ADVERTISEMENT

PV Web Exclusive: ಸಹಜ, ಸುಸ್ಥಿರ ಕೃಷಿಗೆ ‘ದೇಸಿ’ ಬಲ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದಲ್ಲಿ ವಿನೂತನ ಪ್ರಯತ್ನ

ಸತೀಶ ಬೆಳ್ಳಕ್ಕಿ
Published 7 ಅಕ್ಟೋಬರ್ 2020, 5:51 IST
Last Updated 7 ಅಕ್ಟೋಬರ್ 2020, 5:51 IST
ಕೃಷಿ
ಕೃಷಿ   
""

ಗದಗ ನಗರದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‍ನಲ್ಲಿ ಸಾವಯವ ಹಾಗೂ ಸುಸ್ಥಿರ ಕೃಷಿಗೆ ಸಂಬಂಧಿಸಿದಂತೆ ವಿನೂತನ ಪ್ರಯೋಗಗಳು ನಡೆಯುತ್ತಿದೆ. ಮಹಾತ್ಮ ಗಾಂಧೀಜಿ ಅವರ ತತ್ವ, ಚಿಂತನೆ ಹಾಗೂ ಗ್ರಾಮೀಣಾಭಿವೃದ್ಧಿ ಪರಿಕಲ್ಪನೆ ಸಾಕಾರಗೊಳಿಸುವ ವಿವಿಯ ಧ್ಯೇಯಕ್ಕೆ ಕುಲಪತಿ ಪ್ರೊ.ವಿಷ್ಣುಕಾಂತ ಎಸ್. ಚಟಪಲ್ಲಿ ಅವರ ‘ದೇಸಿ’ ಯೋಜನೆ ಬಲ ತುಂಬುತ್ತಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪ್ರಾಯೋಗಿಕ ಜ್ಞಾನ ಒದಗಿಸಿಕೊಡಲು ಹಾಗೂ ಗದಗ ಜಿಲ್ಲೆಯ ಕೃಷಿಕರನ್ನು ಸಹಜ ಕೃಷಿಯತ್ತ ಆಕರ್ಷಿಸಲು ಆರು ಎಕರೆ ಜಮೀನಿನಲ್ಲಿ ಸುಸ್ಥಿರ ಕೃಷಿಯ ಪ್ರಯೋಗ ಕೈಗೊಂಡು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಯೋಜನೆ ರೂಪಿಸಿದೆ.

ಅದರ ಭಾಗವಾಗಿ ವಿ.ವಿಯಲ್ಲಿ ಇರುವ ಒಟ್ಟು 10 ಅಧ್ಯಯನ ವಿಭಾಗಗಳು ಹಾಗೂ ಎನ್‌ಎಸ್‌ಎಸ್‌ ಘಟಕ ಮತ್ತು ಗ್ರಂಥಾಲಯ ವಿಭಾಗದವರಿಗೆ ಆರು ಎಕರೆ ಕೃಷಿ ಭೂಮಿಯನ್ನು ಪ್ರತಿ ವಿಭಾಗಕ್ಕೆ 20 ಗುಂಟೆಯಂತೆ ಹಂಚಿಕೆ ಮಾಡಿದೆ. ಪ್ರತಿ ವಿಭಾಗದವರೂ ಅಲ್ಲಿ ಸಾವಯವ ಮತ್ತು ಸುಸ್ಥಿರ ಕೃಷಿಗೆ ಸಂಬಂಧಿಸಿದ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ವಿವಿ ಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ ಅವರ ಪರಿಕಲ್ಪನೆಯಾಗಿದ್ದು, ಈ ಯೋಜನೆಗೆ ‘ದೇಸಿ’ (Dessi– Demonstrable, Sustainable, Scalable Initiative) ಎಂದು ಹೆಸರಿಡಲಾಗಿದೆ.

ADVERTISEMENT

‘ರೈತರು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಸುಸ್ಥಿರ ಕೃಷಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಸಾವಯವ ಮತ್ತು ಸುಸ್ಥಿರ ಕೃಷಿಯ ಪ್ರಯೋಗವನ್ನು ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಯ ಭಾಗವಾಗಿ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ.

‘ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಈ ಕಾರಣಕ್ಕಾಗಿ ಸಹಜ ಹಾಗೂ ಸುಸ್ಥಿರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂಬ ಆಶಯದೊಂದಿಗೆ ದೇಸಿ ಯೋಜನೆ ಅಡಿಯಲ್ಲಿ ಅನೇಕ ಕೃಷಿ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಅದರಲ್ಲಿ ಯಶಸ್ಸು ಕೂಡ ಸಿಕ್ಕಿದೆ’ ಎನ್ನುತ್ತಾರೆ ವಿ.ವಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧ್ಯಯನ ವಿಭಾಗದ ಉಪನ್ಯಾಸಕ ಪ್ರಕಾಶ ಎಸ್. ಮಾಚೇನಹಳ್ಳಿ.

ಪ್ರಕಾಶ ಎಸ್. ಮಾಚೇನಹಳ್ಳಿ

‘ಅನಿಶ್ಚಿತವಾಗಿ ಸುರಿಯುವ ಮಳೆ, ಹವಾಮಾನ ವೈಪರೀತ್ಯಗಳಿಂದಾಗಿ ಕೃಷಿ ಕ್ಷೇತ್ರ ಸುಸ್ಥಿರತೆ ಕಳೆದುಕೊಳ್ಳುತ್ತಿದೆ’ ಎನ್ನುವ ಅವರು, ಇದರಿಂದ ಹೊರಬರಬೇಕಾದರೆ ಸಾವಯವ ಹಾಗೂ ಸುಸ್ಥಿರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸುತ್ತಾರೆ ಪ್ರಕಾಶ.

‘ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವುದು ನಮ್ಮ ಉದ್ದೇಶ. ಅನೇಕರಿಗೆ ಕೃಷಿ ಬಗ್ಗೆ ಆಸಕ್ತಿ ಇರುತ್ತದೆ. ಆದರೆ, ಹಲವರಿಗೆ ಅದರಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ದೇಸಿ ಯೋಜನೆ ಮೂಲಕ ನಾವು ಅವರಿಗೆ ಸರಿದಾರಿ ತೋರಿಸುತ್ತಿದ್ದೇವೆ. ಸಮಗ್ರ ಕೃಷಿಯ ಬಗ್ಗೆ ಒಲವು ಮೂಡಿಸುತ್ತಿದ್ದೇವೆ. ಕೃಷಿ ಜತೆಗೆ ಮೀನು ಸಾಕಣೆ, ಎರೆಹುಳ ಗೊಬ್ಬರ ತಯಾರಿಕೆ ಈ ರೀತಿ ಹಲವು ಸಣ್ಣ ಸಣ್ಣ ಯೋಜನೆಗಳನ್ನು ಹಾಕಿಕೊಳ್ಳಬಹುದು. ಈ ಎಲ್ಲ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತೇವೆ’ ಎನ್ನುತ್ತಾರೆ ಅವರು.

‘ವಿದ್ಯಾರ್ಥಿಗಳು ಇಲ್ಲಿನ ಕೃಷಿ ಭೂಮಿಯಲ್ಲಿ ನಡೆಸುವ ಪ್ರಯೋಗಗಳು ಯಶಸ್ವಿ ಆಗಬಹುದು ಅಥವಾ ಆಗದಿರಬಹುದು. ಆದರೆ, ಅವರಲ್ಲಿ ಕೃಷಿಯ ಬಗೆಗಿನ ಆಸಕ್ತಿಯನ್ನಂತೂ ನೂರ್ಮಡಿಗೊಳಿಸುತ್ತದೆ. ಮತ್ತಷ್ಟು ಪ್ರಯೋಗಗಳಿಗೆ ಪ್ರೇರಣೆ ನೀಡುತ್ತದೆ. ಸಹಜ, ಸುಸ್ಥಿರ ಕೃಷಿಯಿಂದ ಮಾತ್ರ ಗ್ರಾಮೀಣಾಭಿದ್ಧಿ ಸಾಧ್ಯ. ಗ್ರಾಮಗಳಗಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ವ್ಯವಸ್ಥಿತವಾದ ಬದಲಾವಣೆ ಕಾಣಬೇಕಾದರೆ, ಸುಸ್ಥಿರ ಕೃಷಿ ಅವಶ್ಯಕ’ ಎನ್ನುತ್ತಾರೆ ಮತ್ತೊಬ್ಬರು ಉಪನ್ಯಾಸಕರಾದ ಪ್ರಶಾಂತ್‌ ಎಚ್‌.ಮೇರವಾಡೆ.

ಗ್ರಾಮೀಣಾಭಿವೃದ್ಧಿಗೆ ಕೃಷಿಯೇ ಮೂಲಾಧಾರ. ಹಾಗಾಗಿ, ನಾವುಕೃಷಿ ಮಾದರಿಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದ್ದೇವೆ. ದೇಸಿಯಂತಹ ಹೊಸ ಮಾದರಿಯ ಪರಿಕಲ್ಪನೆಗಳು ಗ್ರಾಮೀಣಾಭಿವೃದ್ಧಿಗೆ ಇಂಬು ನೀಡುತ್ತವೆ ಎಂಬ ನಿಟ್ಟಿನಲ್ಲಿ ವಿವಿ ಕುಲಪತಿ ಪ್ರೊ.ಕೃಷ್ಣಕಾಂತ ಚಟಪಲ್ಲಿ ಯೋಚಿಸಿದರು ಎನ್ನುತ್ತಾರೆ ಅವರು.

‘ವಿಶ್ವವಿದ್ಯಾಲಯದ ಹತ್ತು ಅಧ್ಯಯನ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ವರ್ಗದವರು ಈ ಕಾರ್ಯಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮಗೆ ವಹಿಸಿದ ಜಮೀನಿನಲ್ಲಿ ಆ ಪರಿಸರಕ್ಕೆ ಸಹಜವಾಗಿ ಹೊಂದಿಕೊಳ್ಳಬಹುದಾದ ದೇಸಿ ತಳಿಗಳ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವುಗಳಲ್ಲಿ ಔಷಧಿ ಸಸ್ಯಗಳು, ತರಕಾರಿ, ಸಿರಿಧಾನ್ಯಗಳು ಮತ್ತು ಮಸಲಾ ಪದಾರ್ಥ ಬೆಳೆಗಳು ಪ್ರಮುಖವಾಗಿವೆ. ಈ ಕಾರ್ಯಯೋಜನೆಯ ಯಶಸ್ಸಿಗೆ ಹಾಗೂ ಈ ಬೆಳೆಗಳ ಸಂಪೂರ್ಣ ನಿರ್ವಹಣೆಗಾಗಿ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗ ಹದಿನೈದು ದಿನಕ್ಕೊಮ್ಮೆ (ಎರಡನೇ ಶನಿವಾರ) ‘ದೇಸಿ ದಿವಸ’ ಎಂಬ ಆಚರಣೆಯ ಭಾಗವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಪ್ರಕಾಶ ಮಾಚೇನಹಳ್ಳಿ.

ದೇಸಿ ಯೋಜನೆಯ ಭಾಗವಾಗಿ ಕೃಷಿ ಭೂಮಿಯಲ್ಲಿ ಗೋವಿನಜೋಳ, ಪಾಪ್‌ಕಾರ್ನ್‌ ಜೋಳ, ನವಣೆ, ಮೆಣಸಿನಕಾಯಿ, ಪುದೀನಾ, ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಪ್ರಾಯೋಗಿಕತೆಗೆ ಹೆಚ್ಚು ಒತ್ತು ನೀಡಿರುವುದರಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಪಠ್ಯದ ಶೇ 40ರಷ್ಟು ‍ಭಾಗವನ್ನು ಹೊರಗಡೆಯೇ ಕಲಿಯುತ್ತಿದ್ದಾರೆ. ಜತೆಗೆ ತರಗತಿಯೊಳಗೆ ಮೊಳೆತ ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ವಿ.ವಿಯು ತನ್ನ ವಿದ್ಯಾರ್ಥಿಗಳಿಗೆ ವಿಶಾಲ ವೇದಿಕೆ ಕಲ್ಪಿಸಿಕೊಟ್ಟಿದೆ. ಕೇವಲ ಮಾತಿನಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರ ಪಠಿಸುವುದಕ್ಕಿಂತ ಪ್ರಾಯೋಗಿಕ ಜ್ಞಾನ ಒದಗಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಯೆಂಬ ‘ಮಾವಿನಕಾಯಿ’ ಉದುರಿಸಬೇಕು ಎಂಬುದು ವಿ.ವಿಯ ಧ್ಯೇಯವಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.