ADVERTISEMENT

ಕೃಷಿ ಮೇಳದಲ್ಲಿ ಖುಷಿಯ ಮತ್ತೇರಿಸುತ್ತಿದೆ 'ನೀರಾ'

ಆರ್‌.ಜೆ.ಯೋಗಿತಾ
Published 25 ಅಕ್ಟೋಬರ್ 2019, 19:41 IST
Last Updated 25 ಅಕ್ಟೋಬರ್ 2019, 19:41 IST
ನೀರಾ
ನೀರಾ   

ಬೆಂಗಳೂರು:ಎಂದಾದರು ನೀರಾ ಕುಡಿದಿದ್ದೀರಾ? ಇಲ್ಲ ಅಂತಾದ್ರೆ ಕೃಷಿ ಮೇಳಕ್ಕೆ ಭೇಟಿ ನೀಡಿ ಅದರ ರುಚಿಯನ್ನು ಸವಿಯಿರಿ.

ಇದೇನಪ್ಪಾ ಕೃಷಿ ಮೇಳದಲ್ಲಿ ನೀರಾ ಮಾರಾಟ ಮಾಡುತ್ತಿದ್ದಾರೆ ಎಂದು ಹುಬ್ಬೇರಿಸುವವರಿಗೆ, ‘ಇದೇನು ಹೆಂಡವಲ್ಲ’ ಎಂದು ನಗುಮೊಗದಲ್ಲೇ ಉತ್ತರಿಸುತ್ತಾರೆ ಇದರ ಮಾರಾಟಗಾರರಾದ ಸೀತಾರಾಮಯ್ಯನವರು.

ನೀರಾ ಮಳಿಗೆ ಈ ಬಾರಿ ಕೃಷಿ ಮೇಳದ ಪ್ರಮುಖ ಆಕರ್ಷಣೆ ಎಂದೇ ಹೇಳಬಹದು. ಮೇಳಕ್ಕೆ ಬಂದಿರುವ ಜನರು ನೀರಾ ರುಚಿಗೆ ಮನಸೋತಿದ್ದು, ಒಂದರ ಹಿಂದೆ ಒಂದರಂತೆ ಐದಾರು ಗ್ಲಾಸ್‌ ಕುಡಿದು ಖುಷಿ ಪಡುತ್ತಿದ್ದಾರೆ. ತೋಟಗಳಲ್ಲಿ ಮಾತ್ರ ಬೆಳಿಗ್ಗೆ ಹೊತ್ತು ನೀರಾ ಇಳಿಸಿ, ಅಲ್ಲಿಯೇ ಕೆಲವರು ಮಾರಾಟ ಮಾಡುತ್ತಿದ್ದರು. ಆದರೆ, ಸಿಲಿಕಾನ್ ಸಿಟಿಯಲ್ಲಿ ನೀರಾ ದೊರೆಯುವುದು ಬಹಳ ಅಪರೂಪವೇ ಸರಿ.

ADVERTISEMENT

‘ನೀರಾ ಎಂದರೆ ಹುಳಿಯೇ ಇರುತ್ತದೆ ಎಂದೇ ನಾನು ತಿಳಿದಿದ್ದೆ. ಆದರೆ, ಇದೊಂತರ ಕಬ್ಬಿನಹಾಲನ್ನು ಕುಡಿದ ರುಚಿ ನೀಡುತ್ತದೆ. ಬಹಳ ಇಷ್ಟವಾಯಿತು. ಒಟ್ಟಿಗೆ ಮೂರು ಗ್ಲಾಸ್‌ ಇಳಿಸಿಬಿಟ್ಟೆ’ ಎನ್ನುವುದು ನೀರಾ ಕುಡಿದ ಚಂದನ್‌ ಮಾತು.

ಇದನ್ನು ಸಾಧ್ಯವಾಗಿಸಿದ್ದು ‘ಮಲೆನಾಡು ನೆಟ್‌ ಅಂಡ್‌ ಸ್ಪೈಸ್‌’ ರೈತ ಉತ್ಪಾದಕ ಕಂಪನಿ.ನೀರಾ ನೀತಿ ಜಾರಿಯಾದ ನಂತರ ಅದರಉತ್ಪಾದನೆ, ಸಂಸ್ಕರಣೆ ಮತ್ತು ಸಗಟು ಮಾರಾಟಕ್ಕೆ ಪರವಾನಗಿ ಪಡೆದ ಮೊದಲ ಕಂಪನಿ ಇದಾಗಿದೆ.

3 ಕೋಟಿ ವೆಚ್ಚದ ಘಟಕ

ಭದ್ರಾವತಿ ತಾಲೂಕು ಬಾರಂದೂರಿನಲ್ಲಿ ₹3 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಘಟಕದಲ್ಲಿ ನೀರಾ ಫ್ಲೆಶ್‌, ನೀರಾ ಐಸ್‌ಕ್ರೀಮ್‌, ನೀರಾ ಸಕ್ಕರೆ, ನೀರಾ ಬೆಲ್ಲ ಮತ್ತು ನೀರಾ ಕಾಫಿಯನ್ನು ಉತ್ಪಾದಿಸಲಾಗುತ್ತದೆ.

ಆರೋಗ್ಯಕ್ಕೆ ಸಾಕಷ್ಟು ಉಪಯುಕ್ತವಾಗಿರುವ ಈ ನೀರಾವನ್ನು ತೆಂಗಿನ ಮರದ ಹೊಂಬಾಳೆಯಿಂದ ಇಳಿಸಲಾಗುತ್ತದೆ. ಸಾಮಾನ್ಯವಾಗಿ ನೀರಾವನ್ನು ಮಡಿಕೆಯಲ್ಲಿ ಸಾಮಾನ್ಯ ತಾಪಮಾನದಲ್ಲಿ ಭಟ್ಟಿ ಇಳಿಸುವುದರಿಂದ ಅದು ಹಾಳಾಗಿ ಹುಳಿ ಬಂದು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದರೆ, ಈ ಕಂಪನಿ ಸಾಕಷ್ಟು ತಾಂತ್ರಿಕವಾಗಿ ಅದನ್ನು ಭಟ್ಟಿ ಇಳಿಸುತ್ತಿರುವುದರಿಂದ ಯಾವುದೇ ಅಪಾಯವಿಲ್ಲ.

ಹೊಂಬಾಳೆಯಿಂದ ಭಟ್ಟಿ ಇಳಿಸುವ ನೀರಾವನ್ನು ಶುದ್ಧತೆಯನ್ನು ಕಾಪಾಡಿಕೊಳ್ಳುವ ಉತ್ತಮ ದರ್ಜೆಯ ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿ, ಘಟಕದಲ್ಲಿ ಸಂಸ್ಕರಿಸಿದ ನಂತರ ಪ್ಲಾಸ್ಟಿಕ್‌ಗಳಲ್ಲಿ(ಫುಡ್‌ ಗ್ರೇಡ್‌ ಪ್ಲಾಸ್ಟಿಕ್‌) ನೀರಾವನ್ನು ತುಂಬಿಸಿ ಮಂಜುಗಡ್ಡೆಯ ಬಾಕ್ಸ್‌ನಲ್ಲಿಟ್ಟು ಅದನ್ನು ವಿವಿಧ ಮಳಿಗೆಗಳಿಗೆ ಕಳುಹಿಸಲಾಗುತ್ತದೆ. ಭಟ್ಟಿ ಇಳಿಸಿದ ನಂತರ ಗ್ರಾಹಕರಿಗೆ ತಲುಪಿಸುವವರೆಗೂ ಶೂನ್ಯದಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ಸ್‌ನಲ್ಲಿಯೇ ನೀರಾವನ್ನು ಇಡಲಾಗುತ್ತದೆ.

ಆರೋಗ್ಯಕ್ಕೂ ಉತ್ತಮ

ನಿಸರ್ಗ ನೀಡಿದ ಒಂದು ಆರೋಗ್ಯರ ಪೇಯ ಎಂಬುದು ನೀರಾದ ಅಡಿಬರಹವಾಗಿದೆ. ಈ ಪೇಯದಲ್ಲಿ ಎ,ಬಿ ಕಾಂಪ್ಲೆಕ್ಸ್‌ ಹಾಗೂ ವಿಟಮಿನ್‌ ಸಿ ಇದೆ. ನೀರಾ ಹಾಗೂ ಅದರಿಂದ ತಯಾರಿಸಿದ ಸಕ್ಕರೆ ಮಧುಮೇಹ ಸ್ನೇಹಿಯಾಗಿದೆ. ಫಾಸ್ಪರಸ್‌, ಅಸ್ಕಾರ್ಬಿಕ್‌ ಆ್ಯಸಿಡ್‌ ಹಾಗೂ ಐರನ್ ಭರಿತ ಸಮೃದ್ಧ ಪೇಯ ಇದಾಗಿದೆ.

ಬೆಂಗಳೂರಿನ ವಿವಿಧೆಡೆ ನೀರಾ

ರಾಜಧಾನಿಯ ಸಸ್ಯಕಾಶಿಯ ಲಾಲ್‌ಬಾಗ್‌ನಲ್ಲಿ ಹಾಗೂ ಹೈಕೋರ್ಟ್‌ ಬಳಿ ಈಗಾಗಲೇ ನೀರಾ ಮಳಿಗೆ ಇದೆ. ಕೃಷಿ ಮೇಳದಲ್ಲಿಯೂ ಭಾನುವಾರದ ವರೆಗೆ ನೀರಾ ರುಚಿಯನ್ನು ಸವಿಯಬಹುದು. ಚಂದ್ರಾಲೇಔಟ್‌ನಲ್ಲಿ ಶೀಘ್ರದಲ್ಲಿಯೇ ಮಳಿಗೆ ತೆರೆಯಲಾಗುವುದು ಎಂದು ಮಾರಾಟಗಾರರು ತಿಳಿಸಿದರು. 200 ಎಂಎಲ್‌ ನೀರಾ ಬಾಟಲ್‌ಗೆ ₹40 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.