ADVERTISEMENT

ವ್ಯವಸಾಯ ಕ್ಷೇತ್ರಕ್ಕೆ ‘ಯಾಂತ್ರಿಕ’ ನೆರವು

ಕಾರ್ಮಿಕರ ಕೊರತೆಗೆ ರಿಲೀಫ್‍ ಕೊಡುವ ತಂತ್ರಜ್ಞಾನ

ನಾಗೇಶ್‍ ಕೆ.ಎನ್.
Published 30 ಡಿಸೆಂಬರ್ 2019, 19:30 IST
Last Updated 30 ಡಿಸೆಂಬರ್ 2019, 19:30 IST
ಬೂಮ್‌ ಸ್ಪ್ರೇಯರ್‌
ಬೂಮ್‌ ಸ್ಪ್ರೇಯರ್‌   

ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರದ್ದು ಬಹುದೊಡ್ಡ ಸಮಸ್ಯೆ. ಈ ಸಮಸ್ಯೆ ನಡುವೆಯೂ ಕೃಷಿಯಲ್ಲಿ ಉಳಿದಿರುವವರು ಬೆರಳೆಣಿಕೆಯಷ್ಟು ಯುವಕರು ಮಾತ್ರ. ಹೀಗಾಗಿ ಕಾರ್ಮಿಕರ ಕೊರತೆಯಿಂದ ಕೃಷಿ ಕ್ಷೇತ್ರ ಸೊರಗುತ್ತಿದೆ. ಒಂದು ಪಕ್ಷ ಕಾರ್ಮಿಕರ ಸಿಕ್ಕರೂ, ಅವರಲ್ಲಿ ಕೌಶಲದ ಕೊರತೆ. ಇದರಿಂದಾಗಿ ಅನೇಕ ಹಳ್ಳಿಗಳಲ್ಲಿ ನೂರಾರು ಎಕರೆ ಜಮೀನುಗಳು ಪಾಳು ಬಿಡುವಂತಾಗಿದೆ.

ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ನೀಗಿಸಿಕೊಳ್ಳಲು ಯಂತ್ರ ಗಳನ್ನು ಬಳಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಹಲವು ಬಗೆಯ ಯಂತ್ರಗ ಳನ್ನು ಆವಿಷ್ಕರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅದರಲ್ಲಿ ಬೆಳಗಳಿಗೆ ಔಷಧ ಸಿಂಪಡಿಸಲು ಬೆಂಗಳೂರಿನ ಜಿ.ಪಿ.ಶೆಟ್ಟಿ ಕೃಷಿ ನಿರ್ವಹಣಾ ಸಂಸ್ಥೆ ಆವಿಷ್ಕರಿಸಿರುವ ಬ್ಯಾಟರಿ ಚಾಲಿತ ಬೂಮ್ ಸ್ಪ್ರೇಯರ್‌ ಕೂಡ ಸೇರಿದೆ.

ಬೂಮ್‌ ಸ್ಪ್ರೇಯರ್‌

ADVERTISEMENT

ಈ ಬೂಮ್ ಸ್ಪ್ರೇಯರ್, ಬೆಳೆಗಳಿಗೆ ಸಿಂಪಡಣೆ ಕೊಡುವ ಕೆಲಸವನ್ನು ಸುಲಭ ಮಾಡಲು ಅಭಿವೃದ್ಧಿಪಡಿಸಿರುವ ಯಂತ್ರ. ಇದು ಬ್ಯಾಟರಿಚಾಲಿತ. ಏಕಕಾಲಕ್ಕೆ ನಾಲ್ಕು ಸಾಲುಗಳಿಗೆ ಸಿಂಪರಣೆ ಕೊಡಬಹುದು. ಬೆಳೆಗಳ ಎತ್ತರಕ್ಕೆ ಹಾಗೂ ಸಾಲುಗಳ ಅಂತರಕ್ಕೆ ಅನುಗುಣವಾಗಿ ಯಂತ್ರವನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದು. ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳ ಬೆಳೆಗಳೂ ಸೇರಿದಂತೆ ತರಕಾರಿ ಬೆಳೆಗಳಿಗೆ ಸಿಂಪಡಣೆ ಮಾಡಲು ಇದು ಅನುಕೂಲಕರವಾಗಿದೆ. ಪ್ರತಿಬಾರಿ ಚಾರ್ಚ್‌ ಮಾಡಿದಾಗ, ನಿರಂತರವಾಗಿ ನಾಲ್ಕೈದು ಗಂಟೆಗಳ ಕಾಲ ಸಿಂಪಡಣೆ ಮಾಡಬಹುದಾದಷ್ಟು ಬ್ಯಾಟರಿಯ ಸಾಮರ್ಥ್ಯ ಹೊಂದಿದೆ.

ಸಾಧಾರಣ ಯಂತ್ರದಲ್ಲಿ 1 ಗಂಟೆಗೆ ಅರ್ಧ ಎಕರೆ ಔಷಧ ಸಿಂಪಡಿಸಬಹುದು. ಆದರೆ ಬ್ಯಾಟರಿ ಚಾಲಿತ ಬೂಮ್ ಸ್ಪ್ರೇಯರ್ ಬಳಸಿದರೆ ಪ್ರತಿ ಗಂಟೆಗೆ 1 ಎಕರೆ 20 ಗುಂಟೆಗೆ ಸಿಂಪಡಿಸಬಹುದು. ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಆರು ಎಕರೆಗೆ ಸಿಂಪಡಣೆ ಮಾಡಬಹುದು. ಒಟ್ಟಾರೆ ರೈತರು ಈ ಸರಳ ಯಂತ್ರವನ್ನು ಬಳಸುವುದರಿಂದ ಅರ್ಧದಷ್ಟು ಸಮಯ ಹಾಗೂ ಖರ್ಚುಕಡಿಮೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗುರುರಾಜ್‍ ಅವರನ್ನು ಸಂಪರ್ಕಿಸಬಹುದು-90083 07879

ಕೃಷಿಯಲ್ಲಿ ಡ್ರೋನ್‌ ಬಳಕೆ

ಬೆಂಗಳೂರಿನ ಜಿಕೆವಿಕೆಯಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳದ ವೇಳೆ ಪ್ರಾತ್ಯಕ್ಷಿಕೆಯ ತಾಕಿನ ಪಕ್ಕ ಹಾರುವ ತಟ್ಟೆಯಂತಹ ಯಂತ್ರವನ್ನು ಇಟ್ಟಿದ್ದರು. ಬಹಳ ಮಂದಿ ಅದನ್ನು ಕುತೂಹಲದಿಂದ ನೋಡು ತ್ತಿದ್ದರು. ತಾಕಿನ ಬದಿಗೆ ನಿಂತಿದ್ದವರು ‘ಇದು ಡ್ರೋನ್ ಉಪಕರಣ. ಬೆಳೆಗಳಿಗೆ ಔಷಧ ಸಿಂಪಡಣೆ ಮತ್ತಿತರ ಕೆಲಸ ಮಾಡಬಹುದು’ ಎಂದು ವಿವರಿಸಿದರು.

ಸಿನಿಮಾ ಚಿತ್ರೀಕರಣ. ಸಾಕ್ಷ್ಯಚಿತ್ರ ತಯಾರಿಕೆ ಸೇರಿದಂತೆ ಮತ್ತಿತರ ಮನರಂಜನಾ ಕೆಲಸಗಳಿಗಷ್ಟೇ ಬಳಕೆಯಾಗುತ್ತಿದ್ದ ಈ ಡ್ರೋನ್, ಈಗ ಕೃಷಿ ಕ್ಷೇತ್ರಕ್ಕೂ ಹೆಜ್ಜೆ ಇಟ್ಟಿದೆ.

ಡ್ರೋನ್‌ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿರುವ ಕಾರ್ಮಿಕರ ಕೊರತೆಗೆ ಪರಿಹಾರ ಸಿಗುತ್ತದೆ. ಜತೆಗೆ, ಬೆಳೆಗಳಿಗೆ ಕರಾರುವಕ್ಕಾಗಿ ಔಷಧ ಸಿಂಪಡಿಸುವುದಕ್ಕೆ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಕಾರ್ಮಿಕರು ಮಾಡುವಷ್ಟು ಕೆಲಸ ಮಾಡಲು ನೆರವಾಗುತ್ತದೆ. ಕೃಷಿ ಕಾರ್ಯಗಳಿಗೆ ನೆರವಾಗುವ ‘ಡ್ರೋನ್‌’ ಅನ್ನು ಬೆಂಗಳೂರಿನ ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆಗಳ ಮಲ್ಟಿಪ್ಲೆಕ್ಸ್‌ ಡ್ರೋನ್ ಪ್ರೈವೇಟ್ ಲಿಮಿಟೆಡ್ ಆವಿಷ್ಕರಿಸಿದೆ.

ಹೇಗೆ ಕೆಲಸ ಮಾಡುತ್ತದೆ ಡ್ರೋನ್

‘ಬೆಳೆಗಳಿಗೆ ಔಷಧ ಸಿಂಪಡಿಸಲು ಕೃಷಿ ಕಾರ್ಮಿಕರು ಅಗತ್ಯ. ಕಾರ್ಮಿಕರು ಸಿಗ‌ದಿರುವುದಕ್ಕೆ ಪರ್ಯಾಯವಾಗಿ ಡ್ರೋನ್‍ ಅಭಿವೃದ್ಧಿಪಡಿಸಲಾಗಿದೆ’ ಎನ್ನುತ್ತಾರೆ ಸಂಸ್ಥೆಯ ತಂತ್ರಜ್ಞರಾದ ಶಿವಕುಮಾರ್.

ಸಾಮಾನ್ಯವಾಗಿ ಔಷಧ ಸಿಂಪಡಿಸುವವರಿಗೆ ಕನಿಷ್ಠ ಕೌಶಲವಿರ ಬೇಕು. ಇಲ್ಲವಾದಲ್ಲಿ ಸಿಂಪಡಿಸಿದ ಔಷಧ ವ್ಯರ್ಥವಾಗುತ್ತದೆ. ಜೊತೆಗೆ ಇಡೀ ಜಮೀನಿನ ಎಲ್ಲಾ ಭಾಗಕ್ಕೂ ಸಮಪ್ರಮಾಣದಲ್ಲಿ ಔಷಧ ತಲುಪಿಸಬೇಕು. ಇಷ್ಟೆಲ್ಲ ನಿಖರವಾದ ಕೆಲಸವನ್ನು ಕೃಷಿ ಕಾರ್ಮಿಕರಿಂದ ನಿರೀಕ್ಷಿಸುವುದು ಕಷ್ಟ. ಈ ಕಾರಣಕ್ಕೆ ಡ್ರೋನ್ ಆವಿಷ್ಕರಿಸಲಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶ ದಲ್ಲಿ ಔಷಧ ಸಿಂಪಡಿಸಬಹುದು.

‘ನಾವು ಈಗಾಗಲೇ ಮೆಕ್ಕೆಜೋಳ, ಟೊಮೆಟೊ, ಹೂಕೋಸು ಬೆಳೆಗಳಿಗೆ ಲಘುಪೋಷಕಾಂಶಗಳು ಹಾಗೂ ಕೀಟನಾಶಕ ಸಿಂಪಡಿಸಲು ಪ್ರಾಯೋಗಿಕವಾಗಿ ಡ್ರೋನ್‌ ಬಳಸಿ, ಯಶಸ್ಸು ಕಂಡಿದ್ದೇವೆ. ಇನ್ನೂ ಹೆಚ್ಚಿನ ಸಂಶೋಧನೆಗಳು ಮುಂದುವರೆ ಯುತ್ತಿವೆ. ಕ್ಷೇತ್ರ ಬೆಳೆಗಳು, ತೋಟಗಾರಿಕಾ ಬೆಳೆಗಳಿಗೂ ಸಿಂಪಡಣೆ ಮಾಡಲು ಅನುಕೂಲವಾಗುವಂತೆ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ’ ಎನ್ನುತ್ತಾರೆ ಶಿವಕುಮಾರ್‌.

ಇದರ ಮಹತ್ವ ಏನು?

ಡ್ರೋನ್ ಮೂಲಕ ಔಷಧ ಸಿಂಪಡಿಸುವುದರಿಂದ ‌ ಉತ್ಪನ್ನ ಮತ್ತು ನೀರಿನ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಕೃಷಿ ಕಾರ್ಮಿಕರು ಸಿಂಪಡಣೆ ಮಾಡುವಾಗ ಒಂದುಎಕರೆಗೆ 150-200 ಲೀಟರ್ ದ್ರಾವಣ ಬೇಕಾಗುತ್ತದೆ. ಡ್ರೋನ್ ಮೂಲಕ ಸಿಂಪಡಿಸುವಾಗ ಎಕರೆಗೆ ಕೇವಲ 5 ರಿಂದ 10 ಲೀಟರ್ ದ್ರಾವಣ ಸಾಕು. ಸಿಂಪರಣೆಯೂ ಕರಾರುವಕ್ಕಾಗಿರುತ್ತದೆ. ಇದರಿಂದ ರೈತರಿಗೆ ಎಲ್ಲಾ ರೀತಿಯಲ್ಲೂ ಅನುಕೂಲವಾಗಲಿದೆ ಎಂಬುದು ತಂತ್ರಜ್ಞರ ಅಭಿಮತ.

ಅಂದ ಹಾಗೆ, ಡ್ರೋನ್ ಬಳಸಲು ಡಿ.ಜಿ.ಸಿ.ಎ ಅಪ್ರೂವಲ್‍ ಆಗಬೇಕಿದೆ. ತದನಂತರ ಎಲ್ಲಾ ರೈತರು ಬಳಸಲು ಡ್ರೋನ್‍ಗಳು ಲಭ್ಯವಾಗಲಿವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ್ ಅವರನ್ನು ಸಂಪರ್ಕಿಸಬಹುದು: 99456 43201

ಪ್ರಾಯೋಗಿಕ ಬಳಕೆಗೆ ಅನುಮತಿ ಅಗತ್ಯ

ಡ್ರೋನ್ ಹಾಗೂ ಸ್ಯಾಟಲೈಟ್ ಸಂಯೋಜನೆಯೊಂದಿಗೆ ಬೆಳೆಗಳಲ್ಲಿ ಕೀಟ ರೋಗಗಳನ್ನು ಪತ್ತೆ ಮಾಡುವುದು ಮತ್ತು ಸಿಂಪಡಣೆ ಸೇರಿದಂತೆ ಅನೇಕ ಹೊಸ ತಂತ್ರಜ್ಞಾನಗಳ ಬಗ್ಗೆ ಕಾಸರಗೋಡಿನ ಸಿ.ಪಿ.ಸಿ.ಆರ್.ಐ, ಮತ್ತು ಬೆಂಗಳೂರಿನ ಐಐಎಸ್‍ಇ ಸಂಸ್ಥೆಗಳು ಚಿಂತನೆ ನಡೆಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ರೈತರ ಹೊಲಗಳಲ್ಲಿ ಪ್ರಾಯೋಗಿಕವಾಗಿ ಡ್ರೋನ್ ಬಳಸಲೂ ಸ್ಥಳೀಯ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು. ಸಿವಿಲ್ ಏವಿಯೇಷನ್‌ನಿಂದ ವಿಶೇಷ ಅನುಮತಿ ದೊರೆತ ಮೇಲೆ ರೈತರ ಹೊಲಗಳಲ್ಲಿ ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.