ADVERTISEMENT

ಮರಿಕೆ ಕಟ್ಟ

ನಾ.ಕಾರಂತ ಪೆರಾಜೆ
Published 18 ಮಾರ್ಚ್ 2019, 19:45 IST
Last Updated 18 ಮಾರ್ಚ್ 2019, 19:45 IST
ಮರಿಕೆ ಕಟ್ಟ ಚಿತ್ರಗಳು: ಲೇಖಕರವು
ಮರಿಕೆ ಕಟ್ಟ ಚಿತ್ರಗಳು: ಲೇಖಕರವು   

ಪುತ್ತೂರು ತಾಲೂಕಿನ ಆರ್ಯಾಪು ಮರಿಕೆಯ ಎ.ಪಿ.ಸದಾಶಿವ ಸಾವಯವ ಕೃಷಿಕರು. ಬೇಸಿಗೆಯಲ್ಲಿ ನೀರಾವರಿಗಾಗಿ ತೋಟದ ಸನಿಹದಲ್ಲಿ ಹರಿಯುವ ಕಿರು ಹಳ್ಳಕ್ಕೆ ಪಾರಂಪರಿಕ ಮಣ್ಣಿನ ಕಟ್ಟ (ಒಡ್ಡಿನ ರೀತಿ) ಕಟ್ಟುತ್ತಿದ್ದರು. ಆರೇಳು ದಿವಸದ ಶ್ರಮ, ಅರುವತ್ತು ಮಂದಿ ಸಹಾಯಕರ ದುಡಿಮೆ. ದಿಢೀರ್ ಮಳೆ ಬಂದರೆ ಕಟ್ಟ ಕಡಿದುಹೋಗುವ ಆತಂಕ, ಭಯ. ಜತೆಗೆ ಕಟ್ಟಕ್ಕೆ ಬಳಸಿದ ಮಣ್ಣಿನ ನಷ್ಟ. ಪ್ರತಿ ವರ್ಷವೂ ಹೊಸದಾಗಿ ಕಟ್ಟವನ್ನು ಕಟ್ಟಬೇಕಾದ ಪ್ರಮೇಯ. ಸಂಕಟ.

2007ರಲ್ಲಿ ಡಾ.ವಾರಣಾಶಿ ಕೃಷ್ಣಮೂರ್ತಿಯವರು ಅಭಿವೃದ್ಧಿಪಡಿಸಿದ ‘ವಾರಣಾಶಿ ಮರಳಿನ ಕಟ್ಟ’ದ ಯಶಸ್ಸಿನಿಂದ ಸದಾಶಿವ ಉತ್ಸುಕರಾದರು. ಮಣ್ಣಿನ ಬದಲಿಗೆ ಮರಳಿನ ಕಟ್ಟದ ಯೋಚನೆಯತ್ತ ಹೊರಳಿದರು. ’ಅದಕ್ಕೆ ಒಂಭತ್ತು ಮಂದಿ ಸಹಾಯಕರ ಶ್ರಮ ಬೇಕಾಗಿತ್ತು. ತುಂಬಾ ಜಾಣ್ಮೆಯ ಕೆಲಸ ಕೂಡ. ಮೂರು ವರುಷ ಈ ವಿನ್ಯಾಸದ ಕಟ್ಟ ಕಟ್ಟಿದೆ. ನಂತರ ತಗಡಿನ ಕಟ್ಟ ನಿರ್ಮಾಣಕ್ಕೆ ಬದಲಾದೆ’ ಎನ್ನುತ್ತಾರೆ.

ಮರಿಕೆಯ ಜಾಗದಲ್ಲಿ ಸುಮಾರು ಒಂದು ಕಿ.ಮೀ. ಉದ್ದದಷ್ಟು ಹಳ್ಳ (ತೋಡು) ಹರಿಯುತ್ತದೆ. ಇದಕ್ಕೆ ಕಟ್ಟ ಹಾಕಿ, ನೀರು ಏರಿಸಿದ್ದರಿಂದ ನವೆಂಬರ್‌ನಿಂದ ಜನವರಿವರೆಗೆ ತೋಟಕ್ಕೆ ನೀರಿನ ನೆಮ್ಮದಿ. ಕನಿಷ್ಠ ಎರಡು ತಿಂಗಳು ನೀರಿನ ನಿಶ್ಚಿಂತೆ. ತೋಡಿನ ಅಗಲ 23 ಅಡಿ. ನೀರಿನ ಹರಿವಿನ ಪಾತ್ರದಲ್ಲಿ ಬಹುತೇಕ ಕಲ್ಲುಗಳ ಹಾಸಿದೆ. ತೋಡಿನ ಒಂದು ಬದಿಯಲ್ಲಿ ಕಾಡಿನ ಅಂಚು. ಮತ್ತೊಂದು ಬದಿಯಲ್ಲಿ ಅಡಿಕೆ ತೋಟ. ಎರಡೂ ಬದಿಗಳಲ್ಲಿ ಕಲ್ಲಿನ ಫಿಲ್ಲರ್ – ರಚಿಸಿದ್ದಾರೆ. ತೋಡಿಗೆ ಅಡ್ಡವಾಗಿ ಕಬ್ಬಿಣದ ಕಂಬಿ(ಪಟ್ಟಿ)ಯನ್ನು ಜೋಡಿಸಿದ್ದಾರೆ. ಇದು ಕಟ್ಟಕ್ಕೆ ಮೂಲಾಧಾರ.

ADVERTISEMENT

ಕಂಬಿಯ ಸಮಾನಾಂತರದಲ್ಲಿ ಕೆಳಗೆ ಒಂದಡಿ ಅಗಲ-ಆಳದ ಕಾಂಕ್ರಿಟ್ ಅಡಿಗಟ್ಟು(ಬೆಡ್). ನೀರಿನ ಹರಿವಿಗೆ ಸುಲಭವಾಗಲು ಇದು ಸ್ವಲ್ಪ ಇಳಿಜಾರಾಗಿದೆ. ನಾಲ್ಕು ಮತ್ತು ಎರಡಡಿ ಉದ್ದಗಲದ ಹತ್ತು ಎಂ.ಎಸ್.ಶೀಟಿನ ತಗಡುಗಳು. ಅಡಿಗಟ್ಟಿನ ಅಂಚಿಗೆ ತಗಡು ತಾಗುವಂತೆ ಅಡ್ಡವಾಗಿರುವ ಆಧಾರ ಪಟ್ಟಿಗೆ ಒರಗಿಸಿದರೆ ಒಂದು ಹಂತದ ಕೆಲಸ ಪೂರ್ಣ. ಹೀಗೆ ಸಿದ್ಧವಾದ ತಗಡಿನ ಕಟ್ಟದ ಒಂದು ಬದಿಗೆ 150 ಜಿಎಸ್‍ಎಂ ಗುಣಮಟ್ಟದ ಸಿಲ್ಪಾಲಿನ್ ಪ್ಲಾಸ್ಟಿಕ್ ಶೀಟ್ ಹೊದಿಸಿದರೆ ‘ಮರಿಕೆ ಕಟ್ಟ’ ಸಿದ್ಧ.

’ಕಟ್ಟದ ಉದ್ದ, ಅಗಲಕ್ಕಿಂತ ಸ್ವಲ್ಪ ಹೆಚ್ಚೇ ಸಿಲ್ಪಾಲಿನ್ ಶೀಟ್ ಬೇಕಾಗುತ್ತದೆ. ಕಟ್ಟದ ಮೇಲ್ಬಾಗದಲ್ಲಿ ಶೀಟನ್ನು ಸ್ವಲ್ಪ ಹಿಂದಕ್ಕೆ ಮಡಿಸಿ ಜಾರದಂತೆ ಅಲ್ಲಲ್ಲಿ ತಂತಿಗಳಿಂದ ಬಿಗಿಯಬೇಕು. ಕೆಳಭಾಗದಲ್ಲಿ ಸ್ವಲ್ಪ ಹೆಚ್ಚು ಬಿಡಿಸಿಟ್ಟು ಅದು ತೇಲದಂತೆ ಮಣ್ಣು ಹಾಕಿ ಗಟ್ಟಿಗೊಳಿಸಬೇಕು. ಆಚೀಚೆ ಬದಿಗಳಲ್ಲಿ ಅಗಲಕ್ಕೆ ಬಿಡಿಸಿ ಅಲ್ಲೂ ತಳದಲ್ಲಿ ಮಣ್ಣು ಹಾಕಿ ಗಟ್ಟಿ ಮಾಡಿದರೆ ನೀರು ಒಸರುವುದು ಕಡಿಮೆಯಾಗುತ್ತದೆ’. ಇಂಥ ಸೂಕ್ಷ್ಮ ವಿಚಾರಗಳನ್ನು ಸದಾಶಿವರು ಗಮನಿಸಿದ್ದರಿಂದ ಕಟ್ಟ ಯಶಸ್ವಿಯಾಯಿತು.

ಕಟ್ಟದಲ್ಲಿ ಮೂರಡಿ ನೀರು ಏರಿ ನಿಲ್ಲುತ್ತದೆ. ತಗಡುಗಳು ನಾಲ್ಕಡಿ ಎತ್ತರ ಇದ್ದರೂ ಮಧ್ಯದ ಒಂದು ತಗಡು ಮಾತ್ರ ಮೂರಡಿ. ಇದು ಅಕಾಲದಲ್ಲಿ ಮಳೆ ಬಂದು ನೀರಿನ ಹರಿವು ಹೆಚ್ಚಾದರೆ ಹೊರ ಹರಿಯುವ ಕಿಂಡಿಯಂತೆ ಕೆಲಸ ಮಾಡುತ್ತದೆ. ’ನಾಲ್ಕಡಿ ನೀರು ಏರಿಸಿದರೆ ತೋಟದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಬೇರು ಕೊಳೆಯುವ ಆತಂಕ. ಹಾಗಾಗಿ ಮೂರಡಿಗೆ ಏರಿ ನಿಲ್ಲಿಸಿದ್ದೇನೆ’. ನೀರು ಹರಿಯುವ ಒತ್ತಡ ತಾಳಿಕೊಳ್ಳಲು ಕಟ್ಟದ ಆಧಾರ ಪಟ್ಟಿಗೆ ಪೂರಕವಾಗಿ ನೆಲದಿಂದ ಮತ್ತೊಂದು ಕಬ್ಬಿಣದ ಪಟ್ಟಿಯ ಆಧಾರವನ್ನು ನೀಡಿದ್ದಾರೆ.

ಕಬ್ಬಿಣದ ತಗಡಿನ ಕಟ್ಟಕ್ಕೆ ಆದ ವೆಚ್ಚವೆಷ್ಟು? ‘ನಾಲ್ಕೂವರೆ ವರ್ಷದ ಹಿಂದೆ ತಗಡಿಗೆ ₹15ಸಾವಿರ. ಕಬ್ಬಿಣದ ಪಟ್ಟಿಗೆ ₹3ಸಾವಿರ; ಸಿಲ್ಪಾಲಿನ್ ಶೀಟ್, ಕಾಂಕ್ರಿಟ್ ಮತ್ತಿರ ಕೆಲಸಗಳಿಗೆ ₹2ಸಾವಿರ ಖರ್ಚು. ಒಟ್ಟು ₹20 ಸಾವಿರದಲ್ಲಿ ಕಟ್ಟದ ಕಚ್ಚಾವಸ್ತುಗಳು ಸಿಕ್ಕವು. ನಂತರದ ವರ್ಷಗಳಲ್ಲಂತೂ ಖರ್ಚು ಇಲ್ಲ. ಕಾಸ್ಟ್ ಫ್ರೀ. ಟೆನ್ಶನ್ ಫ್ರೀ!’ ಕಟ್ಟಕ್ಕೀಗ 5ನೇ ವರುಷ.

‘ಡಿಸೆಂಬರ್-ಜನವರಿಯಲ್ಲಿ ಮೂರಡಿ ನೀರು ಏರಿ ನಿಲ್ಲುತ್ತದೆ. ಜನವರಿ ಕೊನೆಯಾಗುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಕೊನೆಗೆ ಬತ್ತಿಹೋಗುತ್ತದೆ. ನಂತರ ಒಂದೆರಡು ಮಳೆ ಬಂದರೆ ಸಾಕು, ಕಟ್ಟದಲ್ಲೂ ನೀರು. ಕೆರೆ, ಬಾವಿಗಳಲ್ಲಿ ಜಲಮಟ್ಟ ಏರಿದ್ದನ್ನು ಗಮನಿಸಿದ್ದೇನೆ’, ಮಧ್ಯೆ ಮಾತು ಸೇರಿಸಿದರು ಸದಾಶಿವರ ಮಗ ಸುಹಾಸ. ಮೇ ತಿಂಗಳಾಂತ್ಯದಲ್ಲಿ ಕಟ್ಟದ ತಗಡು ಬಿಚ್ಚಿ, ತುಕ್ಕು ಹಿಡಿಯದಂತೆ ಮಡ್‍ಆಯಿಲ್‌ ಲೇಪಿಸಿ ತೆಗೆದಿಡುತ್ತಾರೆ. ಮುಂದಿನ ಕಟ್ಟ ಕಟ್ಟುವ ವರೆಗೆ ತಗಡಿಗೆ ರಜೆ.

ಆರಂಭದ ದಿವಸಗಳನ್ನು ಸದಾಶಿವ ನೆನಪು ಮಾಡಿಕೊಳ್ಳುತ್ತಾರೆ; ಪುತ್ತೂರು ಪೇಟೆಗೆ ಹೋಗಿದ್ದಾಗ ಕಾಂಕ್ರಿಟ್ ಸ್ಲಾಬ್ ಮಾಡಲು ಬಳಸುವ ಕಬ್ಬಿಣದ ಹಾಳೆಗಳು (ಸೆಂಟರಿಂಗ್ ಶೀಟ್) ಗಮನ ಸೆಳೆಯಿತು. ಗಟ್ಟಿಯಾದ ಹಾಳೆಗಳ ಇದರ ತಗಡುಗಳು ಕಟ್ಟಕ್ಕೆ ಬಳಸಬಹುದೇನೋ? ಯೋಚನೆ ಹುಟ್ಟಿತು, ನೀಲನಕ್ಷೆ ತಯಾರಾಯಿತು. ನಿಶ್ಚಿತ ಅಳತೆಯಲ್ಲಿ ತಗಡುಗಳು ಸಿದ್ಧವಾ
ದುವು. ಕಟ್ಟದ ಅಡ್ಡಕ್ಕೆ ಗಟ್ಟಿಯಾದ ಬಿದಿರಿನ ಆಧಾರ. ತಗಡನ್ನು ಒಂದರ ನಂತರ ಒಂದರಂತೆ ಜೋಡಿಸಿದರು. ಪ್ಲಾಸ್ಟಿಕ್ ಶೀಟನ್ನು ಒಂದು ಬದಿಗೆ ಹಾಸಿದರು. ಮೂರಡಿ ನೀರು ಏರಿ ನಿಂತಾಗ ಖುಷಿ! ನೀರಿನ ಒತ್ತಡ ತಾಳಲಾರದೆ ಕೆಲವೇ ದಿವಸದಲ್ಲಿ ಬಿದಿರಿನ ಆಧಾರ ತುಂಡಾಯಿತು. ಪೈಪಿನೊಳಗೆ ಕಾಂಕ್ರಿಟ್ ತುಂಬಿಸಿ ಮಾಡಿದ ಆಧಾರವೂ ಯಶವಾಗಲಿಲ್ಲ. ಕೊನೆಗೆ ಗುಜರಿಯಿಂದ ಸಿಕ್ಕಿದ ಕಬ್ಬಿಣದ ಕಂಬಿಯನ್ನು ತಂದು ಜೋಡಿಸಿದರು.

ಇಬ್ಬರು ಸಹಾಯಕರಿಂದ ಮುಕ್ಕಾಲು ಗಂಟೆಯಲ್ಲಿ ಕಟ್ಟ ಕಟ್ಟಲು ಸಾಧ್ಯವಾಯಿತು. ಅಷ್ಟೊಂದು ಸರಳ, ಸುಲಭ. ಮಣ್ಣಿನ ಕಟ್ಟಕ್ಕಿರುವ ದೊಡ್ಡ ಆತಂಕ ಏಡಿಗಳ ಕಾಟ. ಇದರಲ್ಲಿ ಅದರ ಕಾಟವಿಲ್ಲ. ಜತೆಗೆ ಮಣ್ಣಿನ ರಕ್ಷಣೆ. ಸವಕಳಿ ತಡೆ. ದೀರ್ಘ ಶ್ರಮವಿಲ್ಲ. ಎಲ್ಲವನ್ನೂ ಲೆಕ್ಕ ಹಾಕಿದರೆ ಸಾವಿರಗಟ್ಟಲೆ ರೂಪಾಯಿ ಮತ್ತು ದಿನಗಳು ಉಳಿತಾಯ. ಸದಾಶಿವರ ಅನುಭವದ ಹಿನ್ನೆಲೆಯಲ್ಲಿ ಇಂಥ ಕಟ್ಟವನ್ನು ಇಪ್ಪತ್ತೈದು ಅಡಿ ಅಗಲದ, ಐದಡಿ ಎತ್ತರದವರೆಗೂ ನಿರ್ಮಿಸಬಹುದು. ಕೃಷಿ ಸಹಾಯಕರ ಅಲಭ್ಯತೆಯ ಹಿನ್ನೆಲೆಯಲ್ಲಿ ಮರಿಕೆಯ ಕಟ್ಟವು ಸರಳ ಹಾಗೂ ಸುಲಭ. ಕಟ್ಟದ ಕುರಿತ ಮಾಹಿತಿಗಾಗಿ ಎ.ಪಿ.ಸದಾಶಿವ ಸಂಪರ್ಕ : 94492 82892 (ಸಂಜೆ 6 ರಿಂದ 8ರವರೆಗೆ ಮಾತ್ರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.