ADVERTISEMENT

ನಿಮ್ಮ ತೋಟದಲ್ಲಿ ಗೊಣ್ಣೆಹುಳು ಕಾಟವೇ ? ಇಲ್ಲಿದೆ ನೋಡಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 13:44 IST
Last Updated 21 ಏಪ್ರಿಲ್ 2020, 13:44 IST
ಹಿಪ್ಪುನೇರಳೆ ಗಿಡದ ಮೇಲೆ ಗೊಣ್ಣೆಹುಳದ ಪ್ರೌಢ ದುಂಬಿಗಳು (ಚಿತ್ರ: ಡಾ. ನಜೀರ್ ಅಹ್ಮದ್)
ಹಿಪ್ಪುನೇರಳೆ ಗಿಡದ ಮೇಲೆ ಗೊಣ್ಣೆಹುಳದ ಪ್ರೌಢ ದುಂಬಿಗಳು (ಚಿತ್ರ: ಡಾ. ನಜೀರ್ ಅಹ್ಮದ್)   
"ಗೋಡಂಬಿ ಗಿಡದ ಮೇಲೆ ಗೊಣ್ಣೆಹುಳದ ಪ್ರೌಢ ದುಂಬಿಗಳು"
"ಬೇರುಹುಳು ಬಾಧಿತ ಅಡಿಕೆ ತೋಟ"
"ಬೆಳಕಿನ ಬಲೆಗೆ ಆಕರ್ಷಿತವಾಗಿರುವ ಗೊಣ್ಣೆಹುಳದ ದುಂಬಿಗಳು"

ಚಾಮರಾಜನಗರದ ರೈತರೊಬ್ಬರ ಫೋನು, ‘ಬಾಳೆ ಹಾಕಿ ಎರಡು ತಿಂಗಳು, ನೀರು, ನಿರ್ವಹಣೆ ಸರಿಯಾಗೇ ಇದೆ, ಬೆಳ್ವಣಿಗೆನೇ ಇಲ್ಲ‘ ಎಂದರು.

‘ಬೇರನ್ನೊಮ್ಮೆ ಪರೀಕ್ಷಿಸಿ ಕರೆ ಮಾಡಿ‘ ಎಂದೆ. ಪರೀಕ್ಷಿಸಿ ನೋಡಿದ ಅವರು, ‘ಗೊಣ್ಣೆ ಹುಳು ಸಾರ್, ಒಳಗೇ ಸೇರ್ಕೊಂಡು ಕೆಲ್ಸ ಮಾಡ್ತಿದೆ‘ ಎಂದು ಮರು ಉತ್ತರಿಸಿದರು.

ಇದೇ ವಿಷಯವಾಗಿ ಕರೆ ಮಾಡಿದಮಂಡ್ಯದ ಕಬ್ಬಿನ ಕೃಷಿಕರಿಗೂ, ‘ಬೇರು ನೋಡಿ‘ ಎಂದು ಹೇಳಿದ್ದೆ. ‘ಬೇರೇ ಕಾಣ್ತಾ ಇಲ್ಲ. ಸುಮಾರು ಕಡೆ ಹಿಂಗಾಗಿದೆ. ಬಿಳಿ ಬಣ್ಣದ್ದು, ಇಂಗ್ಲೀಷ್‌ನಲ್ಲಿ ‘ಸಿ’ ಅಕ್ಷರ ಇದ್ದಂಗಿದೆ‘ ಎಂದರು.

ADVERTISEMENT

ಮಲೆನಾಡು ಕಡೆಯಲ್ಲಿ ಅಡಿಕೆ ಬೆಳೆಯವವರು ಕರೆ ಮಾಡಿ, ‘ಅಲ್ಲೊಂದ್ ಇಲ್ಲೊಂದ್ ಗಿಡ ಒಣಗ್ತಾ ಇವೆ, ರೋಗ ಯಾವ್ದೂ ಇಲ್ಲ, ನೀರು, ಗೊಬ್ಬರ ಎಲ್ಲ ಸರಿಯಾಗಿ ಕೊಡ್ತಿದೀವಿ‘ ಎಂದರು. ಅವರಿಗೂ, ‘ಒಂದೇ ಒಂದು ಗಿಡದ ಬೇರ್ನೋಡಿ ಅಂದಿದ್ದೆ‘. ಅವರು ಪುನಃ ಕರೆ ಮಾಡಿ, ಏನ್ ಸಾರ್ ಆ ಪಾಟಿ ಬೇರುಳ, ಅದ್ರದ್ದೇ ಕೆಲ್ಸ‘ ಎಂದು ಉತ್ತರಿಸಿದರು.

****

ಹೌದು, ಇದೆಲ್ಲಾ ಬೇರು ಹುಳ ತಂದಿಡುವ ಸಮಸ್ಯೆ. ರೈತರು ಇದನ್ನು ಗೊಣ್ಣೆಹುಳು ಎಂದು ಕರೆಯುತ್ತಾರೆ. ಆ ಬೆಳೆ, ಈ ಬೆಳೆ ಅಂತಿಲ್ಲ, ಬಹಳ ಬೆಳೆಗಳನ್ನು ಬಹುವಾಗಿ ಕಾಡುವ ಪ್ರಮುಖ ಕೀಟ. ಒಂದು ರೀತಿ ಸರ್ವಭಕ್ಷಕ ಎನ್ನಬಹುದು. ಮಣ್ಣಿನೊಳಗೆ ಕೋಶಾವಸ್ಥೆಯಿಂದ ದುಂಬಿಗಳಾಗಿ ಮೊದಲ ಮಳೆಗೆ ಆಚೆ ಬಂದುಬಿಡುತ್ತವೆ. ಆಮೇಲೆ ಕಾರ್ಯಾಚರಣೆ ಶುರು ಮಾಡುತ್ತವೆ. ಹೀಗಾಗಿ, ಇವುಗಳನ್ನು ಮೊದಲ ಹಂತದಲ್ಲೇ ನಿರ್ವಹಣೆ ಮಾಡಲು ಇದು ಸಕಾಲ. ಉದಾಸೀನ ಮಾಡಿದರೆ ಬೆಳೆಗಳ ಬುಡಕ್ಕಷ್ಟೇ ಅಲ್ಲ ಕೃಷಿಕರ ಬುಡಕ್ಕೇ ಬಂದುಬಿಡುತ್ತವೆ. ಗೊಣ್ಣೆ ಹುಳುಗಳನ್ನು ನಿರ್ಲಕ್ಷಿಸಿದರೆ ಬೆಳೆಯೇ ಸಿಗದು.

ಎಲ್ಲಿರುತ್ತವೆ ಈ ಹುಳುಗಳು?

ಕಡಿಮೆ ಮಳೆ, ಮರಳು ಮಿಶ್ರಿತ ಮಣ್ಣು ಇರುವಲ್ಲಿ ಹೆಚ್ಚಾಗಿರುತ್ತವೆ ಈ ಬೇರುಹುಳುಗಳು. ಇವು ಭೂಮಿಯೊಳಗೆ ಸೇರಿಕೊಂಡು ಬೇರು ತಿಂದರೆ, ವಯಸ್ಕ ದುಂಬಿಗಳು ಹತ್ತಿರದಲ್ಲೇ ಇರುವ ಇತರ ಮರ-ಗಿಡಗಳ ಎಲೆಗಳನ್ನು ರಾತ್ರಿ ಸಮಯದಲ್ಲಿ ತಿನ್ನುತ್ತವೆ. ಬಾಧೆ ತೀವ್ರವಿರುವ ಬೆಳೆಗಳಲ್ಲಿ ಇವುಗಳಿಂದಾಗುವ ನಷ್ಟ ಪ್ರತಿಶತ 40ರಿಂದ80 ರಷ್ಟು.

ಹಾನಿಯಾಗುವ ಬೆಳೆಗಳಾವುವು?

ಅಡಿಕೆ, ಕಾಫಿ, ಜೋಳ, ಸಜ್ಜೆ, ಮೆಕ್ಕೆಜೋಳ, ಶೇಂಗಾ, ಮೆಣಸಿನಕಾಯಿ. ಆಲೂಗಡ್ಡೆ, ಹತ್ತಿ, ದ್ವಿದಳ ಧಾನ್ಯಗಳು, ಕಬ್ಬು, ಹೊಗೆಸೊಪ್ಪು, ಬದನೆ, ಬಳ್ಳಿ ಜಾತಿ ಬೆಳೆಗಳು, ಬೆಂಡೆ, ಅಲಸಂದೆ, ಹುಲ್ಲಿನ ಜಾತಿ ಬೆಳೆಗಳು, ಗೋದಿ, ಬಟಾಣಿ ಇತ್ಯಾದಿ. ಹಲವಾರು ಮುಂಗಾರು ಬೆಳೆಗಳಲ್ಲಿ ಗೊಣ್ಣೆಹುಳುವಿನ ಬಾಧೆ ಇದ್ದರೂ ಗಮನಕ್ಕೆ ಬರುವುದು ವಿರಳ. ಮುಂಗಾರು ಮಳೆಯ ಪ್ರಮಾಣ ಮತ್ತು ಹಂಚಿಕೆ ಕಡಿಮೆಯಾದ ವರ್ಷಗಳಲ್ಲಿ ಇದರ ಹಾವಳಿ ಖಚಿತ.

ಪ್ರೌಢ ದುಂಬಿಗಳು ಏಪ್ರಿಲ್‍ನಿಂದ ಜುಲೈವರೆಗೆ ಭೂಮಿಯಿಂದ ಹೊರಬಂದು ಜೀವನ ಆರಂಭಿಸುತ್ತವೆ. ದುಂಬಿಗಳು ಪ್ರಮುಖವಾಗಿ ಬೇವು, ನೇರಳೆ, ಸೀಬೆ, ಮಾವು, ಬೋರೆ, ಕರೋಂಡ, ಗೇರು, ದ್ರಾಕ್ಷಿ, ದಾಳಿಂಬೆ, ಅಂಜೂರ, ಗುಲಾಬಿ, ಹಿಪ್ಪುನೇರಳೆ, ತೊಗರಿ, ಹೆಸರು, ಉದ್ದು, ನೆಲಗಡಲೆ (ಶೇಂಗಾ), ಮೆಹಂದಿ, ಹೆಬ್ಬೇವು, ಮಹಾಘನಿ, ಹತ್ತಿಹಣ್ಣು, ಅರಳಿ ಮುಂತಾದ ಗಿಡಮರಗಳ ಎಲೆ/ಹೂ/ಕಾಯಿ/ಹಣ್ಣುಗಳನ್ನು ತಿಂದು ನಾಶಪಡಿಸುತ್ತವೆ. ನಿಶಾಚಾರಿಗಳಾಗಿದ್ದು ಇವುಗಳ ಚಟುವಟಿಕೆಯನ್ನು ಗಿಡಮರಗಳ ಮೇಲಿನ ಬಾಧೆಯ ಜೊತೆಗೆ ನೆಲದ ಮೇಲೆ ಬಿದ್ದಿರುವ ಹಿಕ್ಕೆಗಳಿಂದಲೂ ಗುರುತಿಸಬಹುದು.

ಹುಳುಗಳ ಜೀವನ ಕ್ರಿಯೆ

4 ರಿಂದ 6 ಇಂಚು ಭೂಮಿ ನೆನೆಯುವಷ್ಟು ಮಳೆಯಾದ ದಿನ ಅಥವಾ ಮಾರನೇ ದಿನದ ಸಂಜೆ 6.30 ಯಿಂದ 8.30ರವರೆ ಸುಮಾರಿಗೆ ಹೊರಬಂದು ಮುಂಜಾವಿನವರೆಗೆ ಎಲೆ/ಹೂ ತಿಂದು ಮಣ್ಣಿಗೆ ಮರಳುತ್ತವೆ. ಇದನ್ನು 10 ರಿಂದ 15 ರಾತ್ರಿಗಳವೆರೆಗೆ ಮುಂದುವರಿಸುತ್ತವೆ.

ಭೂಮಿಯಿಂದ ಹೊರಬಂದ ದಿನವೇ ಗಂಡು ಹೆಣ್ಣುಗಳು ಮಿಲನ ಕ್ರಿಯೆ ಮುಗಿಸುತ್ತವೆ. ಮುಂದೆ ಒಂದು ವಾರದ ನಂತರದಿಂದ ಹೆಣ್ಣು ದುಂಬಿಗಳು 30 ರಿಂದ100 ದಿನಗಳವರೆಗೆಎಲೆ ಕಸ ಗೊಬ್ಬರಗಳಿಂದ ಕೂಡಿದ ಸಾವಯವ ಪದಾರ್ಥಗಳ ಮೇಲೆ ಮೊಟ್ಟೆಗಳನ್ನು ಇಡಲು ಆರಂಭಿಸುತ್ತವೆ. ಭೂಮಿಯಲ್ಲಿ 5 ರಿಂದ 10 ಸೆಂ.ಮೀ ಆಳದಲ್ಲಿ ದಿನವೊಂದಕ್ಕೆ ಒಂದರಿಂದ ಹತ್ತು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಅಂಡಾಕಾರ, ಮುತ್ತಿನ ಬಿಳುಪಿನಂತಿರುತ್ತವೆ. ಈ ಮೊಟ್ಟೆಗಳು ಮಣ್ಣಿನಲ್ಲಿ ಹದವಾದ ಹಸಿ ಇದ್ದರೆ 10 ರಿಂದ 15 ದಿನಗಳ ಕಾವಿನ ನಂತರ ಒಡೆದು ಮರಿ ಹುಳುಗಳಾಗುತ್ತವೆ. ಇಲ್ಲವೆಂದರೆ ಹಸಿ ಸಿಗುವವರೆಗೆ 30 ರಿಂದ 60 ದಿನಗಳ ನಂತರ ಮರಿಯಾಗುತ್ತವೆ.

ಮೊದಲ ಹಂತದ ಮರಿಹುಳುಗಳು ಕೇವಲ ಮಣ್ಣು ಮತ್ತು ಸಾವಯವ ಪದಾರ್ಥವನ್ನು ಮಾತ್ರವೇ ತಿನ್ನುತ್ತವೆ ಮತ್ತು ಸುಮಾರು 10 ರಿಂದ 30 ದಿನಗಳಲ್ಲಿ ಪೊರೆ ಕಳಚಿ ಎರಡನೇ ಹಂತ ತಲುಪುತ್ತವೆ. ಎರಡನೇ ಹಂತದ ಮರಿಹುಳುಗಳು ಗಿಡಗಳ ಬೇರುಗಳನ್ನು ತಿನ್ನಲು ಆರಂಭಿಸುತ್ತವೆ ಮತ್ತು 30 ರಿಂದ 35 ದಿನಗಳಲ್ಲಿ ಎರಡನೇ ಹಂತ ಪೂರೈಸುತ್ತವೆ. ಮೊದಲ ಎರಡು ಹಂತಗಳ ಅವಧಿಯಲ್ಲಿ ಬೇರು/ಗೊಣ್ಣೆಹುಳುವು ಭೂಮಿಯ ಮೇಲಿನ 15ರಿಂದ 20 ಸೆಂಟಿಮೀಟರ್‌ ಆಳದ ಮಣ್ಣಿನಲ್ಲಿರುತ್ತವೆ. ಈ ಹಂತಗಳಲ್ಲಿ ಬೆಳೆಗಳಿಗೆ ಉಂಟಾಗುವ ಬಾಧೆಯನ್ನು ಗುರುತಿಸುವುದು ಕಷ್ಟಸಾದ್ಯ.

ಮೂರನೇ ಹಂತದ ಗೊಣ್ಣೆಹುಳುವು ಬೇರುಗಳನ್ನು ತಿನ್ನುತ್ತಾ ಮಣ್ಣಿನ ನೀರಿನಂಶ ಬದಲಾದಂತೆ ಮೇಲ್ಪದರದಿಂದ ಎರಡು ಅಡಿ ಆಳದವರೆಗೂ ಸುತ್ತಾಡುತ್ತ 60ರಿಂದ 90 ದಿನಗಳಲ್ಲಿ ಕೋಶಾವಸ್ಥೆಯನ್ನು ತಲುಪುತ್ತವೆ. ಆಗಸ್ಟ್ -ಸೆಪ್ಟೆಂಬರ್ ತಿಂಗಳುಗಳಲ್ಲಿ ತೋಟ/ಗದ್ದೆಗಳಿಗೆ ಹಂದಿಗಳು ದಾಳಿ ಮಾಡುತ್ತಿದ್ದರೆ ಅಲ್ಲಿ ಗೊಣ್ಣೆಹುಳದ ಬಾಧೆ ಹೆಚ್ಚಿರುತ್ತದೆ ಎಂದರ್ಥ. ಇದೇ ಅವಧಿಯಲ್ಲಿ ಹೆಚ್ಚು ಮಳೆಯಾದರೆ/ನೀರು ನಿಂತರೆ ಬಾಧೆ ಗಣನೀಯವಾಗಿ ತಗ್ಗುತ್ತದೆ. ಅಕ್ಟೋಬರ್-ನವೆಂಬರ್‍ನಲ್ಲಿ ಭೂಮಿಯ ಒಂದರಿಂದ ಮೂರು ಅಡಿ ಆಳದಲ್ಲಿ ಮಣ್ಣಿನ ಕೋಶಗಳನ್ನು ಮಾಡಿಕೊಂಡು ಕೋಶಾವಸ್ಥೆಗೆ ಜಾರುತ್ತವೆ.

ಪರಿಸರ ಸ್ನೇಹಿ ನಿರ್ವಹಣಾ ಕ್ರಮಗಳು

ಬೇಸಿಗೆಯ ಮೊದಲ ಮಳೆ ಬಿದ್ದ ದಿನ ಅಥವಾ ಮಾರನೇ ದಿನ ಸಂಜೆ ಹೊಲ/ತೋಟದಲ್ಲಿ ಬೆಂಕಿಯ ಬಲೆಗಳನ್ನು ಹಾಕಬೇಕು. ಇಲ್ಲವೇ ಬೇವು/ನೇರಳೆ/ಹಿಪ್ಪುನೇರಳೆಯ ರೆಂಬೆಗಳನ್ನು ನೆಟ್ಟು ಅವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ ದುಂಬಿಗಳನ್ನು ಆಕರ್ಷಿಸಿ ಕೊಲ್ಲುವುದು.

ಮೊದಲ ಮಳೆಯ ಮುನ್ಸೂಚನೆ ಸಿಕ್ಕ ಕೂಡಲೆ ಹೊಲದಲ್ಲಿ ಸುಮಾರು 40 ಕಡೆ ಒಂದೊಂದು ಬುಟ್ಟಿ ತಿಪ್ಪೆಗೊಬ್ಬರವನ್ನಿಟ್ಟು ಅದರಲ್ಲಿ ಮೆಟರೈಜಿಯಂ/ಜಂತಾಣು ಜೈವಿಕ ಕೀಟನಾಶಕಗಳನ್ನು ಅಥವಾ ಫಿಪ್ರೋನಿಲ್ ಕೀಟನಾಶಕವನ್ನು ಬೆರೆಸಿಟ್ಟರೆ ದುಂಬಿಗಳು ಆಕರ್ಷಿತವಾಗಿ ಮೊಟ್ಟೆಯಿಟ್ಟು ಹುಟ್ಟುವ ಮರಿಹುಳುಗಳು ನಾಶವಾಗುತ್ತವೆ, ದುಂಬಿಗಳೂ ಕ್ರಮೇಣ ಸಾಯುತ್ತವೆ.

ಜೂನ್-ಜುಲೈನಲ್ಲಿ ಎಕರೆಗೆ 10 ಕೆಜಿ ಮೆಟರೈಜಿಯಂ/ಬೆವೇರಿಯಾ ಅಥವಾ 5 ಕೆಜಿ ಜಂತಾಣು ಜೈವಿಕ ಕೀಟನಾಶಕಗಳನ್ನು ತಿಪ್ಪೆಗೊಬ್ಬರದೊಡನೆ ಮಣ್ಣಿಗೆ ಸೇರಿಸಿ ಹದವಾಗಿ ನೀರು ಹಾಯಿಸಬೇಕು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸಾಧ್ಯವಿದ್ದರೆ (ಬೆಳೆ ಇಲ್ಲದಿದ್ದರೆ ಮಾತ್ರ) ಹೊಲ/ ತೋಟಗಳಲ್ಲಿ ಬಾತು ಕೋಳಿ ಇಲ್ಲವೆ ಹಂದಿಗಳನ್ನು ಬಿಡಬಹುದು. ನೀರಿನ ಅನುಕೂಲವಿದ್ದರೆ ಸತತವಾಗಿ ನೀರು ನಿಲ್ಲಿಸಬಹುದು.ಇಲ್ಲವೇ ಮುಂಗಾರು ಹಂಗಾಮಿಗೆ ಭತ್ತ ನಾಟಿಮಾಡಬಹುದು.

ನವೆಂಬರ್- ಮಾರ್ಚ್ ತಿಂಗಳುಗಳಲ್ಲಿ ಆಳ ಉಳುಮೆ ಮಾಡಬಹುದು. ಮಣ್ಣಿನಲ್ಲಿರುವ ಕೋಶಗಳನ್ನು ಬಿಸಿಲಿಗೆ ಒಡ್ಡಿ ನಾಶಪಡಿಸಬಹುದು.

ನೆನಪಿರಲಿ, ಸಾಮೂಹಿಕವಾಗಿ ಎಲ್ಲ ಕೃಷಿಕರೂ ಈ ನಿರ್ವಹಣಾ ಕ್ರಮ ಅನುಸರಿಸುವುದು ಅತೀ ಮುಖ್ಯ. ಸಮಸ್ಯೆ ಹೆಚ್ಚಿರುವಾಗ ಕಬ್ಬು, ಬಾಳೆಯಲ್ಲಿ ಕೂಳೆ ಬೆಳೆ ಮಾಡಬಾರದು.

ಹೆಚ್ಚಿನ ಮಾಹಿತಿಗೆ 9483532730 / 9480557634.

––––––––––––––––––––

ಲೇಖಕರು :ರಾಮೇಗೌಡ. ಜಿ. ಕೆ, ಸಹಾಯಕ ಪ್ರಾಧ್ಯಾಪಕರು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ & ವಿಸ್ತರಣಾ ಕೇಂದ್ರ, ಬೆಂಗಳೂರು

ಲೇಖಕರು: ಹರೀಶ್. ಬಿ ಎಸ್‌, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.