ADVERTISEMENT

ಫೆ.23ರಿಂದ 25ರವರೆಗೆ ಪುತ್ತೂರಿನಲ್ಲಿ ತಂತ್ರಜ್ಞಾನ ಆಧರಿತ ಕೃಷಿ ಯಂತ್ರಮೇಳ

ಋತುಪರ್ಣ ಆರ್‌.ಸಿ
Published 18 ಫೆಬ್ರುವರಿ 2019, 19:30 IST
Last Updated 18 ಫೆಬ್ರುವರಿ 2019, 19:30 IST
ಕೃಷಿ ಯಂತ್ರ
ಕೃಷಿ ಯಂತ್ರ   

ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರದ್ದೇ ಬಹುದೊಡ್ಡ ಸಮಸ್ಯೆ. ಪರಿಣಾಮವಾಗಿ, ಕೃಷಿಯ ಪ್ರತಿಯೊಂದು ಹಂತದಲ್ಲೂ ಯಂತ್ರಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ, ಆ ಯಂತ್ರಗಳು ಎಲ್ಲಿ ಸಿಗುತ್ತವೆ? ನಮ್ಮ ಕೃಷಿಗೆ ಹೊಂದುವಂತಹ ಯಂತ್ರಗಳು ಬೇಕು. ಅಂಥವುಗಳನ್ನು ಯಾರು ತಯಾರು ಮಾಡಿಕೊಡುತ್ತಾರೆ ?

ಇಂಥ ಕೃಷಿ ಯಂತ್ರಗಳ ಕುರಿತು ಹಲವು ಪ್ರಶ್ನೆಗಳಿಗೆ ಕೃಷಿಯಂತ್ರಮೇಳದಲ್ಲಿ ಉತ್ತರ ಸಿಗುವ ಸಾಧ್ಯತೆಗಳಿವೆ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಿವೇಕಾನಂದ ಎಂಜಿನಿಯರಿಂಗ್ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜುಗಳು ಕ್ಯಾಂಪ್ಕೊ ಹಾಗೂ ಕೆಎಂಎಫ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಯಂತ್ರಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಕೇವಲ ಯಂತ್ರಗಳ ಪ್ರದರ್ಶನವಷ್ಟೇ ಇರುವುದಿಲ್ಲ. ಬದಲಿಗೆ ಪ್ರಾತ್ಯಕ್ಷಿಕೆಯ ಪ್ರದರ್ಶನವಿರುತ್ತದೆ.

ಅಡಿಕೆ ಕೃಷಿಕರು ಕೆಳಗೆ ನಿಂತು ಮರದ ಮೇಲ್ಭಾಗಕ್ಕೆ ಔಷಧ ಸಿಂಪಡಿಸಬಹುದಾದ 80 ಅಡಿ ಎತ್ತರದ ದೋಟಿ, ಅಡಿಕೆ ಹೆಕ್ಕುವ ಯಂತ್ರ, ಹೈಡ್ರೋಪಾಲಿಕ್ ಕೃಷಿ, ನೀರಿನ ನಿರ್ವಹಣೆ, ಮನೆಯಲ್ಲಿ ಅಥವ ಎಲ್ಲೋ ಇದ್ದು ನಿಗದಿತ ಪ್ರಮಾಣದ ನೀರನ್ನು ತೋಟದ ನಾನಾ ಭಾಗಗಳಿಗೆ ಹಾಯಿಸಲು ಅನುಕೂಲವಾಗುವಂತಹ ತಂತ್ರಜ್ಞಾನಗಳು ಈ ಮೇಳದಲ್ಲಿ ಅನಾವರಣಗೊಳ್ಳಲಿವೆ. ಮಳೆ ನೀರು ಸಂಗ್ರಹಕ್ಕೆ ಬೇಕಾದ ಯಂತ್ರಗಳ ಮಾಹಿತಿಯೂ ಇಲ್ಲಿ ದೊರೆಯಲಿದೆ.

ADVERTISEMENT

ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ, ಕೊಟ್ಟಿಗೆ ನಿರ್ಮಾಣದ ಬಗ್ಗೆ ಮಾಹಿತಿ ನೀಡುವ ಮಳಿಗೆಗಳಿರುತ್ತವೆ. ಮೇಳದಲ್ಲೇ ಮಾದರಿ ಮನೆ ಹಾಗೂ ಹಟ್ಟಿಯ ನಿರ್ಮಾಣ ಮಾಡುವಂತಹ ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಸುಮಾರು 250ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ತೆರೆದುಕೊಳ್ಳಲಿವೆ.

ಮೇಳ ಕೇವಲ ಪ್ರದರ್ಶನವಲ್ಲದೇ, ಸಭಾ ಕಾರ್ಯಕ್ರಮಗಳಿವೆ. ಇಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಹಿತ್ತಲಲ್ಲಿ ವರ್ಷಪೂರ್ತಿ ರಾಸಾಯನಿಕ ರಹಿತ ತರಕಾರಿ ಬೆಳೆಯುವುದು, ತಾರಸಿಯಲ್ಲಿ ತರಕಾರಿ ಬೆಳೆಯುವ ವಿಧಾನ, ಕೃಷಿ ಸಂತೃಪ್ತಿಗಳ ಬಗೆಗೆ ಚರ್ಚೆ ನಡೆಯಲಿದೆ. ಬೇರೆ ಬೇರೆ ಉದ್ಯೋಗದಲ್ಲಿದ್ದು, ನೆಮ್ಮದಿಗಾಗಿ ಕೃಷಿ ಆಯ್ದುಕೊಂಡು ಬದುಕಿನ ಖುಷಿ ಕಂಡವರ ಅನುಭವದ ಮಾತು, ಪ್ರಯೋಗಶೀಲ ಕೃಷಿಕರ ಸಾಧನೆಗಳೂ ಅನಾವರಣಗೊಳ್ಳಲಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕೃಷಿಯಲ್ಲಿ ಹೇಗೆ ಉಪಯೋಗಿ ಎಂಬುದನ್ನು ತಜ್ಞರು ವಿವರಿಸಲಿದ್ದಾರೆ. ಉನ್ನತ ಶಿಕ್ಷಣ ಪಡೆದ ನಂತರ ಕೃಷಿಯನ್ನೇ ಉದ್ಯೋಗ ಮಾಡಿಕೊಂಡವರ ನುಡಿಗಳೂ ಇವೆ. ಹಾಗೆಯೇ ಮನೆ ನಿರ್ಮಾಣವನ್ನು ಆರ್ಥಿಕ ನಾಜೂಕಿನಿಂದ ಮಾಡುವ ಕಲೆ, ವಾಸ್ತು ಹೇಗಿರಬೇಕೆಂಬ ಮಾಹಿತಿಗಳಿಗೆ ಸಂಬಂಧಿಸಿದ ಗೋಷ್ಠಿಗಳೂ ಇವೆ. ಸರ್ಕಾರದ ವಿವಿಧ ಯೋಜನೆ, ವಿವಿಧ ಸಹಾಯಧನಗಳ ಬಗೆಗೆ ವಿವರಣೆಯೂ ದೊರಕಲಿದೆ.

ಈ ಮೇಳದ ಉದ್ದೇಶ ಕೃಷಿಯ ಸಾಧ್ಯತೆಯನ್ನು ತರೆದಿಡುವುದೇ ಆಗಿದೆ. ಆಧುನಿಕ ಕೃಷಿ ಸಾಧನಗಳು, ಅದರಿಂದಾಗಿ ಕೃಷಿಯ ನಿರ್ವಹಣೆ ಸುಲಭವಾದ ಬಗೆಯನ್ನು ಈ ಯಂತ್ರಮೇಳ ಅನಾವರಣಗೊಳಿಸಲಿದೆ. ಹೆಚ್ಚಿನ ಮಾಹಿತಿಗೆ 9483203087, 9743250582, ಜಾಲತಾಣ: www.vcetputtur.ac.in, email: reg_yantra@vcetputtar.ac.in (ಹಿಂದಿನ ಮೇಳದ ಚಿತ್ರಗಳು: ಶ್ರೀಪಡ್ರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.