ADVERTISEMENT

ಬರಲಿದೆ ರೈತ–ವ್ಯಾಪಾರಿ ಸೇತು ‘ಅರ್ಕಾ ವ್ಯಾಪಾರ್‌’

* ರೈತರ ‘ಆತ್ಮ ನಿರ್ಭರ್‌’ಗೆ ಐಐಎಚ್ಆರ್‌ ಹೆಜ್ಜೆ * ಉತ್ಪನ್ನಗಳಿಗೆ ದೇಶವ್ಯಾಪಿ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 18:10 IST
Last Updated 11 ಫೆಬ್ರುವರಿ 2021, 18:10 IST
   

ಬೆಂಗಳೂರು: ದೆಹಲಿ, ಮುಂಬೈ, ಕೊಲ್ಕತ್ತಾ ಸೇರಿದಂತೆ ಹೆಚ್ಚು ಬೆಲೆ ಸಿಗುವ ವಿವಿಧೆಡೆ ತೋಟಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ರೈತನನ್ನೂ ‘ಉದ್ಯಮಿ’ಯಾಗಿಸುವ ಉದ್ದೇಶದಿಂದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್‌) ರೈತ–ವ್ಯಾಪಾರಿ ಸೇತು ‘ಅರ್ಕಾ ವ್ಯಾಪಾರ್‌’ ಆ್ಯಪ್ ಅಭಿವೃದ್ಧಿಪಡಿಸಿದೆ.

‘ಪ್ರಜಾವಾಣಿ’ ಜೊತೆ ಐಐ ಎಚ್ಆರ್‌ನ ಚಟುವಟಿಕೆ ಹಂಚಿಕೊಂಡ ನಿರ್ದೇಶಕ ಎಂ.ಆರ್‌. ದಿನೇಶ್‌, ‘ಸಂಶೋಧನೆಯ ಜತೆಗೇ, ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಸಂಶೋಧಿಸಿದ ಬೀಜ, ತಳಿಗಳನ್ನು ರೈತರಿಗೆ ತಲುಪಿಸಲು ‘ಸೀಡ್‌ ಪೋರ್ಟಲ್‌’ ಆರಂಭಿಸಿದ್ದೇವೆ. ಈ ಪೋರ್ಟಲ್‌ನಲ್ಲಿ ನಾಲ್ಕು ತಿಂಗಳಲ್ಲಿ ₹ 40 ಲಕ್ಷ ಗಳಿಸಿದ್ದೇವೆ’ ಎಂದರು.

ಎಂ.ಆರ್‌. ದಿನೇಶ್

‘ಅರ್ಕಾ ವ್ಯಾಪಾರ್‌’ ಆ್ಯಪ್‌ನಲ್ಲಿ ರೈತರು ಮತ್ತು ವ್ಯಾಪಾರಿಗಳು ನೋಂದಾಯಿಸಿಕೊಳ್ಳಬಹುದು’ ಎಂದಿದ್ದಾರೆ.

ADVERTISEMENT

‘ಈ ಮಾಹಿತಿ ಜೊತೆಗೆ ದೇಶದೆಲ್ಲೆಡೆ ತೋಟಗಾರಿಕಾ ಉತ್ಪನ್ನಗಳ ದರ ವಿವರಗಳು ಸಿಗಲಿವೆ. ಐಐಎಚ್ಆರ್‌ನಲ್ಲಿ ಸಂಶೋಧಿಸಿದ ಬೀಜ, ತಳಿ, ತಂತ್ರಜ್ಞಾನದಿಂದ ಹಣ್ಣು, ತರಕಾರಿ ಬೆಳೆದ ರೈತ ತನ್ನ ಇಳುವರಿಗೆ ಈ ಮೂಲಕ ಮಾರು ಕಟ್ಟೆ ಕಲ್ಪಿಸಬಹುದು. ಹೆಚ್ಚು ದರ ಇರುವ ಮಾರುಕಟ್ಟೆಗೆ ಸಗಟು ಪೂರೈಕೆ ಯಿಂದ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶವಾಗಲಿದೆ’ ಎಂದರು.

‘ತರಕಾರಿ ಬೀಜಗಳಿಗೆ ಬೇಡಿಕೆ ಹೆಚ್ಚಿ ದಂತೆ ರೈತರ ಜೊತೆ ಒಪ್ಪಂದ ಮಾಡಿ ಕೊಂಡು ‘ಬೀಜ ಗ್ರಾಮ’ ಆರಂ ಭಿಸಿದ್ದೇವೆ. ರಾಣೆಬೆನ್ನೂರು, ಕೊಪ್ಪಳ ಮತ್ತಿತರ ಕಡೆಗಳಲ್ಲಿ ಇಂಥ ಗ್ರಾಮಗಳಿವೆ. ಮೌಲ್ಯಾ ಧಾರಿತ ಉತ್ಪನ್ನಗಳ ಸಂಸ್ಕರಣ ಘಟಕಕ್ಕೆ ಯೋಗ್ಯ ತಳಿಗಳನ್ನು ಸಂಶೋಧಿಸಿದ್ದೇವೆ.ತರಕಾರಿ, ಹೂವಿನ10 ಸಾವಿರಕ್ಕೂ ಹೆಚ್ಚು ತಳಿಗಳ ಬ್ಯಾಂಕ್‌ ನಮ್ಮಲ್ಲಿದೆ’ ಎಂದರು.

ಮಾರ್ಚ್‌ ವೇಳೆಗೆ ಬೀಜೋತ್ಪಾದನೆ 50 ಟನ್‌ಗೆ

‘ನಮ್ಮ ಬೀಜ, ತಳಿ ಮತ್ತು ತಂತ್ರಜ್ಞಾನಗಳನ್ನು ಒಪ್ಪಿಕೊಳ್ಳಲು ರೈತರು ಆರಂಭಿಸಿದ್ದಾರೆ. ಹೀಗಾಗಿ, 5 ಟನ್‌ನಷ್ಟಿದ್ದ ಬೀಜೋತ್ಪಾದನೆ 20 ಟನ್‌ಗೆ ಬಂದಿದೆ. ಮಾರ್ಚ್‌ ವೇಳೆಗೆ 50 ಟನ್‌ಗೆ ತಲುಪುವ ನಿರೀಕ್ಷೆ ಇದೆ. ಎಸ್‌ಬಿಐ ಬ್ಯಾಂಕಿನ ‘ಯೊನೊ ಕೃಷಿ’ ಆ್ಯಪ್‌ ಜತೆ ನಮ್ಮ ‘ಸೀಡ್‌ ಪೋರ್ಟಲ್‌’ ಲಿಂಕ್‌ ಮಾಡಿದ್ದರಿಂದ ಅದರ ಮೂಲಕವೂ ತಳಿ, ಬೀಜಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಎಸ್‌ಬಿಐ ಯೂಸರ್‌ನಲ್ಲಿ 2 ಕೋಟಿ ಗ್ರಾಹಕರಿದ್ದಾರೆ. ರಾಜಸ್ಥಾನ, ಬಿಹಾರ, ಉತ್ತರಪ್ರದೇಶ ಮತ್ತಿತರ ರಾಜ್ಯಗಳಿಗೆ ಈ ಪೋರ್ಟಲ್‌ ಮೂಲಕ ಈಗಾಗಲೇ ಬೀಜ ತಲುಪಿದೆ’ ಎಂದು ಎಂ.ಆರ್‌. ದಿನೇಶ್‌ ವಿವರಿಸಿದರು.


ಬೆಳೆದ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ನಮ್ಮ ಗುರಿ. ಆ ಮೂಲಕ, ರೈತರನ್ನು ಉದ್ಯಮಶೀಲರನ್ನಾಗಿಸುವುದು ಸಾಧ್ಯ
ಎಂ.ಆರ್‌. ದಿನೇಶ್‌, ನಿರ್ದೇಶಕ, ಐಐಎಚ್ಆರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.