ADVERTISEMENT

ತೆಂಗಿನಿಂದ ಸಕ್ಕರೆ, ತ್ಯಾಜ್ಯದಿಂದ ಅಣಬೆ ಕೃಷಿ

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ ತಾಂತ್ರಿಕತೆ

ಮನೋಹರ್ ಎಂ.
Published 12 ಫೆಬ್ರುವರಿ 2021, 19:05 IST
Last Updated 12 ಫೆಬ್ರುವರಿ 2021, 19:05 IST
ತೆಂಗಿನ ಸಕ್ಕರೆ
ತೆಂಗಿನ ಸಕ್ಕರೆ   

ಬೆಂಗಳೂರು: ತೆಂಗಿನ ‘ಕಲ್ಪರಸ’ದಿಂದ (ನೀರಾ) ಸಕ್ಕರೆ, ಬೆಲ್ಲ ತಯಾರಿಸುವ ತಾಂತ್ರಿಕತೆಯನ್ನು ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಅಭಿವೃದ್ಧಿಪಡಿಸಿದೆ.

ತೆಂಗಿನ ಸಕ್ಕರೆಯಿಂದ ಚಾಕೋಲೆಟ್, ತಿನಿಸುಗಳು, ತೆಂಗಿನ ಚಿಪ್ಸ್‌, ವರ್ಜಿನ್ ತೆಂಗಿನ ಎಣ್ಣೆ, ಐಸ್‌ಕ್ರೀಂ ತಯಾರಿ, ನೀರಾ ಸಂಗ್ರಹಿಸುವ ಉಪಕರಣ ಹಾಗೂ ತೆಂಗಿನ ತ್ಯಾಜ್ಯದಿಂದ ಅಣಬೆ ಕೃಷಿ ಕುರಿತ ನೂತನ ತಂತ್ರಜ್ಞಾನಗಳು ತೋಟಗಾರಿಕೆ ಮೇಳದಲ್ಲಿದ್ದಸಿಪಿಸಿಆರ್‌ಐ ಸಂಸ್ಥೆಯ ಮಳಿಗೆಯಲ್ಲಿ ಜನರನ್ನು ಆಕರ್ಷಿಸಿದವು.

ತೆಂಗನ್ನು ಪ್ರಮುಖವಾಗಿ ಅಡುಗೆ, ಎಣ್ಣೆ ತಯಾರಿ ಹಾಗೂ ಎಳನೀರಾಗಿ ಬಳಸುತ್ತಾರೆ. ಆದರೆ,ಸಂಸ್ಥೆ ತಯಾರಿಸಿರುವ ತೆಂಗಿನ ತರಹೇವಾರಿ ಉತ್ಪನ್ನಗಳು ಮೇಳಕ್ಕೆ ಬಂದಿದ್ದವರನ್ನು ಬೆರಗುಗೊಳಿಸಿತು.

ADVERTISEMENT

‘ಕಲ್ಪರಸದಲ್ಲಿ ಸಕ್ಕರೆ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ತಾಜಾ ಕಲ್ಪರಸದಲ್ಲಿನ ನೀರಿನ ಅಂಶವನ್ನು 115 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಆವಿಯಾಗಿಸಿ, ತೆಂಗಿನ ಸಕ್ಕರೆ, ಬೆಲ್ಲ ಪಡೆಯಬಹುದು. ಇದು, ಕಬ್ಬಿನ ಸಕ್ಕರೆಗೆ ಹೋಲಿಸಿದರೆ ಕಬ್ಬಿಣ, ಮೆಗ್ನೀಷಿಯಂ ಹಾಗೂ ಸತು ಅಂಶಗಳನ್ನು ಎರಡು ಪಟ್ಟು ಹೆಚ್ಚಾಗಿ ಹೊಂದಿರುತ್ತದೆ’ ಎಂದುಸಿಪಿಸಿಆರ್‌ಐನವ್ಯವಹಾರ ವ್ಯವಸ್ಥಾಪಕ ಎಂ.ಜಸೀಮ್‌ ಶಕೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರಲ್ಲಿ ವಿಟಮಿನ್ ಬಿ ಹಾಗೂ ಕಡಿಮೆ ಪ್ರಮಾಣದಲ್ಲಿ ಗ್ಲೈಸೆಮಿಕ್‌ ಅಂಶ ಇರುತ್ತದೆ. ಮಧುಮೇಹ ಇರುವವರೂ ಉಪಯೋಗಿಸಬಹುದು. ಇದನ್ನು ನೇರವಾಗಿ ಸೇವಿಸಲು ಕಷ್ಟ ಆಗುವವರನ್ನು ಗಮನದಲ್ಲಿ ಇರಿಸಿಕೊಂಡು ತೆಂಗಿನ ಸಕ್ಕರೆಯಿಂದ ತಯಾರಿಸಿದ ಗಾಢ ಕೊಕೋ ಚಾಕೋಲೆಟ್, ಪಾನೀಯ ಚಾಕೋಲೆಟ್, ಸಿಹಿ ತಿನಿಸು, ಐಸ್‌ಕ್ರೀಂ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ’ ಎಂದು ವಿವರಿಸಿದರು.

‘ನೂತನ ತಾಂತ್ರಿಕತೆಗಳ ಮಾಹಿತಿ ಪಡೆಯಲು ಹಾಗೂ ಉದ್ದಿಮೆ ಆರಂಭಿಸಲು ಇಚ್ಛಿಸುವ ಸಂಸ್ಥೆಗಳು www.cpcriagribiz.in ಅನ್ನು ಸಂಪರ್ಕಿಸಬಹುದು’ ಎಂದೂ ಹೇಳಿದರು.

‘ಕಪ್ಪೆಚಿಪ್ಪು ಅಣಬೆ’ ಕೃಷಿ:ತೆಂಗಿನಕಾಯಿಯ ಸಿಪ್ಪೆ, ಗರಿ, ದಿಂಡಿನಂತಹ ತ್ಯಾಜ್ಯಗಳನ್ನು ಬಳಸಿ, ಕಡಿಮೆ ಖರ್ಚಿನಲ್ಲಿ ಅಣಬೆ ಬೆಳೆಯಬಹುದಾದ ವಿಧಾನವನ್ನೂಸಿಪಿಸಿಆರ್‌ಐ ಪರಿಚಯಿಸಿದೆ.

‘30 ದಿನಗಳಲ್ಲಿ ಒಂದು ಕೆ.ಜಿ. ಒಣ ತಳಹದಿ ಯಿಂದ ಗರಿಷ್ಠ 700 ಗ್ರಾಂನಷ್ಟು ಅಣಬೆ ಬೆಳೆಯಬಹುದು. ಈ ಅಣಬೆಯು ಸ್ಥೂಲಕಾಯ, ಮಧುಮೇಹ ಹಾಗೂ ಮಾನಸಿಕ ಉದ್ವೇಗ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣ’ ಎಂದು ಸಂಸ್ಥೆ ತಿಳಿಸಿದೆ.

***

ತೆಂಗಿನಲ್ಲಿ ಆರೋಗ್ಯವರ್ಧಕ ಅಂಶಗಳು ಹೆಚ್ಚಿನ ಮಟ್ಟದಲ್ಲಿದೆ. ಹಾಗಾಗಿ, ಸಂಸ್ಥೆಯು ತೆಂಗಿನ ಎಲ್ಲ ಅಂಶಗಳಿಂದ ಉತ್ಪನ್ನಗಳನ್ನು ಹೊರತಂದಿದೆ
-ಎಂ.ಜಸೀಮ್‌ ಶಕೀಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.