ADVERTISEMENT

ಮೇಳದ ಎಫೆಕ್ಟ್‌ ಮಾರ್ಕೆಟ್ ದುಪ್ಪಟ್ಟು

ಕುಣಬಿಯವರ ‘ಗೆಡ್ಡೆ–ಗೆಣಸು ಮೇಳ’

ಸದಾಶಿವ ಎಂ.ಎಸ್‌.
Published 6 ಜನವರಿ 2020, 19:30 IST
Last Updated 6 ಜನವರಿ 2020, 19:30 IST
ಕಳೆದ ವರ್ಷ ಜೊಯಿಡಾದಲ್ಲಿ ಹಮ್ಮಿಕೊಳ್ಳಲಾದ ‘ಗೆಡ್ಡೆ ಗೆಣಸು ಮೇಳ’ದ ನೋಟ (ಸಂಗ್ರಹ ಚಿತ್ರ)
ಕಳೆದ ವರ್ಷ ಜೊಯಿಡಾದಲ್ಲಿ ಹಮ್ಮಿಕೊಳ್ಳಲಾದ ‘ಗೆಡ್ಡೆ ಗೆಣಸು ಮೇಳ’ದ ನೋಟ (ಸಂಗ್ರಹ ಚಿತ್ರ)   

ಮೊನ್ನೆ ಜೊಯಿಡಾ ಸಮೀಪದ ಡೇರಿಯಾ ಹಳ್ಳಿಗೆ ಹೋಗಿದ್ದೆ. ಅಲ್ಲಿ ಮಹಿಳೆಯೊಬ್ಬರು ಮನೆಯೊಳಗೆ ಮೊಳದುದ್ದ ಗೆಡ್ಡೆಗಳನ್ನು ಜೋಡಿಸುತ್ತಿದ್ದರು. ಇನ್ನೊಂದೆಡೆ ಚಿತ್ರವಿಚಿತ್ರ ಆಕಾರದ ಗೆಣಸುಗಳನ್ನು ರಾಶಿ ಮಾಡುತ್ತಿದ್ದರು. ಮಾರು ಉದ್ದದ ಗೆಡ್ಡೆ, ಮೊಳದುದ್ದದ ಗೆಣಸು.. ಒಂದಕ್ಕಿಂತ ಒಂದು ವಿಶಿಷ್ಟ ಎನ್ನಿಸುವಂತಹ ಗೆಡ್ಡೆ–ಗೆಣಸುಗಳು !

‘ಇಷ್ಟೊಂದು ಗೆಡ್ಡೆ–ಗೆಣಸಿನಿಟ್ಟುಕೊಂಡು ಏನ್ಮಾಡ್ತಾರೆ’ ಎಂದು ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದಾಗ, ಪಕ್ಕದಲ್ಲಿದ್ದ ವರು, ‘ಮುಂದಿನ ವಾರ ಜೋಯಿಡಾದಲ್ಲಿ ಗೆಡ್ಡೆ–ಗೆಣಸು ಮೇಳ ಮಾಡ್ತಾರೆ. ಅದಕ್ಕೆ ಇವರು ತಯಾರಿ ಮಾಡ್ಕೊತ್ತಿದ್ದಾರೆ’ ಎಂದರು !

ಜೋಯಿಡಾ, ದಟ್ಟಾರಣ್ಯದ, ಕಾಳಿ ಹುಲಿ ಸಂರಕ್ಷಿತ ವಲಯದ ಅಂಚಿನ ಊರು. ಸುತ್ತ ಹತ್ತಾರು ಸಣ್ಣ ಸಣ್ಣ ಹಳ್ಳಿಗ ಳಿವೆ. ಸದಾ ಅಚ್ಚ ಹಸಿರಿನ, ತೊರೆಗಳಭೂಪ್ರದೇಶ. ಬುಡಕಟ್ಟು ಸಮುದಾಯದವರೇ ಹೆಚ್ಚಾಗಿರುವ ಈ ಭಾಗದಲ್ಲಿ ಭತ್ತ ಪ್ರಮುಖ ಬೆಳೆ ಆದರೂ ಗೆಡ್ಡೆ–ಗೆಣಸು ಇಲ್ಲಿನ ವಿಶಿಷ್ಟ ಆಹಾರ.

ADVERTISEMENT

ಐದು ವರ್ಷಗಳ ಹಿಂದೆ ಅಡುಗೆ ಮನೆಗಳ ತರಕಾರಿಯಾಗಿದ್ದ ಗೆಡ್ಡೆ–ಗೆಣಸು, ಈಗ ‘ಸ್ಟಾರ್‌ ಹೋಟೆಲ್‌, ಹೋಮ್‌ಸ್ಟೇಗಳ ಊಟದ ಮೆನುಗಳಲ್ಲಿ ಇವುಗಳ ಖಾದ್ಯ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಕೇಳಿದಷ್ಟು ಬೆಲೆಗೆ ಸ್ಥಳೀಯವಾಗಿ ಮಾರಾಟವಾಗುತ್ತಿದ್ದ ಗೆಡ್ಡೆಗೆ, ಹೊರ ಜಿಲ್ಲೆ, ರಾಜ್ಯಗಳಿಂದ ಬೇಡಿಕೆ ಶುರುವಾಗಿದೆ. ಮಾತ್ರವಲ್ಲ, ‘ನಾವು ಇಷ್ಟೇ ಬೆಲೆಗೆ ಮಾರುತ್ತೇವೆ’ ಎಂದು ಬೆಳೆದವರೇ ದರ ನಿಗದಿ ಮಾಡುವಂತಹ ಹಂತಕ್ಕೆ ತಲುಪಿದೆ.

ಐದು ವರ್ಷಗಳ ಮೇಳದ ಎಫೆಕ್ಟ್‌...

ಇಂಥದ್ದೊಂದು ದೊಡ್ಡ ಬದಲಾವಣೆಗೆ ಕಾರಣವಾಗಿದ್ದು, ಐದು ವರ್ಷಗಳಿಂದ ಗೆಡ್ಡೆ–ಗೆಣಸು ಬೆಳೆಗಾರರ ಸಂಘದವರು ಆಯೋಜಿಸುತ್ತಿರುವ ಗೆಡ್ಡೆ–ಗೆಣಸು ಮೇಳ. ಈ ಮೇಳದಿಂದ ಕುಣಬಿ ಸಮುದಾಯದ ಹಲವು ರೈತರ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದೆ. ವಿಶೇಷವಾಗಿ ಮಹಿಳೆಯರಿಗೆ ಒಂದಷ್ಟು ಆದಾಯ ತಂದುಕೊಡುತ್ತಿದೆ. ಗೆಡ್ಡೆ–ಗೆಣಸುಗಳ ಆಹಾರ, ಔಷಧೀಯ ಗುಣ ಹೊರ ಜಗತ್ತಿಗೂ ಪರಿಚಯವಾಗುತ್ತಿದೆ.

‘ಮೇಳದಿಂದಾಗಿಯೇ ಈ ಬದಲಾವಣೆಗಳಾಗಿರೋದು’ ಎನ್ನುತ್ತಾರೆ ಡೇರಿಯಾ ಗ್ರಾಮದ ಸಾಮಾಜಿಕ ಕಾರ್ಯಕರ್ತ ಜಯಾನಂದ ಡೇರೇಕರ್. ಇವರ ಪ್ರಕಾರ ‘ಕುಣಬಿ ಜನಾಂಗದವರು ಮನೆ ಬಳಕೆಗಾಗಿ ಗೆಡ್ಡೆಗಳನ್ನು ಬೆಳೆಯುತ್ತಿದ್ದರು. ಅಗತ್ಯಬಿದ್ದಾಗ ಮೂರ್ನಾಲ್ಕು ಗೆಡ್ಡೆಗಳಿಗೆ ₹100ನಂತೆ ಮಾರುತ್ತಿದ್ದರು. ಮೇಳದ ನಂತರ ಕೆ.ಜಿ.ಗೆ ₹ 40 ರಿಂದ ₹ 50ರಂತೆ ಮಾರಾಟ ಮಾಡುತ್ತಿದ್ದಾರೆ’.

ಮೇಳ ಆರಂಭವಾಗಿದ್ದು..‌.

2014ರಲ್ಲಿ ಮೊದಲ ಮೇಳ ನಡೆಯಿತು. ಆಗ ಮೇಳದ ಪರಿಕಲ್ಪನೆಗೆ ಕೈ ಜೋಡಿಸಿದವರು ಜಯಾನಂದ ಡೇರೇಕರ್‌, ಬಾಲಚಂದ್ರ ಹೆಗಡೆ ಸಾಯಿಮನೆ, ಕಾಡುಮನೆ ಹೋಮ್ ಸ್ಟೇ ಮಾಲೀಕ ನರಸಿಂಹ ಭಟ್‌ ಮತ್ತಿತರರು. ಮೊದಲ ಮೇಳದ ನಂತರ, ಗೆಡ್ಡೆ–ಗೆಣಸು ಕೃಷಿ ಮಾಡುವವರ ಸಂಖ್ಯೆಯೂ ಹೆಚ್ಚಿತು. ಅದರಲ್ಲೂ ಡೇರಿಯ ಗ್ರಾಮದ ‘ಕುಣಬಿ ಮೂಡ್ಲಿ’ (Kunbi Colocasia)’ ತಳಿ ಬೆಳೆಯುವ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಕೆಲವರು ಭತ್ತದ ಕೃಷಿ ಬಿಟ್ಟು, ಇದನ್ನೇ ಮುಖ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ‘ಎರಡು ವರ್ಷಗಳ ಹಿಂದಿನವರೆಗೂ ಎರಡು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದೆ. ಈಗ ಗೆಣಸು, ಮೂಡ್ಲಿಯನ್ನೇ ಮುಖ್ಯವಾಗಿ ಬೆಳೆಯುತ್ತಿದ್ದೇನೆ. ವರ್ಷಕ್ಕೆ ಸುಮಾರು ₹70 ಸಾವಿರಕ್ಕೂ ಮಿಕ್ಕಿ ಆದಾಯ ಸಿಗುತ್ತಿದೆ’ ಎನ್ನುತ್ತಾರೆ ಅಂಬಾರ್ಡಾ ಗ್ರಾಮದ ಚಂದ್ರಕಾಂತ ಗಾವಡಾ. ‘ಈಗ ಹೇಳಿ, ಈ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಿದೆ ಅಲ್ಲವಾ’ – ನಗುತ್ತ ಪ್ರಶ್ನಿಸುತ್ತಾರೆ ಜಯಾನಂದ. ಈ ಸಂಘ ‘ಕುಣಬಿ ಮೂಡ್ಲಿ ತಳಿ’ ಬೆಳೆಸಿ, ಉಳಿಸಿದ ಕಾರಣಕ್ಕಾಗಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಕಳೆದ ವರ್ಷ ಸಂಘಕ್ಕೆ ‘ಸಸ್ಯ ಅನುವಂಶೀಯತೆ ಸಂರಕ್ಷಣೆ ಪ್ರಶಸ್ತಿ’ ಪ್ರದಾನ ಮಾಡಿದೆ.

ಎಲ್ಲೆಲ್ಲಿ ಮಾರಾಟವಾಗುತ್ತಿದೆ ?

ಮೇಳ ಆರಂಭವಾದ ಮೇಲೆ, ಇಲ್ಲಿನ ಗೆಡ್ಡೆ–ಗೆಣಸುಗಳು ತಾಲ್ಲೂಕು, ಜಿಲ್ಲೆ, ರಾಜ್ಯವನ್ನೂ ದಾಟಿದೆ. ಮೇಳಕ್ಕೆ ಬರುವ ಧಾರವಾಡ, ಬೆಳಗಾವಿ, ಕಾರವಾರ, ಗೋವಾದ ಮಂದಿ ಕ್ವಿಂಟಲ್‌ಗಟ್ಟಲೆ ಗೆಡ್ಡೆ–ಗೆಣಸು ಖರೀದಿಸುತ್ತಾರೆ. ಹೀಗಾಗಿ, ಗೋವಾದ ಸ್ಟಾರ್‌ ಹೋಟೆಲ್‌ಗಳವರೆಗೂ ಇಲ್ಲಿನ ಗೆಡ್ಡೆ–ಗೆಣಸು’ ತಲುಪಿದೆ. ‘ಸ್ಟಾರ್‌ ಹೋಟೆಲ್‌ಗಳ ತಿನಿಸುಗಳ ಪಟ್ಟಿಯಲ್ಲಿ ನಮ್ಮ ಗೆಡ್ಡೆ–ಗೆಣಸುಗಳ ಖಾದ್ಯಗಳಿವೆ ಎಂಬುದು ನಮಗೂ ಹೆಮ್ಮೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥ ರವಿ ಡೇರೇಕರ್.

ಈ ಗ್ರಾಮಗಳ ಗೆಡ್ಡೆ–ಗೆಣಸು ವಹಿವಾಟು ಗಮನಿಸಿದ ಬೆಂಗಳೂರಿನ ಕೂಲ್‌ ಕ್ರಾಪ್ಸ್‌ ಸಂಸ್ಥೆ, ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ₹4 ಲಕ್ಷ ವೆಚ್ಚ ಮಾಡಿ ಕೋಲ್ಡ್‌ ಸ್ಟೋರೇಜ್ ಘಟಕವನ್ನು ಅನುಸ್ಥಾಪಿಸಿದೆ. ಇದು ಮೂರು ಟನ್‌ ಗೆಡ್ಡೆ–ಗೆಣಸುಗಳನ್ನು ಕಾಪಿಡುವಷ್ಟು ಸಾಮರ್ಥ್ಯ ಹೊಂದಿದೆಯಂತೆ. ಈ ಮೇಳದಿಂದ ಉತ್ತೇಜನಗೊಂಡ ಸಹಜ ಸಮೃದ್ಧ ಕೃಷಿಕರ ಬಳಗ ಕೆಲವು ಸಂಘಟನೆಗಳ ಸಹಯೋಗದೊಂದಿಗೆ ಕಳೆದ ವರ್ಷದಿಂದ ಮೈಸೂರಿನಲ್ಲೂ ಇದೇ ರೀತಿ ಮೇಳವನ್ನು ಆಯೋಜಿಸುತ್ತಿದೆ.

8ಕ್ಕೆ ಜೊಯಿಡಾದಲ್ಲಿ ಮೇಳ

ಗೆಡ್ಡೆ–ಗೆಣಸು ನೋಡುವುದಕ್ಕಷ್ಟೇ ವಿಭಿನ್ನ, ವಿಶಿಷ್ಟ ಎನ್ನಿಸುವುದು ಮಾತ್ರವಲ್ಲ, ಅವುಗಳ ವೆರೈಟಿಯಲ್ಲೂ ಅಷ್ಟೇ ವೈವಿಧ್ಯವಿದೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 43 ವಿಧದ ಗೆಡ್ಡೆ ಗೆಣಸುಗಳನ್ನು ಬೆಳೆಯಲಾಗುತ್ತದೆ.

ಒಂದೊಂದು ತಳಿಗೂ, ಒಂದೊಂದು ಹೆಸರಿದೆ. ಉದಾ: ಮುಡಯೆ (ಮೂಡ್ಲಿ), ಕೋಣ್, ಡೇರಿಯಾ, ಅಂಬರ್ಡೆ, ಕಾಟೇಲಿ, ಧಾಡ್ಸೆ, ಅಂಬಟ್ಗಾಳಿ, ಶ್ರೀಪತಿ, ಗತಿಶೆರೋ, ಪಿರ್ಶೆ ಇತ್ಯಾದಿ. ಇವನ್ನೆಲ್ಲ ನೋಡಬೇಕೆಂದರೆ, ಇದೇ 8 ಮತ್ತು 9ರಂದು ಜೋಯಿಡಾದಲ್ಲಿ ನಡೆಯುವ ‘ಗೆಡ್ಡೆ–ಗೆಣಸು ಮೇಳ’ಕ್ಕೆ ಬರಬೇಕು. ಮೇಳದಲ್ಲಿ ಗೆಡ್ಡೆಗಳ ನೋಟದ ಜತೆಗೆ, ಅವುಗಳಿಂದ ತಯಾರಿಸಿದ ವಿವಿಧ ತಿನಿಸುಗಳ ರುಚಿ ಸವಿಯಬಹುದು. ಆಸಕ್ತಿ ಇದ್ದರೆ ಖರೀದಿಸಲೂಬಹುದು.

****

ಮೈಸೂರಿನಲ್ಲಿ 11 ಮತ್ತು 12ರಂದು

ಸಹಜ ಸಮೃದ್ಧ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜ.11, 12ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡನೇ ಬಾರಿಗೆ ‘ಗೆಡ್ಡೆ–ಗೆಣಸಿನ’ ಮೇಳ ಆಯೋಜಿಸಿದೆ.

ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ–ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆಗಳ ಪ್ರದರ್ಶನವಿರಲಿದೆ. ಇದರ ಜತೆಗೆ ಮಾರಾಟವೂ ನಡೆಯಲಿದೆ. ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಭಾಗದ ಆದಿವಾಸಿಗಳು, ಜೇನು ಕುರುಬ, ಬೆಟ್ಟ ಕುರುಬರು, ಸೋಲಿಗ, ಜೋಯಿಡಾ ಭಾಗದ ಕುಣಬಿ ಸಮುದಾಯದ ಪ್ರತಿನಿಧಿಗಳು ತಮ್ಮಲ್ಲಿನ ಅಪರೂಪದ ಗೆಡ್ಡೆ–ಗೆಣಸು, ಮೂಲಿಕೆಗಳನ್ನು ಮೇಳಕ್ಕೆ ತರಲಿದ್ದಾರೆ. ಗೆಣಸಿನ ಜೊತೆ ಸವಿಯಲು ಜೇನು ತರಲಿರುವುದು ವಿಶೇಷ.

ಕೇರಳದ ವಯನಾಡಿನ ಮಾನಂದವಾಡಿಯ ಎನ್‌.ಎಂ.ಶಾಜಿ ಇನ್ನೂರಕ್ಕೂ ಹೆಚ್ಚು ತರಹೇವಾರಿ ಉತ್ಪನ್ನಗಳನ್ನು ಮೇಳಕ್ಕೆ ತರಲಿದ್ದಾರೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಧಾರವಾಡದಲ್ಲಿನ ಅಖಿಲ ಭಾರತ ಗೆಡ್ಡೆ–ಗೆಣಸು ಸಂಶೋಧನಾ ಯೋಜನೆ ವಿಭಾಗದ ಸಿಬ್ಬಂದಿ ತಮ್ಮಲ್ಲಿನ 60 ಸಿಹಿ ಗೆಣಸಿನ ಉತ್ಪನ್ನಗಳನ್ನು ಮೇಳಕ್ಕೆ ತೆಗೆದುಕೊಂಡು ಬರಲಿದ್ದಾರೆ ಎಂದು ಸಹಜಸಮೃದ್ಧ ಸಂಸ್ಥೆಯ ಜಿ.ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಈ ಮೇಳದಲ್ಲಿ ಗೆಡ್ಡೆ–ಗೆಣಸು ಕೃಷಿ ಮಾಡುವ ಕುರಿತು ಹಾಗೂ ಗೆಡ್ಡೆಗಳಿಂದ ಮಾಡಬಹುದಾದ ಅಡುಗೆಗಳ ಪ್ರಾತ್ಯಕ್ಷತೆ ಸಹ ನಡೆಯಲಿದೆ. ಹೆಚ್ಚಿನ ವಿವರಗಳಿಗೆ 8867252979/8088118114 ಸಂಪರ್ಕಿಸಬಹುದು.

- ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.