ADVERTISEMENT

ಪಾಲಿಹೌಸ್‌ನಲ್ಲಿ ಇಂಗ್ಲಿಷ್ ಸೌತೆ

ಚಳ್ಳಕೆರೆ ವೀರೇಶ್
Published 4 ಮಾರ್ಚ್ 2019, 19:30 IST
Last Updated 4 ಮಾರ್ಚ್ 2019, 19:30 IST
ಪಾಲಿಹೌಸ್ -ಚಿತ್ರಗಳು: ಲೇಖಕರವು
ಪಾಲಿಹೌಸ್ -ಚಿತ್ರಗಳು: ಲೇಖಕರವು   

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಎಂದರೆ, ವರ್ಷದ ಮುಕ್ಕಾಲು ಭಾಗ ಬಿರುಬಿಸಿಲಿರುವ ಪ್ರದೇಶ. ಮಳೆಯೂ ಕಡಿಮೆ. ಅಂತರ್ಜಲ ಪಾತಾಳಕ್ಕಿಳಿದಿದೆ. ಇಂಥ ವಾತಾವರಣದಲ್ಲಿ, ಲಭ್ಯ ನೀರಿನಲ್ಲೇ ಕೃಷಿ - ಹೈನುಗಾರಿಕೆ ಸಾಧ್ಯ ಎಂಬುದನ್ನು ಮಾಡಿ ತೋರಿಸಿದ್ದಾರೆ ಚಳ್ಳಕೆರೆಯ ಯುವ ಕೃಷಿಕ ಟಿ.ಮಂಜುನಾಥ್.

ಮಂಜುನಾಥ್ ಬಿ.ಎ. ಪದವೀಧರರು. ಏಳೆಂಟು ವರ್ಷ ಸೇಲ್ಸ್‌ಮ್ಯಾನ್ ಆಗಿ ಬೆಂಗಳೂರು, ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಬಗ್ಗೆ ತೃಪ್ತಿ ಇರಲಿಲ್ಲ. ಇತ್ತ ಊರಲ್ಲಿದ್ದ ತಂದೆ-ತಾಯಿ ‘ವಾಪಸ್ ಊರಿಗೆ ಬಂದು ಕೃಷಿ ಮಾಡು’ ಎಂದು ಒತ್ತಾಯಿಸುತ್ತಿದ್ದರು. ಹೀಗಾಗಿ ಮೂರು ವರ್ಷಗಳ ಹಿಂದೆ ಕೃಷಿ ಮಾಡುವುದಕ್ಕಾಗಿಯೇ ಊರಿಗೆ ವಾಪಸ್ ಬಂದರು.

ಚಳ್ಳಕೆರೆ ಸಮೀಪದ ಅಜ್ಜಯ್ಯನಗುಡಿ ರಸ್ತೆಯಲ್ಲಿ ಅವರ ತಂದೆಯ ಪಾಲಿಗೆ ಬಂದಿದ್ದ ಐದು ಎಕರೆ ಜಮೀನಿತ್ತು. ಅಲ್ಲೇ ಕೃಷಿ ಶುರು ಮಾಡಿದರು. ಆರಂಭದಲ್ಲಿ ಜಮೀನಿನಲ್ಲಿ ಬೆಳೆದಿದ್ದ ಜಾಲಿ ಗಿಡಗಳನ್ನು ಸ್ವಚ್ಛಗೊಳಿಸಿದರು. ಗುಡ್ಡೆಯಾಗಿದ್ದ ಮಣ್ಣಿನ ರಾಶಿಯನ್ನು ಸಮತಟ್ಟು ಮಾಡಿಸಿದರು. ಕೆರೆ ಮಣ್ಣು ಹೊಡೆಸಿ, ಕೊಟ್ಟಿಗೆ ಗೊಬ್ಬರ ಹರಗಿಸಿ, ಭೂಮಿ ಸಿದ್ಧ ಮಾಡಿದರು.

ADVERTISEMENT

ಭೂಮಿ ಸಿದ್ಧವಾಯಿತು. ಆದರೆ ಕೃಷಿ ಮಾಡುವುದಕ್ಕೆ ನೀರಿಲ್ಲ. ಆ ವರ್ಷ ಮಳೆಯೂ ಬರಲಿಲ್ಲ. ಭೂಮಿ ತಣಿಯಲಿಲ್ಲ. ಹೀಗಾಗಿ ಒಂದು ಕೊಳವೆಬಾವಿ ಕೊರೆಸಿದರು. ಆದರೆ, ಅದರಲ್ಲೂ ಹೆಚ್ಚು ನೀರು ಸಿಗಲಿಲ್ಲ. ಸಿಕ್ಕಷ್ಟೇ ನೀರಿನಲ್ಲಿ ಮೊದಲು ರಾಗಿ ಬೆಳೆದರು. ನಂತರ ತರಕಾರಿ ಕೃಷಿ ಆರಂಭಿಸಿದರು.

ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡಿದರು. ‘ನಮ್ಮ ತಾತನ ಕಾಲದಿಂದಲೂ ತರಕಾರಿ ಬೆಳೆಯತ್ತಿದ್ದೇವೆ. ಈಗಲೂ ರಾಗಿ, ಸಜ್ಜೆ, ನವಣೆ ಜತೆ ಬದನೆ, ಟೊಮೆಟೊ, ಹೀರೆಕಾಯಿ, ಬೆಂಡೆ, ವಿವಿಧ ಸೊಪ್ಪು ಬೆಳೆ ಇದ್ದೇ ಇರುತ್ತದೆ. ಬೇಡಿಕೆ ಮತ್ತು ಬೆಲೆ ನೋಡಿಕೊಂಡು ಮಾರಾಟ ಮಾಡುತ್ತೇವೆ. ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಯನ್ನೇ ತರಕಾರಿ ಮಾರಾಟಕ್ಕೆ ಅಲಂಬಿಸಿದ್ದೇವೆ’ ಎನ್ನುತ್ತಾರೆ ಮಂಜುನಾಥ್.

ಕೃಷಿಯೊಂದನ್ನೇ ನಂಬಿಕೊಂಡರೆ, ಬದುಕು ಅನಿಶ್ಚಿತವಾಗುತ್ತದೆ. ನಿತ್ಯದ ಆದಾಯಕ್ಕಾಗಿ ಬೇರೆ ದಾರಿ ಹುಡುಕಬೇಕು ಎನ್ನುತ್ತಾ ಮಂಜುನಾಥ್ ಹೊರಳಿದ್ದು ಹೈನುಗಾರಿಕೆಯತ್ತ. ಆರಂಭದಲ್ಲಿ ಒಂದೆರಡು ಹಸುಗಳನ್ನು ಖರೀದಿಸಿದರು. ಈಗ ಅವರ ಬಳಿ 20 ಹಸುಗಳಿವೆ. ಅದರಲ್ಲಿ 5 ಹಸುಗಳು ಹಾಲು ಕೊಡುತ್ತಿವೆ. ಮುಂಜಾನೆ 30 ಲೀಟರ್, ಸಂಜೆ 25 ಲೀಟರ್ ಹಾಲು ಸಿಗುತ್ತದೆ. ಅದನ್ನು ಹತ್ತಿರದ ಗೊರ್ಲಕಟ್ಟೆ ಹಾಲಿನ ಕೇಂದ್ರಕ್ಕೆ ಕಳುಹಿಸುತ್ತಾರೆ. ಒಂದು ಕಾಲದಲ್ಲಿ ಬೇರೆ ಕಂಪನಿಯಲ್ಲಿ ನೌಕರನಾಗಿದ್ದ ಮಂಜುನಾಥ್, ಹೈನುಗಾರಿಕೆ ಮೂಲಕ 10ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ.

ಪಾಲಿಹೌಸ್‌ನಲ್ಲಿ ತರಕಾರಿ, ಸೌತೆ
ಗೆಳೆಯ ಮಂಜಣ್ಣನ ಸಲಹೆಯಂತೆ ಪಾಲಿಹೌಸ್ ನಿರ್ಮಿಸಿ, ಅದರಲ್ಲಿ ‘ಮಲ್ಟಿಸ್ಟಾರ್ ಇಂಗ್ಲಿಷ್ ಕುಕುಂಬರ್’ ಎಂಬ ತಳಿಯ ಸೌತೆ ಬೆಳೆದಿದ್ದಾರೆ. ಇದು ಪ್ರತಿ ನಿತ್ಯ ಆದಾಯ ಕೊಡುವ ಬೆಳೆ. ಸದ್ಯ ಪ್ರತಿ ನಿತ್ಯ ₹3 ಸಾವಿರದಿಂದ ₹4 ಸಾವಿರ ರೂಪಾಯಿ ಮೌಲ್ಯದ ಸೌತೆಕಾಯಿ ಮಾರಾಟ ಮಾಡುತ್ತಿದ್ದಾರೆ.

ಪಾಲಿಹೌಸ್ ಕೃಷಿ ಮಂಜುನಾಥ್‌ಗೆ ಹೊಸ ದಲ್ಲ. ಈ ಹಿಂದೆ ಪಾಲಿಹೌಸ್‌ನಲ್ಲಿ ಸೇವಂತಿ, ಮಾರಿಗೋಲ್ಡ್, ದೊಣ್ಣೆಮೆಣಸಿನಕಾಯಿ, ಟೊಮೆಟೊ ಸೇರಿದಂತೆ ಹಲವು ತರಕಾರಿ ಬೆಳೆದು, ಹಣ ಕಳೆದುಕೊಂಡಿದ್ದರು. ‘ಆ ತಪ್ಪು ಗಳನ್ನು ಗಮನದಲ್ಲಿಟ್ಟುಕೊಂಡು, ಎಚ್ಚರಿಕೆಯಿಂದ ಇಂಗ್ಲಿಷ್ ಕುಕುಂಬರ್ ಬೆಳೆದಿದ್ದೇನೆ. ಇದಕ್ಕೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಆದರೆ ದೆಹಲಿ, ಬೆಂಗಳೂರು, ಮಂಗಳೂರು ಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೆ.ಜಿ. ಸೌತೆಗೆ 20 ರಿಂದ 25 ರೂಪಾಯಿವರೆಗೂ ಸಿಗುತ್ತದೆ. ತೋಟಕ್ಕೆ ಬಂದು ಖರೀದಿಸುವುದರಿಂದ, ಸಾರಿಗೆ ವೆಚ್ಚವಿಲ್ಲ. ನಾವೇ ಕುಟುಂಬದವರು ತೋಟದ ನಿರ್ವಹಣೆ ಮಾಡುವುದರಿಂದ, ಕೂಲಿ ಖರ್ಚು ಉಳಿಯುತ್ತದೆ’ ಎಂದು ಸೋಲು-ಗೆಲುವಿನ ಲೆಕ್ಕಾಚಾರ ನೀಡುತ್ತಾರೆ ಮಂಜುನಾಥ್.

ಹನಿ ನೀರು, ಯಥೇಚ್ಚ ಗೊಬ್ಬರ
ಒಟ್ಟು ಮೂರು ಕೊಳವೆಬಾವಿ ಕೊರೆಸಿದ್ದರು ಮಂಜುನಾಥ್. ಎರಡರಲ್ಲಿ ನೀರಿಲ್ಲ. ಒಂದರಲ್ಲಿ ಒಂದೂವರೆ ಇಂಚು ನೀರು ಇದೆ. ಬೋರ್‌ನಲ್ಲಿ ನೀರು ಕಡಿಮೆಯಾದ ಮೇಲೆ 10 ಮೀಟರ್ X 10 ಮೀಟರ್ ಅಳತೆಯ ಕೃಷಿ ಹೊಂಡ ತೆಗೆಸಿದರು. ಪಾಲಿಹೌಸ್‌ ಮೇಲೆ ಬೀಳುವ ಹಾಗೂ ಜಮೀನಿನಲ್ಲಿ ಬೀಳುವ ಮಳೆ ನೀರು ಹೊಂಡಕ್ಕೆ ಸೇರುವಂತೆ ಕಾಲುವೆ ಮಾಡಿದರು.

‘ಹೊಂಡ ಒಮ್ಮೆ ತುಂಬಿದರೆ 80 ಸಾವಿರ ಲೀಟರ್ ನೀರು ಸಂಗ್ರಹವಾಗುತ್ತದೆ. ಕೃಷಿ ಹೊಂಡದಲ್ಲಿ ನೀರು ನಿಂತರೆ, ಸುತ್ತಲಿನ ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಜಮೀನಿನಲ್ಲಿರುವ ತೆರದಬಾವಿಯಲ್ಲಿ ನೀರಿನ ಒರತೆ ಕಾಣಿಸುತ್ತದೆ’ ಎನ್ನುತ್ತಾರೆ ಮಂಜುನಾಥ್ ಅವರ ತಂದೆ ತಿಪ್ಪೇಸ್ವಾಮಿ.

ರಾಸುಗಳು ಹೆಚ್ಚಿರುವುದರಿಂದ ಸಾಕಷ್ಟು ಸಗಣಿ ಸಿಗುತ್ತದೆ. ಅದನ್ನೇ ಬೆಳೆಗಳಿಗೆ ಗೊಬ್ಬರ ವಾಗಿ ಕೊಡುತ್ತಾರೆ. ಇದರಿಂದ ಮಣ್ಣು ಫಲವತ್ತಾಗುತ್ತದೆ. ಬೆಳೆಯ ಇಳುವರಿಯೂ ಉತ್ತಮವಾಗಿರುತ್ತದೆ. ತೇವಾಂಶವೂ ಧೀರ್ಘ ಕಾಲವಿರುತ್ತದೆ ಎಂಬುದು ಅವರ ಅಭಿಪ್ರಾಯ.

ಒಂದು ಬೆಳೆ ಬೆಳೆದ ನಂತರ ಒಂದು ತಿಂಗಳು ಭೂಮಿಗೆ ಗೊಬ್ಬರ ಕೊಟ್ಟು, ನೀರು ಹಾಯಿಸಿ ನೆನೆಬಿಡುತ್ತಾರೆ. ಪ್ರತಿ ಬಾರಿ ಹೊಸ ಬೆಳೆ ಬೆಳೆಯುತ್ತಾರೆ. ಬೆಳೆ ಪರಿವರ್ತನೆ ಕೂಡ, ಇವರ ಕೃಷಿಯ ಯಶಸ್ಸಿನ ಗುಟ್ಟು. ‘ಎಲ್ಲ ಸರಿ. ಕಾರ್ಮಿಕರ ಸಮಸ್ಯೆ ಇಲ್ಲವೇ’ ಎಂದು ಕೇಳಿದರೆ, ‘ನಮ್ಮ ತಂದೆ, ತಾಯಿ ಮೂವರು ಅಣ್ಣಂದಿರು ನನ್ನೊಟ್ಟಿಗೆ ಸೇರಿ ಕೃಷಿಯಲ್ಲಿ ದುಡಿಯುತ್ತಾರೆ. ಹೀಗಾಗಿ ಕಾರ್ಮಿಕರ ಸಮಸ್ಯೆ ಎದುರಾಗುವುದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕಾರ್ಮಿಕರನ್ನು ಬಳಸಿಕೊಳ್ಳುತ್ತೇವೆ’ ಎನ್ನುತ್ತಾರೆ ಮಂಜುನಾಥ್.

‘ಇಂಗ್ಲಿಷ್ ಸೌತೆ’ ಕೃಷಿ ಹೇಗೆ?
ಮಂಜುನಾಥ್, ಪಾಲಿಹೌಸ್‌ನಲ್ಲಿ ಡಿಸೆಂಬರ್ 3 ರಂದು 25 ಸಾವಿರ ಬೀಜಗಳನ್ನು ಪಾಲಿಹೌಸ್‌ನಲ್ಲಿ ನಾಟಿ ಮಾಡಿದ್ದಾರೆ. ಇದಕ್ಕೆ ಮುನ್ನ ಗೊಬ್ಬರ, ಮಣ್ಣು ಹಾಕಿ ಭೂಮಿ ಸಿದ್ಧತೆ ಮಾಡಿದ್ದರು. ಕೊಟ್ಟಿಗೆ ಗೊಬ್ಬರದಲ್ಲೇ ಗಿಡಗಳಿಗೆ ಬದು ನಿರ್ಮಿಸಿ, ಗಿಡದಿಂದ ಗಿಡಕ್ಕೆ 2 ಅಡಿ ಅಂತರದಲ್ಲಿ ಬೀಜ ನಾಟಿ ಮಾಡಿದರು. ಪ್ರತಿ ದಿನ ಮೂರು ಬಾರಿ ಡ್ರಿಪ್ ಮೂಲಕ ನೀರು ಹಾಯಿ ಸಿದರು. ನಾಟಿ ಮಾಡಿದ ಒಂದು ವಾರದಲ್ಲಿ ಬೀಜ ಮೊಳೆತು, ಬಳ್ಳಿಯಾಯಿತು. ಬೀಜಗಳು ಮೊಳೆತು ಬಳ್ಳಿಯಾಗಿ ಮೇಲೆ ಏರಲು ಅನುಕೂಲವಾಗುವಂತೆ ಸುಮಾರು 7 ಅಡಿ ಎತ್ತರಕ್ಕೆ ದಾರ ಕಟ್ಟಿದರು.

‘ಎಲೆ ಬಿಡುವ ಸಂದರ್ಭದಲ್ಲಿ ಔಷಧ ಬೇಕಿಲ್ಲ. ಹೂ ಕಟ್ಟುವ, ಬಳ್ಳಿಯ ಎಲೆ ಕೆಂಪಾಗುವ ಸಂದರ್ಭದಲ್ಲಿ ತಜ್ಞರ ಸಲಹೆ ಪಡೆದು, ಔಷಧಗಳನ್ನು ಒಂದೆರಡು ಬಾರಿ ಸಿಂಪಡಿಸಿದರೆ ಸಾಕು. ಇದರ ಜತೆಗೆ ಹಸುವಿನ ಗಂಜಲ, ದ್ರವರೂಪಿ ಗೊಬ್ಬರವನ್ನು ನೀರಿನ ಮೂಲಕ ಗಿಡಗಳಿಗೆ ಹಾಯಿಸುವುದರಿಂದ ಯಾವುದೇ ರೋಗವೂ ಬಾರದು’ ಎನ್ನುವುದು ತೋಟದ ನಾವಿಗ ಬೈಯಣ್ಣನ ಮಾತು. ಇದು ಮೂರು ತಿಂಗಳ ಬೆಳೆ. ಮಾರ್ಚ್ ನಂತರ ಕೊಯ್ಲು ಆರಂಭವಾಗಿದೆ. ನಿತ್ಯ 300 ಕೆ.ಜಿ ಕಾಯಿ ಕೊಯ್ಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.