ADVERTISEMENT

ತಾರಸಿ ತೋಟದಲ್ಲಿ ‘ನೀರ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:30 IST
Last Updated 15 ಜುಲೈ 2019, 19:30 IST
ತಾರಸಿ ಗಾರ್ಡನ್‌ ಚಿತ್ರಗಳು: ರಾಜಾರಾಂ ಶರ್ಮ
ತಾರಸಿ ಗಾರ್ಡನ್‌ ಚಿತ್ರಗಳು: ರಾಜಾರಾಂ ಶರ್ಮ   

ಶಿಕ್ಷಣ ತಜ್ಞ ಡಾ. ರಾಜೇಶ್ ಅವರು ಬೆಂಗಳೂರಿನ ಶಿವಾಜಿನಗರದ ಫ್ರೇಜರ್‌ಟೌನ್‌ನಲ್ಲಿರುವ ತಮ್ಮ ಮನೆಯ ಮಹಡಿಯಲ್ಲಿ ಪಪ್ಪಾಯ, ಮಾವಿನಂತಹ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.

ಮಹಡಿಯನ್ನು ವಿಸ್ತರಿಸಿ ಮಾಡಿರುವ ಬಾಲ್ಕನಿಯ ಜಾಗದಲ್ಲಿ ಪಪ್ಪಾಯ ಮರವಿದೆ. ತಾರಸಿ ಮೇಲೆ ತೆರೆದ ತಳದ ಸಿಮೆಂಟ್ ರಿಂಗ್‌ಗಳನ್ನು ಜೋಡಿಸಿ, ಅದರೊಳಗೆ ಮಣ್ಣು -ಗೊಬ್ಬರ ಹರಡಿ, ಅದರ ಮೇಲೆ ಈ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಪಪ್ಪಾಯ ಮರವಾಗಿ, ಬುಡ ದಪ್ಪವಾಗಿ ಬಾಗಿದ್ದು ನಂತರ ನೇರವಾಗಿ ಬೆಳೆದಿದೆ. ಗಿಡದ ತುಂಬ ನೀಳವಾದ ಪಪ್ಪಾಯ ಹಣ್ಣು. ನೋಡಿದೊಡನೆ ಮನಸ್ಸಿನಲ್ಲಿ ಸಂತಸ ಮೂಡುತ್ತದೆ.

ಇದರ ಪಕ್ಕದಲ್ಲೇ ಇನ್ನಷ್ಟು ಸಿಮೆಂಟ್‌ ರಿಂಗ್‌ಗಳಲ್ಲಿ ನುಗ್ಗೆ ಹಾಗೂ ಮಾವಿನ ಮರಗಳು ಬೆಳೆದು ನಿಂತಿವೆ. ಈ ಬಾಲ್ಕನಿಯ ಕೆಳಗಡೆ ಕಾರುಗಳನ್ನು ಪಾರ್ಕ್ ಮಾಡುತ್ತಾರೆ. ಇದನ್ನು ಕಂಡಾಗ ‘ತಾರಸಿ ಮೇಲೆ ಮಣ್ಣು ಹರಡಿ, ಗಿಡ ಬೆಳೆಸಿದರೆ, ನಾಲ್ಕಾರು ವರ್ಷಗಳ ನಂತರ ಅವುಗಳ ಬೇರು ತಾರಸಿಗಿಳಿದು ಹಾಳಾಗುವುದಿಲ್ಲವೇ. ಕೆಳಗಿರುವ ಕಾರುಗಳ ಮೇಲೆ ದೂಳು ಬೀಳುವುದಿಲ್ಲವೇ’- ನನ್ನ ಆಲೋಚನೆ, ಮಾತಾದಾಗ, ಪಕ್ಕದಲ್ಲೇ ಇದ್ದ ರಾಜೇಶ್, ಅದನ್ನು ಕೇಳಿ ನಕ್ಕರು.

ADVERTISEMENT

‘ನಿಮ್ಮ ಸಂಶಯ ನನಗೆ ಅರ್ಥವಾಯ್ತು. ತಾರಸಿಯ ಮೇಲೆ ಮಣ್ಣು ಹಾಕಿ, ಗಿಡಗಳನ್ನು ಬೆಳೆಸಿದಾಗ, ಬೇರುಗಳು ಎಲ್ಲೆಡೆಯೂ ಹರಡುತ್ತದೆ. ಇದರಿಂದ ಬಾಲ್ಕನಿಗೆ ಹಾನಿಯಾದರೆ, ನೀರು ಸೋರಲಾರಂಭಿಸಿದರೇ.. ಇದೇ ಅಲ್ಲವೇ ನಿಮ್ಮ ಸಂಶಯದ ಪ್ರಶ್ನೆ..’ ಎಂದರು ರಾಜೇಶ್. ಅವರಿಗೆ ನನ್ನೊಳಗಿನ ಗೊಂದಲ ಅರ್ಥವಾಗಿತ್ತು.

‘ತಾರಸಿ ತೋಟ ಮಾಡುವವರು ನೀರಿನ ಜತೆಗೆ ಮಣ್ಣಿನ ಸಂರಕ್ಷಣೆ ಬಗ್ಗೆಯೂ ಗಮನ ಹರಿಸಬೇಕು. ಈಗ ನೀರಿನಷ್ಟೇ ಮಣ್ಣಿಗೂ ಚಿನ್ನದ ಬೆಲೆ. ಎರಡನ್ನು ಸಂರಕ್ಷಿಸಬೇಕು. ಅದಕ್ಕಾಗಿ ಈ ವಿಧಾನ ಅನುಸರಿಸಿದ್ದೇನೆ’ - ರಾಜೇಶ್ ವಿವರಿಸಿದರು. ಆದರೂ ನನಗೆ ಅವರ ವಿವರಣೆಯಿಂದ ಏನೂ ಅರ್ಥವಾಗಲಿಲ್ಲ. ನನ್ನ ಮುಖದಲ್ಲಿ ಮೂಡಿದ್ದ ಅನುಮಾನದ ಚಹರೆ ಅವರಿಗೆ ಅರ್ಥವಾಯಿತು. ವಿಷಯ ವನ್ನು ಇನ್ನಷ್ಟು ವಿವರಿಸಲು ಮುಂದಾದರು ರಾಜೇಶ್.

ಮೈಕ್ರೋಫೈಬರ್ -ಡ್ರೇಯ್ನ್ ಸೆಲ್

ಬಾಲ್ಕನಿಯಲ್ಲಿ ಗಿಡ ಹಾಕುವ ಆಲೋಚನೆ ಬಂದ ತಕ್ಷಣ ರಾಜೇಶ್ ಸಾಕಷ್ಟು ಜಾಲತಾಣಗಳನ್ನು ಜಾಲಾಡಿದ್ದಾರೆ. ಆಗ ಲಭ್ಯವಾಗಿದ್ದೇ ಮೈಕ್ರೋಫೈಬರ್ ಎಂಬ ನೀರು ಸೋಸುವ ಮಾಧ್ಯಮ (ಮೀಡಿಯಾ). ಇದರೊಂದಿಗೆ ಡ್ರೇಯ್ನ್ ಸೆಲ್ ಎನ್ನುವ ರಬ್ಬರ್ ಬೇಸ್ ಸಹ ಸಿಕ್ಕಿತು. ಈ ಎರಡೂ ನೀರು ಮತ್ತು ಮಣ್ಣು ಉಳಿಸುವ ಪರಿಕರಗಳು.

ಮೊದಲು ಬಾಲ್ಕನಿಯ ನೆಲದ ಮೇಲೆ ಈ ರಬ್ಬರ್‌ ಬೇಸ್ ಅನ್ನು ಹಾಕಿದ್ದಾರೆ. ಅದರ ಮೇಲೆ ಮೈಕ್ರೋ ಫೈಬರ್ ಹೊದಿಸಿದ್ದಾರೆ. ಅದರ ಮೇಲೆ ಮಣ್ಣು ಗೊಬ್ಬರದ ಮಿಶ್ರಣ ಹರಡಿಸಿದ್ದಾರೆ. ಇವೆಲ್ಲದರ ಮೇಲೆ ಸಿಮೆಂಟ್ ರಿಂಗ್ ಇಟ್ಟು, ಕಾಂಪೋಸ್ಟ್ ಮಿಶ್ರಣ ತುಂಬಿಸಿದ್ದಾರೆ.

ಮೈಕ್ರೋಫೈಬರ್ - ಮೈತುಂಬ ಕಣ್ಣುಗಳಂತಹ ರಂಧ್ರಗಳಿರುವ ಫುಟ್ ಮ್ಯಾಟ್ ತರಹ ಇರುತ್ತದೆ. ನೀರು ಸಲೀಸಾಗಿ ಕೆಳಗಿಳಿಯುತ್ತೆ. ಆ ನೀರು ಕೆಳಗಡೆ ಇರುವ ರಬ್ಬರ್ ಬೇಸ್‌ನಲ್ಲಿ ಸಂಗ್ರಹವಾಗುತ್ತದೆ. ಈ ಬೇಸ್‌ ಕೆಳಗಡೆ ಪೈಪ್ ಜೋಡಿಸಿದ್ದು, ಅದನ್ನು ಬಾಲ್ಕನಿಯ ಕೆಳಗಿರುವ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ರಿಂಗ್‌ನಿಂದ ಇಳಿದ ನೀರು ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಆ ಟ್ಯಾಂಕ್ ನೀರನ್ನು ಮೋಟಾರ್‌ ಪಂಪ್ ಮೂಲಕ ಮೇಲೆತ್ತಿ ಎರಡನೇ ಮಹಡಿಯಲ್ಲಿರುವ ಗಿಡಗಳಿಗೆ ಪೂರೈಸುತ್ತಾರೆ.

‘ಈ ವಿಧಾನ ಅನುಸರಿ ಸಿರುವುದರಿಂದ, ಮಣ್ಣು, ಕಾಂಪೋಸ್ಟ್ ಮಿಶ್ರಣ ಮೈಕ್ರೋ ಫೈಬರ್‌ನಲ್ಲಿ ಉಳಿಯುತ್ತದೆ. ನೀರು ಮಾತ್ರ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಅದನ್ನು ಮರುಬಳಕೆ ಮಾಡುವುದರಿಂದ, ಹೆಚ್ಚುವರಿಯಾಗಿ ಹೊರಗಿನಿಂದ ನೀರು ತರುವುದು ತಪ್ಪುತ್ತದೆ’ ಎಂದು ತಾವು ಅನುಸರಿಸಿರುವ ತಾಂತ್ರಿಕತೆ ಬಗ್ಗೆ ವಿವರಿಸಿದರು ರಾಜೇಶ್.

ಐರನ್‌ ಆ್ಯಂಗಲ್‌ಗಳಲ್ಲಿ ಗಿಡಗಳು

ಎರಡನೇ ಮಹಡಿಯಲ್ಲಿರುವ ತಾರಸಿ ತೋಟ ತುಸು ವಿಭಿನ್ನವಾಗಿದೆ. ಅಲ್ಲಿ ಕುಂಡಗಳ ಬದಲಿಗೆ ಆ್ಯಂಗಲ್‌ ಐರನ್ ಬಳಸಿ ಎತ್ತರದ ಸ್ಟ್ಯಾಂಡ್ ಮಾಡಿಸಿದ್ದಾರೆ. ಅದರಲ್ಲೂ ಕೆಳ ಭಾಗಕ್ಕೆ ರಬ್ಬರ್ ಬೇಸ್ ಹಾಕಿ ಮೇಲಿನಿಂದ ಮೈಕ್ರೋ ಫೈಬರ್ ಹಾಸಿ ಮಣ್ಣು–ಕಾಂಪೋಸ್ಟ್‌ ಮಿಶ್ರಣ ತುಂಬಿಸಿದ್ದಾರೆ. ‘ಆ್ಯಂಗಲ್‌ ಐರನ್‌ ಬಾಕ್ಸ್‌ಗಳನ್ನು ಸಾಲಾಗಿ ಜೋಡಿಸಿದ್ದು, ಇವುಗಳಿಗೆ ಪೈಪ್ ಜೋಡಿಸಿದ್ದೀವಿ. ಕೆಳಗಿನ ಟ್ಯಾಂಕ್‌ನಲ್ಲಿ ಸಂಗ್ರಹವಾಗುವ ನೀರನ್ನು ಪಂಪ್ ಬಳಸಿ ಹೌಸ್ ಪೈಪ್‌ಗಳ ಮುಖಾಂತರ ಇಲ್ಲಿನ ಗಿಡಗಳಿಗೆ ಪೂರೈಸುತ್ತೇವೆ’ - ರಾಜೇಶ್ ತಂತ್ರಜ್ಞಾನ ಬಳಸಿಕೊಂಡ ಬಗೆಯನ್ನು ಇನ್ನಷ್ಟು ವಿಸ್ತಾರವಾಗಿ ವಿವರಿಸಿದರು.

ಈ ಮಹಡಿಯಲ್ಲಿರುವ ಐರನ್‌ ಆ್ಯಂಗಲ್‌ ಬಾಕ್ಸ್‌ಗಳಿಗೆ ಮೈಕ್ರೋ ಫೈಬರ್‌ ಅನ್ನು ಮೂರ್ನಾಲ್ಕು ವರ್ಷಗಳಿಂದ ಬಳಸುತ್ತಿದ್ದಾರೆ. ಇದು ಎಂಟರಿಂದ ಹತ್ತು ವರ್ಷ ಬಾಳಿಕೆ ಬರಬಹುದು ಎನ್ನುವುದು ಅವರ ಅಂದಾಜು.

ತಾರಸಿ ತೋಟ, ಕೈತೋಟ ಇವೆಲ್ಲ ‘ಪರಿಸರ ಸ್ನೇಹಿ’ ಹವ್ಯಾಸಗಳು. ಇಂಥ ಹವ್ಯಾಸಗಳನ್ನು ಅಳವಡಿಸಿಕೊಳ್ಳುವ ವರಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಮಣ್ಣು ತರುವುದು ಕಷ್ಟವಾಗುತ್ತಿದೆ. ಇಂಥ ವೇಳೆಯಲ್ಲಿ ರಾಜೇಶ್ ಅವರು ಅನುಸರಿಸಿರುವ ವಿಧಾನ ಅನುಕರಣೀಯವಾದದ್ದು.

ಅದು ಸೊಪ್ಪಿನ ತೋಟ

ರಾಜೇಶ್ ಅವರ ತಾರಸಿ ತೋಟವನ್ನು ಸೊಪ್ಪಿನ ತೋಟವೆಂದೇ ಕರೆಯಬಹುದು. ಏಕೆಂದರೆ ಅಂಗಳದ ತುಂಬಾ ಅಷ್ಟು ವೆರೈಟಿ ಸೊಪ್ಪುಗಳನ್ನು ಬೆಳೆಯುತ್ತಾರೆ. ದಂಟು, ಸಬ್ಸಿಗೆ, ಕೀರೆ, ಚಕ್ಕೋತ, ಪಾಲಕ್, ಪುದೀನ,ಕೊತ್ತಂಬರಿ.. ಇನ್ನೂ ಹಲವು ವಿಧದ ಸೊಪ್ಪುಗಳನ್ನು ಬೇರೆ ತೊಟ್ಟಿಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತಾರೆ. ಈ ತೋಟದ ಸೊಪ್ಪುಗಳನ್ನು ತಾವು ಬಳಸಿ, ಹೆಚ್ಚಾಗಿದ್ದನ್ನು ಸ್ನೇಹಿತರ ಮನೆಗೂ ತಲುಪಿ ಸುತ್ತಾರೆ. ಇವರ ತಾರಸಿ ತೋಟದಲ್ಲಿ ಸೊಪ್ಪಿನ ಜತೆಗೆ ಕುಂಬಳ, ಮೆಲೆನ್‌ನಂತಹ ಬಳ್ಳಿ ತರಕಾರಿಗಳೂ ಸಮೃದ್ಧವಾಗಿ ಫಲ ಕೊಡುತ್ತಿವೆ. ನುಗ್ಗೆ, ಪರಂಗಿ ಹಾಗೂ ಮಾವಿನ ಗಿಡಗಳು ತೋಟದ ವೈವಿಧ್ಯವನ್ನು ಹೆಚ್ಚಿಸಿವೆ.

ಗೊಬ್ಬರ ತಯಾರಿಕೆ ವಿಧಾನ

ಕಾಂಪೋಸ್ಟ್ ಡೈಜೆಸ್ಟರ್ ಬಳಸಿ ಗೊಬ್ಬರ ತಯಾರಿಸುತ್ತಾರೆ. ನೋಡಲು ಬಕೆಟ್ ಮಾದರಿ ಇರುವ ಡೈಜೆಸ್ಟರ್‌ನ ಮಧ್ಯಭಾಗದಲ್ಲಿ ವಂದರಿಯಂತಿರುವ ತಟ್ಟೆ ಇದೆ. ಮೇಲಿನಿಂದ ಹಾಕುವ ತ್ಯಾಜ್ಯಗಳೆಲ್ಲಾ ಕಳಿಯುತ್ತ ಹೋದಂತೆ ಪುಡಿ ಪುಡಿಯಾಗಿ ಕೆಳಗಿನ ಜಾಗದಲ್ಲಿ ತುಂಬಿಕೊಳ್ಳುತ್ತದೆ. ಇದು ಚೆನ್ನಾಗಿ ಕಳಿತ ಗೊಬ್ಬರ. ಇದನ್ನೇ ಸೊಪ್ಪಿನ ಗಿಡಗಳಿಗೆ ಬಳಸುತ್ತಾರೆ.

ಇನ್ನೊಂದು ‘ಹೋಮ್ ಕಂಪೋಸ್ಟರ್’ ಇದೆ. ಇದರಲ್ಲಿ ತ್ಯಾಜ್ಯದ ಮೇಲೆ ಸ್ವಲ್ಪ ನೀರು ಚುಮುಕಿಸುತ್ತಾರೆ. ಹೆಚ್ಚಾದ ನೀರು ಹನಿ ಹನಿಯಾಗಿ ಕೆಳ ಭಾಗದಲ್ಲಿ ಶೇಖರಣೆಯಾಗುತ್ತದೆ. ವಾರಕ್ಕೊಮ್ಮೆ ಇದನ್ನು ಸಂಗ್ರಹಿಸಿ ಬೇರೆ ನೀರು ಬೆರೆಸಿ ಗಿಡಗಳಿಗೆ ಸಿಂಪಡಿಸುತ್ತಾರೆ. ಇದು ದ್ರವ ರೂಪಿ ಗೊಬ್ಬರಗಳ ರೀತಿ ಕೆಲಸ ಮಾಡುತ್ತದೆ. ಇದರಿಂದ ಗಿಡಗಳು ಆರೋಗ್ಯವಾಗಿ, ಸಮೃದ್ಧವಾಗಿ ಬೆಳೆಯಲು ಸಹಾಯಕ.

ರಾಜೇಶ್ ಅವರ ನೀರು - ಮಣ್ಣು ಉಳಿಸುವ ಕುರಿತ ಹೆಚ್ಚಿನ ಮಾಹಿತಿಗಾಗಿ ಇಮೇಲ್: drsrajesh@yahoo.com ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.