿಸಿಕೊಳ್ಳಬಾರದ, ತಪ್ಪಿಸಿಕೊಳ್ಳಲಾಗದ ಹೊತ್ತಿಗೆ ಇದು.

ಯುವ ವಿಜ್ಞಾನಿಗಳಿಗೆ ಪ್ರೇರಣಾದಾಯಕ ಸಾಧನೆ

ಡಾ, ಗಣೇಶಯ್ಯನವರು ಕಾದಂಬರಿಕಾರರಷ್ಟೇ ಅಲ್ಲ. ಅವರ ಮಿತ್ರ ಡಾ. ಉಮಾಶಂಕರ್ ಅವರೊಡಗೂಡಿ 200ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರಿಬ್ಬರೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಸಂರಕ್ಷಣೆಗಾಗಿ ಪ್ರತ್ಯೇಕ ವಿಭಾಗವನ್ನು ಕಟ್ಟಿದ್ದಾರೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ನಲವತ್ತು ವರ್ಷಗಳಿಂದ ಇಂದಿಗೂ ವಾರಕ್ಕೊಮ್ಮೆ ನಡೆಸುತ್ತಿರುವ ಫ್ರೈಡೇ ಗ್ರೂಪ್ ಎಂಬ ವಿಜ್ಞಾನ ವಿಷಯ ಕುರಿತಾದ ಚರ್ಚಾಕೂಟದ ವ್ಯವಸ್ಥೆ, ವಿಶ್ವವಿದ್ಯಾಲಯಕ್ಕೆ ಪ್ರಾಜೆಕ್ಟ್ ಗಳ ಮೂಲಕ ಹಲವು ಕೋಟಿಗಳ ಅನುದಾನ, ಹಲವು ದೇಶಗಳಿಗೆ ಪ್ರಬಂಧ ಮಂಡನೆಗೆ, ವಿಷಯತಜ್ಞರಾಗಿ ಓಡಾಟ, ಅಂತಾರಾಷ್ಟ್ರೀಯ ಮಟ್ಟದ ಏಟ್ರಿ ಎಂಬ ಪರಿಸರ ಸಂಶೋಧನಾ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದು – ಇವೆಲ್ಲಾ ಸಾಧನೆಗಳು ಯುವ ವಿಜ್ಞಾನಿಗಳಿಗೆ ನಿಸ್ಸಂಶಯವಾಗಿ ಉತ್ತೇಜನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.