ADVERTISEMENT

ಗ್ರೋಬ್ಯಾಗ್‌ನಲ್ಲಿ 200 ದೇಸಿ ಭತ್ತದ ತಳಿ!

ಕಾಸರಗೋಡು ಕೃಷಿಕರ ತಳಿ ಸಂರಕ್ಷಣೆ; ಬೆಳೇರಿ ಸತ್ಯನಾರಾಯಣ ಅವರ ಹೊಸ ಮಾದರಿ

ಡಾ.ಉಲ್ಲಾಸ ಎಂ.ವೈ.
Published 2 ನವೆಂಬರ್ 2020, 19:31 IST
Last Updated 2 ನವೆಂಬರ್ 2020, 19:31 IST
ದೇಸಿ ಭತ್ತದ ತಳಿಯ ಸಸಿಗಳೊಂದಿಗೆ ಬೆಳೇರಿ ಸತ್ಯನಾರಾಯಣ
ದೇಸಿ ಭತ್ತದ ತಳಿಯ ಸಸಿಗಳೊಂದಿಗೆ ಬೆಳೇರಿ ಸತ್ಯನಾರಾಯಣ   

ಕಾಸರಗೋಡಿನ ಕೃಷಿಕ ಬೆಳೇರಿ ಸತ್ಯನಾರಾಯಣ ಅವರಿಗೆ ಐದು ಎಕರೆ ಜಮೀನಿದೆ. ನಾಲ್ಕು ಎಕರೆಯಲ್ಲಿ ರಬ್ಬರ್‌ ಮರಗಳನ್ನು ಬೆಳೆಸಿದ್ದಾರೆ. ಉಳಿದ ಜಾಗದಲ್ಲಿ ಮನೆ, ಕೈತೋಟದ ಅಂಗಳವಿದೆ. ಎತ್ತರದ ಪ್ರದೇಶದಲ್ಲಿ ಜಮೀನು ಇರುವುದರಿಂದ ನೀರಿನ ಸೌಲಭ್ಯ ತುಸು ಕಡಿಮೆ. ಹೀಗಾಗಿ ಭತ್ತ ಬೆಳೆಯುವುದು ಕಷ್ಟ.

ಆದರೂ, ಮನದ ಮೂಲೆಯಲ್ಲಿ ದೇಸಿ ಭತ್ತದ ತಳಿಗಳನ್ನು ಸಂಗ್ರಹಿಸಬೇಕೆಂಬ ಹಂಬಲ. ಹೀಗಾಗಿ ಇರುವ ಅಲ್ಪ ಜಾಗದಲ್ಲೇ ಒಂದಲ್ಲ, ಎರಡಲ್ಲ ಸುಮಾರು ಇನ್ನೂರು ದೇಸಿ ಭತ್ತದ ತಳಿಗಳನ್ನು ಬೆಳೆಸಿ, ಅವುಗಳ ಬೀಜವನ್ನು ಸಂಗ್ರಹಿಸಿಟ್ಟಿದ್ದಾರೆ. ಇವರ ಸಂಗ್ರಹದಲ್ಲಿ ಉಪ್ಪುನೀರಿನಲ್ಲಿ ಬೆಳೆಯುವ ‘ಕರಿಕಗ್ಗ’, ಬರನಿರೋಧಕ ತಳಿ ‘ಪುಟ್ಟ ಭತ್ತ’, ಅವಲಕ್ಕಿಗೆ ಬೇಕಾದ ‘ಸ್ವರಟಾ’, ನೇರಳೆ ಬಣ್ಣದ ತಳಿಗಳಾದ ‘ಡಾಂಬಾರ್ ಕಾಳಿ’, ‘ಕಾರ್‌ರೆಡ್‌ರೈಸ್’, ‘ಕಲಾಬತಿ’, ‘ನಜರ್ ಬಾತ್’ ನಂತಹ ವೈವಿಧ್ಯಮಯ ದೇಸಿ ತಳಿಗಳಿವೆ.

ದಶಕಗಳ ಹಿಂದೆ ಕೃಷಿ ತಪಸ್ವಿ ಚೇಕಾಡಿ ರಾಮಚಂದ್ರರಾಯರಿಂದ ಒಂದು ಮುಷ್ಟಿಯಷ್ಟು ’ರಾಜಕಯಮೆ’ ಎಂಬ ದೇಸಿ ಭತ್ತದ ತಳಿಯೊಂದಿಗೆ ತಳಿ ಸಂಗ್ರಹಣೆ ಆರಂಭಿಸಿದರು. ಅವರ ಈ ಅಭಿಯಾನ ಇನ್ನೂರಕ್ಕೂ ಹೆಚ್ಚು ತಳಿಗಳನ್ನು ಸಂರಕ್ಷಿಸುವವರೆಗೆ ಬಂದು ನಿಂತಿದೆ. ಸತ್ಯನಾರಾಯಣ ಅವರ ತಳಿ ಸಂಗ್ರಹದ ಹವ್ಯಾಸ ಕೇಳಿದಾಗ, ‘ಇಷ್ಟು ಜಾಗದಲ್ಲಿ ಅಷ್ಟೆಲ್ಲ ತಳಿಗಳನ್ನು ಹೇಗೆ ಬೆಳೆಸಿದ್ದಾರೆ‘ ಎಂಬ ಕುತೂಹಲದ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಸತ್ಯನಾರಾಯಣ ಅವರು ತಳಿ ಸಂರಕ್ಷಣೆಗೆ ಅನುಸರಿಸಿರುವ ಮಾದರಿಯೇ ಉತ್ತರ ನೀಡುತ್ತದೆ.

ADVERTISEMENT

ಹೀಗಿದೆ ಆ ಹೊಸ ಮಾದರಿ..

ಸತ್ಯನಾರಾಯಣ ಅವರಿಗೆ ಜಾಗದ ಕೊರತೆಯ ಕಾರಣ, ಭತ್ತದ ತಳಿಗಳನ್ನು ಆರಂಭದಲ್ಲಿ ಸಣ್ಣ ಸಣ್ಣ ಪೇಪರ್‌ ಲೋಟದಲ್ಲಿ ಬೆಳೆಸಿ, ನಂತರ ಅವುಗಳನ್ನು ಗ್ರೋಬ್ಯಾಗ್‌ಗಳಲ್ಲಿ ಅಭಿವೃದ್ಧಿಪಡಿಸುತ್ತಾರೆ.

ಕಾಗದದ ಲೋಟಕ್ಕೆ ಮಣ್ಣು ಗೊಬ್ಬರದ ಮಿಶ್ರಣ ತುಂಬಿ, ಅದರಲ್ಲಿ 10 ರಿಂದ 20 ಭತ್ತದ ಬೀಜಗಳನ್ನು ಊರುತ್ತಾರೆ. ಅವು 3-4 ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಈ ಅವಧಿಯಲ್ಲಿ ಸಸಿಗಳಿಗೆ ನೀರು ಪೂರೈಸುತ್ತಾರೆ. ಹತ್ತು ದಿನಗಳ ನಂತರ ಈ ಸಸಿಗಳನ್ನು ಗೊಬ್ಬರ, ಮಣ್ಣು ತುಂಬಿ ಸಿದ್ಧಪಡಿಸಿಕೊಂಡಿರುವ 12 ಇಂಚು ಎತ್ತರ 8 ಇಂಚು ಅಗಲದ ಅಳತೆಯ ಗ್ರೋ ಬ್ಯಾಗ್‌ (ಸಸಿ ಬೆಳೆಸುವ ಚೀಲಗಳು) ಗಳಿಗೆ ವರ್ಗಾಯಿಸುತ್ತಾರೆ. ಇವುಗಳನ್ನು ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಒತ್ತೊತ್ತಾಗಿ ಜೋಡಿಸುತ್ತಾರೆ. ಸಸಿ ನಾಟಿಯ ವೇಳೆ ಹೆಚ್ಚು ಸಾವಯವ ಗೊಬ್ಬರ ಪೂರೈಸುವುದರಿಂದ, ಮತ್ತೆ ಮೇಲುಗೊಬ್ಬರ ಕೊಡುವುದಿಲ್ಲ. ಬದಲಿಗೆ ಒಂದೆರಡು ಸಲ ಜೀವಾಮೃತವನ್ನು ಪೂರೈಸುತ್ತಾರೆ. ಸಸಿ ಬೆಳೆಸುವ ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಈ ಪೈರುಗಳಿಗೆ ನೀರನ್ನೂ ಕೊಡುವುದಿಲ್ಲ.

ನೀರಿನಲ್ಲಿ ಗ್ರೋಬ್ಯಾಗ್‌..

ಭತ್ತದ ಪೈರುಗಳು ಸಸಿಯಾಗಿ ಹೂವಾಡುವಾಗ, ಜಮೀ ನಿನ ಸಮತಟ್ಟಾದ ಭಾಗದಲ್ಲಿ 3 ಮೀಟರ್ ಅಗಲ, 10 ಮೀಟರ್ ಉದ್ದದಷ್ಟು ಜಾಗದಲ್ಲಿ ತಾಡಪಾಲು ಹಾಸಿ, ಅದರ ಸುತ್ತ 1 ಮೀಟರ್ ಎತ್ತರದ ಬದು ಕಟ್ಟಿ, ತೊಟ್ಟಿ ಯಾಕಾರದ ರಚನೆ ಮಾಡುತ್ತಾರೆ. ಅದರಲ್ಲಿ ‌ಗ್ರೋಬ್ಯಾಗ್‌ ಅರ್ಧ ಭಾಗ ಮುಳುಗುವಷ್ಟು ನೀರು ತುಂಬಿಸುತ್ತಾರೆ. ತಳಿ ಶುದ್ಧತೆ ಕಾಯ್ದು
ಕೊಳ್ಳುವ ದೃಷ್ಟಿಯಿಂದ ತೆನೆಗಳು ಹೂವಾಡುವ ಹಂತದಲ್ಲಿ, ಭತ್ತದ ಸಸಿಗಳ ನಡುವೆ ಅಂತರ ಕಾಯ್ದುಕೊಳ್ಳುತ್ತಾರೆ.

ಸಸಿಗಳಲ್ಲಿ ತೆನೆ ಕಾಣಿಸಿಕೊಳ್ಳುತ್ತಿದ್ದಂತೆ ಗ್ರೋಬ್ಯಾಗ್‌ಗಳನ್ನು ನೀರು ತುಂಬಿಸಿದ ತೊಟ್ಟಿಯಲ್ಲಿ ಇಡುತ್ತಾರೆ. ಈ ತೊಟ್ಟಿಯ ಸುತ್ತ ಬಲೆಗಳಿಂದ (ಸೊಳ್ಳೆಪರದೆ) ಮುಚ್ಚುತ್ತಾರೆ. ‘ಈ ವಿಧಾನದಿಂದ ತೆನೆಗಳನ್ನು ಇಲಿ, ಹಕ್ಕಿಗಳ ಕಾಟದಿಂದ ರಕ್ಷಿಸಬಹುದು. ಗ್ರೋಬ್ಯಾಗ್‌ಗಳನ್ನು ನೀರಿನಲ್ಲಿಡುವುದೂ ಇದೇ ಕಾರಣಕ್ಕಾಗಿ’ ಎನ್ನುತ್ತಾರೆ ಸತ್ಯನಾರಾಯಣ.

ತೆನೆ ಕೊಯ್ಲು, ಬೀಜಗಳ ಸಂಗ್ರಹ: ಪೈರುಗಳಲ್ಲಿ ಕಾಳು ಕಟ್ಟಲು ಆರಂಭವಾದ ನಂತರ, ಬಲಿತಿರುವ ತೆನೆಗಳನ್ನು ಎಚ್ಚರಿಕೆಯಿಂದ ಕಟಾವು ಮಾಡುತ್ತಾರೆ. ಆ ತೆನೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಕಾಳು ಬಿಡಿಸಿ ಪೇಪರ್‌ ಕವರ್‌ನಲ್ಲಿ ಸಂರಕ್ಷಿಸಿಡುತ್ತಾರೆ. ಇದೇ ಕಾಳುಗಳನ್ನೇ ಮುಂದಿನ ಬಿತ್ತನೆಗೆ ಉಪಯೋಗಿಸುತ್ತಾರೆ. ಪ್ರತಿ ಚೀಲದಿಂದ 100 ರಿಂದ 150 ಗ್ರಾಂ ಶುದ್ಧ ಭತ್ತದ ಬೀಜಗಳು ದೊರೆಯುತ್ತವೆ. ‘ಈ ವಿಧಾನ ಅನುಸರಿಸುವುದ ರಿಂದ ಕಡಿಮೆ ಜಾಗದಲ್ಲಿ ಹೆಚ್ಚು ತಳಿಗಳನ್ನು ಬೆಳೆಸಬಹುದು‘ ಎನ್ನುತ್ತಾರೆ ಸತ್ಯನಾರಾಯಣ.

ಸತ್ಯನಾರಾಯಣ ಅವರು ಬೆಳ್ತಂಗಡಿ ಸಮೀಪದ ಮಿತ್ತಬಾಗಿಲಿನ ಬೀಜ ಸಂರಕ್ಷಕ ಬಿ.ಕೆ.ದೇವರಾಯ ಅವರಿಂದ ದೇಸಿ ತಳಿಗಳನ್ನು ಸಂಗ್ರಹಿಸಿ ತಂದು ಬೆಳೆಸಿದ್ದಾರೆ. ಕೇರಳ, ಕರ್ನಾಟಕದ ಗಡಿ ಭಾಗದಲ್ಲಿ ಓಡಾಡುತ್ತಾ, ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೆಲವು ಬೀಜ ಮೇಳಗಳಿಗೆ ಭೇಟಿ ನೀಡುತ್ತಾ ಭತ್ತದ ಬೀಜಗಳನ್ನು ಸಂಗ್ರಹಿಸಿದ್ದಾರೆ. ಇವರ ಬಳಿ ಹಂಚುವಷ್ಟು ಬೀಜಗಳ ದಾಸ್ತಾನಿಲ್ಲದಿದ್ದರೂ, ತಳಿ ಅಭಿವೃದ್ಧಿ ಮಾಡಲು ಬೇಕಾದ ಮುಷ್ಟಿಯಷ್ಟು ಬೀಜಗಳು ಲಭ್ಯ ಇವೆ.

ಬೆಳೇರಿಯವರಲ್ಲಿರುವ ಪ್ರಮುಖ ತಳಿಗಳು

ಚಿಟ್ಟೇನಿ, ಅತಿಕಾಯ, ನಾರಿಕೇಳ, ಜುಗಲ್, ಜಿಡ್ಡುಹಳ್ಳಿಗ, ಮಸ್ಕತಿ, ಸುಗ್ಗಿ ಕಯಮೆ, ವೆಳ್ಳತ್ತೆವುನ್‌, ಗಂಧಸಾಲೆ, ಜೀರಿಗೆ, ಘಂಗಡಲೆ, ಕುಂಕಮಶಾಲಿಯಂತಹ ಪರಿಮಳ ತಳಿಗಳು, ಕಳಮೆ, ಕೊತ್ತಮಕಾಳಿ, ಅತಿಕಾರ, ಕರಿಗಜಿವಿಲಿ ದಂತಹ ಔಷಧಯುಕ್ತ ತಳಿಗಳು, ರಾಜಮುಡಿ, ರಾಜಭೋಗ, ಕರಿಜೆಡ್ಡು, ಪರಬು ಉಚ್ಚಾನ್, ಜಾಸ್ಮಿನ್‌, ಮೈಸೂರು ಮಲ್ಲಿಗೆಯಂತಹ ತಳಿಗಳು, ಪ್ರವಾಹ ಎದುರಿಸಿ ಬೆಳೆಯುವ ನೆರಗೂಳಿ ಇತ್ಯಾದಿ.

ಮಾಹಿತಿಗಾಗಿ: 9400650000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.