ADVERTISEMENT

ಮಣ್ಣು ರಹಿತ ಕೈತೋಟ

ಆತ್ರೇಯ
Published 29 ಸೆಪ್ಟೆಂಬರ್ 2020, 19:30 IST
Last Updated 29 ಸೆಪ್ಟೆಂಬರ್ 2020, 19:30 IST
ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮಣ್ಣು ರಹಿತವಾಗಿ ತರಕಾರಿ ಬೆಳೆದಿರುವುದು  ಚಿತ್ರಗಳು: ಬಿ.ಎಚ್. ಶಿವಕುಮಾರ್ 
ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮಣ್ಣು ರಹಿತವಾಗಿ ತರಕಾರಿ ಬೆಳೆದಿರುವುದು  ಚಿತ್ರಗಳು: ಬಿ.ಎಚ್. ಶಿವಕುಮಾರ್    

ನಗರ, ಪಟ್ಟಣ ವಾಸಿಗಳಿಗೆ ಕೈತೋಟ ಮಾಡುವುದಕ್ಕೆ, ಗಿಡ ಬೆಳೆಸುವುದಕ್ಕೆ ತುಂಬಾ ಆಸಕ್ತಿ. ಕೋವಿಡ್‌ ಲಾಕ್‌ಡೌನ್ ಕಾಲದಲ್ಲಿ ಆರೋಗ್ಯ ಕಾಳಜಿ ಹೆಚ್ಚಿದ ಮೇಲೆ ಮನೆಯಂಗಳದಲ್ಲೋ, ತಾರಸಿಯಲ್ಲೋ ಕೈತೋಟ ಮಾಡಿಕೊಳ್ಳಬೇಕೆಂಬ ಆಸಕ್ತಿ ಹೆಚ್ಚಾಯಿತು.

ಆದರೆ, ಕೈತೋಟ ಮಾಡಲು ಮಣ್ಣು ಬೇಕು. ನಗರದ ಕಾಂಕ್ರಿಟ್‌ ಕಾಡಿನಲ್ಲಿ ಮಣ್ಣನ್ನು ಹೊಂದಿಸುವುದೇ ದೊಡ್ಡ ಸವಾಲು. ಲಾಕ್‌ಡೌನ್ ಅವಧಿಯಲ್ಲಂತೂ ಇದು ಮತ್ತಷ್ಟು ಕಷ್ಟವಾಗಿತ್ತು. ಒಂದು ಪಕ್ಷ ಮಣ್ಣು ದೊರೆತರೂ, ಅದು ಗಿಡಗಳನ್ನು ಬೆಳೆಸಲು ಯೋಗ್ಯವಾಗಿರುವುದಿಲ್ಲ. ಇನ್ನೊಂದು ಕಡೆ ಮಣ್ಣಿನ ಕುಂಡಗಳ ತೂಕ ಹೆಚ್ಚು. ಇವುಗಳು ತಾರಸಿ ಅಥವಾ ಬಾಲ್ಕನಿಗೆ ತೊಂದರೆಯುಂಟು ಮಾಡುತ್ತವೆ ಎಂಬ ಆತಂಕವೂ ಕೈತೋಟ ಮಾಡುವವರದ್ದು.

ನಗರ ಪ್ರದೇಶದ ಕೈತೋಟ ಪ್ರಿಯರ ಇಂಥ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಯು ‘ಮಣ್ಣು ರಹಿತ ಕೃಷಿ’ ಪರಿಕಲ್ಪನೆಯನ್ನು ಪರಿಚಯಿಸಿ, ಉತ್ತೇಜಿಸುತ್ತಿದೆ. ಈ ವಿಧಾನದಲ್ಲಿ ಗಿಡಗಳನ್ನು ಬೆಳೆಸಲು ಮಣ್ಣಿಗೆ ಪರ್ಯಾಯವಾಗಿ ಕೊಕೊಪಿತ್‌ (ತೆಂಗಿನನಾರಿನ ಹುಡಿ) ಬಳಸಲಾಗುತ್ತದೆ. ಇದಕ್ಕಾಗಿ ಸಂಸ್ಥೆಯೇ ತಯಾರಿಸಿರುವ ‘ಅರ್ಕಾ– ಫರ್ಮೆಂಟೆಡ್ ಕೊಕೊಪಿತ್’ ನಾರಿನ ಹುಡಿಯನ್ನು ಉಪಯೋಗಿಸುತ್ತಿದೆ. ಐಐಎಚ್‌ಆರ್ ಅಭಿವೃದ್ಧಿ
ಪಡಿಸಿರುವ ಅರ್ಕಾ ಸೂಕ್ಷ್ಮಾಣುಜೀವಿ ಪುಡಿ (Arka microbial consortium)ಯನ್ನು ನಾರಿನ ಹುಡಿಗೆ ಮಿಶ್ರಣ ಮಾಡಿ, ಅದನ್ನು ಮತ್ತಷ್ಟು ಉತ್ಕೃಷ್ಟವಾಗಿಸುತ್ತದೆ.

ADVERTISEMENT

ಅರ್ಕಾ–ಫರ್ಮೆಂಟೆಡ್ ಕೊಕೊಪಿತ್‌ ಅನ್ನು ನೇರವಾಗಿ ಕುಂಡ/ ಗ್ರೋ ಬ್ಯಾಗ್‌ಗೆ ತುಂಬಿಸಿ (ಪ್ರತಿ ಕುಂಡಕ್ಕೆ ಅಂದಾಜು 4 ಕೆ.ಜಿಯಿಂದ 5 ಕೆ.ಜಿ. ಇದು ಕುಂಡ /ಗ್ರೂಬ್ಯಾಗ್‌ ಅಳತೆಯ ಮೇಲೆ ವ್ಯತ್ಯಾಸವಾಗುತ್ತದೆ) ಎಲ್ಲ ರೀತಿಯ ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ಬೆಳೆಸಬಹುದು. ನಾರಿನ ಹುಡಿಗೆ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಿರುವ ಕಾರಣ ಕಡಿಮೆ ನೀರು ಬಳಕೆಯಾಗುತ್ತದೆ.

ಉಪಯೋಗ ಏನು?

ಕುಂಡಗಳಿಗೆ ಮಣ್ಣು ತುಂಬಿಸುವುದರಿಂದ ಅವುಗಳ ತೂಕ ಹೆಚ್ಚಾಗುತ್ತದೆ. ತೂಕದ ಕುಂಡಗಳಿಂದ ಬಾಲ್ಕನಿ ಅಥವಾ ಟೆರೇಸ್‌ಗೆ ತೊಂದರೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಮಣ್ಣು ತುಂಬಿದ ಕುಂಡಗಳನ್ನು ಆಚೀಚೆ ಅಲುಗಾಡಿಸುವುದು ಕಷ್ಟ.

ಆದರೆ, ಕೊಕೊಪಿತ್‌ ತುಂಬಿದ ಕುಂಡಗಳು ತುಂಬಾ ಹಗುರವಾಗಿರುತ್ತವೆ. ಮಣ್ಣಿಗೆ ಹೋಲಿಸಿದರೆ ಕೊಕೊಪಿತ್‌ ತೂಕ ಹತ್ತು ಪಟ್ಟು ಕಡಿಮೆ ಇರುತ್ತದೆ (ಹತ್ತನೇ ಒಂದು ಭಾಗದಷ್ಟು ತೂಕ ಕಡಿಮೆ). ಅಂದರೆ ನೂರು ಕೆ.ಜಿ ಕೊಕೊಪಿತ್, ಸಾವಿರ ಕೆ.ಜಿ ಮಣ್ಣಿಗೆ ಸಮ ಎನ್ನುತ್ತಾರೆ ವಿಜ್ಞಾನಿಗಳು. ಇದು ತೂಕದಲ್ಲಿ ಮಾತ್ರವಲ್ಲ, ಪೋಷಕಾಂಶಗಳ ವಿಷಯದಲ್ಲೂ, ಖರ್ಚು ಹಾಗೂ ನಿರ್ವಹಣೆ ವಿಷಯದಲ್ಲೂ ಕೊಕೊಪಿತ್‌ ಬಳಕೆ ಹೆಚ್ಚು ಉಪಯುಕ್ತ ಎಂಬುದು ಅವರ ಅಭಿಪ್ರಾಯ.

‘ಉತ್ತಮ ಹಾಗೂ ರೋಗರಹಿತ ಮಣ್ಣನ್ನು ತಂದು ಗಿಡ ಬೆಳೆಸುವುದು ನಗರಗಳಲ್ಲಿ ಕಷ್ಟಸಾಧ್ಯ. ಒಂದು ಪಕ್ಷ ಮಣ್ಣನ್ನು ತಂದು ಗಿಡಗಳನ್ನು ಬೆಳೆಸಿದರೂ ಕೀಟಬಾಧೆ, ರೋಗಬಾಧೆಯಿಂದಾಗಿ ಗುಣಮಟ್ಟದ ಫಲ ನಿರೀಕ್ಷಿಸುವುದು ಕಷ್ಟ. ಗಿಡಗಳು ಆರೋಗ್ಯಪೂರ್ಣವಾಗಿ ಬೆಳೆಯುವುದಿಲ್ಲ. ಆಗ ಕೈತೋಟ ಮಾಡುವವರ ಉತ್ಸಾಹ ಕುಗ್ಗುತ್ತದೆ. ಹೀಗಾಗಿ ಮಣ್ಣಿನ ಬದಲಿಗೆ ಕೊಕೊಪಿತ್ ಬಳಸುವುದು ಇವೆಲ್ಲವಕ್ಕೂ ಪರಿಹಾರವಾಗಲಿದೆ’ ಎನ್ನುತ್ತಾರೆ ಐಐಎಚ್‌ಆರ್‌ನ ವಿಜ್ಞಾನಿ (ಮಣ್ಣಿನ ವಿಜ್ಞಾನ) ಡಿ. ಕಲೈವಣ್ಣನ್‌.

‘ಮಣ್ಣು ರಹಿತ ಕೃಷಿ’ಯತ್ತ ಒಲವು

ಇತ್ತೀಚೆಗೆ ನಗರದಲ್ಲಿ ಕೊಕೊಪಿತ್‌ ಬಳಸಿ ತೋಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಐಐಎಚ್‌ಆರ್‌ ಕೂಡ ನಿರಂತರವಾಗಿ ಮಣ್ಣು ರಹಿತ ಕೈತೋಟ ನಿರ್ಮಾಣ ಕಾರ್ಯಾಗಾರವನ್ನು ಆಯೋಜಿಸುತ್ತಿರುತ್ತದೆ.

‘ಇಲ್ಲಿಯವರೆಗೂ ನಮ್ಮ ಸಂಸ್ಥೆಯಲ್ಲಿ 700 ಮಂದಿ ತರಬೇತಿ ಪಡೆದು ಟೆರೇಸ್‌ಗಳಲ್ಲಿ ಕೊಕೊಪಿತ್ ಕೈತೋಟ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಒಂದು ತರಬೇತಿ ಪೂರ್ಣಗೊಳಿಸಿದ್ದೇವೆ. ಕಾರ್ಯಾಗಾರ ನಡೆಸುವ ಬಗ್ಗೆ ನಮ್ಮ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸುತ್ತಿರುತ್ತೇವೆ’ ಎನ್ನುತ್ತಾರೆ ಕಲೈವಣ್ಣನ್. ಉತ್ಕೃಷ್ಟ ಪೋಷಕಾಂಶಗಳನ್ನೊಳಗೊಂಡ ಕೊಕೊಪಿತ್‌ ತಯಾರಿಕೆ ತಂತ್ರಜ್ಞಾನವನ್ನು ಕೆಲವೊಂದು ಉದ್ದಿಮೆದಾರರಿಗೆ ಐಐಎಚ್‌ಆರ್‌ ಸಂಸ್ಥೆ ನೀಡಿದೆ. ಬೆಂಗಳೂರಿನ ಕೆಲವೆಡೆ ಈ ಕೊಕೊಪಿತ್ ತಯಾರಿಕೆ ಘಟಕಗಳೂ ಇವೆ.

ಮಣ್ಣು ರಹಿತ ಕೈತೋಟ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ 99866 37407 ಸಂಪರ್ಕಿಸಬಹುದು. ಕಾರ್ಯಾಗಾರ ಕುರಿತ ಮಾಹಿತಿಗಾಗಿ www.iihr.res.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.