ADVERTISEMENT

PV Web Exclusive: ₹3.50 ಲಕ್ಷ ಸಂಬಳದ ಕೆಲಸ ಬಿಟ್ಟು ಕೃಷಿಗಿಳಿದ ಎಂಜಿನಿಯರ್!

ಸಾವಯವ ಕೃಷಿಯಲ್ಲಿ ಖುಷಿ ಕಂಡ ನರಸನಗೌಡ

ಶಿವಕುಮಾರ ಹಳ್ಯಾಳ
Published 3 ಸೆಪ್ಟೆಂಬರ್ 2020, 7:09 IST
Last Updated 3 ಸೆಪ್ಟೆಂಬರ್ 2020, 7:09 IST
ತಮ್ಮ ಜಮೀನಿನಲ್ಲಿ ಬೆಳೆದ ಮುಸುಕು ಬದನೆ ತೋರಿಸುತ್ತಿರುವ  ನರಸನಗೌಡ ವೀರಾಪುರ
ತಮ್ಮ ಜಮೀನಿನಲ್ಲಿ ಬೆಳೆದ ಮುಸುಕು ಬದನೆ ತೋರಿಸುತ್ತಿರುವ  ನರಸನಗೌಡ ವೀರಾಪುರ   

ಧಾರವಾಡ: ಒಂದೆಡೆ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ನಗರದತ್ತ ಯುವ ಸಮುದಾಯ ವಲಸೆ ಹೋಗುತ್ತಿದ್ದರೆ, ಇನ್ನೊಂದೆಡೆ ನಗರದಲ್ಲಿ ಕೈತುಂಬ ಸಂಬಳ ಪಡೆಯುವ ಯುವಜನ ಕೆಲಸ ತೊರೆದು ಕೃಷಿಗಿಳಿಯುತ್ತಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲ್ಲೂಕಿನ ನರಸನಗೌಡ ವೀರಾಪುರ (45) ಅವರುಧಾರವಾಡ ತಾಲ್ಲೂಕಿನ ಕ್ಯಾರಕೊಪ್ಪ ಬಳಿ ಐದು ಎಕರೆ ಹೊಲ ಖರೀದಿಸಿದ್ದಾರೆ. ಸಾಫ್ಟವೇರ್ ಎಂಜಿನಿಯರಿಂಗ್ ಕೆಲಸ ಬಿಟ್ಟು ಕೃಷಿ ಕ್ಷೇತ್ರದತ್ತ ಮುಖ ಮಾಡಿರುವ ವ್ಯಕ್ತಿ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನರಸನಗೌಡ, ನಾನು ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಆದರೆ ಸಾಫ್ಟವೇರ್ ಕ್ಷೇತ್ರದತ್ತ ಹೆಚ್ಚಿನ ಒಲವು ಇದ್ದ ಕಾರಣ, ಸಾಫ್ಟವೇರ್ ಎಂಜಿನಿಯರ್ ಆದೆ. ಅಂದುಕೊಂಡಂತೆ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದೆ. ಅದಾದ ಬಳಿಕ ಯುಎಸ್ಎ ಹಾಗೂ ಲಂಡನ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತ ತಿಂಗಳಿಗೆ ₹3.50 ಲಕ್ಷ ವೇತನ ಪಡೆಯುತ್ತಿದ್ದೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಇದೀಗ ಉದ್ಯೋಗ ತೊರೆದು ಧಾರವಾಡಕ್ಕೆ ಬಂದು ಸಾವಯವ ಕೃಷಿಯಲ್ಲಿ ಖುಷಿ ಕಂಡಿದ್ದೇನೆ’ ಎಂದು ಹೇಳಿದರು.

ADVERTISEMENT

‘2016ರಿಂದ ಧಾರವಾಡದಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ.ಮೊದಲು ಒಂದು ವರ್ಷ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ತರಕಾರಿ ಬೆಳೆದೆ, ಅಷ್ಟಾಗಿ ಉತ್ತಮ ಫಸಲು ಹಾಗೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರೆಯದ ಕಾರಣ ಸಾವಯವ ಕೃಷಿ ಮೂಲಕ ತರಕಾರಿ ಬೆಳೆಯಲು ಆರಂಭಿಸಿರುವುದಾಗಿ’ ತಿಳಿಸಿದರು.

ಜಮೀನಿನಲ್ಲಿ ಇರುವ ಸೌಲಭ್ಯಗಳು...

ಎರಡು ಕೃಷಿ ಹೊಂಡ, ಒಂದು ಬಾವಿ, ಎರಡು ಪಾಲಿಹೌಸ್‌ಗಳು, ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಅಲ್ಲದೇ ಕೃಷಿ ಹೊಂಡದಲ್ಲಿ ಐದು ಸಾವಿರ ಕನ್ನಡ ತಳಿಯ (silver carp) ಮೀನುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆನರಸನಗೌಡ ವೀರಾಪುರ.

ಬೆಳೆದ ಬೆಳೆಗಳು...

ಸೇವಂತಿಗೆ, ಬಟನ್ ರೋಸ್, ಚೆಂಡು ಹೂ, ಹಣ್ಣುಗಳಾದ ಪಪ್ಪಾಯಾ, ಮಾವು, ಬಾಳೆ, ಪೇರಲೆ, ತರಕಾರಿಗಳಾದ ಮುಸುಕು ಬದನೆ, ಬದನೆ, ಬೆಂಡೆ, ಟೊಮೆಟೋ, 12 ಬಗೆಯ ಸೊಪ್ಪು ಸೇರಿದಂತೆ ಇತರೆ ಸಾವಯವ ತರಕಾರಿಗಳನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಅಲ್ಲದೇ ಅಣಬೆ ಕೃಷಿಯನ್ನು ಬೆಳೆಯನ್ನು ಬೆಳೆದಿದ್ದಾರೆ.

ಮೊಬೈಲ್‌ ಆ್ಯಪ್‌ ಆವಿಷ್ಕಾರ...

ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸ್ವತಃ ನರಸನಗೌಡ ಅವರು ‘VKF Agree Forms’ ಎಂಬ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ ಮೂಲಕ ಅವರು ಈಗಾಗಲೇ ಧಾರವಾಡ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ 350ಕ್ಕೂ ಹೆಚ್ಚು ಗ್ರಾಹಕರನ್ನು ಕಂಡುಕೊಂಡಿದ್ದಾರೆ.

ವಾಟ್ಸಪ್ ಮತ್ತು ಆ್ಯಪ್ ಮೂಲಕ ಪ್ರತಿ ಗುರುವಾರ ತಮ್ಮಲ್ಲಿ ಲಭ್ಯವಿರುವ ತರಕಾರಿ, ಹೂವು, ಹಣ್ಣುಗಳ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಆಸಕ್ತ ಗ್ರಾಹಕರು ತಮಗೆ ಬೇಕಾದ ತರಕಾರಿಗಳನ್ನು ಕೊಂಡುಕೊಳ್ಳುತ್ತಾರೆ.ತಮ್ಮ ಸಿಬ್ಬಂದಿ ಮೂಲಕ ಮನೆ ಮನೆಗೆ ಗ್ರಾಹಕರಿಗೆ ತರಕಾರಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಮೋರ್‌ ಮಳಿಗೆಗೂ ನರಸನಗೌಡ ಅವರು ತಮ್ಮ ಜಮೀನಿನಲ್ಲಿ ಬೆಳೆದ ಸಾವಯವ ತರಕಾರಿಗಳನ್ನು ಪೂರೈಸುತ್ತಿದ್ದಾರೆ.

ಈ ಮೂಲಕ ನಾನು ತಿಂಗಳಿಗೆ ₹1.50 ಲಕ್ಷ ಆದಾಯ ಗಳಿಸುತ್ತಿರುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.