ADVERTISEMENT

ಅಡಿಕೆ ಮರ ಏರಲು ‘ಹೈಟೆಕ್ ಯಂತ್ರ’

ಮೋಹನ್ ಕೆ.ಶ್ರೀಯಾನ್
Published 17 ಜೂನ್ 2019, 19:30 IST
Last Updated 17 ಜೂನ್ 2019, 19:30 IST
   

ಅಡಿಕೆ ಮರದ ಬುಡದಲ್ಲಿ ಮರವನ್ನು ತಬ್ಬಿಕೊಂಡಂತೆ ಕಾಣುವ ಆ ಯಂತ್ರದ ಪುಟ್ಟ ಸೀಟ್ ಮೇಲೆ ಕುಳಿತು, ಗುಂಡಿ ಒತ್ತಿದರೆ ಸಾಕು, ನೀವು 30 ಸೆಕೆಂಡ್ ನಲ್ಲಿ ಸರ‍್ರನೆ ಅಡಿಕೆ ಮರದ ತುದಿಯಲ್ಲಿರುತ್ತೀರಿ!

ಹೀಗೆ ಅಡಿಕೆ ಮರ ಏರುವ ಈ ಹೈಟೆಕ್ ಯಂತ್ರದ ಪ್ರಾತ್ಯಕ್ಷಿಕೆಯ ವಿಡಿಯೊ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆ ಕೊಯ್ಲು ಮತ್ತು ಮರಗಳಿಗೆ ಮದ್ದು ಇಡುವಂತಹ ಕೆಲಸಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿರುವ ವೇಳೆಯಲ್ಲಿ ಈ ಯಂತ್ರ ವರದಾನವಾಗಬಹುದು ಎಂಬ ವಿಶ್ವಾಸ ಬೆಳೆಗಾರರದ್ದು.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಕೋಮಾಲಿ ನಿವಾಸಿ ಪ್ರಗತಿಪರ ಕೃಷಿಕ ಕೆ.ಗಣಪತಿಭಟ್ ಈ ಯಂತ್ರವನ್ನು ಅನ್ವೇಷಿಸಿರುವ ಕೃಷಿಕರು. ಕಾರ್ಮಿಕರ ಕೊರತೆ ನೀಗಿಸುವ ಉದ್ದೇಶದೊಂದಿಗೆ ಈ ಯಂತ್ರವನ್ನು ಅವರು ಆವಿಷ್ಕರಿಸಿದ್ದಾರೆ. ಇದನ್ನು ಮಾನವಚಾಲಿತ ರೋಬೊ ಮಾದರಿ ಎನ್ನುತ್ತಾರೆ. ಅವರು ಐದಾರು ವರ್ಷಗಳ ಅಧ್ಯಯನ ನಡೆಸಿದ ನಂತರ ಇದನ್ನು ತಯಾರಿಸಿದ್ದಾರೆ.

ADVERTISEMENT

ಯಂತ್ರ ಹೀಗಿದೆ, ಹೀಗೆ ಕೆಲಸ ಮಾಡುತ್ತೆ

ಇದು ಮೋಟಾರ್ ಆಧರಿತ ಯಂತ್ರ. 28 ಕೆಜಿ ತೂಕವಿದೆ. 2 ಸ್ಟ್ರೋಕ್ ಬೈಕ್ ಎಂಜಿನ್ ಅನ್ನು ಇದರಲ್ಲಿ ಬಳಸಿದ್ದಾರೆ. ಈ ಯಂತ್ರದ ಮೇಲೆ 75 ಕೆಜಿ ತೂಕದ ವ್ಯಕ್ತಿಯೊಬ್ಬರು ಕುಳಿತು ಸುರಕ್ಷಾ ಬೆಲ್ಟ್ ಧರಿಸಿ ಬಟನ್ ಒತ್ತಿದರೆ ಸಾಕು. ಕೇವಲ 30 ಸೆಕೆಂಡ್ ನಲ್ಲಿ ಸರ‍್ರನೆ ಅಡಿಕೆ ಮರದ ತುದಿ ತಲುಪುತ್ತಾರೆ. ಕೆಳಗೆ ನಿಧಾನವಾಗಿ ಇಳಿಯಲು ಬ್ರೇಕ್ ವ್ಯವಸ್ಥೆ ಇದೆ. ಎಂಜಿನ್ ಬಂದ್ ಮಾಡಿಯೂ ನಿರಾಯಾಸವಾಗಿ ಬ್ರೆಕ್ ಹಿಡಿಯುತ್ತಾ ಕೆಳಗೆ ಇಳಿಯಬಹುದು. ಮಹಿಳೆಯರೂ ಇದನ್ನು ಸುಲಭವಾಗಿ ಚಲಾಯಿಸಬಹುದು.

ಇದು ಪೆಟ್ರೋಲ್ ಚಾಲಿತ ಯಂತ್ರ. ಬಹುತೇಕ ಬೈಕ್ ಬಿಡಿ ಭಾಗಗಳನ್ನೇ ಬಳಸಿ ತಯಾರಿಸಲಾಗಿದೆ. ಹೈಡ್ರಾಲಿಕ್ ಡ್ರಮ್, ಡಿಸ್ಕ್ ಬ್ರೇಕ್ ಸೌಲಭ್ಯವೂ ಇದೆ. ಬೈಕ್‌ನಂತೆ ಎರಡು ಹ್ಯಾಂಡಲ್‌ಗಳಿವೆ. ಎರಡೂ ಕೈಗಳಲ್ಲಿ ಹಿಡಿದುಕೊಂಡು ಮರ ಏರುವುದರ ಜೊತೆಗೆ, ಒಂದು ಅಡಿಕೆ ಮರ ಏರಿ ಕುಳಿತು, ಅಕ್ಕಪಕ್ಕದ ಮರಗಳಿಂದ ಅಡಿಕೆ ಕೀಳಬಹುದು. ಔಷಧಿ ಸಿಂಪಡಿಸಬಹುದು. ಬೈಕ್‌ನಲ್ಲಿದ್ದಂತೆ ಈ ಯಂತ್ರದಲ್ಲೂ ಪೆಟ್ರೋಲ್ ಮತ್ತು ಆಯಿಲ್ ಸೂಚಿಸುವ ವ್ಯವಸ್ಥೆಯೂ ಇದೆ.

ಈ ಯಂತ್ರ ಆವಿಷ್ಕರಿಸಿರುವ ಗಣಪತಿ ಭಟ್ಟರು ತೋಟದಲ್ಲಿ ಯಂತ್ರದ ಪ್ರಾತ್ಯಕ್ಷಿಕೆ ಪ್ರದರ್ಶಿಸುವ ವೇಳೆ (ಇಲ್ಲಿವರೆಗೆ )ಎರಡು ಸಾವಿರ ಬಾರಿ ಅಡಿಕೆ ಮರ ಏರಿ ತೋರಿಸಿದ್ದಾರೆ. ಈ ಆಧಾರದ ಮೇಲೆ ವಿವರಿಸುವ ಅವರು, 'ಒಂದು ಲೀಟರ್ ಪೆಟ್ರೋಲ್‌ಗೆ 80 ರಿಂದ 90 ಮರಗಳನ್ನು ಏರಬಹುದು' ಎಂದು ಅಂದಾಜಿಸುತ್ತಾರೆ.

'ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಯಂತ್ರವು ಮರವನ್ನು ಗಟ್ಟಿಯಾಗಿ ಅದುಮಿ ಹಿಡಿಯುವಂತೆ ಸಿದ್ಧಪಡಿಸಲಾಗಿದೆ. ಸುರಕ್ಷಾ ಬೆಲ್ಟ್ ಸೌಲಭ್ಯವಿರುವುದರಿಂದ ಮರ ಏರಿದವರು ಕೆಳಗೆ ಬೀಳುತ್ತಾರೆಂಬ ಭೀತಿ ಇಲ್ಲ. ಮುಂದಿನ ದಿನಗಳಲ್ಲಿ ಮಳೆಗೆ ಪಾಚಿ ಹಿಡಿದು ಜಾರುವ ಅಡಿಕೆ ಮರ ಮತ್ತು ತೆಂಗಿನ ಮರ ಏರಲು ಅನುಕೂಲವಾಗುವಂತೆ ಯಂತ್ರ ಸಿದ್ಧಪಡಿಸುವ ಯೋಚನೆಯೂ ಇದೆ' ಎನ್ನುತ್ತಾರೆ ಗಣಪತಿಭಟ್ಟರು.

ಯಂತ್ರ ತಯಾರಿಕೆಗೆ ರೂ 75 ಸಾವಿರ ವೆಚ್ಚವಾಗಿದೆ. ಯಂತ್ರ ತಯಾರಿಸಿದ ಮೇಲೆ ತಮ್ಮ ತೋಟದಲ್ಲಿ ಬಳಸಿ ನೋಡಿದ್ದಾರೆ ಭಟ್ಟರು. ಪ್ರಾತ್ಯಕ್ಷಿಕೆ ವೇಳೆ ತಮ್ಮ ಪುತ್ರಿ ಸುಪ್ರಿಯಾಭಟ್ ಈ ಯಂತ್ರದಿಂದ ಅಡಿಕೆ ಮರ ಏರಿ ತೋರಿಸಿದ್ದಾರೆ. ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಸದ್ಯ ಸಾವಿರಾರು ರೈತರು ಈ ವಿಡಿಯೊ ವೀಕ್ಷಿಸಿದ್ದಾರೆ.
ವಿಡಿಯೊ ನೋಡಿ, ರಾಜ್ಯ, ಹೊರ ರಾಜ್ಯಗಳು, ದಕ್ಷಿಣ ಆಫ್ರಿಕಾ, ಥಾಯ್ಲೆಂಡ್, ಸಿಂಗಪುರ ಸೇರಿದಂತೆ ವಿದೇಶಗಳಿಂದಲೂ ಯಂತ್ರದ ಕುರಿತು ರೈತರು ಮಾಹಿತಿ ಪಡೆದಿದ್ದಾರೆ. ಯಂತ್ರ ತಯಾರಕರು, ವಿತರಕರು ಇದನ್ನು ಅಭಿವೃದ್ಧಿಪಡಿಸಲು ಮುಂದೆ ಬಂದಿದ್ದಾರಂತೆ.

‘ಅಡಿಕೆ ಮರ ಏರಲು ಈಗಾಗಲೇ ಹಲವೆಡೆ ವಿವಿಧ ಸಾಧನಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ಗಣಪತಿ ಭಟ್ ಅವರು ತಮ್ಮ ಸಾಧನಕ್ಕೆ ಹೈಟೆಕ್ ಸ್ಪರ್ಶ ನೀಡುವ ಮೂಲಕ, ಮರ ಏರುವ ಕೆಲಸವನ್ನು ಮತ್ತಷ್ಟು ಸುಲಭವಾಗಿಸಿದ್ದಾರೆ' ಎಂದು ಬಂಟ್ವಾಳ ತಾಲ್ಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ದಿನೇಶ್ ಅಭಿಪ್ರಾಯಪಟ್ಟಿದ್ದಾರೆ.

‘ಕಾರ್ಮಿಕರ ಸಮಸ್ಯೆಗೆ ಪರಿಹಾರ’

ಕೆ. ಗಣಪತಿಭಟ್, ಬಿ.ಎಸ್ ಸಿ ಪದವೀಧರರು. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಏಳೂವರೆ ಸಾವಿರ ಅಡಿಕೆ ಮರಗಳನ್ನು ಹೊಂದಿದ್ದಾರೆ. ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ತಮಗಾಗಿಯೇ ಈ ಯಂತ್ರದ ಅನ್ವೇಷಣೆ ಮಾಡಿಕೊಂಡಿದ್ದಾರೆ. ಮೊದಲು ಇವರದ್ದೇ ಅಡಿಕೆ ತೋಟದಲ್ಲಿ ಪ್ರಾತ್ಯಕ್ಷಿಕೆ ನಡೆಸಿದ್ದಾರೆ. ‘ನಾನು ಮತ್ತು ನನ್ನ ಪುತ್ರಿ ಯಂತ್ರವನ್ನು ಬಳಸಿ ನೋಡಿದೆವು. ಖುಷಿಗಾಗಿ ಚಿತ್ರೀಕರಿಸಿದ ಆ ವಿಡಿಯೊ ಸಾವಿರಾರು ರೈತರನ್ನು ತಲುಪಿದೆ. ಇಲ್ಲಿವರೆಗೂ ಇನ್ನೂರಕ್ಕೂ ಹೆಚ್ಚು ರೈತರು ತೋಟಕ್ಕೆ ಬಂದು ಪ್ರಾತ್ಯಕ್ಷಿಕೆ ನೋಡಿದ್ದಾರೆ’ ಎಂದು ಖುಷಿಯಿಂದ ಹೇಳುತ್ತಾರೆ ಭಟ್ಟರು.
‘ನನಗೆ ಇದರಿಂದ ಹಣ ಮಾಡುವ ಯೋಚನೆ ಇಲ್ಲ. ಕಾರ್ಮಿಕರ ಕೊರತೆಗೆ ಈ ಯಂತ್ರ ಪರಿಹಾರ ಒದಗಿಸಿದರೆ ಅಷ್ಟೇ ಸಾಕು. ಈ ಯಂತ್ರದ ಬಗ್ಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ’ ಎನ್ನುತ್ತಾರೆ ಭಟ್ಟರು. ಯಂತ್ರ ಕುರಿತ ಹೆಚ್ಚಿನ ಮಾಹಿತಿಗಾಗಿ ಗಣಪತಿಭಟ್ಟರ ಮೊಬೈಲ್ ಸಂಖೆ: 9632774159.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.