ADVERTISEMENT

ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ: ರೈತ ಬಾಳಪ್ಪ ಬೆಳಕೂಡ ತ್ರಿಸೂತ್ರ

ಬಾಲಶೇಖರ ಬಂದಿ
Published 23 ನವೆಂಬರ್ 2020, 19:30 IST
Last Updated 23 ನವೆಂಬರ್ 2020, 19:30 IST
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಳೆದ ಕಬ್ಬಿನೊಂದಿಗೆ ಕೃಷಿ ಅಧಿಕಾರಿ ಎಂ.ಎಂ. ನದಾಫ್, ಶಂಕರ ಹಳದಮನಿ ಇದ್ದಾರೆ
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಳೆದ ಕಬ್ಬಿನೊಂದಿಗೆ ಕೃಷಿ ಅಧಿಕಾರಿ ಎಂ.ಎಂ. ನದಾಫ್, ಶಂಕರ ಹಳದಮನಿ ಇದ್ದಾರೆ   

ಮೂಡಲಗಿ: ಎಕರೆಗೆ 40ರಿಂದ 45 ಟನ್‌ ಕಬ್ಬು ಇಳುವರಿ ಸಾಮಾನ್ಯ. ಆದರೆ, ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಾಳಪ್ಪ ಬಿ. ಬೆಳಕೂಡ ಪ್ರತಿ ವರ್ಷ ಎಕರೆಗೆ ಸರಾಸರಿ 85ರಿಂದ 90 ಟನ್‌ ಇಳುವರಿ ತೆಗೆದು ಗಮನಸೆಳೆದಿದ್ದಾರೆ.

ಸಮಗ್ರ ಬೇಸಾಯ ಮಾಡುವ ಅವರು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕಾಣುತ್ತಿದ್ದಾರೆ. ಮಿತ ಬಳಕೆಯ ‘ತ್ರಿಸೂತ್ರ’ ಅಳವಡಿಸಿಕೊಂಡಿದ್ದಾರೆ. ‘ಕಡಿಮೆ ಬೀಜ, ನೀರು ಮತ್ತು ರಸಾಯನಿಕ ಗೊಬ್ಬರ ಬಳಿಸಿ ಹೆಚ್ಚು ಇಳುವರಿ ತೆಗೆಯುತ್ತಿರುವೆ’ ಎಂದು ಬಾಳಪ್ಪ ಪ್ರಯೋಗದ ಸಫಲತೆಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

40 ಎಕರೆ ಕಬ್ಬು, 8 ಎಕರೆ ಅರಿಸಿನ ಮತ್ತು 16 ಎಕರೆ ಸೋಯಾಬೀನ್ ಬೆಳೆದಿದ್ದಾರೆ. ಕಬ್ಬಿನಲ್ಲಿ ಸಾಲಿನಿಂದ ಸಾಲಿಗೆ 6 ಅಡಿ ಅಂತರ ಬಿಟ್ಟಿದ್ದು, ಎಕರೆಗೆ ಒಂದೂವರೆ ಕ್ವಿಂಟಲ್‌ ಬಿತ್ತನೆ ಬೀಜ ಬಳಸಿದ್ದಾರೆ. ಇತರರು ಸಾಮಾನ್ಯವಾಗಿ ಪ್ರತಿ ಎಕರೆಗೆ ಟನ್‌ಗಿಂತ ಜಾಸ್ತಿ ಬಿತ್ತನೆಬೀಜ ಬಳಸುತ್ತಾರೆ. ಹಸಿರೆಲೆ ಗೊಬ್ಬರ, ರವದಿ, ಸಗಣಿ, ದನಗಳ ಗಂಜಲ ಮೊದಲಾದವುಗಳನ್ನು ಬಳಸಿ ಎರೆ ಹುಳ ಗೊಬ್ಬರ ತಯಾರಿಸುತ್ತಾರೆ. ಮಣ್ಣು ಪರೀಕ್ಷೆ ಮಾಡಿಸಿ ಎಕರೆಗೆ 30ರಿಂದ 40 ಕೆ.ಜಿ. ರಾಸಾಯನಿಕ ಗೊಬ್ಬರ ಬಳಸುತ್ತಾರೆ.

ADVERTISEMENT

‘ಸದ್ಯ ಕಟಾವು ಮಾಡುತ್ತಿರುವ ಕಬ್ಬಿನಲ್ಲಿ 37 ಗಣಿಕೆಗಳಿದ್ದು, ಎಕೆರೆಗೆ 85ರಿಂದ 90 ಟನ್‌ ಇಳುವರಿ ದೊರೆತಿದೆ’ ಎನ್ನುತ್ತಾರೆ ಅವರು.

ಅರಿಸಿನ ಮತ್ತು ಸೋಯಾಬೀನ್ ಅನ್ನೂ ರಾಸಾಯನಿಕ ಗೊಬ್ಬರವಿಲ್ಲದೆ ಬೆಳೆದಿದ್ದಾರೆ. ಸೋಯಾ ಎಕರೆಗೆ 10 ಕೆ.ಜಿ. ಬೀಜ ಬಳಸಿ ಈ ಸಲ 22 ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ. ಅರಿಸಿನ ಎಕರೆಗೆ 7 ಕ್ವಿಂಟಲ್‌ ಬೀಜ ನಾಟಿ ಮಾಡಿ (ಸಾಮಾನ್ಯವಾಗಿ 12 ಕ್ವಿಂಟಲ್‌ ಬಳಸುತ್ತಾರೆ) 52 ಕ್ವಿಂಟಲ್‌ ಇಳುವರಿ ಕಂಡಿದ್ದಾರೆ. ಮಿಶ್ರ ಬೆಳೆಯಾಗಿ ಉದ್ದು ಪ್ರತಿ ಎಕರೆಗೆ 4.5 ಕ್ವಿಂಟಲ್‌ ಪಡೆದಿದ್ದಾರೆ. ಕಳೆದ ವರ್ಷ ಅರಿಸಿನಕ್ಕೆ ಕ್ವಿಂಟಲ್‌ಗೆ ₹18 ಸಾವಿರ ದರ ನಿಗದಿಯಾಗಿತ್ತು. ಕೋವಿಡ್ ಲಾಕ್‌ಡೌನ್‌ನಲ್ಲೂ ₹10,500 ಬೆಲೆ ಸಿಕ್ಕಿದೆ. ಈಗಿರುವ ಅರಿಸಿನ ಬೆಳೆಯು ಜನವರಿಯಲ್ಲಿ ಕೊಯ್ಲಿಗೆ ಬರಲಿದೆ. ಕಳೆದ ಬಾರಿಗಿಂತ ಅಧಿಕ ಇಳುವರಿ ನಿರೀಕ್ಷೆ ಇದೆ ಎನ್ನುತ್ತಾರೆ.

ಅವರ ಜಮೀನಿಗೆ ಭೇಟಿ ನೀಡಿದ್ದ ಕೃಷಿ ಸಹಾಯಕ ನಿರ್ದೇಶಕ ಎಂ.ಎಂ. ನದಾಫ ಕೃಷಿ ಪದ್ಧತಿಯನ್ನು ಶ್ಲಾಘಿಸಿದರು. ಕಡಿಮೆ ಬೀಜ, ನೀರು ಮತ್ತು ರಾಸಾಯನಿಕ ಗೊಬ್ಬರದ ಬಳಕೆಯ ಸೂತ್ರದ ಬಗ್ಗೆ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರೂ ಮೆಚ್ಚುಗೆ ಸೂಚಿಸಿದ್ದಾರೆ’ ಎಂದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯ ನಿರ್ವಹಿಸಿರುವ ಬಾಳಪ್ಪ ಅವರು ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರೆ. ಸಂಪರ್ಕಕ್ಕೆ ಮೊ:9845842189.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.