ADVERTISEMENT

PV Web Exclusive: ಬಂದಿದೆ ಡಿಜಿಟಲ್‌ ಕೃಷಿ

ಶರತ್‌ ಹೆಗ್ಡೆ
Published 3 ಡಿಸೆಂಬರ್ 2020, 10:27 IST
Last Updated 3 ಡಿಸೆಂಬರ್ 2020, 10:27 IST
ಡಾ.ಮಹಾಂತೇಶ್‌ ಬಿ.ಪಾಟೀಲ್‌
ಡಾ.ಮಹಾಂತೇಶ್‌ ಬಿ.ಪಾಟೀಲ್‌   

ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಿಖರ ಬೇಸಾಯ ಕ್ರಮದಿಂದನಿರೀಕ್ಷಿತ ಫಲಿತಾಂಶ ಪಡೆಯುವ ಒಟ್ಟಾರೆ ಪ್ರಕ್ರಿಯೆಯೇ ಡಿಜಿಟಲ್‌ ಕೃಷಿ...

- ಹೀಗೆ ಒಂದೇ ಸಾಲಿನಲ್ಲಿ ಹೇಳಿದರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಸ್ಯರೋಗ ಶಾಸ್ತ್ರಜ್ಞ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಮಹಾಂತೇಶ್‌ ಬಿ. ಪಾಟೀಲ್‌.

ಹೌದು ಎಲ್ಲ ಕ್ಷೇತ್ರಗಳಲ್ಲಿ ‘ಡಿಜಿಟಲ್‌’ ಅನ್ನುವುದು ಹಾಸು ಹೊಕ್ಕಾಗಿರುವಂತೆಯೇ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಉನ್ನತ ಮಟ್ಟದಲ್ಲಿ, ಸಂಶೋಧನಾ ಕೇಂದ್ರಗಳಿಗೆ ಕೃಷಿ ವಿಶ್ವವಿದ್ಯಾಲಯಗಳ ಆವರಣಗಳಿಗೆ, ಪ್ರಯೋಗಕ್ಕಷ್ಟೇ ಸೀಮಿತವಾಗಿದ್ದ ಈ ಪರಿಕಲ್ಪನೆ ಸಾಮಾನ್ಯ ರೈತನನ್ನೂ ತಲುಪುವ ಪ್ರಯತ್ನ ಸಾಗಿದೆ.

ADVERTISEMENT

ಕೃಷಿ ವಿಶ್ವ ವಿದ್ಯಾಲಯಗಳ ಜೊತೆಗೆ ಇಸ್ರೋದ ಉಪಗ್ರಹಗಳು, ಖಾಸಗಿ ಕೃಷಿ ಸಂಶೋಧನಾ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಈ ಪ್ರಕ್ರಿಯೆಯಲ್ಲಿ ಕೈಜೋಡಿಸಿವೆ.

ಇದರಲ್ಲಿ ಎರಡು ಆಯಾಮಗಳಿವೆ. ಒಂದು ರೈತ ಕೇಂದ್ರಿತ ಸೌಲಭ್ಯಗಳು, ಇನ್ನೊಂದು ಮಾರುಕಟ್ಟೆ ಅಥವಾ ಗ್ರಾಹಕ ಕೇಂದ್ರಿತ ಸೌಲಭ್ಯಗಳು. ಜಾಗತಿಕ ದೃಷ್ಟಿಯಲ್ಲಿ ನೋಡಿದರೆ ಇದು ಗ್ರಾಹಕ ಕೇಂದ್ರಿತವಾಗಿಯೇ ಇರಲು ಹೆಚ್ಚು ಒತ್ತು ಕೊಡುತ್ತದೆ. ಸಹಜವಾಗಿ ರೈತರಿಗೆ ಬೆಳೆಯ ಮೂಲ ಹಂತದಲ್ಲೇಉತ್ಪನ್ನದ ಗುಣಮಟ್ಟ ವರ್ಧನೆ, ಕೃಷಿ ಕ್ರಮಗಳನ್ನು ಅಳವಡಿಸಿಕೊಂಡು ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಅಣಿಯಾಗಬಹುದು ಎಂಬುದು ಈ ಪರಿಕಲ್ಪನೆಯ ಉದ್ದೇಶ.

ಕೋವಿಡ್‌ ಕಲಿಸಿದ ಮೂವತ್ತು ವರ್ಷಗಳ ದೂರದೃಷ್ಟಿ

ಡಾ.ಪಾಟೀಲ್‌ ಮಾತು ಮುಂದುವರಿಸಿದರು.

‘ಕೇವಲ ಮೂರು ತಿಂಗಳು ತೀವ್ರವಾಗಿ ಬಾಧಿಸಿದ್ದ ಕೋವಿಡ್‌ ನಮಗೆ ಬಹಳಷ್ಟು ಪಾಠಗಳನ್ನು ಕಲಿಸಿತು. ಈ ಕಾಲಘಟ್ಟದಲ್ಲಿ ರೈತರ ಬದುಕನ್ನು ಅಧ್ಯಯನ ಮಾಡಿಕೊಂಡು ಮುಂದಿನ ಮೂವತ್ತು ವರ್ಷಗಳವರೆಗೆ ನಮ್ಮ ಕೃಷಿ ಕ್ರಮ, ರೈತರ ಬದುಕು, ಮಾರುಕಟ್ಟೆ ವ್ಯವಸ್ಥೆ ಹೇಗಿರಬೇಕು ಎಂಬುದರ ಪರಿಕಲ್ಪನೆ ಇದು’.

‘ಡಿಜಿಟಲ್‌ ದಾಖಲೆ ವ್ಯವಸ್ಥೆ ಕೋವಿಡ್‌ ಪೂರ್ವದಲ್ಲೂ ಇತ್ತು. ಆದರೆ, ಲಾಕ್‌ಡೌನ್‌ನಿಂದ ಇಡೀ ದೇಶದ ಚಲನೆಯೇ ಸ್ಥಗಿತವಾಗಿದ್ದ ಕಾಲದಲ್ಲಿ ಆನ್‌ಲೈನ್‌ ಮಾರುಕಟ್ಟೆ, ಕೃಷಿ ವಾರ್‌ರೂಂಗಳಿಗೆ ಹೆಚ್ಚು ಬೇಡಿಕೆ ಬಂದಿತು. ಆಹಾರ ಪೂರೈಕೆ ವ್ಯವಸ್ಥೆಯೇ ಆನ್‌ಲೈನ್‌ ಮಯ (ಆಪ್‌ ಮೂಲಕ ಆಹಾರ ತರಿಸುವ ವ್ಯವಸ್ಥೆ ಇದೆಯಲ್ಲಾ ಹಾಗೆ) ಆಗಿಬಿಟ್ಟಿತು. ಹಾಗಿರುವಾಗ ರೈತನೊಬ್ಬ ತನ್ನ ಉತ್ಪನ್ನಕ್ಕೆ ಎಲ್ಲಿ ಮಾರುಕಟ್ಟೆ ಸಿಗುತ್ತದೆ. ಅಲ್ಲಿನ ಬೇಡಿಕೆ ಏನು ಎಂಬುದನ್ನು ತಿಳಿದುಕೊಳ್ಳಲೂ ಆನ್‌ಲೈನ್‌ ಮೊರೆ ಹೋದ. ಸಾಮಾನ್ಯ ಸ್ಮಾರ್ಟ್‌ಫೋನ್‌ ಈ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿದೆ’ ಎಂದು ರೈತರು ಡಿಜಿಟಲ್‌ ವ್ಯವಸ್ಥೆಗೆ ಹೊರಳುತ್ತಿರುವುದನ್ನು ತೆರೆದಿಟ್ಟರು.

‘ಡಿಜಿಟಲ್‌ ಅನ್ನುವುದೇ ಸೊನ್ನೆ ಮತ್ತು ಒಂದರ ಮ್ಯಾಜಿಕ್‌ ಅಲ್ವಾ. ಇಲ್ಲಿಯೂ ಅದೇ ಆಟಗಳನ್ನು ಆಡಬೇಕು. ಕೃಷಿಯಲ್ಲಿ ಕೈಗಾರಿಕೆಯ ಮಾದರಿಯ ನಿಖರತೆ ಸಾಧಿಸಬೇಕು. ಇಂಥ ಬೆಳೆಗೆ ಇಂತಿಷ್ಟೇ ನೀರು, ಗೊಬ್ಬರ, ಕೀಟನಾಶಕ. ಅದಕ್ಕಿಂತ ಹೆಚ್ಚು ಬಳಸಿದರೆ ಅದರಿಂದಾಗುವ ಸಂಪನ್ಮೂಲ ನಷ್ಟ, ಬೆಳೆಯ ಮೇಲಿನ ಪರಿಣಾಮ, ಮಾರುಕಟ್ಟೆಯಲ್ಲಿ ಬರಬಹುದಾದ ಪ್ರತಿಕ್ರಿಯೆ, ಕೊನೆಗೆ ಉತ್ಪನ್ನದ ತಿರಸ್ಕಾರ ಇತ್ಯಾದಿ ಎಲ್ಲವುಗಳ ಪೂರ್ವ ಮಾಹಿತಿಯನ್ನು ಡಿಜಿಟಲ್‌ ವ್ಯವಸ್ಥೆ ರೈತನಿಗೆ ಕೊಡುತ್ತದೆ. ಹೀಗಾಗುವಾಗ ರೈತನೂ ಎಚ್ಚರ ವಹಿಸುತ್ತಾನೆ. ಅನಗತ್ಯ ವೆಚ್ಚ, ನಷ್ಟ ಆಗದಂತೆ ನೋಡಿಕೊಳ್ಳುತ್ತಾನೆ’ ಎಂದು ಆಶಯ ವ್ಯಕ್ತಪಡಿಸಿದರು ಅವರು.

‘ರೈತನ ಉತ್ಪನ್ನವೊಂದು ಎಷ್ಟು ಜನರಿಗೆ ತಲುಪಿತು, ಎಷ್ಟು ದೂರದಲ್ಲಿ ಹೊಟ್ಟೆಗಳನ್ನು ತಣಿಸಿತು ಎಂಬಲ್ಲಿಗೆ ರೈತ ಖುಷಿಪಡುತ್ತಾನೆ. ಇದು ರೈತನಿಗೆ ಸಿಗುವ ಗೌರವ. ಅವನು ಪ್ರತಿಯೊಂದನ್ನೂ ಹಣದಿಂದಲೇ ಅಳೆಯುತ್ತಾನೆ ಎನ್ನುವುದು ಸುಳ್ಳು. ಹಾಗೆಂದು ಹಣವನ್ನು ನಿರಾಕರಿಸಲಾಗದು. ಅದೂ ಅವನ ಬದುಕಿಗೆ ಮುಖ್ಯ ಅಲ್ಲವೇ’ ಎಂದು ಕಾಳಜಿ ವ್ಯಕ್ತಪಡಿಸಿದರು.

ಗ್ರಾಹಕ ಕೇಂದ್ರಿತ ಹೇಗೆ?

ಈಗ ಜಾಗತಿಕವಾಗಿ ಮುಕ್ತ ಮಾರುಕಟ್ಟೆ ಇದೆ. ತಾನು ಕೊಳ್ಳುವ ವಸ್ತುವಿನ ಉತ್ಪಾದನಾ ಮೂಲ ಮತ್ತು ವಿಧಾನವನ್ನು ಅರಿಯುವ ಹಕ್ಕು ಮತ್ತು ಸಾಧ್ಯತೆ ಗ್ರಾಹಕನಿಗೆ ಇದೆ. ಉದಾಹರಣೆಗೆ ಸಾವಯವ ಉತ್ಪನ್ನ ಎಂದು ಒಂದು ಧಾನ್ಯ ಅಥವಾ ತರಕಾರಿಯನ್ನು ಗ್ರಾಹಕನಿಗೆ ಮಾರುತ್ತೀರಿ ಎಂದಿಟ್ಟುಕೊಳ್ಳಿ. ಅದನ್ನು ಬೆಳೆಸಿದ ಮಣ್ಣು, ಬಳಸಿದ ನೀರು, ಗೊಬ್ಬರ, ಕೊಯಿಲು, ಪ್ಯಾಕ್‌ ಮಾಡಿದ, ಸಂಗ್ರಹಿಸಿದ ವಿಧಾನದವರೆಗೆ ಅದನ್ನುಅವನು ಅರಿಯಬೇಕು. ಅದು ಸ್ಪಷ್ಟವಾಗದಿದ್ದರೆ ಆತ ಉತ್ಪನ್ನವನ್ನು ನಿರಾಕರಿಸಬಹುದು. ಅದಕ್ಕಾಗಿಯೇ ಎಲ್ಲ ದಾಖಲೆಗಳನ್ನು ಮೂಲದಿಂದಲೇ ನಿರ್ವಹಿಸಿ ಡಿಜಿಟಲ್‌ ರೂಪದಲ್ಲಿಟ್ಟರೆ ಗ್ರಾಹಕನಿಗೂ ಉತ್ಪಾದಕನ ಮೇಲೆ ವಿಶ್ವಾಸ ಮೂಡುತ್ತದೆ. ಮಾರುಕಟ್ಟೆ ವೃದ್ಧಿ ಆಗುತ್ತದೆ. ಹೀಗೆ ಡಿಜಿಟಲ್‌ ವ್ಯವಸ್ಥೆಯಲ್ಲಿ ಎಲ್ಲವೂ ಪಾರದರ್ಶಕವಾಗಿರುತ್ತದೆ.

ಹೀಗೆ ಒಟ್ಟಾರೆ ಆಹಾರ ಉತ್ಪಾದನೆ ಪ್ರಕ್ರಿಯೆಯ ಪ್ರತಿಯೊಂದು ಹೆಜ್ಜೆ ಗುರುತು ಡಿಜಿಟಲ್‌ ವ್ಯವಸ್ಥೆಯಲ್ಲಿ ದಾಖಲಾಗುತ್ತದೆ.

ಇದು ವೆಚ್ಚದಾಯಕವೇ?

ವಿಜ್ಞಾನಿಗಳು ಹೇಳುವ ಪ್ರಕಾರ ಆರಂಭದಲ್ಲಿ ಇದರ ಸಾಧನಗಳು ವೆಚ್ಚದಾಯಕ ಅನಿಸಬಹುದು. ಆದರೆ, ಅವನ್ನೆಲ್ಲಾ ರೈತರು ಕೊಳ್ಳಬೇಕೆಂದೇನಿಲ್ಲವಲ್ಲ. ಸಾಮಾನ್ಯ ಸ್ಮಾರ್ಟ್‌ಫೋನ್‌ನಲ್ಲೇ ಎಲ್ಲ ಸಾಧ್ಯತೆಗಳೂ ಇವೆ. ಅದಕ್ಕೆಂದೇ ಸರ್ಕಾರವೇ ರೂಪಿಸಿದ ಕಿಸಾನ್‌ ಸುವಿಧಾದಂತಹ ಹತ್ತಾರು ಉಚಿತ ಅಪ್ಲಿಕೇಷನ್‌ಗಳಿವೆ. ಬೆಳೆ ಮಾಹಿತಿ, ಭೂಮಿ ಮಾಹಿತಿ, ಮಣ್ಣು ಪರೀಕ್ಷಾ ವರದಿ, ಹವಾಮಾನ ಮಾಹಿತಿ ಎಲ್ಲವೂ ಅದರಲ್ಲೇ ಸಿಗುತ್ತವೆ. ರೈತರು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಅಷ್ಟೇ ಎನ್ನುತ್ತಾರೆ.

‘ರೈತರಿಗೆ ತಂತ್ರಜ್ಞಾನ ಗೊತ್ತಿಲ್ಲ, ಕಂಪ್ಯೂಟರ್‌ ಇಲ್ಲ ಎಂಬ ಚಿಂತೆಯೇ ಬೇಡ. ಕೃಷಿ ಇಲಾಖೆ, ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನಿಗಳು ಅದಕ್ಕೆಂದೇ ಇದ್ದಾರೆ. ರೈತರು ಆ ಒತ್ತಡ ಅನುಭವಿಸಬೇಕಾಗಿಲ್ಲ’ ಎಂದರು ಡಾ.ಪಾಟೀಲ್‌.

ಎಲ್ಲರಿಗೂ ಇದೆ ಕೆಲಸ...

ಇದರಲ್ಲಿ ರೈತ ಉತ್ಪಾದಕ ಸಂಘಗಳ ಪಾತ್ರ ಮಹತ್ವದ್ದು. ಬೆಳೆ ಬೆಳೆಯುವುದರಿಂದ ಹಿಡಿದು ಅದನ್ನು ಮಾರುಕಟ್ಟೆಗೆ ತಲುಪಿಸುವಲ್ಲಿನ ಪ್ರಕ್ರಿಯೆಯಲ್ಲಿ ಈ ಸಂಘಗಳು ಸಕ್ರಿಯವಾಗಿವೆ. ಇವುಗಳ ಮೂಲಕ ಆಯಾ ಕಾಲಮಾನದ ಬೆಳೆ ಪರಿಸ್ಥಿತಿ, ಹವಾಮಾನ, ಮಾರುಕಟ್ಟೆ ಅವಲೋಕನದ ನಿಖರ ಮಾಹಿತಿಯನ್ನು ರೈತರಿಗೆ ತಲುಪಿಸಬಹುದು.

ಈಗಾಗಲೇ ಕೆಲವು ಖಾಸಗಿ ಕಂಪನಿಗಳು ರೈತರಿಗೆ ಡಿಜಿಟಲ್‌ ಸೇವೆಯನ್ನು ನೀಡುತ್ತಿವೆ. ಡಿಜಿಟಲ್‌ ವ್ಯವಸ್ಥೆಯಲ್ಲೇ ತೋಟ ನಿಯಂತ್ರಿಸುತ್ತಿರುವ ವ್ಯವಸ್ಥೆಯೂ ಕೆಲವೆಡೆ ಇದೆ. ಶುಲ್ಕ ಪಾವತಿಸಿ ನೀಡುವ ಹಲವಾರು ಸೇವೆಗಳೂ ಲಭ್ಯ ಇವೆ.

‘ಡಿಜಿಟಲ್‌ ಕೃಷಿ ಕೇವಲ ಕೃಷಿ ವಿಜ್ಞಾನಿಗಳಿಂದಷ್ಟೇ ಆಗುವುದಲ್ಲ. ಇದಕ್ಕೆ ಕೃಷಿ ವಿಜ್ಞಾನಿಗಳ ಜೊತೆ ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಭೂ ವಿಜ್ಞಾನ ಸೇರಿದಂತೆ ಎಲ್ಲರೂ ಸೇರಿ ಈ ಪರಿಕಲ್ಪನೆಯನ್ನು ಜಾರಿಗೆ ತರಬೇಕು. ಇದು ಎಲ್ಲರೂ ಸೇರುವ ವೇದಿಕೆ. ರೈತರು, ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳೂ ಬೇಕು. ಎಲ್ಲರೂ ಸೇರಿ ಇಂಥ ಪರಿಕಲ್ಪನೆಯನ್ನು ಜಾರಿಗೆ ತಂದಾಗ ದೇಶದಲ್ಲಿ ಅತ್ಯಾಧುನಿಕ ಕೃಷಿ ತಂತ್ರಜ್ಞಾನವನ್ನು ಸಾಮಾನ್ಯ ರೈತನ ಭೂಮಿಗೂ ತಲುಪಿಸಬಹುದು. ಎಲ್ಲರೂ ಮನಸ್ಸು ಮಾಡಿದರೆ ಇದು ಅನುಷ್ಠಾನಗೊಳ್ಳಲು ಹೆಚ್ಚು ಕಾಲ ಬೇಕಿಲ್ಲ’ ಎಂದು ಆಶಯ ವ್ಯಕ್ತಪಡಿಸಿದರು ಡಾ.ಪಾಟೀಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.