ADVERTISEMENT

ರಾಗಿ ತೆನೆಗೆ ಕತ್ತರಿ ಪ್ರಯೋಗ

ಕಿರು ಮಾಹಿತಿ

ಮಲ್ಲಿಕಾರ್ಜುನ ಹೊಸಪಾಳ್ಯ
Published 25 ನವೆಂಬರ್ 2019, 19:30 IST
Last Updated 25 ನವೆಂಬರ್ 2019, 19:30 IST
ರಾಗಿತೆನೆ
ರಾಗಿತೆನೆ   

ರಾಜ್ಯದ ಬಹುತೇಕ ಕಡೆ ಇನ್ನೇನು ರಾಗಿ ಕಟಾವಾಗುವ ಹಂತದಲ್ಲಿದೆ. ಮುಂದಿನ ಸಲಕ್ಕೆ ಬಿತ್ತನೆ ಬೀಜ ಎತ್ತಿಟ್ಟುಕೊಳ್ಳುವುದು ಬಹುಮುಖ್ಯ. ನಮ್ಮ ರಾಜ್ಯ ಹಾಗೂ ತಮಿಳುನಾಡಿನ ಕೆಲ ಭಾಗಗಳಲ್ಲಿ ಗುಣಮಟ್ಟದ ರಾಗಿ ಆಯ್ಕೆ ಮಾಡುವ ಒಂದು ಸುಲಭ ಉಪಾಯವಿದೆ. ಅದರಲ್ಲಿಯೂ ನಾಟಿ ತಳಿ ಬಳಸುವ ರೈತರು ಈ ಕ್ರಮ ಅನುಸರಿಸಿದರೆ ಒಂದೇ ಎತ್ತರದ ಹಾಗೂ ಒಳ್ಳೆಯ ಇಳುವರಿಯ ಬೀಜ ಮಾಡಿಕೊಳ್ಳಬಹುದು.

ಚೆನ್ನಾಗಿ ಬಲಿತು ಹಣ್ಣಾಗಿರುವ ರಾಗಿ ಹೊಲದಲ್ಲಿ ತೆನೆ ಆರಿಸಬೇಕು. ತೆನೆಗಳು ಸಮಾನ ಎತ್ತರ ಹಾಗೂ ಗಾತ್ರ ಇರಬೇಕು. ಬದುಗಳ ಪಕ್ಕ, ಮರದ ನೆರಳಿನಲ್ಲಿ ಹಾಗೂ ಗೊಬ್ಬರದ ಗುಡ್ಡೆ ಹಾಕಿರುವ ಕಡೆ ತೆನೆ ಆಯ್ಕೆ ಬೇಡ. ಇಲುಕು ರೋಗ, ಕುತ್ತಿಗೆ ರೋಗ, ಬೆಂಕಿ ರೋಗ ಇತ್ಯಾದಿ ಲಕ್ಷಣಗಳಿರುವ ತೆನೆಗಳನ್ನು ಯಾವುದೇ ಕಾರಣಕ್ಕೂ ಆರಿಸಬೇಡಿ. ಹೊಲದ ಎಲ್ಲಾ ಕಡೆ Z ಮಾದರಿಯಲ್ಲಿ ಅಡ್ಡಾಡಿ ತೆನೆಗಳನ್ನು ಆಯ್ಕೆ ಮಾಡಬೇಕು.

ಒಂದು ಸಾಧಾರಣ ಗಾತ್ರದ ಬುಟ್ಟಿ ಅಥವಾ ಮಂಕರಿ ತುಂಬುವಷ್ಟು ತೆನೆ ಆರಿಸಿಕೊಂಡರೆ 2-3 ಸೇರು ರಾಗಿ ಲಭ್ಯ. ಇನ್ನೂ ಸರಳವಾಗಿ ಹೇಳಬೇಕೆಂದರೆ ಒಂದು ಸಿಮೆಂಟ್ ಚೀಲ ತೆನೆಗೆ 4-5 ಸೇರು ರಾಗಿ ದೊರೆಯುತ್ತದೆ. ನಿಮ್ಮ ಅಗತ್ಯವನ್ನಾಧರಿಸಿ ತೆನೆ ಆರಿಸಿಕೊಳ್ಳಿ.

ಆಯ್ಕೆ ಮಾಡಿದ ತೆನೆಗಳನ್ನು ಒಂದೊಂದಾಗಿ ತೆಗೆದುಕೊಂಡು ಮೇಲಿನ ಅರ್ಧ ಅಥವಾ ಮುಕ್ಕಾಲು ಭಾಗವನ್ನು ಕತ್ತರಿಸಿಕೊಳ್ಳಬೇಕು. ಅದು ಬಿತ್ತನೆ ಬೀಜಕ್ಕೆ ಒಳ್ಳೆಯದು. ತೆನೆಯ ಕೆಳಭಾಗದ ಕಾಳುಗಳು ಸರಿಯಾಗಿ ಬಲಿತಿರುವುದಿಲ್ಲ, ಬಿಸಿಲು ಸರಿಯಾಗಿ ತಾಕಿರುವುದಿಲ್ಲ, ಕೀಟ ಮತ್ತು ರೋಗಗಳಿಗೆ ತುತ್ತಾಗಿರುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕಾಗಿ ಈ ವಿಧಾನ. ಈ ರೀತಿ ಕತ್ತರಿಸಿದ ತೆನೆಗಳನ್ನು ಬಿಸಿಲಿನಲ್ಲಿ ಒಣಗಿಸಿ, ಒಕ್ಕಣೆ ಮಾಡಿ ಶೇಖರಣೆ ಮಾಡಿಕೊಳ್ಳಬೇಕು. ತುಸು ಶ್ರಮವಾದರೂ ಪ್ರತಿ ವರ್ಷ ಹೀಗೇ ಆರಿಸಿದರೆ ಒಳ್ಳೆಯದು.

ಹೀಗೆ ಮಾಡುವುದರಿಂದ ರಾಗಿಯಲ್ಲಿ ತಳಿ ಶುದ್ದತೆ ಕಾಪಾಡಿದಂತಾಗುತ್ತದೆ. ಉತ್ತಮ ಇಳುವರಿ ಪಡೆಯಬಹುದು. ಒಂದೇ ಸಲ ಕಟಾವಿಗೆ ಬರುತ್ತದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.