ADVERTISEMENT

‘ಆನೆಸೊಂಡಿಲ’ಲ್ಲಿ ಚಿಮ್ಮಿತು ನೀರು!

ಎಂ.ರಾಘವೇಂದ್ರ
Published 20 ಏಪ್ರಿಲ್ 2020, 19:30 IST
Last Updated 20 ಏಪ್ರಿಲ್ 2020, 19:30 IST
ಕೆರೆ ಹೂಳೆತ್ತುವಾಗಲೇ ಚಿಮ್ಮುತ್ತಿರುವ ನೀರು
ಕೆರೆ ಹೂಳೆತ್ತುವಾಗಲೇ ಚಿಮ್ಮುತ್ತಿರುವ ನೀರು   

ಇದು ಲಾಕ್‌ಡೌನ್ ಕಾಲದ ಚಮತ್ಕಾರವೇ ಸರಿ. ಕೆಲವರ ಜಾಯಮಾನವೇ ಅಂಥದ್ದು. ಲೋಕವೇ ತಲೆ ಕೆಳಗಾಗಿ ನಿಂತರೂ ತಾವು ಅಂದುಕೊಂಡಿದ್ದನ್ನು ಮಾಡಿಯೇ ಸಿದ್ಧ ಎಂಬ ಛಲದಂಕಮಲ್ಲರು ಅವರು.

ಕೊರೊನಾದ ಕರಿನೆರಳು ವಿಧಿಸಿದ ಲಾಕ್‌ಡೌನ್‌ನಿಂದಾಗಿ ಹಲವರಿಗೆ ಹೊತ್ತು ಕಳೆಯುವುದು ಹೇಗೆಂಬ ಚಿಂತೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚಿಪ್ಪಳಿ-ಲಿಂಗದಹಳ್ಳಿ ಗ್ರಾಮಸ್ಥರು ತಮ್ಮೂರಿನ ಕೆರೆಗೆ ಕಾಯಕಲ್ಪ ನೀಡುವ ಕಾಯಕಕ್ಕೆ ಇಟ್ಟಿದ್ದ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಲಿಲ್ಲ.

ಕಳೆದ ವರ್ಷ ತಮ್ಮ ಗ್ರಾಮದ ಬಂಗಾರಮ್ಮನ ಕೆರೆಯ ಹೂಳೆತ್ತಿದ ಯಶೋಗಾಥೆ ಲಿಂಗದಹಳ್ಳಿ ಗ್ರಾಮಸ್ಥರ ಸ್ಮೃತಿಪಟಲದಲ್ಲಿ ಅಚ್ಚೊತ್ತಾಗಿತ್ತು. ಅಷ್ಟಕ್ಕೆ ಸುಮ್ಮನಾಗುವ ಅಲ್ಪತೃಪ್ತರು ಅವರಾಗಿರಲಿಲ್ಲ. ಹೆಸರಿಗೆ ಮಲೆನಾಡು ಎಂಬ ಹಣೆಪಟ್ಟಿ ಇದ್ದರೂ ತಮ್ಮೂರಿಗೆ ಎದುರಾಗಿರುವ ಜಲಕಂಟಕವನ್ನು ಎದುರಿಸಲು ಅವರು ಮೂರು ತಿಂಗಳ ಹಿಂದೆಯೇ ಕಂಕಣ ತೊಟ್ಟಿದ್ದರು.

ADVERTISEMENT

ಹೂಳೆತ್ತುವ ಕೆಲಸ ಆರಂಭ

ಕೆರೆಯ ಹೂಳೆತ್ತುವುದು ಎಂದರೆ ಯಾವಾಗ ಬೇಕಾದರೂ ಕಾಮಗಾರಿಯ ಶಾಸ್ತ್ರ ಮಾಡಿ ಬಿಲ್ ಪೀಕಿಸಿಕೊಳ್ಳಲು ಅದೇನು ಸರ್ಕಾರದ ಕೆಲಸವೆ? ಕೆರೆಯಲ್ಲಿ ನೀರು ಸಂಪೂರ್ಣವಾಗಿ ಬತ್ತಿದಾಗಲೇ ಅದರ ಹೂಳೆತ್ತಿ ಅಭಿವೃದ್ಧಿಗೊಳಿಸಬೇಕು ಎಂಬ ಸಾಮಾನ್ಯ ಜ್ಞಾನ ಹಳ್ಳಿಗರಲ್ಲಿ ಸಹಜವಾಗಿ ಮೂಡಿತ್ತು. ಹೀಗಾಗಿ ಏಪ್ರಿಲ್ ತಿಂಗಳ ಆರಂಭದಲ್ಲಿ ಗ್ರಾಮದ ಆನೆಸೊಂಡಿಲು ಕೆರೆಯ ಹೂಳೆತ್ತಬೇಕು ಎಂದು ನಿಶ್ಚಯವಾಗಿತ್ತು. ದಿಢೀರನೆ ಅಪ್ಪಳಿಸಿದ ಕೋವಿಡ್-19 ಎಂಬ ‘ಸಿಡಿಲು’ ಗ್ರಾಮಸ್ಥರ ಈ ಸಂಕಲ್ಪದ ಮೇಲೆ ಕಾರ್ಮೋಡ ಆವರಿಸುವಂತೆ ಮಾಡಿತು. ಹಾಗೆಂದು ಹಳ್ಳಿಗರು ಧೃತಿಗೆಡಲಿಲ್ಲ. ಇಡೀ ದೇಶ ಕೊರೊನಾ ಭೀತಿಯಿಂದ ಬಳಲುತ್ತಿರುವ ಹೊತ್ತಿನಲ್ಲೇ ನಾಳಿನ ನೀರ ನೆಮ್ಮದಿಗಾಗಿಹಾಗೂ ವನ್ಯಜೀವಿಗಳಿಗಾಗಿ, ಮುಚ್ಚಿಹೋಗಿದ್ದ ತಮ್ಮೂರಿನ ಆನೆಸೊಂಡಿಲು ಕೆರೆಯ ಹೂಳೆತ್ತುವ ಕೆಲಸ ಆರಂಭಿಸಿಯೇ ಬಿಟ್ಟರು.

ಮಾರ್ಚ್ 31ರಂದು ಕೆರೆಯ ಹೂಳೆತ್ತುವ ಕಾಮಗಾರಿ ಆರಂಭವಾದಾಗ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಹೇಳಿದ್ದು–ಇದಕ್ಕೆ ಏನಿಲ್ಲವೆಂದರೂ ₹10 ಲಕ್ಷ ಬೇಕು ಎಂದು. ಹಳ್ಳಿಗರ ಬಳಿ ಇದ್ದದ್ದು ಕರ್ನಾಟಕ ಬ್ಯಾಂಕ್ ನೀಡಿದ ₹ 2 ಲಕ್ಷ ನೆರವಿನ ಭರವಸೆಯ ಸ್ಯಾಂಕ್ಷನ್ ಲೆಟರ್ ಮಾತ್ರ.

ಸರ್ಕಾರಿ ಅಧಿಕಾರಿಗಳಿಗಿಂತ ಭಿನ್ನವಾದ ಜೀವನಾನುಭವ ಗ್ರಾಮಸ್ಥರ ಬಳಿ ಇರುತ್ತದೆಯಲ್ಲವೆ? ಅರ್ಧ ಎಕರೆಗೂ ಸ್ವಲ್ಪ ಹೆಚ್ಚು ವಿಸ್ತೀರ್ಣದ ಕೆರೆಯ ಉದ್ದ, ಅಗಲ, ಆಳ ಲೆಕ್ಕ ಹಾಕಿದ ಗ್ರಾಮಸ್ಥರು ₹5 ಲಕ್ಷದೊಳಗೆ ಕೆಲಸ ಮುಗಿಸಬಹುದು ಎಂಬ ತೀರ್ಮಾನಕ್ಕೆ ಬಂದರು.

ಹೀಗೆ ಧೈರ್ಯ ಮಾಡಿದ್ದೇ ತಡ ಒಂದು ಹಿಟಾಚಿಯನ್ನು ತರಿಸಿ ಚಾಲಕನಿಗೆ ಮಾಸ್ಕ್ ತೊಡಿಸಿ ಕೆರೆಗೆ ಇಳಿಸಿಯೇ ಬಿಟ್ಟರು. ಸಂಪೂರ್ಣ ಹೂಳು ತುಂಬಿದ ಕೆರೆಯ ಮೇಲೆ ಹೊನ್ನೇರಲು, ಹೊಳೆಗೇರಲು ಗಿಡಗಳು ಚಾಚಿಕೊಂಡಿದ್ದವು. ಕೆರೆಯ ಹೂಳಿನ ಮೇಲೆ ಅದೇ ಮಟ್ಟಿ, ಗಿಡಗಳ ಎಲೆ ಮತ್ತು ದಂಟುಗಳನ್ನೆ ಉಪಯೋಗಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಯಿತು.

ಸಾಮಾಜಿಕ ಜಾಲತಾಣಗಳ ನೆರವು

ಕೆರೆಯಂಚಿನ ಧರೆಯ ಗೊಚ್ಚುಮಣ್ಣು ಕೆರೆಗೆ ಬಿತ್ತು. ಕೆರೆಯ ಸುತ್ತಲೂ ಮತ್ತು ಮಧ್ಯದಲ್ಲಿ ರಸ್ತೆ ತಲೆ ಎತ್ತಿತು. ಇಷ್ಟು ಮಾಡುವ ಹೊತ್ತಿಗೆ ಮೂರು ದಿನ ಕಳೆದು ಬ್ಯಾಂಕ್‌ನವರು ಭರವಸೆ ನೀಡಿದ್ದ ₹2 ಲಕ್ಷದಲ್ಲಿ ಅರ್ಧದಷ್ಟು ಹಣ ಖರ್ಚಾಗುವ ಹಂತಕ್ಕೆ ಬಂದಿತ್ತು.

ಯಾರ ಬಳಿಯಾದರೂ ಹಣ ಕೇಳೋಣವೆಂದರೆ ಎಲ್ಲೆಡೆ ಲಾಕ್‌ಡೌನ್‌. ಆಗ ನೆರವಿಗೆ ಬಂದಿದ್ದು ಸಾಮಾಜಿಕ ಜಾಲತಾಣ. ಪ್ರತಿದಿನ ಕೆರೆ ಕಾಯಕಲ್ಪ ಕಾಮಗಾರಿ ಪ್ರಗತಿಯ ವಿವರಗಳನ್ನು ಚಿಕ್ಕ ಟಿಪ್ಪಣಿಯೊಂದಿಗೆ ಆ ಜಾಲತಾಣಗಳಲ್ಲಿ ಹರಿಯಬಿಡಲಾಯಿತು. ‘ಸಾಧ್ಯವಾದರೆ ನೆರವು ನೀಡಿ’ ಎಂಬ ಸೌಜನ್ಯದ ಕೋರಿಕೆಯನ್ನು ಟ್ಯಾಗ್ ಮಾಡಲಾಗಿತ್ತು.

ಹಿಂದಿನ ವರ್ಷ ಬಂಗಾರಮ್ಮನ ಕೆರೆಯ ಹೂಳೆತ್ತಿದ ಟ್ರ್ಯಾಕ್ ರೆಕಾರ್ಡ್ ತಿಳಿದವರು ತುಂಬು ಮನಸ್ಸಿನಿಂದ ಸಹಾಯಕ್ಕೆ ಮುಂದಾದರು. ಗ್ರಾಮದ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಉಳಿಸಿದ್ದ ಹಣವನ್ನು ‘ಕೆರೆಗೆ ಒಳ್ಳೆಯದಾಗಲಿ’ ಎಂದು ಹರಸಿ ನೀಡಿದರು. ಇಷ್ಟಾದರೂ ಖರ್ಚಿನ ಬಾಬ್ತು ಏರುತ್ತಲೇ ಇತ್ತು. ದಿನಕ್ಕೆ ಒಂದು ಹಿಟಾಚಿ, ನಾಲ್ಕು ಟಿಪ್ಪರ್‌ನ ಖರ್ಚು ₹ 35 ಸಾವಿರದಷ್ಟು ಬರುತ್ತಿತ್ತು. ಒಂದು ಹಂತದಲ್ಲಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿಯೂ ಬಂದಿತ್ತು.

ಕೆರೆ ಕಾಯಕಲ್ಪದ ಉಸ್ತುವಾರಿ ಹೊತ್ತಿದ್ದ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಎಲ್.ವಿ.ಅಕ್ಷರ ಮೊದಲಾದವರ ತಂಡ ಕಾಮಗಾರಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಸುರೇಶ್ ಗೌಡ ಮತ್ತು ತಂಡದವರೊಂದಿಗೆ ಚರ್ಚೆಗೆ ಮುಂದಾದರು. ‘ಡೀಸೆಲ್ ಮತ್ತು ಊಟದ ಖರ್ಚು ಮಾತ್ರ ಕೊಡಿ. ಉಳಿದಿದ್ದನ್ನು ಎರಡು ತಿಂಗಳ ನಂತರ ಕೊಡಿ. ಕೆಲಸ ನಿಲ್ಲಿಸುವುದು ಬೇಡ’ ಎಂದು ಸುರೇಶ್ ಗೌಡ ಹೇಳಿದ್ದು ಜಲಕಾಯಕಕ್ಕೆ ಮುಂದಾದವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಚಿಮ್ಮಿತು ನೀರು...

ಕೆರೆಯ ಹೂಳಿನ ಮೇಲೆ ನಿರ್ಮಿಸಿದ ಶಿಥಿಲ ತಾತ್ಕಾಲಿಕ ರಸ್ತೆಯಲ್ಲಿ ಹಿಟಾಚಿಯ ಗಾಲಿಗಳು ತೊಯ್ದಾಡುತ್ತ ನೆಲಕ್ಕೆ ಬೇರನ್ನಿಳಿಸಿ ಹೂಳನ್ನು ಮೇಲೆಕ್ಕೆತ್ತಿದವು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಹೂಳಿನಡಿಯಲ್ಲಿ ಅವಿತುಕುಳಿತ ಜಲಕಿಂಡಿಗಳು ‘ಇಗೋ ಹೊರ ಬಂದೆವು’ ಎನ್ನುವಂತೆ ಭೂಗರ್ಭ ಸೀಳಿ ತಣ್ಣಗೆ ಚಿಮ್ಮಲು ಆರಂಭಿಸಿತ್ತು.

17ನೇ ದಿನಕ್ಕೆ ಕೆರೆಯಲ್ಲಿ ಮೂರು ಅಡಿಯಷ್ಟು ನೀರು ನಳನಳಿಸುತ್ತ ಸಂಗ್ರಹಣೆಯಾಯಿತು. 10 ಲೀಟರ್‌ ನೀರಿಗೆ ತತ್ವಾರ ಎನ್ನುವಂತಿದ್ದ ಆನೆಸೊಂಡಿಲು ಕೆರೆಯಲ್ಲಿ ಈಗ 40 ಲಕ್ಷ ಲೀಟರ್‌ನಷ್ಟು ನೀರು ಸಂಗ್ರಹವಾಗಿದೆ.

ಹೀಗೆ ಕೋವಿಡ್ ಸಂಕಷ್ಟದ ಸಂದಿಗ್ದದ ಕಾಲದಲ್ಲೂ ಜಲ ಭದ್ರತೆಗಾಗಿ ಅಂತರ ಕಾಯ್ದುಕೊಳ್ಳತ್ತಲೇ ಯಶಸ್ಸು ಗಳಿಸಿದ ಅಗ್ಗಳಿಕೆ ಸಾಗರ ತಾಲ್ಲೂಕು ಜೀವಜಲ ಕಾರ್ಯಪಡೆ ಮತ್ತು ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯದ್ದು.

ಅಭಿವೃದ್ಧಿ ಎಂದರೆ ಕೇವಲ ಗಾಜು ಮುಟ್ಟಿದ ಅನುಭವವಾಗದೆ ತಳಸ್ಪರ್ಶಿಯಾಗಿರಬೇಕು ಎಂಬ ಮನಸ್ಸುಗಳಿಂದ ಆಗಿರುವ ಕೆಲಸವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.