ADVERTISEMENT

ವಿದೇಶಿ ತರಕಾರಿ ಕೃಷಿ; ಯೋಗಿಗೆ ಖುಷಿ

ಡಿ.ಬಿ, ನಾಗರಾಜ
Published 12 ಆಗಸ್ಟ್ 2019, 19:30 IST
Last Updated 12 ಆಗಸ್ಟ್ 2019, 19:30 IST
ಲೆಟ್ಯೂಸ್‌
ಲೆಟ್ಯೂಸ್‌   

ಮೈಸೂರು ಬಳಿಯಲ್ಲಿ ಕೃಷಿಕರೊಬ್ಬರು ಮೂರುವರೆ ಎಕರೆ ಜಮೀನಿನಲ್ಲಿ ಗುಂಟೆ ಲೆಕ್ಕದ ತಾಕುಗಳಲ್ಲಿ ಹತ್ತಾರು ತರಹೇವಾರಿ ತರಕಾರಿ ಬೆಳೆದಿದ್ದಾರೆ. ಬೀಜೋತ್ಪಾದನೆ ಮಾಡುತ್ತಾ, ಸಮರ್ಪಕವಾದ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಂಡಿದ್ದಾರೆ.

ಇರುವುದು ಮೂರುವರೆ ಎಕರೆ ಜಮೀನು. ಅದರೊಳಗೆ ಹತ್ತಾರು ವಿದೇಶಿ ತರಕಾರಿಗಳು. ಜತೆಗೆ ಅಲ್ಲಲ್ಲೇ ಸ್ವದೇಶಿ ಬೆಳೆಗಳೂ ಇವೆ. ಪ್ರತಿ ಋತುಮಾನಕ್ಕೂ ಒಂದಲ್ಲಾ ಒಂದು ತರಕಾರಿ ಕೊಯ್ಲಿಗೆ ಬರಬೇಕು, ಹಾಗೆ ವಿನ್ಯಾಸ ಮಾಡಿದ್ದಾರೆ. ವರ್ಷ ಪೂರ್ತಿ ಜಮೀನಿನಲ್ಲಿ ಕೆಲಸ. ಯಾವ ತಿಂಗಳಲ್ಲಿ ಈ ಜಮೀನಿಗೆ ಭೇಟಿ ನೀಡಿದರೂ, ಖಾಲಿ ಜಾಗ ಕಾಣುವುದೇ ಅಪರೂಪ..!

ಮೈಸೂರು ತಾಲ್ಲೂಕಿನ ತಳೂರು ಗ್ರಾಮದ ಕೃಷಿಕ ಯೋಗೇಶ್‌ ಅವರ ಕೃಷಿ ಜಮೀನಿನ ಚಿತ್ರಣವಿದು. ವಿಭಿನ್ನ ಪ್ರಯೋಗದ ಮೂಲಕ ವಿದೇಶಿ ತರಕಾರಿ ಬೆಳೆದು, ಮಾರುಕಟ್ಟೆ ಯನ್ನೇ ಜಮೀನಿನ ಬಳಿ ಬರುವಂತೆ ಮಾಡಿಕೊಂಡಿದ್ದಾರೆ ಯೋಗೇಶ್‌. ಇಷ್ಟೆ ಅಲ್ಲ, ವರ್ಷ ಪೂರ್ತಿ ಸೊಪ್ಪು ತರಕಾರಿಗಳು ಕೊಯ್ಲಿಗೆ ಬರುವಂತೆ ಭೂಮಿಯನ್ನು ವಿನ್ಯಾಸ ಮಾಡಿದ್ದಾರೆ. ಯಾವುದೇ ಸಮಯದಲ್ಲಿ ಇವರ ಹೊಲಕ್ಕೆ ಭೇಟಿ ನೀಡಿದರೂ; ತರಹೇವಾರಿ ವಿದೇಶಿ ತರಕಾರಿ–ಸೊಪ್ಪಿನ ಬೆಳೆಗಳು ಕಾಣುತ್ತವೆ.

ADVERTISEMENT

ಏನೇನು ತರಕಾರಿಗಳಿವೆ

ಜುಕುನಿ, ಬ್ರಕೊಲಿ, ಬೆಸಿಲ್, ಲೆಟ್ಯೂಸ್, ಕರ್ಲಿ ಪಾಸ್ಲೆ, ಲೀಕ್, ಕ್ಯಾರೆಂಟ್, ಸೆಲೆರಿಯಾ, ಚೆರ‍್ರಿ ಟೊಮೆಟೊ, ರೆಡ್‌ ರ‍್ಯಾಡಿಶ್‌, ರೆಡ್ ಕ್ಯಾಬೇಜ್, ಕಲರ್ ಕ್ಯಾಪ್ಸಿಕಂ, ಐಸ್‌ ಬರ್ಗ್‌, ಪೋಕ್‌ ಚೊಯ್, ಪಾರ್‌ಸ್ಲೆ, ಲೆಮೆನ್‌ ಗ್ರಾಸ್‌, ಥೈಮ್‌, ಟರ್ನಿಫ್‌, ರೋಸ್‌ಮರಿ, ಚೈನೀಸ್‌ ಕ್ಯಾಬೇಜ್‌, ಟೇಬಲ್ ರ‍್ಯಾಡಿಶ್‌... ಹೀಗೆ ತರಕಾರಿಗಳ ಹೆಸರು ಬರೆಯುತ್ತಾ ಹೋದರೆ, ಪಟ್ಟಿ ಉದ್ದವಾದೀತು. ಆಷ್ಟೇ ಅಲ್ಲ, ‘ಇವೆಲ್ಲ ತರಕಾರಿಗಳಾ’ ಎಂದು ಅಚ್ಚರಿಯೂ ಆದೀತು.

ತರಕಾರಿ ಪಟ್ಟಿ ನೋಡಿದಾಗ, ಇಷ್ಟು ಜಮೀನಿನಲ್ಲಿ, ಇಷ್ಟೆಲ್ಲ ಬೆಳೆಯಬಹುದಾ’- ಎಂಬ ಪ್ರಶ್ನೆ ಕಾಡುತ್ತಿರಬಹುದು. ಹೌದು. ಅವರು ಯಾವ ಬೆಳೆಯನ್ನು ಎಕರೆಗಟ್ಟಲೆ ಹಾಕಿಲ್ಲ. 5 ಗುಂಟೆ, 10 ಗುಂಟೆ.. ಹೀಗೆ ಗುಂಟೆ ಲೆಕ್ಕಾಚಾರದಲ್ಲೇ ಬಿತ್ತನೆ ಮಾಡಿದ್ದಾರೆ. 15 ಗುಂಟೆಯಲ್ಲಿ ಬೆಳೆದಿರುವ ತರಕಾರಿಯೇ ದೊಡ್ಡ ಪ್ರಮಾಣದ್ದು.
ಒಂದೆರಡು ಉದಾಹರಣೆ ಹೇಳಬೇಕೆಂದರೆ, ಸದ್ಯ ತಲಾ 10 ಗುಂಟೆಯಲ್ಲಿ ಚೆರ‍್ರಿ ಟೊಮೆಟೊ, ಪೊಕ್‌ಚೊಯ್, ಪಾರ್‌ಸ್ಲೆ, 5 ಗುಂಟೆಯಲ್ಲಿ ಬೆಸಿಲ್, ತಲಾ 15 ಗುಂಟೆ ಜಮೀನಿನಲ್ಲಿ ಗ್ರೀನ್‌ ಲೆಟ್ಯೂಸ್‌ನಲ್ಲೇ ಹಲವು ಜಾತಿಯ ಲೆಟ್ಯೂಸ್‌ಗಳನ್ನು ಬೆಳೆದಿದ್ದಾರೆ. ಲೆಮೆನ್‌ ಗ್ರಾಸ್‌ ಬೆಳೆಯಿದೆ. ಸ್ಥಳೀಯವಾದ ಹಿಪ್ಪುನೇರಳೆ, ಆಲಸಂದೆ, ಮೇವಿನ ಬೆಳೆಯನ್ನೂ ಈ ವಿನ್ಯಾಸದ ಜತೆ ಜೋಡಿಸಿದ್ದಾರೆ. ಪಕ್ಕದಲ್ಲಿ ಭತ್ತದ ಗದ್ದೆಯೂ ಇದೆ !.

ಕೊಯ್ಲಿನ ಲೆಕ್ಕಾಚಾರ

ಬರೀ ಗುಂಟೆಗಳಲ್ಲಿ ಬೆಳೆಯುವುದಷ್ಟೇ ಅಲ್ಲ, ಅವು ಯಾವ್ಯಾಗ ಕೊಯ್ಲಿಗೆ ಬರುತ್ತವೆ ಎಂಬ ಲೆಕ್ಕಾಚಾರವೂ ಇವರ ತಲೆಯಲ್ಲಿದೆ. ಲೆಟ್ಯೂಸ್‌ ತಿಂಗಳ ಬೆಳೆ. ಚೆರ‍್ರಿ ಟೊಮೆಟೊ ಎರಡು ತಿಂಗಳೊಮ್ಮೆ ಕೊಯ್ಲು. ಬೆಸಿಲ್ ವರ್ಷಕ್ಕೊಮ್ಮೆ. ಪಾರ್‌ಸ್ಲೆ ಎರಡು ತಿಂಗಳಿಗೊಮ್ಮೆ, ಲೆಮೆನ್‌ ಗ್ರಾಸ್‌ ಬಹು ವಾರ್ಷಿಕ ಬೆಳೆ. ಹೀಗೆ ಬಹು ಬೆಳೆಪದ್ಧತಿಯ ಕೃಷಿಯನ್ನು ಜಮೀನಿನಲ್ಲಿ ಅಳವಡಿಸಿದ್ದಾರೆ. ಹೀಗಾಗಿ ಒಂದಲ್ಲ ಒಂದು ಬೆಳೆ, ನಿತ್ಯವೂ ಹಣದ ವಹಿವಾಟು ನಡೆಸಲು ನೆರವಾಗುತ್ತವೆ.
‘ವಿದೇಶಿ ತರಕಾರಿ ಬೆಳೆಗಳಿಗೆ ರೋಗ ಕಡಿಮೆ. ಲೆಟ್ಯೂಸ್‌ ರೋಗ ರಹಿತ ಬೆಳೆ’ ಎನ್ನುವ ಯೋಗೇಶ್, ಪೊಕ್‌ಚೊಯ್‌ಗೆ ಮಾತ್ರ ಕಪ್ಪು ಚಿಟ್ಟೆ ಕಾಡಲಿವೆ. ನಿವಾರಣೆಗಾಗಿ ಬೇವಿನ ಎಣ್ಣೆ ಸಿಂಪಡಿಸುತ್ತಾರೆ. ಬೀಜೋತ್ಪಾದನೆ ಪ್ರಯತ್ನ

ವಿವಿಧ ಜಾತಿಯ ಲೆಟ್ಯೂಸ್‌ ಬೀಜಗಳನ್ನು ಬೆಂಗಳೂರಿನಿಂದ ತರಿಸಿಕೊಂಡು, ಸಸಿ ಮಾಡಿ ಏರು ಸಾಲು ಪದ್ಧತಿಯಲ್ಲಿ ನಾಟಿ ಮಾಡುತ್ತಾರೆ. ಕೆಲವೊಂದು ತರಕಾರಿಗಳ ಬೀಜಗಳನ್ನು ತಾವೇ ಉತ್ಪಾದನೆ ಮಾಡಿಕೊಳ್ಳುತ್ತಾರೆ. ಸದ್ಯ ಬೆಸಿಲ್, ಚೆರ‍್ರಿ ಟೊಮೆಟೊ ಬೀಜಗಳು, ಲೆಮೆನ್‌ಗ್ರಾಸ್‌ ಬಡ್ಡೆಗಳು ಇವರಲ್ಲಿಯೇ ಜೀವ ತಳೆಯುತ್ತವೆ.
ಏರು ಮಡಿ, ಗುಣಿ ಪದ್ಧತಿ.. ಹೀಗೆ ಹಲವು ವಿಧಾನಗಳ ಮೂಲಕ ತರಕಾರಿ ಬೆಳೆಯುತ್ತಿರುವ ಅವರು, ಡ್ರಿಪ್ ಮೂಲಕ ನೀರುಣಿಸುತ್ತಲೇ ಕೃಷಿ ಮಾಡುತ್ತಾರೆ. ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚು ಬಳಸುವ ಇವರು, ಅಗತ್ಯವೆನಿಸಿದರೆ ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುತ್ತಾರೆ.

ಬೇಡಿಕೆ ಸೃಷ್ಟಿಸಿಕೊಂಡ ಚಾಣಾಕ್ಷ..!

ವಿದೇಶಿ ತರಕಾರಿ ಬೆಳೆಯಲು ಆರಂಭಿಸಿದ ಶುರುವಿನಲ್ಲಿ ಒಡಂಬಡಿಕೆಯಂತೆ ಖಾಸಗಿ ಕಂಪನಿಗೆ ಮಾರಾಟ ಮಾಡಿದರು. ಎರಡ್ಮೂರು ವರ್ಷದ ಬಳಿಕ ಯೋಗೇಶ್‌, ಹೆಚ್ಚಿಗೆ ಬೆಲೆ ನೀಡುವಂತೆ ಬೇಡಿಕೆ ಇಟ್ಟರು. ಜತೆಗೆ ಹೊಲದಲ್ಲೇ ತೂಕ ಮಾಡಿಕೊಂಡು ಹೋಗಿ ಎಂಬ ಕರಾರು ಹಾಕಿದರು.

ಆದರೆ, ಕಂಪನಿಯವರು ಇದನ್ನು ಒಪ್ಪಲಿಲ್ಲ. ಬೀಜ ಪೂರೈಕೆ ನಿಲ್ಲಿಸಿದರು. ಆಗ ಯೋಗೇಶ್, ತಮ್ಮದೇ ಸಂಪರ್ಕ ಜಾಲದಲ್ಲಿ ತರಕಾರಿ ಬೀಜ ಖರೀದಿಸಿ ತಂದು ಬೆಳೆದರು. ಇಳುವರಿ ಚೆನ್ನಾಗಿ ಬಂತು. ಆಗ, ಹಳೆಯ ಕಂಪನಿಯವರೇ, ಇವರ ಬಳಿ ಖರೀದಿಗೆ ಬಂದರು. ಆದರೆ ಯೋಗೇಶ್‌ ಅವರಿಗೆ ಮಾರಾಟ ಮಾಡಲಿಲ್ಲ. ‘ಇದು ಲೋಕಲ್ ತರಕಾರಿಯಲ್ಲ. ಇದನ್ನು ಯಾರೂ ಕೊಳ್ಳಲ್ಲ. ಸುಮ್ಮನೆ ಕೈಸುಟ್ಟು ಕೊಳ್ಳಬೇಡಿ. ಸ್ವಲ್ಪ ಹೆಚ್ಚಿಗೆ ಹಣ ಕೊಡ್ತೀವಿ. ನಮಗೆ ಕೊಟ್ಟುಬಿಡಿ’ ಎಂದು ಕಂಪನಿಯವರು ಕೇಳಿಕೊಂಡರು. ಇವರು ಒಪ್ಪಲಿಲ್ಲ. ‘ಅದು ಹೇಗೆ ಮಾರುತ್ತೀರಿ,ನೋಡೋಣ’ ಎಂಬ ಸವಾಲನ್ನು ಎದುರಿಸಿದರು.

ಸಮಸ್ಯೆ ಉದ್ಭವಿಸಿದಾಗ, ಮಾರುಕಟ್ಟೆ ಶೋಧಕ್ಕಾಗಿ ಅಖಾಡಕ್ಕಿಳಿದರು ಯೋಗೇಶ್. ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರದ ಈ ಯುವಕ, ಹೈದರಾಬಾದ್‌, ಚೆನ್ನೈ, ಗೋವಾ, ಊಟಿ ಮುಂತಾದೆಡೆ ಸುತ್ತಿ ಹಲ ಕಂಪನಿಗಳ ಸಂಪರ್ಕ ಸಾಧಿಸಿದರು. ಅವರೊಟ್ಟಿಗೆ ಹೊಲದಿಂದಲೇ ವಹಿವಾಟು ನಡೆಸಿ, ಹೆಚ್ಚಿನ ಲಾಭ ಗಳಿಸಿದರು. ದಿನ ಕಳೆದಂತೆ ಮಾರುಕಟ್ಟೆ ಜಾಲ ವಿಸ್ತರಣೆಗೆ ಮುಂದಾದರು. ಪ್ಯುರ್‌ ಅಂಡ್‌ ಫ್ರೆಷ್‌ ಡಾಟ್‌ ಕಾಮ್‌ ಜತೆ ಒಪ್ಪಂದ ಮಾಡಿಕೊಂಡರು. ಮೈಸೂರಿನ ವಿಜಯನಗರದಲ್ಲಿ ಪ್ರತಿ ಭಾನುವಾರ ನಡೆಯಲಿರುವ ವಾರದ ಸಂತೆಯಲ್ಲೂ ಖುದ್ದು ಮಾರಾಟಕ್ಕೆ ನಿಂತರು. ಇಲ್ಲಿಂದ ಹೊಸ ಗ್ರಾಹಕರು ಜತೆಯಾದರು. ಈಗ ದೊಡ್ಡ ದೊಡ್ಡ ಬಜಾರ್, ದೊಡ್ಡ ದೊಡ್ಡ ಮಾಲ್ ಗಳಿಗೂ ನೇರವಾಗಿ ವಿದೇಶಿ ವೆಜಿಟೇಬಲ್ಸ್‌ ಮಾರುತ್ತಿದ್ದಾರೆ.

ಇದರ ಜತೆಗೆ ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವು ಮಹಾನಗರಗಳ ಮಾರುಕಟ್ಟೆಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆಯೋ ಅಲ್ಲಿಗೆ ತಮ್ಮ ಉತ್ಪನ್ನ ಕಳುಹಿಸುತ್ತಾರೆ ಯೋಗೇಶ್‌. ವಿದೇಶಿ ತರಕಾರಿಗಳ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9980844596

ವಿದೇಶಿ ತರಕಾರಿಗಳ ಕಿರು ಪರಿಚಯ

ಲೆಮೆನ್‌ ಗ್ರಾಸ್‌

ಐದು ವರ್ಷದ ಬೆಳೆಯಿದು. ನಾಟಿಯಾದ ಆರು ತಿಂಗಳಿಗೆ ಕಟಾವು ಆರಂಭ. ವಾರ, ಹದಿನೈದು ದಿನಕ್ಕೊಮ್ಮೆ ಕೊಯ್ಲು ಮಾಡಬಹುದು. ಲೆಮೆನ್‌ ಟೀ, ಸೂಫ್‌, ಲೆಮೆನ್‌ ರೈಸ್‌, ಎಣ್ಣೆ, ಅಗರಬತ್ತಿ, ಕೆಮಿಕಲ್ಸ್‌ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ.

ಲೆಟ್ಯೂಸ್‌

15 ಕ್ಕೂ ಹೆಚ್ಚು ವೆರೈಟಿಗಳಿವೆ. ಸಸಿ ನಾಟಿ ಮಾಡಿದ ತಿಂಗಳ ಬಳಿಕ ಕೊಯ್ಲಿಗೆ ಸಿಗಲಿದೆ. ಒಂದು ಎಕರೆಗೆ 35,000ದಿಂದ 40,000 ಗಿಡ ನಾಟಿ ಮಾಡಬಹುದು. ಒಂದು ಗಿಡ ಕನಿಷ್ಠ 500ರಿಂದ 700 ಗ್ರಾಂ ತೂಕದ ತರಕಾರಿ ನೀಡಲಿದೆ. ಪಿಜ್ಜಾ, ಬರ್ಗರ್‌ನಲ್ಲಿ ಬಳಸುವ ಪ್ರಮುಖ ಪದಾರ್ಥವಿದು.

ಪಾರ್‌ಸ್ಲೆ

10 ಗುಂಟೆ ಜಮೀನಿನಲ್ಲಿ 5 ಸಾವಿರ ಗಿಡ ಹಾಕಬಹುದು. ನಾಟಿಯ ಮೂರು ತಿಂಗಳ ಬಳಿಕ ಕಟಾವು. ಒಂದೂವರೆ ವರ್ಷದವರೆಗೆ ಉತ್ಪನ್ನ ಸಿಗಲಿದೆ. ಜ್ಯೂಸ್‌, ಗಾರ್ನಿಶ್‌ ತಯಾರಿಕೆಗೆ ಬಳಕೆಯಾಗಲಿದೆ.

ಲೀಕ್ಸ್‌

ಈರುಳ್ಳಿ ಜಾತಿಯ ಗಿಡವಿದು. ಉದ್ದನೆಯ ದಪ್ಪ ಕಾಂಡ ಹೊಂದಿದೆ. ಡಯಟ್‌ ಫುಡ್‌ ಆಗಿ ಹೆಚ್ಚಿಗೆ ಬಳಕೆಯಾಗಲಿದೆ. ಒಂದು ಗಿಡ ಅರ್ಧ ಕೆ.ಜಿ. ತೂಗಲಿದೆ. ನಾಟಿ ಮಾಡಿದ 3 ತಿಂಗಳಿಗೆ ಕಟಾವು ಆರಂಭ. ಆರು ತಿಂಗಳ ಅವಧಿಯ ಬೆಳೆಯಿದು.

ಬೆಸಿಲ್‌‌

ತುಳಸಿ ಜಾತಿಯ ಗಿಡವಿದು. ಒಂದು ವರ್ಷದ ಅವಧಿಯ ಬೆಳೆ. ನಾಟಿ ಮಾಡಿ ತಿಂಗಳ ನಂತರ ಕೊಯ್ಲಿಗೆ ಬರುತ್ತದೆ. ವಾರಕ್ಕೊಮ್ಮೆ ಕೊಯ್ಲು ಮಾಡಬಹುದು. ಕಷಾಯ, ಫ್ಲೇವರ್, ಚಟ್ನಿ, ಟೀ ತಯಾರಿಕೆಯಲ್ಲಿ ಬಳಸುತ್ತಾರೆ.

ಬ್ರಕೊಲಿ

ಹೂಕೋಸು ಜಾತಿಯ ಗಿಡ. ಹೆಚ್ಚು ವಿಟಮನ್‌ ಹೊಂದಿದೆ. ಹೃದಯದ ಆರೋಗ್ಯಕ್ಕೆ ಪೂರಕವಾದುದು. ಹೋಟೆಲ್‌ಗಳಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಗ್ರೇವಿ, ಗೋಬಿ ತಯಾರಿಕೆಯಲ್ಲಿ ಹೆಚ್ಚು ಬಳಕೆಯಾಗಲಿದೆ. ನಾಟಿ ನಡೆದ ಎರಡು ತಿಂಗಳ ಬಳಿಕ ಕೊಯ್ಲು ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.