ADVERTISEMENT

ಹರಿಕೃಷ್ಣರ ಮನೆಯಂಗಳದಲ್ಲಿ ‘ಗೆಡ್ಡೆಗಳ ಲೋಕ’

ಬೇಡಿಕೆ ಸೃಷ್ಟಿಸಿಕೊಂಡ ಗೆಡ್ಡೆ ತರಕಾರಿ: ರಾಸಾಯನಿಕ ಗೊಬ್ಬರ ಅನಗತ್ಯ, ರೋಗಬಾಧೆ ಕಡಿಮೆ

ನಾ.ಕಾರಂತ ಪೆರಾಜೆ
Published 23 ನವೆಂಬರ್ 2020, 19:45 IST
Last Updated 23 ನವೆಂಬರ್ 2020, 19:45 IST
ಕರಾವಳಿಗೆ ಹೊಸದಾದ 'ಮದ್ರಾಸ್ ವೆರೈಟಿ' ಕೆಸುವಿನೊಂದಿಗೆ ಹರಿಕೃಷ್ಣ ಕಾಮತ್ (ಚಿತ್ರಗಳು: ಲೇಖಕರವು)
ಕರಾವಳಿಗೆ ಹೊಸದಾದ 'ಮದ್ರಾಸ್ ವೆರೈಟಿ' ಕೆಸುವಿನೊಂದಿಗೆ ಹರಿಕೃಷ್ಣ ಕಾಮತ್ (ಚಿತ್ರಗಳು: ಲೇಖಕರವು)   
"ಅಭಿವೃದ್ಧಿ ಪಡಿಸಲೆಂದೇ ಜೋಯಿಡಾದಿಂದ ತಂದಿರುವ 'ಮುಂಡ್ಲಿ' ತಳಿ"
"ಆಲೂಗೆಡ್ಡೆ ಸ್ವಾದದ 'ಕಲಶ ಕೆಸು'."

‘ಗೆಡ್ಡೆ ತರಕಾರಿಗಳ ಕೃಷಿಯಲ್ಲಿ ನಾನಿನ್ನೂ ಎಲ್.ಕೆ.ಜಿ. ತರಗತಿ. ಜೋಯಿಡಾದಿಂದ ತಂದ ಗೆಡ್ಡೆಗಳು ಇಲ್ಲಿಗೆ ಹೇಗೆ ಹೊಂದಿಕೊಳ್ಳುತ್ತವೋ ಗೊತ್ತಿಲ್ಲ. ಅದನ್ನು ಬೆಳೆಸಿ, ಅಡುಗೆ ಮನೆಯಲ್ಲಿ ಬಳಸಿದ ಬಳಿಕವೇ ಇತರರಿಗೆ ಹೇಳಲು ಸಾಧ್ಯ. ಹೊಸತನ್ನು ಪರಿಚಯ ಮಾಡಲು ಸಮಯ ಬೇಕು‘ ಎಂದರು, ಸಾವಯವ ಕೃಷಿಕ ಹರಿಕೃಷ್ಣ ಕಾಮತ್. ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಡಗನ್ನೂರಿನ ಮುಡಿಪಿನಡ್ಕ ಸನಿಹದ ದುರ್ಗಾಗಿರಿಯವರು.

ಕಳೆದ ವರ್ಷ ಉತ್ತರ ಕನ್ನಡದ ಜೋಯಿಡಾದಲ್ಲಿ ನಡೆದ ಗೆಡ್ಡೆ ಮೇಳಕ್ಕೆ ಕಾಮತರು ಭೇಟಿ ನೀಡಿದ್ದರು. ಗೆಡ್ಡೆಗಳ ವೈವಿಧ್ಯಕ್ಕೆ ಮಾರುಹೋಗಿದ್ದ ಅವರು ಮರಳಿ ಬರುವಾಗ, ಎಂಟು ವಿಧದ ಗೆಡ್ಡೆಗಳನ್ನು ಜತೆಗೆ ತಂದಿದ್ದರು. ಈ ತಳಿಗಳು ಕರಾವಳಿಗೆ ಹೊಸತು. ಹೀಗೆ ತಂದವುಗಳಲ್ಲಿ ಮುಂಡ್ಲಿ ತಳಿಯ ಗೆಡ್ಡೆ ತುಂಬಾ ರುಚಿಯಂತೆ.

ಗೆಡ್ಡೆಗಳಿಗೆ ಆರೈಕೆ ಬೇಕು
ಹೀಗೆ ಗೆಡ್ಡೆ ಕೃಷಿ ಶುರು ಮಾಡಿದ್ದ ಹರಿಕೃಷ್ಣ ಅವರ ‌ಗೆಡ್ಡೆ ಸಂಸಾರದಲ್ಲಿ ನಲವತ್ತು ತರಹದ ಗೆಡ್ಡೆಗಳು ಸೇರಿವೆ. ಕೆಲವನ್ನು ಮನೆಗಾಗಿ ಬೆಳೆದರೆ, ಬಹುಪಾಲು ಮಾರಾಟಕ್ಕಾಗಿ ಆರೈಕೆ ಮಾಡಿ ಬೆಳೆಯತ್ತಾರೆ. ಗೆಡ್ಡೆ ತರಕಾರಿಗಳನ್ನು ಬೆಳೆಯಲು ಮೊದಲು ಜಾಗದ ತಯಾರಿ ಮುಖ್ಯ. ಹುಳದ ಬಾಧೆಯನ್ನು ನಿಯಂತ್ರಿಸಲು ಮಣ್ಣಿಗೆಸುಣ್ಣ ಹಾಕಿ. ತಿಂಗಳ ನಂತರ ಬೀಜದ ಗೆಡ್ಡೆಗಳನ್ನು ಮಣ್ಣಿನಲ್ಲಿ ಊರಬೇಕು. ಮಣ್ಣು ಸಡಿಲವಾಗಿರಬೇಕು. ಸಾಲು ಮಾಡುವಾಗಲೇ ತರಗೆಲೆಗಳನ್ನು ಹಾಕಿದರೆ ಮಣ್ಣು ಸಡಿಲವಾಗುತ್ತದೆ. ಬಳಿಕ ಸುಡುಮಣ್ಣು, ಉಮಿಕರಿ ಸೇರಿಸಿಅದರ ಮೇಲೆ ಗೆಡ್ಡೆಯ ಬೀಜಗಳನ್ನು ಊರಿದರಾಯಿತು. ಆಳ ಸಾಲುಗಳ ಅಥವಾ ಹೊಂಡಗಳ ಅಗತ್ಯವಿಲ್ಲ.

ADVERTISEMENT

ಮೊದಲು ಸೆಗಣಿ ಮತ್ತು ಬೀಜಾಮೃತದಲ್ಲಿ ಮಿಂದ ಬೀಜಗಳನ್ನು ನೆರಳಿನಲ್ಲಿ ಒಣಗಿಸುತ್ತಾರೆ. ಏಪ್ರಿಲ್ ತಿಂಗಳಿನಲ್ಲಿ (ಯುಗಾದಿ) ಗೆಡ್ಡೆ ಬೀಜಗಳನ್ನು ನಾಟಿ ಮಾಡುತ್ತಾರೆ.ಒಂದು-ಒಂದೂವರೆ ತಿಂಗಳಲ್ಲಿ ಮಳೆಯಾಗಿ ಗೆಡ್ಡೆಗಳು ಮೊಳಕೆ ಬಂದು ಚಿಗುರುತ್ತವೆ. ಅಕ್ಟೋಬರ್ ತಿಂಗಳಿಗಾಗುವಾಗ ಗೆಡ್ಡೆಯು ಅಗೆಯಲು ಸಿದ್ಧವಾಗಿರುತ್ತದೆ. ಕೀಟನಾಶಕ ಸಿಂಪಡಣೆ, ರಾಸಾಯನಿಕ ಗೊಬ್ಬರಗಳನ್ನು ಬಯಸದ ತರಕಾರಿಯಿದು. ರೋಗಬಾಧೆ ಕಡಿಮೆ.

ಅಭಿವೃದ್ಧಿ ಪಡಿಸಲೆಂದೇ ಜೋಯಿಡಾದಿಂದ ತಂದಿರುವ 'ಮುಂಡ್ಲಿ' ತಳಿ

ವಿವಿಧ ವೈವಿಧ್ಯ
ಸಲಾಡ್‌ಗೆ ಬಳಸುವ ತುರಿಸದ ಕೆಸು. ‘ಇದರ ಎಲೆಯನ್ನು ಹಸಿಯಾಗಿಯೇ ತಿನ್ನಬಹುದು. ಆದರೆ ಇದಕ್ಕೆ ಗೋಮೂತ್ರ, ಸೆಗಣಿಯನ್ನು ನೇರವಾಗಿ ಉಣಿಸಿದರೆ ತುರಿಸುವ ಗುಣ ಬಂದುಬಿಡುತ್ತದೆ. ಹಾಗಾಗಿ ಗೊಬ್ಬರವನ್ನು ಕನಿಷ್ಠ ಹದಿನೈದು ದಿವಸವಾದರೂ ಹಳತು ಮಾಡಿ (ಕಳಿಸಿ) ಉಣಿಸಬೇಕು’ ಎಂದರು ಕಾಮತರು.

ಎರಡು ವಿಧದ ಹಾಲು ಗೆಣಸುಗಳಿವೆ. ಇದರಲ್ಲೊಂದರ ಗೆಡ್ಡೆಗಳು ಅಗಲವಾಗಿ ಬೆಳೆದರೆ, ಮತ್ತೊಂದು ಆಳವಾಗಿ ಮಣ್ಣಿಗಿಳಿದು ಬೆಳೆಯುತ್ತದೆ. ಅದಕ್ಕಾಗಿ ನೆಡುವಾಗಲೇ ಬೀಜದ ಗೆಡ್ಡೆಯನ್ನು ಊರುವ ಹೊಂಡಕ್ಕೆ ಕಲ್ಲನ್ನು ಹಾಸಿ. ಅದರ ಮೇಲೆ ಮಣ್ಣು-ಗೊಬ್ಬರ ಹಾಕಿ ಬೆಳೆಸಿದರೆ ಆಳಕ್ಕೆ ಇಳಿಯದೆ ಅಗಲವಾಗಿ ಹಬ್ಬುತ್ತದೆ.

ಪತ್ರೊಡೆ (ಕೆಸು) ಎಲೆಗಾಗಿಯೇ ಇನ್ನೊಂದು ವೆರೈಟಿ. ಕೋವಿಡ್ ಪೂರ್ವದಲ್ಲಿ ವಾರಕ್ಕೆ 28 ರಿಂದ 30 ಕಟ್ಟುಗಳಿಗೆ ಬೇಡಿಕೆಯಿತ್ತು. ಒಂದು ಕಟ್ಟಿನಲ್ಲಿ ಎಂಟು ಎಲೆ. ₹20 ದರ. ಪ್ರತಿ ವಾರ ಎಲೆ ತೆಗೆಯುತ್ತಾ ಇರುವುದರಿಂದ ಗೆಡ್ಡೆಯ ಬೆಳವಣಿಗೆ ಕುಂಠಿತವಾಗುತ್ತದೆ. ಚಳಿಗಾಲದ ಮೊದಲ ಋತುವಿನಲ್ಲಿ ಎಲೆ, ದಂಟು ಎರಡೂ ಮಾರಿಹೋಗುತ್ತಿತ್ತು.

ಇನ್ನೊಂದು ಚೈನೀಸ್ ಪೊಟೆಟೊ (ಕೂಕ ಅಥವಾ ಸಾಂಬ್ರಾಣಿ ಎಂದೂ ಹೇಳುತ್ತಾರೆ). ತುಂಬಾ ರುಚಿ. ಕೆ.ಜಿಗೆ ₹150ರವರೆಗೂ ದರವಿದೆ. ಇದನ್ನು ಕೇಳಿ ಕೊಳ್ಳುವವರು ಇದ್ದಾರೆ. ಇದರಲ್ಲಿ ಕಪ್ಪು ತಳಿಯದ್ದಿದೆ. ತುಂಬಾ ನಿರೀಕ್ಷೆಯ ‘ಕಲಶ ಕೆಸು’ (ನೋಡಲು ಕಲಶದ ಆಕಾರ) ಆಲೂಗೆಡ್ಡೆಗೆ ಪರ್ಯಾಯ! ಖಾದ್ಯ ಮಾಡಿದರೆ ಆಲೂ ಖಾದ್ಯಗಳನ್ನು ತಿಂದ ಅನುಭವ. ಇನ್ನೊಂದು ಕಪ್ಪು ಕೆಸು. ಪದಾರ್ಥ ಮಾಡಿದರೆ ಬೀಟ್‌ರೂಟಿನಂತೆ ಕೆಂಪು ಬಣ್ಣ.

ಕಾಯಂ ಗ್ರಾಹಕರು
ಇವಿಷ್ಟಲ್ಲದೆ ಮರಗೆಣಸು, ಅರಶಿನ, ತುಪ್ಪ ಗೆಣಸು, ಆರಾರೂಟ್, ಮಾವು ಶುಂಠಿ.. ಹೀಗೆ ಗೆಡ್ಡೆಗಳ ಸುತ್ತ ಕಾಮತರ ಆಸಕ್ತಿ ಗಮನೀಯ. ಗೆಡ್ಡೆ ತರಕಾರಿಗಳಿಗೆ ತಾಳಿಕೆ ಹೆಚ್ಚು. ಇತರ ತರಕಾರಿಗಳು ಕೊಯಿದು ಒಂದು ವಾರದೊಳಗೆ ಬಳಸಿ ಮುಗಿದುಬಿಡಬೇಕು. ಮಂಗಳೂರಿನ ಸಾವಯವ ಕೃಷಿಕರ ಬಳಗದ ಸಂಪರ್ಕದ ಬಳಿಕ ಕಾಮತರಿಗೆ ಮಾರುಕಟ್ಟೆಯ ತಲೆನೋವಿದ್ದಿರಲಿಲ್ಲ. ಪ್ರತಿ ಭಾನುವಾರ ಸಾವಯವ ಸಂತೆ ನಡೆಯುತ್ತಿತ್ತು. ಈಗಲೂ ನಡೆಯುತ್ತಿದೆ.

ಆಲೂಗೆಡ್ಡೆ ಸ್ವಾದದ 'ಕಲಶ ಕೆಸು'.

ಖಾಯಂ ಗ್ರಾಹಕರಿಗೆ ಯಾರು, ಯಾರಲ್ಲಿ ಎಂತೆಂತಹ ತರಕಾರಿ ಇದೆ ಎಂಬ ವಿವರಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಹಿಂದಿನ ದಿನ ಸಂತೆಯ ಸಂಘಟಕರು ಹಾಕುತ್ತಾರೆ. ‘ನನ್ನಲ್ಲಿ ಏನೇನಿದೆ ಎಂದು ಮೊದಲೇ ವಿವರ ನೀಡುವುದರಿಂದ ತರಕಾರಿಗಳನ್ನು ಗ್ರಾಹಕರು ಕಾದಿರಿಸುವುದೂ ಇದೆ. ಬೇಡಿಕೆ ಇದ್ದಷ್ಟೇ ತರಕಾರಿ ಒಯ್ದರೆ ಒಯ್ಯುತ್ತಿದ್ದೆ' ಎನ್ನುತ್ತಾರೆ. ಈಗ ಕೋವಿಡ್ ಸಂಕಟವಾದ್ದರಿಂದ ಮಾರ್ಚ್ ತಿಂಗಳ ಬಳಿಕ ಕಾಮತರು ಮಾರುಕಟ್ಟೆಯಲ್ಲಿ ಮಾರಿಲ್ಲ. ಆಸಕ್ತರು ಮನೆಗೆ ಬಂದು ಒಯ್ಯುತ್ತಾರೆ.

ಮೀನಿನ ಗೊಬ್ಬರ ಹಾಕಬೇಡಿ...
ನನ್ನ ಮಿತ್ರರೊಬ್ಬರು ಒತ್ತಾಯದಿಂದ ಮೀನಿನ ಗೊಬ್ಬರ ಕೊಟ್ಟರು. ಒಲ್ಲದ ಮನಸ್ಸಿನಿಂದ ಹಸಿ ಹುಲ್ಲಿಗೆ (ಜಾನುವಾರು ತಿನ್ನುವ) ಗೊಬ್ಬರ ಹಾಕಿದೆ. ಗೊಬ್ಬರದ ಪರಿಮಳಕ್ಕೆ ಎಲ್ಲಿದ್ದುವೋ ಏನೋ ಹಂದಿಗಳು ಮುತ್ತಿದುವು. ಗೆಡ್ಡೆಗಳನ್ನು ಮುಕ್ಕಿದುವು. ಅವುಗಳ ಜತೆಗೆ ಹೆಗ್ಗಣಗಳೂ ಸೇರಿದವು. ನಾನು ಆ ಹೊತ್ತಿಗೆ ಮನೆಯಲ್ಲಿ ಇರಲಿಲ್ಲ. ಎಲ್ಲಿ ತಪ್ಪಾಗಿದೆ ಎಂದು ತಿಳಿಯಿತು. ಅಂದೇ ಮೀನಿನ ಗೊಬ್ಬರಕ್ಕೆ ವಿದಾಯ. ನಂತರ ಹಂದಿಗಳ ಕಾಟವಿಲ್ಲ ಎಂದು ನೆನಪಿಸಿಕೊಂಡರು ಹರಿಕೃಷ್ಣ

ಗೆಡ್ಡೆ ತಿಜೋರಿ ಕುರಿತ ಮಾಹಿತಿಗಾಗಿ ಹರಿಕೃಷ್ಣ ಕಾಮತ್ ಸಂಪರ್ಕ ಸಂಖ್ಯೆ:94813 90710

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.