ADVERTISEMENT

ಬದುವಿನಲ್ಲಿ ಪುಷ್ಪ ಕೃಷಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 19:30 IST
Last Updated 3 ಜೂನ್ 2019, 19:30 IST
ಹೊಲದ ಬದಿ ಹೂವಿನ ಬೆಳೆ
ಹೊಲದ ಬದಿ ಹೂವಿನ ಬೆಳೆ   

ಕೆಲವು ದಿನಗಳ ಹಿಂದೆ ಅಧ್ಯಯನವೊಂದರ ಸಂಬಂಧ ನೆದರ್ಲೆಂಡ್ ದೇಶಕ್ಕೆ ಹೋಗಿದ್ದೆ. ಅಲ್ಲಿನ ಒಂದು ಹಳ್ಳಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ, ಅಕ್ಕಪಕ್ಕದ ಹೊಲಗಳ ಬದುಗಳಲ್ಲಿ ಬಣ್ಣ ಬಣ್ಣಗಳ ಹೂವಿನ ಸಾಲು ಕಾಣುತ್ತಿದ್ದವು. ನಮ್ಮನ್ನು ಸ್ವಾಗತಿಸಲೆಂದೇ ಹೂವುಗಳನ್ನು ರಸ್ತೆ ಮತ್ತು ಗದ್ದೆಯ ಬದುವಿನಲ್ಲಿ ಚೆಲ್ಲಿದ್ದಾರೇನೋ ಎನ್ನುವಂತಿತ್ತು. ಹತ್ತಿರ ಹೋಗಿ ನೋಡಿದಾಗ, ಆ ಹೂವುಗಳು ರಸ್ತೆಯ ಇಕ್ಕೆಲಗಳಲಿರಲಿಲ್ಲ. ರಸ್ತೆ ಪಕ್ಕದ ಹೊಲದ ಬದುವಿನಲ್ಲಿ ದಟ್ಟವಾಗಿ ಬೆಳೆದಿದ್ದವು. ಅವುಗಳ ನಡುವೆ ಒಂದಷ್ಟು ತರಕಾರಿ ಬೆಳೆ ಇತ್ತು. ಇನ್ನೂ ಹಲವು ದ್ವಿದಳಧಾನ್ಯಗಳು ಇದ್ದವು. ಮುಂದೆ ಹಣ್ಣಿನ ತೋಟವೂ ಕಂಡಿತು.

ನಮ್ಮ ಊರಿನ ಜಮೀನುಗಳಲ್ಲೂ ಹೀಗೆ ಹೊಲದ ಬದುವಿನಲ್ಲಿ ಸೂರ್ಯಕಾಂತಿ, ಚೆಂಡು ಹೂವಿನಂತಹ ಹಳದಿ ಬಣ್ಣದ ಹೂವುಗಳನ್ನು ಬೆಳೆಸುವ ಸಂಪ್ರದಾಯವಿದೆ. ‘ಬದಿಯಲ್ಲಿ ಬೆಳೆಸುವ ಹೂವುಗಳು ಬೆಳೆ ಮೇಲೆ ದಾಳಿ ಮಾಡುವ ಶತೃ ಕೀಟಗಳನ್ನು ಆಕರ್ಷಿಸುತ್ತವೆ. ಬೆಳೆ ರಕ್ಷಣೆಯಾಗುತ್ತದೆ’ ಎನ್ನುವುದು ರೈತರ ನೆಲ ಮೂಲ ಜ್ಞಾನ. ಬಹುಶಃ ಇಲ್ಲೂ ಹಾಗೆ ಇರಬಹುದೇನೋ ಎಂದುಕೊಂಡು, ‘ಏಕೆ ಹೀಗೆ ಹೊಲದ ಬದುವಿನಲ್ಲಿ ಹೂವು ಬೆಳೆಸಿದ್ದೀರಿ?’ ಎಂದು ಅಲ್ಲಿಯವರನ್ನು ಕೇಳಿದೆ. ಅವರು ಒಂದಷ್ಟು ಮಾಹಿತಿಯನ್ನು ಹಂಚಿಕೊಂಡರು.

ಮೊದಲನೆಯದಾಗಿ ಬದುವಿನಲ್ಲಿ ಹೂವುಗಳನ್ನು ಬೆಳೆಸುವುದರಿಂದ ಹೊಲಗಳ ಅಂದ, ವಿನ್ಯಾಸವೇ ಬದಲಾಗುತ್ತದೆ. ಹೊಲಕ್ಕೊಂದು ಜೀವಕಳೆ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೂವುಗಳಿಗೆ ಜೇನು ನೊಣಗಳು ಆಕರ್ಷಿತವಾಗುತ್ತವೆ. ಇದರಿಂದ ಬೆಳೆಗಳಲ್ಲಿ ಸ್ವಾಭಾವಿಕವಾಗಿ ಪರಾಗಸ್ಪರ್ಶ ಹೆಚ್ಚಾಗುತ್ತದೆ. ಪರೋಕ್ಷವಾಗಿ ಬೆಳೆ ಇಳುವರಿ ಹೆಚ್ಚುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಹೀಗೆ ಹೂವು ಬೆಳೆಸಿರುವ ಹೊಲಗಳಲ್ಲಿ ಬೆಳೆ ಉತ್ಪಾದನೆಯನ್ನು ಬೇರೆ ಹೊಲಕ್ಕೆ ಹೋಲಿಸಿದರೆ, ಈ ಹೊಲದಲ್ಲಿ ಶೇ 20 ರಿಂದ 30ರಷ್ಟು ಬೆಳೆ ಇಳುವರಿ ಹೆಚ್ಚಾಗಿರುವುದು ಕಂಡುಬಂದಿದೆ. ಇದಕ್ಕೆ ಮೂಲ ಕಾರಣ ಪರಾಗ ಸ್ಪರ್ಶಕ್ರಿಯೆ. ಅಂದರೆ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ತಮ್ಮ ಬೆಳೆ ಹೆಚ್ಚಿಸಿಕೊಳ್ಳಲು ಅಲ್ಲಿನವರು ಕಂಡುಕೊಂಡ ಸುಲಭ ಉಪಾಯ ಅದು.

ADVERTISEMENT

ಹೊಲದ ಬದಿಯಲ್ಲಿ ಬೆಳೆಯುವ ಹೂವುಗಳಿಗೆ ಇಲ್ಲಿ ಸಾರ್ವಕಾಲಿಕ ಬೇಡಿಕೆ ಇದೆ. ಅದನ್ನು ಮಾರಾಟ ಮಾಡಿ, ರೈತರು ಒಂದಷ್ಟು ಉಪ ಆದಾಯವನ್ನು ಸಂಪಾದಿಸುತ್ತಾರೆ.

ಹೂವುಗಳಿರುವ ಹೊಲದಲ್ಲಿ ಜೇನು ಕೃಷಿಯನ್ನು ಕೈಗೊಳ್ಳುವ ರೈತರಿದ್ದಾರೆ. ಹೂವುಗಳಿಗೆ ಮುತ್ತಿಕ್ಕುವ ಜೇನು, ಹೊಲದಲ್ಲಿಟ್ಟಿರುವ ಪೆಟ್ಟಿಗೆಗಳಲ್ಲಿ ಸಂಸಾರ ಆರಂಭಿಸುತ್ತವೆ. ಇದನ್ನು ಅರಿತ ಅನೇಕ ರೈತರು, ಜೇನು ಸಾಕಣೆ ತರಬೇತಿ ಪಡೆದು, ಹೊಲದಲ್ಲಿ ಪೆಟ್ಟಿಗೆಗಳನ್ನಿಟ್ಟು ಅದರಲ್ಲೂ ಆದಾಯ ಕಾಣುತ್ತಾರೆ.

ಇಡೀ ಪ್ರಕ್ರಿಯೆಯಲ್ಲಿ ತಿಳಿಯಬಹುದಾದ ಅಂಶವೆಂದರೆ; ಜೇನು ಸಾಕಣೆ ಇರುವ ಹೊಲದಲ್ಲಿ ನೈಸರ್ಗಿಕ ಪರಾಗ ಸ್ಪರ್ಶ ಶಾಶ್ವತವಾಗಿರುತ್ತದೆ. ಇದನ್ನು ಅರಿತ ಆ ಭಾಗದ ರೈತರು, ಕೇವಲ ಒಂದೆರಡು ರೀತಿಯ ಹೂವುಗಳ ಜತೆಗೆ, ಸೂರ್ಯಕಾಂತಿಯಂತಹ ಎಣ್ಣೆಕಾಳು ಉತ್ಪಾದಿಸುವ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಕಡೆ ಹೂವಿನಿಂದ ಲಾಭ, ಇನ್ನೊಂದು ಕಡೆ ಎಣ್ಣೆಕಾಳುಗಳಿಂದ ಲಾಭ ಪಡೆಯುವ ರೈತರೂ ಇಲ್ಲಿದ್ದಾರೆ.

ದೇಶ ಯಾವುದಾದರೇನು, ಕೃಷಿ ಚಟುವಟಿಕೆಗಳು ಎಲ್ಲೆಡೆಯೂ ಬಹುತೇಕ ಒಂದೇ ರೀತಿಯದ್ದಿರುತ್ತವೆ ಎನ್ನುವುದಕ್ಕೆ ನೆದರ್ಲೆಂಡ್ ಹಳ್ಳಿಗಳಲ್ಲಿರುವ ಈ ಕೃಷಿ ಪದ್ಧತಿ ಸಾಕ್ಷೀಕರಿಸುತ್ತದೆ.

ನಿಸರ್ಗ ಪ್ರಿಯ ಕೃಷಿ ವ್ಯವಸ್ಥೆ

ಅಲ್ಲಿನ ರೈತರ ಬದುಕನ್ನು ಗಮನಿಸುತ್ತಿದ್ದೆ. ಅಚ್ಚರಿ ಎಂದರೆ, ಅಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದರೂ, ಕೃಷಿಯನ್ನು ಅಂತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳುತ್ತಿದ್ದರು. ಅದಕ್ಕೆ ಕಾರಣ ಕೇಳಿದಾಗ, ಕೃಷಿ ಯಾಂತ್ರೀಕರಣ ಉತ್ತಮವಾಗಿದೆ. ಕಾರಣ, ನಿಶ್ಚಿತ ಆದಾಯದ ಗುರಿಯೊಂದಿಗೆ ರೈತರು ಕೃಷಿ ಮಾಡುತ್ತಾರೆ. ಜತೆಗೆ, ನಿಸರ್ಗ ವ್ಯವಸ್ಥೆಗೆ ಪೂರಕವಾಗಿ ಕೃಷಿ ಮಾಡುವುದು, ಅವರ ಸುಸ್ಥಿರ ಬದುಕಿನ ಹಿಂದಿನ ಗುಟ್ಟು.

ಅಲ್ಲಿನ ರೈತರನ್ನು ಮಾತನಾಡಿಸಿದಾಗ ಗೊತ್ತಾಗಿದ್ದು, ಅಲ್ಲಿಯೂ ಕೃಷಿಯಲ್ಲಿ ಹೆಚ್ಚು ತಂತ್ರಜ್ಞಾನ ಬಳಸುತ್ತಾರೆ. ಸುಧಾರಿತ ನೀರಾವರಿ ಪದ್ಧತಿ ಇದೆ. ನಿಸರ್ಗಕ್ಕೆ ಹಾನಿಯಾಗದಂತೆ ಮಿತವಾಗಿ ರಸಗೊಬ್ಬರ ಬಳಸುತ್ತಾರೆ. ಮಣ್ಣಿನ ಫಲವತ್ತತೆ ಹಾಳಾಗದಂತೆ, ಅಂತರ್ಜಲಕ್ಕೆ ಧಕ್ಕೆಯಾಗದ ರೀತಿ ಕೃಷಿ ಮಾಡುತ್ತಾರೆ. ಈ ಎಲ್ಲ ಚಟುವಟಿಕೆಗಳು ಕಡಿಮೆ ಜಾಗದಲ್ಲೂ ಹೆಚ್ಚಿನ ಉತ್ಪಾದನೆ ತೆಗೆಯಲು ಸಾಧ್ಯವಾಗಿದೆಯಂತೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.