ADVERTISEMENT

ಅಡಿಕೆ ಸುಲಿಯುವ ಜಾಬ್‍ವರ್ಕ್

ನಾ.ಕಾರಂತ ಪೆರಾಜೆ
Published 22 ಜುಲೈ 2019, 19:30 IST
Last Updated 22 ಜುಲೈ 2019, 19:30 IST
subraya bhat
subraya bhat   

ಅಡಿಕೆ ಕೃಷಿಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪಡಿಸುವ, ಕೊಯ್ಲು ಮಾಡುವ ಕೆಲಸಗಳಷ್ಟೇ ಅಡಿಕೆ ಸುಲಿಯುವುದೂ ಶ್ರಮದಾಯಕ ಕೆಲಸ. ಕೆಲಸಗಾರರ ಅಲಭ್ಯತೆಯಿಂದ ಎಷ್ಟೋ ಬಾರಿ ಸಕಾಲಕ್ಕೆ ಅಡಿಕೆ ಸುಲಿಸಲು ಸಾಧ್ಯವಾಗದೇ ಒದ್ದಾಟದ ಅನುಭವಕ್ಕೆ ಅನೇಕರು ಸಾಕ್ಷಿಯಾಗಿದ್ದರೆ. ಈಗ ಅಡಿಕೆ ಸುಲಿಯುವ ಕೆಲಸವನ್ನು ಯಂತ್ರಗಳು ಹಗುರ ಮಾಡಿವೆ. ದಶಕದೀಚೆಗೆ ನೂರಾರು ಯಂತ್ರಗಳು ಆವಿಷ್ಕಾರಗೊಂಡಿವೆ, ಅಭಿವೃದ್ಧಿಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ವಿಟ್ಲದ ಕುದ್ದುಪದವಿನ ಸುಬ್ರಾಯ ಭಟ್ಟರು ಸುಮಾರು ಎಂಟು ವರ್ಷಗಳಿಂದ ಅಡಿಕೆ ಸುಲಿಯುವ ಯಂತ್ರದ ಮೂಲಕ ಕೃಷಿಕರ ಮನೆಯಂಗಳದಲ್ಲೇ ಜಾಬ್‍ವರ್ಕ್ ಮಾಡುತ್ತಿದ್ದಾರೆ. ‘ವರ್ಷದಲ್ಲಿ ಹತ್ತು ತಿಂಗಳು ಈ ಯಂತ್ರ ಅನ್ನ ಕೊಡುತ್ತದೆ. ಕೈಯಲ್ಲಿ ಅಡಿಕೆ ಸುಲಿಯುವ ವಿಶೇಷಜ್ಞರ ಸಂಖ್ಯೆ ವಿರಳವಾಗುತ್ತಿದೆ. ಹಾಗಾಗಿ ಬಹುತೇಕರು ಯಂತ್ರವನ್ನು ಅಪೇಕ್ಷಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

ಸುಬ್ರಾಯ ಭಟ್ಟರು ಐವತ್ತು ಸಾವಿರ ರೂಪಾಯಿ ಮೂಲ ಬಂಡವಾಳದಿಂದ ಜಾಬ್‌ವರ್ಕ್‌ ಶುರು ಮಾಡಿದರು. ಆರಂಭಕ್ಕೆ ಒಂದೇ ಯಂತ್ರ ಇತ್ತು. ಮೊದಲ ಹೆಜ್ಜೆಯಿಡುವಾಗ ಹೇಗಾಗುತ್ತೋ ಏನೋ ಭಯ. ಇವೆಲ್ಲದರ ನಡುವೆ ಇವರಿಗೆ ‘ನಮ್ಮಲ್ಲಿಗೆ ಬನ್ನಿ’ ಎಂದು ಮುಂದಾಗಿ ಆದೇಶ ಕೊಟ್ಟ ರೈತರೂ ಇದ್ದಾರೆ. ಹೀಗೆ ಶುರುವಾದ ಭಟ್ಟರ ಅಡಿಕೆ ಸುಲಿಯುವ ಯಂತ್ರದ ಸದ್ದು ನಂತರ ನಿಲ್ಲಲೇ ಇಲ್ಲ. ಇವರು ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯುದ್ದಕ್ಕೂ ಕೃಷಿಕರ ಮನ ಗೆದ್ದಿದ್ದಾರೆ.

ADVERTISEMENT

ಮಗ ರಾಘವೇಂದ್ರ ಬೆಂಗಳೂರಿನ ತಮ್ಮ ಉದ್ಯಮವನ್ನು ತೊರೆದು ತಂದೆಯ ಯಂತ್ರ ಸಹವಾಸದ ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಹೀಗೆ ತಂದೆ, ಮಗ ಅಡಿಕೆ ಸುಲಿತದ ಅಗತ್ಯಗಳನ್ನು ಈಡೇರಿಸುತ್ತಿದ್ದಾರೆ. ಸುಬ್ರಾಯ ಭಟ್ಟರಲ್ಲಿ ಈಗ ಆರು ಯೂನಿಟ್ ಯಂತ್ರ ಪಡೆಯಿದೆ! ಒಂದು ಯೂನಿಟ್ ಅಂದರೆ – ಸುಲಿಯುವ ಯಂತ್ರ, ಸುಲಿದ ಬಳಿಕ ಕಸ ಬೇರ್ಪಡಿಸುವ ಯಂತ್ರ, ಜನರೇಟರ್ ಮತ್ತು ವಾಹನ. ನಿರ್ವಹಣೆಗೆ ನಾಲ್ಕು ಮಂದಿ ಸಹಾಯಕರು ಬೇಕು. ಒಂದೆರಡು ಯೂನಿಟ್ ಆಪತ್ತಿಗೆ ರೆಡಿಯಿರುತ್ತದೆ.

‘ಮೊದಲ ವರ್ಷ ಸುಳ್ಯ ಪಂಜದ ಶ್ರೀದೇವಿ ಎಂಜಿನಿಯರಿಂಗ್ ವರ್ಕ್ಸ್‌ ಅವರ ಯಂತ್ರ, ನಂತರದ ನಾಲ್ಕು ವರ್ಷದ ಸುಳ್ಯದ ಅಪರ್ಣಾ ಸ್ಟೀಲ್ ಇಂಡಸ್ಟ್ರೀಸ್ ಅವರ ಯಂತ್ರ. ಆಮೇಲಿನ ವರ್ಷಗಳಲ್ಲಿ ಉಡುಪಿಯ ‘ಯೋಜನ್ ಎಂಜಿನಿಯರಿಂಗ್ ಕೇರ್’ನ ಯಂತ್ರಗಳನ್ನು ಬಳಸಿದ್ದೇನೆ ಈ ಯಂತ್ರಗಳಿಗೆ ದಿವಸಕ್ಕೆ ಹತ್ತು ಕ್ವಿಂಟಾಲ್ ಅಡಿಕೆ ಸುಲಿಯುವ ಸಾಮರ್ಥ್ಯವಿದೆ’ ಎನ್ನುತ್ತಾರೆ ಭಟ್ಟರು.

ಒಂದು ಕೆ.ಜಿ ಚಾಲಿ ಅಡಿಕೆ ಸುಲಿಯುವುದಕ್ಕೆ ಏಳರಿಂದ ಏಳೂವರೆ ರೂಪಾಯಿ ದರ. ಇದರಲ್ಲಿ ಲೇಬರ್, ಸಾರಿಗೆ, ಜನರೇಟರ್ ವೆಚ್ಚಗಳು ಸೇರುತ್ತದೆ. ಜನರೇಟರ್ ಅವಶ್ಯವಿದ್ದಲ್ಲಿ ಗಂಟೆಗೆ ಡೀಸೆಲ್ ಸೇರಿ ₹200 ಹೆಚ್ಚುವರಿ ದರ. ವಿದ್ಯುತ್ ಲಭ್ಯವಿದ್ದರೆ ಅಥವಾ ಜನರೇಟರ್ ಇದ್ದರೆ ದರದಲ್ಲಿ ಸ್ವಲ್ಪ ಕಡಿತ. ಅಡಿಕೆ ಸುಲಿದು ಯಂತ್ರಗಳ ಪ್ಯಾಕಪ್ ಆಗುವಾಗ ಲೆಕ್ಕಾ ಚುಕ್ತಾ– ಭಟ್ಟರು ಲೆಕ್ಕಾಚಾರ ತೆರೆದಿಡುತ್ತಾರೆ.

‘ಜಾಬ್‍ವರ್ಕ್‌ನಲ್ಲಿ ಎದುರಾಗುವ ಸಮಸ್ಯೆಗಳೇನು’ ಎಂದು ಪ್ರಶ್ನಿಸಿದರೆ ‘ನಾವು ಅಡಿಕೆ ತೋಟವನ್ನು ಮಗುವಿನಂತೆ ಸಾಕುತ್ತೇವೆ. ಆದರೆ ಕೊಯ್ದ ಅಡಿಕೆಯನ್ನು ಸಾಕುವುದಿಲ್ಲ. ಸರಿಯಾದ ಬಿಸಿಲಿನಲ್ಲಿ ಒಣಗಿಸಿ, ವಾರಕ್ಕೊಮ್ಮೆ ಮಗುಚುತ್ತಾ ಇರಬೇಕು. ಅಡಿಕೆಯು ಸರಿಯಾದ ಬಿಸಿಲಿನಲ್ಲಿ ಒಣಗಿದರೆ ಪಟೋರ, ಉಳ್ಳಿಗಡ್ಡೆ ಪ್ರಮಾಣ ಕಡಿಮೆಯಿರುತ್ತದೆ. ಮುಖ್ಯ ಸಮಸ್ಯೆ ಎಂದರೆ ಸುಲಿಯುವ ದರದಲ್ಲಿರುವ ಪೈಪೋಟಿ’.

ವರ್ಷದಿಂದ ವರ್ಷಕ್ಕೆ ಅಡಿಕೆ ತೋಟ ವಿಸ್ತರಣೆಯಾಗುತ್ತಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಕೃಷಿ ಕೆಲಸಗಾರರ ಸಂಖ್ಯೆ ಏರುವುದಿಲ್ಲ. ಹಾಗಾಗಿ ಯಂತ್ರದ ಮೂಲಕ ಅಡಿಕೆ ಸುಲಿಯಲು ಬೇಡಿಕೆ ಖಚಿತ. ಮುಂದೆಯೂ ‘ವರ್ಷಪೂರ್ತಿ ದುಡಿಯಬೇಕಾಗಬಹುದು’ ಎನ್ನುವ ದೂರದೃಷ್ಟಿಯಲ್ಲಿ ಅವರಿಗೆ ಖುಷಿ ಇದೆ.

‘ಸರ್ಕಾರವು ಕೃಷಿಕರ ಪಂಪ್‍ಸೆಟ್ಟಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಜನರೇಟರ್ ಹೊಂದಿದರೆ ದುಬಾರಿ ದರ. ಹಾಗಾಗಿ ಸರ್ಕಾರ, ಅಡಿಕೆ ಸುಲಿವ ಯಂತ್ರವನ್ನು ಚಾಲೂ ಮಾಡಲು ಪಂಪ್‍ಸೆಟ್ಟಿನಿಂದಲೇ ಸಂಪರ್ಕ ಪಡೆದುಕೊಳ್ಳಲು ಅನುಮತಿ ನೀಡಬೇಕು’ ಎಂಬುದು ಭಟ್ಟರ ಆಗ್ರಹ.

ಸುಬ್ರಾಯ ಭಟ್ಟರು ಹಿಂದೆ ಪವರ್ ಟಿಲ್ಲರಿಗೆ ಹಲ್ಲರ್ ಜೋಡಿಸಿ ಭತ್ತವನ್ನು ಮಿಲ್ ಮಾಡುವ ಜಾಬ್‍ವರ್ಕ್ ಮಾಡಿದ್ದರು. ಈ ಅನುಭವ ಮುಂದೆ ಅಡಿಕೆ ಸುಲಿ ಯಂತ್ರದ ಜಾಬ್‍ವರ್ಕ್‌ಗೂ ಅನುಕೂಲವಾಯಿತು. ಭಟ್ಟರ ಜಾಬ್‌ವರ್ಕ್‌ ಕುರಿತ ಮಾಹಿತಿಗಾಗಿ 94801 01246, 9008696339 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.