ADVERTISEMENT

ಕಾಂಕ್ರೀಟ್‌ ಕಾಡು ನಡುವೆ ಜೇನುಗೂಡು

ಸುಬ್ರಹ್ಮಣ್ಯ ಎಚ್.ಎಂ
Published 5 ಆಗಸ್ಟ್ 2019, 19:30 IST
Last Updated 5 ಆಗಸ್ಟ್ 2019, 19:30 IST
ಜೇನು ಸಾಕಣೆ ಪ್ರಾತ್ಯಕ್ಷಿಕೆ
ಜೇನು ಸಾಕಣೆ ಪ್ರಾತ್ಯಕ್ಷಿಕೆ   

ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚೆಗೆ ಜೇನುಕೃಷಿ ವಿಸ್ತಾರವಾಗಿ ಬೆಳೆಯುತ್ತಿದೆ. ಕೆಲವರು ಹವ್ಯಾಸಕ್ಕಾಗಿ ಕೈಗೊಂಡರೆ, ಹೆಚ್ಚಿನವರು ಇದನ್ನು ಲಾಭದಾಯಕ ಕೃಷಿಯನ್ನಾಗಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜೇನುತುಪ್ಪ ಮತ್ತು ಇತರ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ. ಇದನ್ನು ಅರಿತು ಕ್ಯೂನೆಟ್‌ (QNet) ಸಂಸ್ಥೆ ಬೆಟ್ಟಹಲಸೂರು ಬಳಿಯ ಫಾರ್ಮ್‌ಹೌಸ್‌ವೊಂದರಲ್ಲಿ ಕೆಲವು ವರ್ಷಗಳಿಂದ ನಗರದ ಸುತ್ತಲಿನ ರೈತರಿಗೆ ಜೇನು ಕೃಷಿ ತರಬೇತಿ ನೀಡುತ್ತಾ ಬಂದಿದೆ.

ಇತ್ತೀಚೆಗೆ ಸಂಸ್ಥೆಯ ಜೇನುಕೃಷಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ಕೇಂದ್ರದಲ್ಲಿ ನಡೆಯುವ ತರಬೇತಿ ವಿಧಾನಗಳ ಕುರಿತು ಸಂಸ್ಥೆಯ ಸಿಬ್ಬಂದಿ ವಿವರಣೆ ನೀಡಿದರು.

ಸಂಸ್ಥೆಯಲ್ಲಿ ರೈತರಿಗೆ, ಹವ್ಯಾಸಿ ಜೇನು ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಜೇನುನೊಣಗಳ ಕುರಿತ ಸಂಶೋಧನೆ, ಪ್ರಾಯೋಗಿಕ ಸಾಕಣೆ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಈ ವೇಳೆ ಹೆಜ್ಜೇನು ಮತ್ತು ಕಡ್ಡಿಜೇನು ಹೊರತುಪಡಿಸಿ ಉಳಿದ ತುಡುವೆ ಜೇನು, ಮಲ್ಲಿಫೆರಾ ಮತ್ತು ನಸರು ಜೇನು ಸಾಕಲು ಯೋಗ್ಯ ಎಂಬುದನ್ನು ರೈತರಿಗೆ ಮನವರಿಕೆ ಮಾಡಲಾಗುತ್ತದೆ.

ADVERTISEMENT

ಕೀಟಪ್ರಬೇಧಗಳಲ್ಲಿ ಅತ್ಯಂತ ಕ್ರಿಯಾಶೀಲ ಕರ್ಮಜೀವಿ, ಸಂಘಜೀವಿಗಳೆಂದರೆ ಜೇನುನೊಣಗಳು. ಈ ಕುಟುಂಬದಲ್ಲಿ ರಾಣಿಜೇನು ನೊಣ ತಾಯಿಯಂತೆ ಉಸ್ತುವಾರಿ ವಹಿಸಿ ಕೆಲಸಗಾರ ನೊಣಗಳು, ಗಂಡು ನೊಣಗಳ ನಡುವೆ ಸಹಬಾಳ್ವೆ ನಡೆಸುತ್ತದೆ. ಇಂಥ ವಿವರಣೆ ಜತೆಗೆ ಗೂಡು ಕಟ್ಟುವ ಪರಿ, ಆಹಾರ ಸಂಗ್ರಹಿಸುವುದು, ಮರಿ ಹುಳುಗಳ ಆರೈಕೆ ಸೇರಿದಂತೆ ಜೇನುನೊಣದ ಜೈವಿಕ ಸಮತೋಲನ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲಾಗುತ್ತದೆ.

ಜೇನುನೊಣಗಳಿಂದ ಹಲವು ಬಗೆ ಉಪಯೋಗ ಕಾಣಬಹುದು. ಜೇನುತುಪ್ಪ ಪ್ರಮುಖವಾದರೆ, ರಾಜಶಾಹಿ ರಸ, ಜೇನು ಪರಾಗ, ಜೇನು ಅಂಟು, ಮೇಣದಂತಹ ಉತ್ಪನ್ನಗಳನ್ನು ಪಡೆಯಬಹುದು. ಜೇನು ನೊಣಗಳು ಹೂವುಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರ‌ಹಿಸಿ ಗೂಡಿನಲ್ಲಿ ಸಂಗ್ರಹಿಸುತ್ತವೆ. ಹೂವುಗಳ ಮೇಲೆ ಕುಳಿತುಕೊಳ್ಳುವ ಜೇನುನೊಣಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗುತ್ತವೆ. ಈ ರೀತಿಯ ಪರಾಗಸ್ಪರ್ಶದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆ ಯಲು ಸಾಧ್ಯವಾಗಿದೆ ಎಂಬುದು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಜೇನುಕೃಷಿಯಲ್ಲಿ ತೊಡಗಿರುವ ರೈತ ಚಿನ್ನಪ್ಪ ಅವರ ಅನುಭವದ ಮಾತು.

ವೈವಿಧ್ಯಮಯ ಬೆಳೆ ಅಗತ್ಯ
ಸೌತೆ, ಕುಂಬಳ, ಕಾಫಿ, ಸೂರ್ಯಕಾಂತಿ, ನೇರಳೆ, ಸೇಬು, ಹುಚ್ಚೆಳ್ಳು, ಎಳ್ಳು, ಮಾವು, ತೆಂಗು, ಏಲಕ್ಕಿ, ಸಾಸಿವೆಯಂತಹ ಬೆಳೆಗಳ ಪರಾಗಸ್ಪರ್ಶಕ್ಕಾಗಿ ಜೇನು ನೊಣಗಳು ಬೇಕು. ‘ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಕೆಲ ರೈತರು ತಮ್ಮ ಹೊಲ, ತೋಟಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಕೃಷಿ ಮಾಡುತ್ತಿದ್ದಾರೆ’ ಎಂದು ಜೇನುಕೃಷಿ ತರಬೇತುದಾರ ಹನುಮಂತಪ್ಪ ವಿವರಿಸಿದರು.

ಇದೇ ವೇಳೆ, ಜೇನುತುಪ್ಪ ತೆಗೆಯುವ ‍‍ಪ್ರಕ್ರಿಯೆ, ಯಂತ್ರದಿಂದ ಜೇನು ತೆಗೆಯುವ ವಿಧಾನ, ಜೇನು ಗೂಡುಗಳ ‍ಪರೀಕ್ಷೆ ಬಗ್ಗೆ ವಿವರಣೆ ನೀಡಿದ ಅವರು, ‘ಇದೇ ರೀತಿ ಹಲವು ಉಪಕರಣಗಳ ಕಾರ್ಯವೈಖರಿ, ಬಳಕೆ ಬಗ್ಗೆಯೂ ಇಲ್ಲಿ ತರಬೇತಿ ನೀಡುವುದಾಗಿ’ ತಿಳಿಸಿದರು.

ವಾಸಕ್ಕೆ ತಕ್ಕಂತೆ ಜೇನು ವೈವಿಧ್ಯ
ಟವರ್‌, ಮರದ ರಂಬೆಗಳಲ್ಲಿ ಹೆಜ್ಜೇನು ಗೂಡು ಕಟ್ಟಿದರೆ, ಪೊದೆಯ ಬೇಲಿ, ಕಿರಿದಾದ ಗಿಡ –ಮರಗಳಲ್ಲಿ ಕಡ್ಡಿ ಜೇನುಗೂಡು ಕಾಣಬಹುದು. ತುಡುವೆ ಮತ್ತು ನಸರು ಜೇನು ಹುತ್ತ, ಪೊಟರೆ, ಕಲ್ಲುಸಂದಿ, ಕತ್ತಲಿನ ಪ್ರದೇಶದಲ್ಲಿ ಗೂಡು ಕಟ್ಟುತ್ತದೆ. ವಾರಾಂತ್ಯದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಟೆಕಿಗಳು, ಹವ್ಯಾಸಿ ಕೃಷಿಕರಿಗೆ ಇದನ್ನೆಲ್ಲಾ ವಿವರಿಸುವ ಅಗತ್ಯವಿದೆ ಎನ್ನುತ್ತಾರೆ ಕ್ಯೂನೆಟ್‌ ಸಂಸ್ಥೆ ವ್ಯವಸ್ಥಾಪಕಿ ಅನಿತಾ.

ನಮ್ಮಲ್ಲಿ ತರಬೇತಿ ಪಡೆದ ರೈತರು ಜೇನು ತಟ್ಟೆಗೆ ಬೆಂಕಿ ಹಚ್ಚಿ ಹುಳುಗಳನ್ನು ಸಾಯಿಸಿ ತುಪ್ಪ ತೆಗೆಯುತ್ತಿದ್ದ ಪದ್ಧತಿಯನ್ನು ಕೈಬಿಟ್ಟಿದ್ದಾರೆ. ಜೇನು ಸಾಕಾಣಿಕೆಯಿಂದಾಗಿ ಸುತ್ತಲಿನ ಜಮೀನಿನಲ್ಲಿ ಬೆಳೆಗಳ ಇಳುವರಿ ಹೆಚ್ಚಳವಾಗಿದೆ. ಇದರಿಂದ ಜೇನು ಕೃಷಿಕರು ಅಕ್ಕಪಕ್ಕದ ರೈತರಿಗೆ ಆಪದ್ಬಾಂಧವರಾಗಿದ್ದಾರೆ.

ತರಬೇತಿ ಅವಧಿಯಲ್ಲಿ ‘ವಿವಿಧ ಬೆಳೆಗಳು ಹೂವು ಬಿಡುವ ಹಂತದಲ್ಲಿ ಕ್ರಿಮಿನಾಶಕ ಸಿಂಪಡಿಸುವುದರಿಂದ ನೊಣಗಳು ಸಾಯುತ್ತವೆ. ಇದರಿಂದ ಪರಾಗಸ್ಪರ್ಶದ ಪ್ರಮಾಣ ಕಡಿಮೆಯಾಗುತ್ತದೆ’ ಎಂಬುದನ್ನು ಅನೇಕ ರೈತರು ಅರಿತುಕೊಂಡಿದ್ದಾರೆ. ಹಾಗಾಗಿ ಬೆಳೆಗಳಿಗೆ ಬೇವಿನ ಎಣ್ಣೆ, ಸಸ್ಯಮೂಲ, ಜೈವಿಕ ಕೀಟನಾಶಕ, ಜೈವಿಕ ಪೀಡೆ ಕೀಟನಾಶಕಗಳಂತಹ ನೈಸರ್ಗಿಕ ಔಷಧ ಸಿಂಪಡಣೆ ಮಾಡುವ ವಿಧಾನವನ್ನು ರೈತರು ರೂಢಿಸಿಕೊಂಡಿದ್ದಾರೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.