ADVERTISEMENT

ಕೃಷಿ ಭೀಮ ಯಂತ್ರ ಸಿದ್ಧಪಡಿಸಿದ ರೈತ: ಬಿಡುಗಡೆ ಮಾಡಲಿರುವ ಮುಖ್ಯಮಂತ್ರಿ

ಇಂದು ಬಾಳೆಹೊನ್ನೂರಿನಲ್ಲಿ ಯಂತ್ರ ಬಿಡುಗಡೆ ಮಾಡಲಿರುವ ಮುಖ್ಯಮಂತ್ರಿ

ನಾಗರಾಜ ಎಸ್‌.ಹಣಗಿ
Published 26 ಮಾರ್ಚ್ 2021, 4:59 IST
Last Updated 26 ಮಾರ್ಚ್ 2021, 4:59 IST
ಕೃಷಿ ಭೀಮ ಉಪಕರಣದೊಂದಿಗೆ ಲಕ್ಷ್ಮೇಶ್ವರದ ರೈತ ಚನ್ನಪ್ಪ ಕೋಲಕಾರ
ಕೃಷಿ ಭೀಮ ಉಪಕರಣದೊಂದಿಗೆ ಲಕ್ಷ್ಮೇಶ್ವರದ ರೈತ ಚನ್ನಪ್ಪ ಕೋಲಕಾರ   

ಲಕ್ಷ್ಮೇಶ್ವರ: ಪಟ್ಟಣದ 83 ವರ್ಷದ ರೈತ ಚನ್ನಪ್ಪ ಕೋಲಕಾರ ಅವರು ಪೆಟ್ರೋಲ್, ಡಿಸೇಲ್ ಇಲ್ಲದೆ ಕೃಷಿ ಕೆಲಸಗಳಿಗೆ ಅನುಕೂಲ ಆಗುವ ಹೊಸ ಯಂತ್ರವೊಂದನ್ನು ಸಂಶೋಧಿಸಿ ಬೆರಗು ಮೂಡಿಸಿದ್ದಾರೆ.

ರೈತರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೃಷಿ ಭೀಮ ಉಪಕರಣವನ್ನು ಸಂಶೋಧನೆ ಮಾಡಿದ್ದು ಮಾರ್ಚ್‌ 26ರಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಯಂತ್ರವನ್ನು ಬಿಡುಗಡೆ ಮಾಡಲಿದ್ದಾರೆ.

ಏನಿದು ಉಪಕರಣ

ADVERTISEMENT

ರೈತ ಚನ್ನಪ್ಪ ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕೃಷಿ ಚಟುವಟಿಕೆಗಳಿಗೆ ಏಕವ್ಯಕ್ತಿಯು ಬಳಸಬಹುದಾದ ಸಾಧನವನ್ನು ಕಂಡು ಹಿಡಿದಿದ್ದಾರೆ. ಕಬ್ಬಿಣ ಸಲಾಕೆ, ಸರಳು, ಚಕ್ರಗಳು, ಸರಪಳಿ, ಮೋಟಾರು ಚೈನ್, ಕಟ್ಟಿಗೆ ಇತ್ಯಾದಿಗಳನ್ನು ಬಳಸಿದ್ದಾರೆ. ಈ ಉಪಕರಣವನ್ನು ರೈತರು ಸರಳವಾಗಿ ಹೊಲದಲ್ಲಿ ಉಪಯೋಗಿಸಬಹುದು. ಯಂತ್ರಕ್ಕೆ ಪೆಟ್ರೋಲ್, ಡಿಸೇಲ್‌ನ ಅವಶ್ಯಕತೆ ಇಲ್ಲ. ಶಬ್ದರಹಿತ, ಹೊಗೆರಹಿತ ಉಪಕರಣ ಇದಾಗಿದೆ. ಕೇವಲ ಚೈನು ಎಳೆಯುತ್ತಾ ಚಾಲನೆ ಮಾಡಬಹುದು.

ಈ ಉಪಕರಣದ ಸಹಾಯದಿಂದ ರೈತರು ರಂಟೆ, ಕುಂಟೆ ಹೊಡೆಯುವುದು, ಬಿತ್ತನೆ ಮಾಡುವುದು, ಕೂಲಿಕಾರರಿಲ್ಲದೆ ಎಡೆ ಹೊಡೆಯುವ ಕೆಲಸವನ್ನು ಸುಲಭವಾಗಿ ಮಾಡಬಹುದು. ಸೈಕಲ್ ತುಳಿಯುವಂತೆ ಪೆಡಲ್‍ಗಳನ್ನು ತುಳಿದಾಗ ಉಪಕರಣ ಕಾರ್ಯ ನಿರ್ವಹಿಸುತ್ತದೆ.

ಮುಂದಿನ ಏಕಚಕ್ರ ಸರಳವಾಗಿ ಹೊರಳುವಂತೆ ಹ್ಯಾಂಡಲ್ ಕೂಡ ಅಳವಡಿಸಿದ್ದಾರೆ. ಅಲ್ಲದೆ ರೈತರು ಇದರಲ್ಲಿ ಅಳವಡಿಸಿದ ಕುರ್ಚಿಯಲ್ಲಿ ಕುಳಿತು ಆರಾಮವಾಗಿ ಕೆಲಸ ಮಾಡಬಹುದು. ರೈತರಿಗೆ ಆಳುಗಳು ಸಿಗದೆ ಇದ್ದಾಗ ಅವರಿಗೆ ಈ ಉಪಕರಣ ಸಹಾಯಕ್ಕೆ ಬರುತ್ತದೆ. ಕೇವಲ 7ನೇ ತರಗತಿವರೆಗೆ ಓದಿರುವ ಚನ್ನಪ್ಪ ಅವರ ಈ ಸಂಶೋಧನೆ ರೈತರಿಗೆ ಹೆಚ್ಚು ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

‘ಈಚಿನ ದಿನಗಳಲ್ಲಿ ರೈತರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂಲಿಕಾರರ ಸಮಸ್ಯೆ, ಯಂತ್ರಗಳ ದುಬಾರಿ ವೆಚ್ಚ
ಭರಿಸಲು ರೈತರಿಂದ ಸಾಧ್ಯ ಆಗುತ್ತಿಲ್ಲ. ಕಾರಣ ಅತಿ ಕಡಿಮೆ ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಬೇಕೆನ್ನುವ ಉದ್ದೇಶ ಇದೆ. ಸರ್ಕಾರ ಇದಕ್ಕೆ ಅನೂಕೂಲ ಮಾಡಿಕೊಟ್ಟರೆ ರೈತರ ಸಮಸ್ಯೆ ಅಲ್ಪಮಟ್ಟಿಗಾದರೂ ಪರಿಹಾರವಾಗುತ್ತದೆ’ ಎಂದು ಚನ್ನಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.