ADVERTISEMENT

ಹಣ್ಣು–ತರಕಾರಿ ತಾಜಾತನಕ್ಕೆ ‘ಸಂಚಾರಿ ಫ್ರಿಜ್’

ಸೌರಶಕ್ತಿ, ವಿದ್ಯುತ್‌ ಚಾಲಿತ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:38 IST
Last Updated 9 ಫೆಬ್ರುವರಿ 2021, 19:38 IST
ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ‘ಸಂಚಾರಿ ಫ್ರಿಜ್’ ವಾಹನ
ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ‘ಸಂಚಾರಿ ಫ್ರಿಜ್’ ವಾಹನ   

ಬೆಂಗಳೂರು: ಹಣ್ಣು ಮತ್ತು ತರಕಾರಿಗಳು ತೋಟದಿಂದ ಮಾರುಕಟ್ಟೆಗೆ ಬಂದು ಅಲ್ಲಿಂದ ಗ್ರಾಹಕರ ಕೈಸೇರುವಷ್ಟರಲ್ಲಿ ತಾಜಾತನ ಕಳೆದುಕೊಂಡಿರುತ್ತವೆ. ಆದರೆ,ಹಣ್ಣು–ತರಕಾರಿಗಳು ಕನಿಷ್ಠ ಎರಡು ದಿನಗಳವರೆಗೆ ತಾಜಾ ಸ್ಥಿತಿಯಲ್ಲೇ ಇರುವಂತಹ ‘ಸಂಚಾರಿ ಫ್ರಿಜ್‌ ವಾಹನ’ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಗಮನ ಸೆಳೆದಿದೆ.

ವಿದ್ಯುತ್ ಅಥವಾ ಸೌರಶಕ್ತಿ ಬಳಸಿ ಹಣ್ಣು-ತರಕಾರಿಗಳನ್ನು ತಾಜಾಸ್ಥಿತಿಯಲ್ಲೇ ಇಡುವ ತಂತ್ರಜ್ಞಾನದ ವಾಹನವನ್ನು ಐಐಎಚ್‍ಆರ್‌ನ ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ಕೃಷಿ ಎಂಜಿನಿಯರಿಂಗ್ ವಿಭಾಗ ಅಭಿವೃದ್ಧಿಪಡಿಸಿದೆ. ಎಲ್ಲ ಬಗೆಯ ಹವಾಮಾನ ಸ್ಥಿತಿಗಳಲ್ಲೂ ಒಂದೇ ರೀತಿಯ ತಾಜಾತನ ಪೂರೈಸುವುದು ವಾಹನದ ವಿಶೇಷ.

‘ಕೃಷಿ ಉತ್ಪನ್ನಗಳನ್ನು ತಾಜಾ ಸ್ಥಿತಿಯಲ್ಲಿಡಲು ವಾಹನದ ಮೇಲ್ಭಾಗದಲ್ಲಿ ಸೌರಫಲಕ ಅಳವಡಿಸಲಾಗಿದೆ. ಇದರಸಹಾಯದಿಂದ ಉಷ್ಣಾಂಶ ನಿಯಂತ್ರಿ ಸುವ ವ್ಯವಸ್ಥೆ ಮಾಡಲಾಗಿದೆ. ಹವಾಮಾನಕ್ಕೆ ತಕ್ಕಂತೆ ಉತ್ಪನ್ನಗಳಿಗೆ ಅಗತ್ಯ ವಿರುವ ತಾಜಾ ವಾತಾವರಣ ಕಲ್ಪಿಸಬಹುದು. ಹೆಚ್ಚುವರಿಯಾಗಿ ಸೌರಶಕ್ತಿ ಯನ್ನೂ ಬಳಸಿಕೊಳ್ಳಬಹುದು. ಪರ್ಯಾಯವಾಗಿ ವಿದ್ಯುತ್ ಮೂಲಕವೂ ಈ ತಂತ್ರಜ್ಞಾನ ಕಾರ್ಯನಿರ್ವಹಿಸಬಲ್ಲದು' ಎಂದು ಐಐಎಚ್‍ಆರ್ ಪ್ರಧಾನ ವಿಜ್ಞಾನಿ ಜಿ.ಸೆಂಥಿಲ್ ಕುಮಾರನ್ ಮಾಹಿತಿ ನೀಡಿದರು.

ADVERTISEMENT

‘ಸಾರ್ವಜನಿಕ ಪ್ರಕಟಣೆ ಹಾಗೂ ಉತ್ಪನ್ನಗಳ ದರ ನಿಗದಿ ಪ್ರಕಟಿಸಲು ನೆರವಾಗುವಂತೆ ವಾಹನದ ಹಿಂಭಾಗದಲ್ಲಿ ಎಲ್‍ಇಡಿ ಪರದೆ ಅಳವಡಿಸಲಾಗಿದೆ. ಇದರಲ್ಲಿ ಧ್ವನಿವರ್ಧಕ, ವಿದ್ಯುತ್‍ಚಾಲಿತ ತೂಕದ ಯಂತ್ರ, ಡಿಜಿಟಲ್ ಬಿಲ್ಲಿಂಗ್ ಹಾಗೂ ಜಿಪಿಎಸ್ ವ್ಯವಸ್ಥೆಯೂ ಇದೆ. ಇದರ ಕಾರ್ಯನಿರ್ವಹಣೆಗೆ 600 ವಾಟ್ ಸಾಮರ್ಥ್ಯದ ಸೌರಶಕ್ತಿಯ ಅಗತ್ಯವಿದೆ. ಒಮ್ಮೆ ಚಾರ್ಜ್‌ ಆದ ಬಳಿಕ ಕನಿಷ್ಠ ಎರಡು ದಿನಗಳವರೆಗೆ ಉತ್ಪನ್ನಗಳನ್ನು ತಾಜಾ ಸ್ಥಿತಿಯಲ್ಲಿಡಬಲ್ಲದು’ ಎಂದರು.

ಲಾಕ್‌ಡೌನ್‌ ವೇಳೆ ಯಶಸ್ವಿ: ಲಾಕ್‍ಡೌನ್‍ ಜಾರಿಯಾದ ಬಳಿಕ ಸರ್ಕಾರದ ಸೂಚನೆ ಮೇರೆಗೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್‍ಕಾಮ್ಸ್, ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ಇದೇ ವಾಹನಗಳ ಮೂಲಕ ಗ್ರಾಹಕರ ಮನೆ ತಲುಪಿಸಿತ್ತು.

‘ಸುಜಲಾ ಯೋಜನೆಯಡಿ ಈ ಸೇವೆಯನ್ನು ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲು ಸಂಸ್ಥೆ ಅನುಮತಿ ನೀಡಿತ್ತು. ಬೆಂಗಳೂರು, ಗದಗ, ಮೈಸೂರು, ಬೀದರ್, ರಾಯಚೂರು, ಕೊಪ್ಪಳ, ಚಾಮರಾಜನಗರ, ದಾವಣಗೆರೆ, ಕಲಬುರ್ಗಿ, ತುಮಕೂರು, ವಿಜಯಪುರ, ಚಿಕ್ಕಮಗಳೂರಿನ ಹಾಪ್‍ಕಾಮ್ಸ್‌ಗಳ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ವಾಹನಗಳನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದುಸೆಂಥಿಲ್ ಕುಮಾರನ್ ತಿಳಿಸಿದರು.

ಮನೆಬಾಗಿಲಿಗೆ ಹಣ್ಣು–ತರಕಾರಿ ಪೂರೈಸಲು ಇಚ್ಛಿಸುವವರು ಹಾಗೂ ಸಣ್ಣ ಉದ್ದಿಮೆ ಆರಂಭಿಸುವವರು ಈ ವಾಹನವನ್ನು ಖರೀದಿಸುವ ವ್ಯವಸ್ಥೆಯನ್ನು ಐಐಎಚ್‌ಆರ್ ಕಲ್ಪಿಸಿದೆ. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.