ADVERTISEMENT

ನಂಬಿದ ಕೃಷಿ ಕೈಬಿಡಲಿಲ್ಲ..

ಕೃಷಿ, ಸ್ವಾವಲಂಬಿ ಜೀವನದ ಅನುಭವ ಹಂಚಿಕೆ

ಎಂ.ಮಹೇಶ
Published 18 ಮೇ 2020, 19:45 IST
Last Updated 18 ಮೇ 2020, 19:45 IST
ಸಿರಿಧಾನ್ಯದೊಂದಿಗೆ ವೆಂಕಟೇಶ ಮೂಲಿಮನಿ
ಸಿರಿಧಾನ್ಯದೊಂದಿಗೆ ವೆಂಕಟೇಶ ಮೂಲಿಮನಿ   

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಹೊಸಯರಗುದ್ರಿಯ 31ರ ಹರೆಯದ ಕೃಷಿಕ ವೆಂಕಟೇಶ ಮೂಲಿಮನಿ ಎಂಬಿಎ ಪದವೀಧರ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೀನಿಯರ್‌ ಟ್ಯಾಕ್ಸ್‌ ಅಸೋಸಿಯೇಟ್ ಆಗಿದ್ದರು. ಮೂರು ವರ್ಷ ಆ ಕೆಲಸ ಮಾಡಿದ್ದರು. ಹಲವು ಕಾರಣಗಳಿಂದಾಗಿ ನಾಲ್ಕೈದು ವರ್ಷಗಳ ಹಿಂದೆ ಊರಿಗೆ ಬಂದು ಕೃಷಿ ಮಾಡಲು ಶುರು ಮಾಡಿದರು.

ಆರಂಭದಲ್ಲಿ ಅದೇ ಜಮೀನಿನಲ್ಲಿ ಇವರ ತಂದೆ ರಾಸಾಯನಿಕ ಕೃಷಿಯಲ್ಲಿ ಕಬ್ಬು ಸೇರಿದಂತೆ ಬೇರೆ ಬೇರೆ ಬೆಳೆ ಬೆಳೆಯುತ್ತಿದ್ದರು. ನಂತರ ವೆಂಕಟೇಶ ಅವರು ಊರಿಗೆ ಬಂದ ಮೇಲೆ ನೈಸರ್ಗಿಕ ಕೃಷಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ, ಅದೇ ಪದ್ಧತಿಯನ್ನೂ ಹತ್ತೂ ಎಕರೆಗೆ ಅಳವಡಿಸಲು ಶುರು ಮಾಡಿದರು.

ಕೆಲಸ ಬಿಟ್ಟು ಕೃಷಿ ಮಾಡಲು ಊರಿಗೆ ಬಂದ ವೆಂಕಟೇಶ ಅವರನ್ನು ಮೂದಲಿಸಿದವರೇ ಹೆಚ್ಚು. ಜನರಷ್ಟೇ ಅಲ್ಲ ತಂದೆ–ತಾಯಿಗೂ ವಿಶ್ವಾಸ ಇರಲಿಲ್ಲ. ‘ನಾನು ಬ್ಯಾಂಕ್‌ನಿಂದ ಸಾಲ ಪಡೆದು, ದೊಡ್ಡ ಮಟ್ಟದಲ್ಲಿ ಕೃಷಿಗೆ ಮುಂದಾದೆ. ಒಂದೇ ಬಾರಿಗೆ ಬೆಳೆ ಬದಲಾವಣೆ ಆದ ಪರಿಣಾಮ ನಷ್ಟ ಅನುಭವಿಸಿದೆ. ಆಮೇಲೆ, ಎಲ್ಲಿ ತಪ್ಪಿದೆ ಎಂದು ಅರಿವಾಯಿತು. ಆರಂಭದಲ್ಲಿ ತೊಂದರೆಯಾದರೂ, ಆನಂತರ ಹಂತ ಹಂತವಾಗಿ ಕೃಷಿ ಸುಧಾರಿಸಿತು. ನಂಬಿದ ಭೂಮಿ ತಾಯಿ ಕೈ ಬಿಡಲಿಲ್ಲ’ ಎಂದು ಆರಂಭದ ದಿನಗಳ ಬಗ್ಗೆ ಹೇಳಿದರು ವೆಂಕಟೇಶ.

ADVERTISEMENT

ಹತ್ತು ಎಕರೆಯಲ್ಲಿ ಕೃಷಿ

ಮೂಲಿಮನಿಯವರದ್ದು ಒಟ್ಟು 10 ಎಕರೆ ಜಮೀನಿದೆ. ಆರು ಎಕರೆಯಲ್ಲಿ ಕಬ್ಬು ಹಾಕಿದ್ದಾರೆ. ಒಂದು ಎಕರೆಯಲ್ಲಿ ನುಗ್ಗೆಕಾಯಿ, ಉಳಿದ ಜಾಗದಲ್ಲಿ ಮೇವಿನ ಬೆಳೆ ಜತೆಗೆ ಈರುಳ್ಳಿ ಬೆಳೆಯುತ್ತಾರೆ. ಕಬ್ಬಿನ ಸಾಲುಗಳ ನಡುವೆ ಅಂತರ ಬೆಳೆಯಾಗಿ ಅಲಸಂದೆ ಬೆಳೆಯುತ್ತಾರೆ. ‘ಇದರಿಂದ ಕಬ್ಬು ಬೆಳೆಗೆ ಸಾರಜನಕ ಲಭ್ಯವಾಗುತ್ತದೆ’ ಎನ್ನುತ್ತಾರೆ ವೆಂಕಟೇಶ. ಈ ವರ್ಷ ಮುಂಗಾರಿಗೆ ಮೂರು ಎಕರೆಯಲ್ಲಿ ಹೆಸರು ಮತ್ತು ಈರುಳ್ಳಿ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಹತ್ತು ಎಕರೆಯಲ್ಲೂ ನೈಸರ್ಗಿ ಕೃಷಿ ಪದ್ಧತಿಯಲ್ಲೇ ಬೆಳೆ ಬೆಳೆಯುತ್ತಿದ್ದೇನೆ. ಇದಕ್ಕಾಗಿಯೇ ಜಾನುವಾರು ಸಾಕಿದ್ದೇನೆ. ಅಕ್ಕಪಕ್ಕದ ರೈತರಿಂದ ದೇಶಿ ಹಸುಗಳ ಗಂಜಲವನ್ನು ಸಂಗ್ರಹಿಸುತ್ತೇನೆ’ ಎನ್ನುತ್ತಾರೆ ವೆಂಕಟೇಶ. ಇವರ ಬಳಿ ಒಂದು ಗೀರ್‌, ಒಂದು ಕಿಲಾರಿ ಆಕಳುಗಳು ಮತ್ತು ಒಂದು ಹೋರಿ ಇದೆ. ಈ ರಾಸುಗಳಿಗಾಗಿ ಜಮೀನಿನ ಒಂದು ಭಾಗದಲ್ಲಿ ಮೇವಿನ ಬೆಳೆ ಬೆಳೆಸುತ್ತಿದ್ದಾರೆ.

ನೀರಿನ ವ್ಯವಸ್ಥೆ ಉತ್ತಮವಾಗಿದೆ. ಜಮೀನಿನ ಸಮೀಪ ಒಂದು ಕೆರೆ ಇದೆ. ಮಳೆಯಾದಾಗ ಈ ಕೆರೆ ತುಂಬಿರುತ್ತದೆ. ಇದರ ಜತೆಗೆ ಘಟಪ್ರಭಾ ನದಿಯ ಬಲದಂಡೆ ಕಾಲುವೆ ನೀರಿನ ಸೌಲಭ್ಯವೂ ಇದೆ. ಇದರೊಂದಿಗೆ ಒಂದು ಕೊಳವೆಬಾವಿ ಕೂಡ ಇದೆ. ಇಷ್ಟೆಲ್ಲ ಸೌಕರ್ಯವಿದ್ದರೂ, ನೀರನ್ನು ಮಿತವಾಗಿ ಬಳಸುತ್ತಾರೆ. ಸ್ವಾಭಾವಿಕವಾಗಿ ಮಣ್ಣಿನಲ್ಲಿ ತೇವಾಂಶ ರಕ್ಷಣೆಯಾಗುವಂತಹ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಬೆಲ್ಲಕ್ಕೆ ಬೇಡಿಕೆ

ತಾವು ಬೆಳೆಯುವ ಕಬ್ಬನ್ನು ಕಾರ್ಖಾನೆಗೆ ಮಾರುವುದಿಲ್ಲ. ಬದಲಿಗೆ ಜಮಖಂಡಿ ಸಮೀಪದ ಅಲಗೂರು ಗಾಣದಲ್ಲಿ ಬೆಲ್ಲ ಮಾಡಿಸುತ್ತಾರೆ. ಇವರು ಮಾಡಿಸುವ ಅಚ್ಚು ಮತ್ತು ಪುಡಿ ಬೆಲ್ಲಕ್ಕೆ ಉತ್ತಮ ಬೇಡಿಕೆ ಇದೆ. ಕಳೆದ ವರ್ಷ ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದು 6 ಟನ್‌ ಬೆಲ್ಲ ಮಾಡಿದ್ದರು. ಈ ಬಾರಿ 4 ಎಕರೆ ಕಬ್ಬಿನಲ್ಲಿ 10 ಟನ್‌ ಬೆಲ್ಲ ಮಾಡಿದ್ದಾರೆ. ಕೆ.ಜಿ.ಗೆ ₹ 65 ಹಾಗೂ ಬೆಲ್ಲದ ಪೌಡರ್ ಕೆ.ಜಿ.ಗೆ ₹ 85ರಂತೆ ಮಾರಾಟವಾಗುತ್ತಿದೆ. ಆನ್‌ಲೈನ್‌ನಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದಾರೆ. ‘ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ನನ್ನದೇ ಗ್ರಾಹಕರಿದ್ದಾರೆ. ಅವರಿಗೆ ನಮ್ಮ ಬೆಲ್ಲದ ಬಗ್ಗೆ ವಿಶ್ವಾಸ ಬಂದಿದೆ’ ಎನ್ನುತ್ತಾರೆ ವೆಂಕಟೇಶ್.

ಜಮೀನಿನಲ್ಲಿ ಹೆಚ್ಚು ಕೆಲಸವಿದ್ದಾಗಲಷ್ಟೇ ಕಾರ್ಮಿಕರನ್ನು ಬಳಸುತ್ತಾರೆ. ಉಳಿದಂತೆ, ಮನೆ ಮಂದಿಯ ಸಹಕಾರದೊಂದಿಗೆ ಕೃಷಿ ಚಟುವಟಿಕೆ ನಡೆಯುತ್ತವೆ.

ನಗರದಿಂದ ಬಂದಾಗಿನಿಂದಲೂ ಜಮೀನಿನಲ್ಲಿರುವ ಶೆಡ್‌ನಲ್ಲೇ ವಾಸ. ಈಗ ಅಲ್ಲೇ ಮನೆ ಕಟ್ಟುತ್ತಿದ್ದಾರೆ ಕೂಡ. ಇವರ ಕೃಷಿ ಚಟುವಟಿಕೆ ಬಗ್ಗೆ ತಂದೆ–ತಾಯಿ ಹಾಗೂ ಊರಿನವರಿಗೆ ವಿಶ್ವಾಸ ಬಂದಿದೆ. ಎಲ್ಲರೂ ಇವರನ್ನು ಗೌರವಿಸುತ್ತಿದ್ದಾರೆ.

‘ನನಗೆ ಮೊದಲಿನಿಂದಲೂ ಹಳ್ಳಿಯಲ್ಲಿದ್ದುಕೊಂಡೇ ಏನಾದರೂ ಮಾಡಬೇಕೆಂಬ ಕನಸು ಇತ್ತು. ಇದಕ್ಕೆ ರಾಜೀವ್ ದೀಕ್ಷಿತ್‌ ಅವರ ಸ್ವದೇಶಿ ಚಿಂತನೆ ಮತ್ತು ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿ ಮಠದ ಶ್ರೀಗಳ ಪ್ರೇರಣೆ ಕಾರಣ’ ಎನ್ನುತ್ತಾ ಹಳ್ಳಿಗೆ ಹಿಂದಿರುಗಿದ ಹಿನ್ನೆಲೆಯನ್ನು ವೆಂಕಟೇಶ ಹಂಚಿಕೊಂಡರು.

ಯುವಕರಿಗೆ ಸಲಹೆ

ಈಗ ಸಿಟಿಯಲ್ಲಿ ಉದ್ಯೋಗಬಿಟ್ಟ ವಾಪಸ್ ಆಗುತ್ತಿರುವ ಅನೇಕರು ಇವರನ್ನು ‘ಕೃಷಿ ಮಾಡಲು ಮಾರ್ಗದರ್ಶನ ನೀಡಿ’ ಕೇಳುತ್ತಿದ್ದಾರೆ. ಅಂಥವರಿಗೆ, ನಗರದಿಂದ ಹಳ್ಳಿಗೆ ವಾಪಸಾದ ತಮ್ಮ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಯೋಜನಾ ಬದ್ಧ ಕೃಷಿ ಮಾಡುತ್ತಾ, ಸರಳ ಜೀವನ ನಡೆಸುವವರಿಗೆ ಕೃಷಿ ಎಂದೂ ಕಷ್ಟವಾಗುವುದಿಲ್ಲ ಎಂಬ ವಿಶ್ವಾಸ ತುಂಬುತ್ತಿದ್ದಾರೆ. ರೈತರಿಗೆ ಸಲಹೆ ನೀಡುವ ಜತೆಗೆ, ಕೌಜಲಗಿ ಹೋಬಳಿಯಲ್ಲಿ 20 ರೈತರ ಗುಂಪುಗಳನ್ನು ಮಾಡಿದ್ದಾರೆ. ನೈಸರ್ಗಿಕ ಕೃಷಿಯ ಜತೆಗೆ ಆರೋಗ್ಯ ಮಹತ್ವವನ್ನೂ ತಿಳಿಸುತ್ತಿದ್ದಾರೆ.

ವೆಂಕಟೇಶ ಅವರ ಈ ಕೃಷಿ ಕೆಲಸಗಳಿಂದ ಅನೇಕರು ಉತ್ತೇಜನಗೊಂಡಿದ್ದಾರೆ. ಅವರದ್ದೇ ಊರಿನ ರೈತ ರಮೇಶ ಬಳ್ಳೂರ ರಾಸಾಯನಿಕ ಕೃಷಿ ಬಿಟ್ಟು ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ‘ಆರಂಭದಲ್ಲಿ ಸ್ವಲ್ಪ ಇಳುವರಿ ಕಡಿಮೆಯಾಯಿತು. ಕ್ರಮೇಣ ಇಳುವರಿ ಹೆಚ್ಚಿತು’ ಎಂದು ವಿವರಿಸುತ್ತಾರೆ ರಮೇಶ.

ವೆಂಕಟೇಶ ಮೂಲಿಮನಿ ಅವರ ಕೃಷಿ ಸಾಧನೆಯನ್ನು ಹಲವು ಸಂಸ್ಥೆಗಳು ಗೌರವಿಸಿವೆ. ಪ್ರಶಸ್ತಿ ಪುರಸ್ಕಾರಗಳನ್ನೂನೀಡಿವೆ.

ಟೆಲಿಫೋನ್‌ನಲ್ಲಿ‌ ಕೃಷಿ ಪಾಠ..

ಲಾಕ್‌ಡೌನ್ ಅವಧಿಯಲ್ಲಿ ವೆಂಕಟೇಶ ಮೂಲಿಮನಿಯವರಿಗೆ ‘ಕೃಷಿ ಮಾಡಲು ಮಾರ್ಗದರ್ಶನ ನೀಡಿ’ ಎಂದು ನಿತ್ಯ ಹತ್ತಾರು ಕರೆಗಳು ಬರುತ್ತಿವೆ. ಎರಡು ತಿಂಗಳಲ್ಲಿ ಸುಮಾರು ಮುನ್ನೂರು ಕರೆಗಳು ಬಂದಿರಬಹುದು. ಇವುಗಳಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡವರು, ಊರಿನಿಂದಲೇ ಕೆಲಸ ಮಾಡುತ್ತಿರುವ(ವರ್ಕ್ ಫ್ರಂ ಹೋಮ್‌)ವವರೇ ಹೆಚ್ಚು. ಅವರೆಲ್ಲರಿಗೂ ವೆಂಕಟೇಶ ಅವರು ಫೋನ್ ‌ನಲ್ಲೇ ‘ನೈಸರ್ಗಿಕ ಕೃಷಿ’ ಕುರಿತು ಮಾಹಿತಿ ನೀಡುತ್ತಿದ್ದಾರೆ. ಜೀವಾಮೃತ ತಯಾರಿಕೆ, ಬೆಳೆ ಸಂಯೋಜನೆ, ಮಿಶ್ರಬೆಳೆ ಪದ್ಧತಿಯ ಲಾಭಗಳು, ನೈಸರ್ಗಿಕ ಕೃಷಿಯಲ್ಲಿ ಆಕಳು ಪಾತ್ರ.. ಮಾರುಕಟ್ಟೆಗಾಗಿ ತಂತ್ರಜ್ಞಾನಗಳ ಬಳಕೆಯಂತಹ ಮಾಹಿತಿ ನೀಡುತ್ತಿದ್ದಾರೆ. ಕೆಲವರಿಗೆ ಜಮೀನಿಗೆ ಬರಲು ಆಹ್ವಾನಿಸಿದ್ದಾರೆ. ಹೆಚ್ಚು ಆಸಕ್ತಿ ತೋರಿದವರಿಗೆ ಮುಂದೆ ಸಾವಯವ ಕೃಷಿ ಮಿಷನ್ ಮೂಲಕ ತರಬೇತಿ ಕೊಡಿಸುವ ಯೋಚನೆ ಮಾಡಿದ್ದಾರೆ.

ವೆಂಕಟೇಶ ಮೂಲಿಮನಿ ಸಂಪರ್ಕಕ್ಕೆ ಫೋನ್: 9902670073‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.